ADVERTISEMENT

ಮತಬ್ಯಾಂಕ್ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಭ್ರಷ್ಟಾಚಾರದ ಹಗರಣಗಳು, ರಾಜಕೀಯ ಗುಂಪುಗಾರಿಕೆಯಲ್ಲಿ ಮುಳುಗಿದ್ದ ಬಿಜೆಪಿ ಸರ್ಕಾರ ಏಕಾಏಕಿ ಕೊಳೆಗೇರಿಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ.

ರಾಜ್ಯದ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದೂ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ವಸತಿ ಇಲಾಖೆ ರೂಪಿಸಿರುವ ಹೊಸ `ಕೊಳೆಗೇರಿ ನೀತಿ~ಗೆ ರಾಜ್ಯ ಸಂಪುಟ ತರಾತುರಿಯಲ್ಲಿ ಒಪ್ಪಿಗೆ ನೀಡಿದೆ.

ಹೊಸ ನೀತಿ ಜಾರಿಗೆ ತರಲು ಕಾನೂನಿನ ತೊಡಕುಗಳಿವೆ ಎಂಬ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನು ಸಂಪುಟ ಸಭೆ ಗಮನಕ್ಕೆ ತೆಗೆದುಕೊಂಡಿಲ್ಲ.

ADVERTISEMENT

ರಾಜ್ಯದ 2,250ಕ್ಕೂ ಹೆಚ್ಚು ಘೋಷಿತ ಕೊಳೆಗೇರಿಗಳ ಅಭಿವೃದ್ಧಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಹಕ್ಕುಪತ್ರ ನೀಡುವ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ಮಾತುಗಳು ಕೊಳೆಗೇರಿ ಜನರ `ಮೂಗಿಗೆ ತುಪ್ಪ ಹಚ್ಚುವ~ ಪ್ರಯತ್ನದಂತೆ ಕಾಣಿಸುತ್ತವೆ.

ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊಳೆಗೇರಿಗಳ ಮತದಾರರನ್ನು ಓಲೈಸಲು ಸರ್ಕಾರ ಹಕ್ಕು ಪತ್ರ ನೀಡುವ ಮಾತುಗಳನ್ನಾಡುತ್ತಿದೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಬೇಕಾಗಿದೆ.

ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿರುವ ಕೊಳೆಗೇರಿಗಳು ಸರ್ಕಾರಿ ಇಲ್ಲವೇ ಖಾಸಗಿ ಜಮೀನುಗಳಲ್ಲಿವೆ. ಖಾಸಗಿಯವರ ಭೂಮಿ ಹಕ್ಕನ್ನು ಕೊಳೆಗೇರಿ ನಿವಾಸಿಗಳಿಗೆ ಹಸ್ತಾಂತರಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

ರೈಲ್ವೆ, ಸಾರಿಗೆ ಮತ್ತಿತರ ಸರ್ಕಾರಿ ಇಲಾಖೆಗಳಿಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಭೂ ಹಕ್ಕನ್ನು ನೀಡುವುದು ಸುಲಭದ ಕೆಲಸ ಅಲ್ಲ. ರಾಜಕೀಯ ಲಾಭ ಪಡೆಯಲು ಹೋಗಿ ಕೊಳೆಗೇರಿಗಳ ಜನರ ಬದುಕನ್ನು ಸರ್ಕಾರ ಇನ್ನಷ್ಟು ಅತಂತ್ರದ ಸ್ಥಿತಿಗೆ ದೂಡಬಾರದು.

ದೇಶದ ಉದ್ದಗಲದಲ್ಲಿ 49,000ಕ್ಕೂ ಹೆಚ್ಚು ಕೊಳೆಗೇರಿಗಳಿವೆ. ಇವುಗಳಲ್ಲಿ ಶೇ 57 ರಷ್ಟು ಕೊಳೆಗೇರಿಗಳು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಜಾಗಗಳಲ್ಲಿವೆ.

ಅನೇಕ ರಾಜ್ಯಗಳಲ್ಲಿ ಕೊಳೆಗೇರಿಗಳನ್ನು ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಸರ್ಕಾರವೇ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಕೊಳೆಗೇರಿಗಳ ನಿವಾಸಿಗಳೂ ಸೇರಿದಂತೆ ಎಲ್ಲ ಪ್ರಜೆಗಳಿಗೂ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರಗಳ ಕರ್ತವ್ಯ.

ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ವಸತಿಹೀನರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಕೊಡುವ ವಿಷಯದಲ್ಲಿ ಸರ್ಕಾರಗಳು ವಿಫಲವಾದ್ದರಿಂದ ಕೊಳೆಗೇರಿಗಳ ಸಂಖ್ಯೆ ಹೆಚ್ಚಾಗಿದೆ.

ಈ ವಿಷಯದಲ್ಲಿ ಬಿಜೆಪಿ ಸರ್ಕಾರವೂ ಹೊರತಲ್ಲ. ಸರ್ಕಾರಿ ಭೂಮಿಯಲ್ಲಿರುವ ಕೊಳೆಗೇರಿಗಳ ಜನರಿಗೆ ಹಕ್ಕುಪತ್ರ ನೀಡುವ ಹೊಸ ನೀತಿ ಜಾರಿಗೆ ಬಂದರೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಭೂಮಿಯಲ್ಲೂ ಕೊಳೆಗೇರಿಗಳು ತಲೆ ಎತ್ತುವುದಕ್ಕೆ ಅವಕಾಶ ಕೊಟ್ಟಂತೆ.ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು.

ಹಕ್ಕುಪತ್ರ ನೀಡಲು ಇರುವ ಕಾನೂನು ತೊಡಕುಗಳನ್ನು ಮರೆಮಾಚಿ ಸುಳ್ಳು ಭರವಸೆ ನೀಡುವ ಬದಲು, ಕೊಳೆಗೇರಿ ಜನರಿಗೆ ವಸತಿ ಸಮುಚ್ಚಯ ನಿರ್ಮಿಸಿ ಕೊಡುವ ಅಥವಾ ನಿವೇಶನಗಳನ್ನು ನೀಡಲು ಸರ್ಕಾರ ಯೋಜನೆ ರೂಪಿಸಿ ಜಾರಿಗೆ ತರಬೇಕು. ಇದು ನಿರಂತರವಾಗಿ ಮಾಡುತ್ತಲೇ ಇರಬೇಕಾದ ಕೆಲಸ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.