ADVERTISEMENT

ರಾಜ್ಯದ ನಿರ್ಲಕ್ಷ್ಯ ಕೊನೆಯಾಗಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಕೇಂದ್ರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರಾಜ್ಯದ ನಾಲ್ವರು ಅನುಭವಿಗಳು ಸಚಿವರಾಗಿರುವುದರಿಂದ ಕೆಲವು ಪ್ರಮುಖ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು, ರೈಲ್ವೆಯ ಹಲವು ಕಾಮಗಾರಿಗಳು ಚುರುಕುಗೊಂಡಿವೆ. ಗುಲ್ಬರ್ಗ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಇಎಸ್‌ಐ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಆಸ್ಪತ್ರೆಗಳ ಸ್ಥಾಪನೆ ಮತ್ತು ನವೀಕರಣ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ‘ಕೇಂದ್ರದ ಕೆಲವು ಯೋಜನೆಗಳಿಗೆ ಭೂಮಿಯ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಸಕಾಲಕ್ಕೆ ಅವಶ್ಯವಿರುವಷ್ಟು ಭೂಮಿ ನೀಡುತ್ತಿಲ್ಲ.

ಇಪ್ಪತ್ತು ಎಕರೆ ಭೂಮಿ ಕೇಳಿದರೆ ಐದು ಎಕರೆ ಮಾತ್ರ ನೀಡುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಆರೋಪ ಗಂಭೀರವಾದುದು. ಸಾಮಾನ್ಯವಾಗಿ ಇಂತಹ ಆರೋಪ ಕೇಂದ್ರ ಸರ್ಕಾರದ ವಿರುದ್ಧ ಇರುತ್ತಿತ್ತು. ಆದರೆ ಈಗ ಅದು ತಿರುವು ಮುರುವು. ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರೂ ಕೂಡ, ಕುಂಟುತ್ತಾ ಸಾಗಿರುವ ಹಲವು ರೈಲ್ವೆ ಕಾಮಗಾರಿಗಳಿಗೆ ಮತ್ತು ಬೆಂಗಳೂರು- ಮೈಸೂರು ನಡುವಣ ಜೋಡಿ ರೈಲ್ವೆ ಮಾರ್ಗದ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಅವಶ್ಯಕವಾಗಿರುವ ಭೂಮಿ ಇನ್ನೂ ಸಿಗದಿರುವುದೇ ಯೋಜನೆ ವಿಳಂಬಕ್ಕೆ ಕಾರಣ ಎಂದಿದ್ದಾರೆ.

ಬೆಂಗಳೂರು ಹೊರಭಾಗದಲ್ಲಿನ ಪಟ್ಟಣ ಪ್ರದೇಶಗಳಿಗೆ ವರ್ತುಲ ರೈಲ್ವೆ ಯೋಜನೆಗೆ ಭೂಮಿ ಬೇಕಾಗಿದ್ದು, ರಾಜ್ಯ ಸರ್ಕಾರ ಆದಷ್ಟು ಬೇಗನೆ ಭೂಮಿ ಒದಗಿಸಿದರೆ ಮಾತ್ರ ಆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯ ಎಂದೂ ಸಚಿವ ಮುನಿಯಪ್ಪ ಹೇಳಿದ್ದಾರೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳಿಗೆ ಬೇಕಾಗಿರುವ ಭೂಮಿ ನೀಡಿಕೆಯಲ್ಲಿ ರಾಜ್ಯ ಸರ್ಕಾರ ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ವಿಳಂಬ ನೀತಿ ಬಿಜೆಪಿ ಆಡಳಿತದಲ್ಲೂ ಮುಂದುವರಿದಿದೆ.

ಇಂತಹ ನೀತಿಯಿಂದಾಗಿ ಕೇಂದ್ರದಲ್ಲಿ ರಾಮಕೃಷ್ಣ ಹೆಗಡೆ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದಾಗ ಹೊಸಕೋಟೆ ಬಳಿ ಐವತ್ತು ಎಕರೆ ಪ್ರದೇಶದಲ್ಲಿ ದೆಹಲಿಯ ಪ್ರಗತಿ ಮೈದಾನದ ಮಾದರಿಯ ಬೃಹತ್ ವಾಣಿಜ್ಯ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭಾಂಗಣ ನಿರ್ಮಾಣ ಯೋಜನೆಗಳು ಕನಸಾಗಿಯೇ ಉಳಿದವು. ಸರ್ಕಾರದ ವಿಳಂಬ ನೀತಿ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದಿಂದಾಗಿ ಹಲವು ಖಾಸಗಿ ಸಂಸ್ಥೆಗಳ ಕೆಲವು ಯೋಜನೆಗಳೂ ಕೈತಪ್ಪಿ ಹೋಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ರಾಜ್ಯದ ಜಿಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟುವ ಹಾಗೆ ಕಾಯಕಲ್ಪ ಮಾಡಬೇಕಿದೆ. ಅದಕ್ಕಾಗಿ ಅವರು ಹೆಚ್ಚು ಸಮಯವನ್ನು ವಿಧಾನಸೌಧದಲ್ಲೂ ಕಳೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.