ADVERTISEMENT

ಭಾನುವಾರ, 23-10-1961

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ಸಹಕಾರ ಸಂಘಗಳು ಮತ್ತು ಪಂಚಾಯತಿಗಳ ನಡುವೆ
ಹೆಚ್ಚಿನ ಸಹಕಾರ ಅತ್ಯಗತ್ಯ

ನವದೆಹಲಿ, ಅ. 22 - ಸಹಕಾರ ಸಂಘಗಳ ಸ್ವಯಮಾಧಿಕಾರ ಹಾಗೂ ವ್ಯಾವಹಾರಿಕ ರೂಪವನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ಪಂಚಾಯತಿ ರಾಜ್ ಸಂಸ್ಥೆಗಳು ಹಾಗೂ ಸಹಕಾರ ಸಂಘಗಳ ನಡುವೆ ಹೆಚ್ಚಿನ ಸಹಕಾರವಿರಬೇಕೆಂದು ಪಂಚಾಯತಿಗಳು ಮತ್ತು ಸಹಕಾರ ಸಂಘಗಳ ಕುರಿತ ಅಧ್ಯಯನ ತಂಡವು ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ಕಾರಕ್ಕೆ ಈಗ ತಾನೆ ಸಲ್ಲಿಸಲಾಗಿರುವ ತನ್ನ ವರದಿಯಲ್ಲಿ, ತಿಕ್ಕಾಟಗಳನ್ನು ತಪ್ಪಿಸಲು ಕೆಲವು ಸಾಂಸ್ಥಿಕ ಉಪಾಯಗಳು ಹಾಗೂ ಕಾರ್ಯ ವಿಧಾನಗಳನ್ನು ರೂಪಿಸಬಹುದಾದರೂ ಈ ಎರಡರ ನಡುವೆ ಏಕಪ್ರಕಾರ ಸಹಕಾರ ನಿಜವಾಗಿಯೂ ಅತ್ಯಗತ್ಯ ವಾಗಿದೆಯೆಂದೂ ತಂಡವು ಅಭಿಪ್ರಾಯಪಟ್ಟಿದೆ.

ವಿದ್ಯುಚ್ಛಕ್ತಿ ಕಾರ್ಖಾನೆಯ ವಿಸ್ತರಣೆಗೆ ಶಂಕು ಸ್ಥಾಪನೆ
ಬೆಂಗಳೂರು, ಅ. 22 -  ನಗರದಲ್ಲಿರುವ ಮೈಸೂರು ಸರ್ಕಾರದ ವಿದ್ಯುಚ್ಛಕ್ತಿ ಕಾರ್ಖಾನೆಯಲ್ಲಿ ಹೆಚ್ಚು ಶಕ್ತಿಯುತವಾದ ವಿದ್ಯುತ್ ಉಪಕರಣಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸುವ ವಿಸ್ತರಣೆ ಯೋಜನೆಯ ಕಟ್ಟಡಕ್ಕೆ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿಯವರು ಇಂದು ಇಲ್ಲಿ ಶಂಕುಸ್ಥಾಪನೆ ಮಾಡಿದರು.

ಮೈಸೂರು ರಸ್ತೆಯಲ್ಲಿರುವ ವಿದ್ಯುಚ್ಛಕ್ತಿ ಕಾರ್ಖಾನೆಯಿಂದ 8 ಮೈಲಿ ಪೂರ್ವಕ್ಕಿರುವ ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣ ವಾಗಲಿರುವ ವಿಸ್ತರಣೆ ಕಾರ್ಖಾನೆಯ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆಯನ್ನು ಅರ್ಥ ಸಚಿವ ಶ್ರೀ ಟಿ. ಮರಿಯಪ್ಪನವರು ವಹಿಸಿದ್ದರು.

ಪೋರ್ಚುಗೀಸ್ ವಸಾಹತು ಷಾಹಿ ಶೀಘ್ರ ಅಂತ್ಯಕ್ಕೆ ಕರೆ
ನವದೆಹಲಿ, ಅ. 22 - ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳು, ಪೋರ್ಚುಗೀಸ್ ವಸಾಹತುಷಾಹಿಯ ಶೀಘ್ರ ಅಂತ್ಯಕ್ಕೆ `ಕೇಂದ್ರೀಕೃತ ಕ್ರಮ~ಗಳನ್ನು ತೆಗೆದುಕೊಳ್ಳಬೇಕೆಂದು, ಪೋರ್ಚುಗೀಸ್ ವಸಾಹತು ಗಳನ್ನು ಕುರಿತ ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ಪ್ರತಿನಿಧಿಗಳು ಕರೆ ಇತ್ತರು.ಎರಡು ದಿನಗಳ ವಿಚಾರಗೋಷ್ಠಿ ಇಂದು ಮುಕ್ತಾಯವಾಯಿತು.

ವೀಕ್ಷಕರು - ಅಧ್ಯಕ್ಷರನ್ನು ಆಹ್ವಾನಿಸಲು ತೀರ್ಮಾನ
ಬೆಂಗಳೂರು, ಅ. 22 - ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ಆರಿಸುವಾಗ ಆಯಾ ಜಿಲ್ಲೆಗಳ ವೀಕ್ಷಕರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ಸಭೆಗೆ ಕರೆಯಲು ಇಂದು ನಡೆದ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ತೀರ್ಮಾನಿಸಿತೆಂದು ತಿಳಿದು ಬಂದಿದೆ.

ಸಮಿತಿ ಇಂದು ಕೂಡ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಏ.ಐ.ಸಿ.ಸಿ. ಕಳುಹಿಸಿರುವ ಆದೇಶಗಳನ್ನು ಪರಿಶೀಲಿಸಿತು. ಸಮಿತಿ ನಾಳೆ ಮಧ್ಯಾಹ್ನ 3-30ಕ್ಕೆ ಸೇರಿ ಅಭ್ಯರ್ಥಿಗಳ ಆಯ್ಕೆ ಕೆಲಸವನ್ನು ಆರಂಭಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.