ADVERTISEMENT

ಲಂಕಾ ನೌಕಾಪಡೆ ಅತಿರೇಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಎಸಗುತ್ತಿರುವ ದೌರ್ಜನ್ಯ ಖಂಡನೀಯ.ಈ ವರ್ಷದಲ್ಲಿಯೇ ಇಬ್ಬರು ಮೀನುಗಾರರು ಶ್ರೀಲಂಕಾ ನೌಕಾಪಡೆಯ ದೌರ್ಜನ್ಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಅಂತರರಾಷ್ಟ್ರೀಯ ಜಲಗಡಿಯನ್ನು ಉಲ್ಲಂಘಿಸಿದ ಸಂದರ್ಭಗಳಲ್ಲಿ ಅಂಥವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದು ನಾಗರಿಕ ನಡವಳಿಕೆ.ಶ್ರೀಲಂಕಾ ನೌಕಾಪಡೆ ಇಂಥ ಅತಿರೇಕದ ಪ್ರತಿಕ್ರಿಯೆಗೆ ಮುಂದಾಗಿರುವುದು ಅಕ್ಷಮ್ಯ.ಇದನ್ನು ಭಾರತ ಆಕಸ್ಮಿಕ ಘಟನೆಯೆಂದು ತಳ್ಳಿಹಾಕಲಾಗದು.ಶ್ರೀಲಂಕಾದಲ್ಲಿ ತಮಿಳು ಪ್ರತ್ಯೇಕತಾವಾದಿಗಳ ಜೊತೆ ಸಂಘರ್ಷ ಇದ್ದಾಗ ಸಮುದ್ರದಲ್ಲಿ ಬಿಗಿಯಾದ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದ ಸಮಯದಲ್ಲೂ ಇಂಥ ವಿವೇಚನಾರಹಿತ ವರ್ತನೆ ಪ್ರಕಟವಾಗಿರಲಿಲ್ಲ.

ಜಲಗಡಿಯನ್ನು ದಾಟಿದವರನ್ನು ಬಂಧಿಸಿ ವಿಚಾರಣೆ ನಡೆಸುವ ಶಿಷ್ಟಾಚಾರವನ್ನು ಪಾಲಿಸುತ್ತಿದ್ದ ಶ್ರೀಲಂಕಾ ನೌಕಾಪಡೆ, ಶಾಂತಿಯ ಈ ಸಂದರ್ಭದಲ್ಲಿಯೂ ಹಿಂದೆ ನಡೆಸುತ್ತಿದ್ದ ದುರಾಕ್ರಮಣ ಭಾವವನ್ನು ಪ್ರಕಟಿಸುತ್ತಿರುವುದು ಅವಿವೇಕದ ಪರಮಾವಧಿ.ಶ್ರೀಲಂಕಾದಿಂದ ಪ್ರತ್ಯೇಕಗೊಳ್ಳಲು ಸಶಸ್ತ್ರಹೋರಾಟ ನಡೆಸುತ್ತಿದ್ದ ತಮಿಳು ಗುಂಪುಗಳನ್ನು ಮಟ್ಟ ಹಾಕಿರುವ ಉನ್ಮಾದದಲ್ಲಿ, ಜಲಗಡಿ ಸಮೀಪಿಸುತ್ತಿರುವ ಎಲ್ಲರನ್ನೂ ಗುರಿಯಾಗಿಸಿ ಗುಂಡು ಹಾರಿಸುತ್ತಿರುವುದು ಅತಿರೇಕದ ನಡವಳಿಕೆ. ಇದು ತಕ್ಷಣವೇ ನಿಲ್ಲಬೇಕು.

