ADVERTISEMENT

ಲೋಕಪಾಲ: ಮತ್ತಷ್ಟು ವಿಳಂಬ

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST

ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ರಾಜ್ಯಸಭೆಯಲ್ಲಿ ಮತ್ತೆ ಅಡ್ಡಿಯುಂಟಾಗಿದೆ. ಮಸೂದೆಯನ್ನು ರಾಜ್ಯಸಭೆಯ ಸಲಹಾ ಸಮಿತಿಯ ಪರಿಶೀಲನೆಗೆ ಒಪ್ಪಿಸಲು ಸೋಮವಾರ ನಡೆದ ಕಲಾಪದಲ್ಲಿ ನಿರ್ಧರಿಸಲಾಗಿದೆ. ಲೋಕಪಾಲ ಮಸೂದೆಯ ಹಣೆಬರಹ  ಮುಂದಿನ ಮುಂಗಾರು ಅಧಿವೇಶನಕ್ಕೆ ಮುಂದೂಡಲ್ಪಟ್ಟಿದೆ.
 
ಸಲಹಾ ಸಮಿತಿಯ 15 ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ ಕೇಂದ್ರ ಸಿಬ್ಬಂದಿ ಖಾತೆಯ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ, `ಈ ಸಮಿತಿಯು ಮುಂದಿನ ಮುಂಗಾರು ಅಧಿವೇಶನದ ಕೊನೆಯ ವಾರದಲ್ಲಿ ವರದಿ ಸಲ್ಲಿಸಲಿದೆ~ ಎಂದಿದ್ದಾರೆ.
 
ರಾಜಕಾರಣಿಗಳ ಮಟ್ಟಿಗೆ ಪಕ್ಷಾತೀತವಾಗಿ ಅಪ್ರಿಯವಾಗಿರುವ ಈ ಮಸೂದೆಯನ್ನು ಅಷ್ಟರ ಮಟ್ಟಿಗೆ ಮುಂದಕ್ಕೆ ತಳ್ಳುವಲ್ಲಿ ಎಲ್ಲರೂ ಸೇರಿ ನಾಟಕವಾಡಿ ಯಶಸ್ವಿಯಾಗಿದ್ದಾರೆ.

ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ನಿರೀಕ್ಷಿಸಲಾಗಿರುವ ಲೋಕಪಾಲ ಮಸೂದೆಯ ಬಗ್ಗೆ ಕಳೆದ 42 ವರ್ಷಗಳಿಂದಲೂ ರಾಜಕಾರಣಿಗಳು ಇದೇ ರೀತಿಯ ಕುತಂತ್ರದ ನೀತಿಯನ್ನು ಹಾಗೂ ಉದಾಸೀನ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ.

ಕಳೆದ ವರ್ಷ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಲೋಕಪಾಲ ಮಸೂದೆ ಜಾರಿಗೆ ರಾಷ್ಟ್ರವ್ಯಾಪಿ ಚಳವಳಿ ಭುಗಿಲೆದ್ದ ಬಳಿಕ ಯುಪಿಎ ನೇತೃತ್ವದ ಸರ್ಕಾರ ಅನಿವಾರ್ಯವೆಂಬಂತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು.
ಸುದೀರ್ಘ ಚರ್ಚೆಯ ಬಳಿಕ ಹಲವು ತಿದ್ದುಪಡಿಗಳೊಂದಿಗೆ ಮಂಜೂರಾಗಿ ಆ ಮಸೂದೆ ರಾಜ್ಯಸಭೆಗೆ ಬಂತು. ರಾಜ್ಯಸಭೆಯಲ್ಲಿ ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯೂ ಆಗಿ ಮತದಾನದ ಹಂತದಲ್ಲಿ ಸ್ಥಗಿತಗೊಳಿಸಲಾಯಿತು.

ಅದಾಗಿ ಐದು ತಿಂಗಳ ಬಳಿಕ ಈಗ ಅಧಿವೇಶನದಲ್ಲಿ ಮತ್ತೆ ಮಸೂದೆಯನ್ನು ಮುಂದಕ್ಕೆ ತಳ್ಳಿರುವುದು ಈ ಕುರಿತು ಯುಪಿಎ ಸರ್ಕಾರಕ್ಕೆ ಮತ್ತು ವಿರೋಧ ಪಕ್ಷಗಳಿಗೆ ಇರುವ ಅಸಡ್ಡೆಯನ್ನೇ ಎತ್ತಿ ತೋರಿಸುತ್ತದೆ.
 
`ಮಸೂದೆಯನ್ನು ರಾಜ್ಯಸಭೆಯ ಸಲಹಾ ಸಮಿತಿಯ ಪರಿಶೀಲನೆಗೆ ವಹಿಸಬೇಕು~ ಎಂಬ ನಿರ್ಣಯವನ್ನು ಆರಂಭದಲ್ಲಿ ಮಂಡಿಸಿದ್ದು ಸಮಾಜವಾದಿ ಪಕ್ಷದ ಸದಸ್ಯ ಎನ್ನುವುದು ಈ ವಿಷಯದಲ್ಲಿ ಆಳುವ ಪಕ್ಷದ ಜತೆಗೆ ವಿರೋಧಪಕ್ಷದವರೂ ಶಾಮೀಲಾಗಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ.

ಬಿಜೆಪಿ ಮತ್ತು ಎಡಪಕ್ಷಗಳ ಸದಸ್ಯರು `ವಿರೋಧ ಪಕ್ಷದ ಸದಸ್ಯರು ಈ ಪ್ರಸ್ತಾಪವನ್ನು ಮಂಡಿಸುವಂತಿಲ್ಲ; ಬೇಕಿದ್ದರೆ ