ADVERTISEMENT

ಬರದ ಹೊಸ್ತಿಲಲ್ಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ಮುಂಗಾರು ಮಳೆ ಕೈಕೊಟ್ಟ ಕಾರಣ ಕರ್ನಾಟಕ ರಾಜ್ಯ ಬರದ ಹೊಸ್ತಿಲಲ್ಲಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಸಿತ ಹಾಗೂ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಬಹುದೆಂಬ ಆತಂಕ ರಾಜ್ಯದಲ್ಲಿ ಆವರಿಸಿದೆ. ಮಳೆ ಕೊರತೆಯಿಂದ ಜೋಳ, ಸಜ್ಜೆ, ಮೆಕ್ಕೆಜೋಳ, ರಾಗಿ, ನವಣೆಯಂತಹ ಧಾನ್ಯಗಳ ಬಿತ್ತನೆಗೆ ಈಗಾಗಲೇ ಧಕ್ಕೆಯಾಗಿದೆ ಎಂಬುದನ್ನು ಕೇಂದ್ರ ಕೃಷಿ  ಸಚಿವ ಶರದ್ ಪವಾರ್ ಅವರೇ ಅಧಿಕೃತವಾಗಿ ಹೇಳಿಯಾಗಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ  ಬರದಂತಹ ಸ್ಥಿತಿ ಇದ್ದು ಶೇ 47ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ಶೇ 51ರಷ್ಟಿದೆ. ನೆರೆಯ ಮಹಾರಾಷ್ಟ್ರವೂ ಬರದ ದವಡೆಗೆ ಸಿಲುಕಿದೆ. ಒಟ್ಟು ರಾಷ್ಟ್ರದಲ್ಲಿ ಮಳೆ ಕೊರತೆ ಪ್ರಮಾಣ ಶೇ 23.  ಕಳೆದ ವರ್ಷವೂ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಹೀಗಾಗಿ ಈಗಾಗಲೇ ರಾಜ್ಯದ  123 ತಾಲ್ಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿಗಳು ಜಾರಿಯಲ್ಲಿವೆ. ಈಗ ಮತ್ತೆ ಈ ವರ್ಷವೂ ಮಳೆ ಕೈಕೊಟ್ಟಿರುವುದರಿಂದ ಪರಿಸ್ಥಿತಿ ಗಂಭೀರವಾಗುವ ಎಲ್ಲಾ ಲಕ್ಷಣಗಳೂ ಇವೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗುತ್ತಾ ಸಾಗುತ್ತಿದೆ. ಕುಡಿಯುವ ನೀರಿನ ಕೊರತೆ ಹಾಗೂ ವಿದ್ಯುತ್ ಕೊರತೆಯ ದಿನಗಳ ನಿರ್ವಹಣೆಗೆ ರಾಜ್ಯದ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ಕಾರ  ಭರದಿಂದ ಎದುರಿಸಲು ಸಜ್ಜಾಗಬೇಕಿದೆ. ರಾಜಕೀಯ ಕಚ್ಚಾಟಗಳಲ್ಲೇ ಮುಳುಗಿರುವ ಜನನಾಯಕರು ಇನ್ನಾದರೂ ಆಡಳಿತದತ್ತ ಗಮನ ಹರಿಸಬೇಕಿದೆ. ಎಲ್ಲಾ ಜಿಲ್ಲೆಗಳಲ್ಲೂ ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳ ಯೋಜನೆಗಳನ್ನು ಜಾರಿಗೊಳಿಸಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳು ಸಾಕಷ್ಟು  ಪ್ರಗತಿ ಸಾಧಿಸಿದ್ದರೂ ನಮ್ಮ ಆರ್ಥಿಕತೆ ಹೆಚ್ಚು ಅವಲಂಬಿಸಿರುವುದು ಈಗಲೂ ಮಳೆಯ ಸ್ಥಿತಿಗತಿಯನ್ನೇ. ಏಕೆಂದರೆ ರಾಷ್ಟ್ರದ ಮೂರನೇ ಎರಡರಷ್ಟು ಕೃಷಿ ಅವಲಂಬಿಸಿರುವುದು ಮಳೆಯನ್ನೇ. ಹೀಗಾಗಿಯೇ ಮುಂಗಾರು ಭಾರತೀಯ ರೈತರ ಜೀವರೇಖೆ. ರಾಷ್ಟ್ರದ ಆರ್ಥಿಕತೆಯ ಒಟ್ಟಾರೆ ನಿರ್ವಹಣೆಗೆ ಆಹಾರ ಧಾನ್ಯಗಳ ಉತ್ಪಾದನೆ ಹಾಗೂ ರೈತರ ಖರೀದಿ ಸಾಮರ್ಥ್ಯಗಳೇ ಬಹುಮುಖ್ಯವಾದ ಅಂಶಗಳು. ರೈತರ ಬದುಕಿಗೆ ಸಮೃದ್ಧಿ ತರಲು ಮಳೆಯೇ ಆಧಾರ. ಮುಂಗಾರು ಮಳೆ ಸರಿಯಾಗಿ ಸುರಿದು ಫಸಲು ಸರಿಯಾಗಿ ಬಂತೆಂದರೆ ರಸಗೊಬ್ಬರ, ಚಿನ್ನ ಹಾಗೂ ಗ್ರಾಹಕ ವಸ್ತುಗಳ ಬೇಡಿಕೆಗಳೂ ಹೆಚ್ಚಾಗುತ್ತವೆ.

ಆರ್ಥಿಕತೆಗೆ ಚೈತನ್ಯ ಒದಗುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ಜೀವನಾವಶ್ಯಕ ಆಹಾರ ಪದಾರ್ಥಗಳ ಬೆಲೆಗಳ ಏರಿಕೆ ಜನಸಾಮಾನ್ಯರ ದಿನನಿತ್ಯದ ಬದುಕನ್ನೂ ಸಂಕಷ್ಟಕ್ಕೆ ದೂಡಿದೆ. ಮಳೆ ಕೊರತೆಯಿಂದ ಜೀವನ ನಡೆಸುವುದೇ ದುಸ್ತರವಾದ ರೈತರು ಕೂಲಿ ಹುಡುಕಿ ನಗರಗಳಿಗೆ ಗುಳೆ ಹೊರಡುವ ಸಂದರ್ಭಗಳನ್ನು ಸರ್ಕಾರಕ್ಕೆ ತಡೆಯಲಾಗುತ್ತಿಲ್ಲ.

ಈ ಪರಿಸ್ಥಿತಿ ತಪ್ಪಿಸಲು ವಿವಿಧ ರೀತಿಯ ಕೃಷಿ ಸಾಲ ಸೌಲಭ್ಯಗಳು, ಬರ ಪರಿಹಾರ ಕಾಮಗಾರಿಗಳನ್ನು ಸರ್ಕಾರ ತುರ್ತಾಗಿ ಯೋಜಿಸಬೇಕಿದೆ. ಜಾನುವಾರುಗಳ ಸಂರಕ್ಷಣೆಗೆ ಅಗತ್ಯವಿರುವೆಡೆ ಗೋಶಾಲೆಗಳನ್ನು ಸ್ಥಾಪಿಸಬೇಕಿದೆ. ಹೊಸ ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವ ಸಂಪುಟ ಇನ್ನಾದರೂ ಆಡಳಿತದತ್ತ ಗಮನ ಹರಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.