ಭಾರತ ಶ್ರೀಲಂಕಾ ಮಧ್ಯದ ಜಲಗಡಿ ಪ್ರದೇಶವನ್ನು ಎರಡೂ ದೇಶಗಳ ಮೀನುಗಾರರು ಆಕಸ್ಮಿಕವಾಗಿ ಉಲ್ಲಂಘಿಸುತ್ತಿದ್ದ ಪ್ರಕರಣಗಳು, ಅವುಗಳಿಗೆ ಎರಡೂ ಕಡೆಯ ನೌಕಾಪಡೆಗಳಿಂದ ವ್ಯಕ್ತವಾಗುತ್ತಿದ್ದ ಪ್ರತಿಕ್ರಿಯೆಯನ್ನು ಅನುಲಕ್ಷಿಸಿ 2008ರಲ್ಲಿ ಎರಡೂ ದೇಶಗಳ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. ಜಲಗಡಿಯ ಹತ್ತಿರ ಸುಳಿದವರತ್ತ ಗುಂಡು ಹಾರಿಸುವಂಥ ನೇರ ಕ್ರಮ ನಿಲ್ಲಬೇಕೆಂಬ ಆಶಯದ ಆ ಒಪ್ಪಂದವನ್ನು ಎರಡೂ ದೇಶಗಳು ಪಾಲಿಸಬೇಕು ಎಂಬುದನ್ನು ಭಾರತ ಶ್ರೀಲಂಕಾಗೆ ಈಗಾಗಲೇ ತಿಳಿಸಿದೆ.

ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ ದೋಣಿಗಳು ಜಲಗಡಿಯನ್ನು ಉಲ್ಲಂಘಿಸುವುದು ಆಕಸ್ಮಿಕವೋ, ಉದ್ದೇಶಿತವೋ ಎಂಬುದನ್ನು ಪರಿಶೀಲಿಸಬೇಕಾದದ್ದು  ನೌಕಾಪಡೆಗಳ ಕರ್ತವ್ಯ.ಅದನ್ನು ಪರಿಶೀಲಿಸದೆಯೇ ಏಕಾಏಕಿ ಕಾರ್ಯಾಚರಣೆ ನಡೆಸುವುದು ಅಂತರರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯೂ ಹೌದು.

ಭಾರತದ ಜೊತೆ ಶ್ರೀಲಂಕಾ ಸಂಬಂಧ ಉತ್ತಮವಾಗಿಯೇ ಇದೆ. ಅಲ್ಲಿ ದಶಕಗಳಿಂದ ಜನಾಂಗೀಯ ಹಿಂಸೆಯಿಂದ ಬಳಲಿದ ತಮಿಳರ ಪುನರ್‌ವಸತಿ ಕಾರ್ಯಕ್ರಮಗಳು ಭಾರತದ ನೆರವಿನೊಂದಿಗೆ ನಡೆಯುತ್ತಿವೆ.ವ್ಯಾಪಾರ ವಹಿವಾಟಿನಲ್ಲಿ ಕೂಡ ಎರಡೂ ದೇಶಗಳ ಮಧ್ಯೆ ಉತ್ತಮ ಸಂಬಂಧ ಉಳಿದುಕೊಂಡಿದೆ.ಇಂಥ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆಯ ಅತಿರೇಕದ ವರ್ತನೆ ಎರಡೂ ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆ ತರುವಂತಾಗಬಾರದು.

ಭಾರತದ ವಿದೇಶಾಂಗ ಇಲಾಖೆ ಈ ಸಂಬಂಧ ಶ್ರೀಲಂಕಾ ವಿದೇಶಾಂಗ ಇಲಾಖೆಯ ಜೊತೆ ವ್ಯವಹರಿಸುತ್ತಿರುವುದು ಸರಿಯಾದ ಕ್ರಮ. ಶ್ರೀಲಂಕಾ ಸರ್ಕಾರ ತನ್ನ ನೌಕಾಪಡೆಯ ಅತಿರೇಕದ ವರ್ತನೆಗಳನ್ನು ನಿಯಂತ್ರಿಸುವ ವಿವೇಕ ಪ್ರದರ್ಶಿಸುವುದು ಸದ್ಯದ ಪರಿಹಾರ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.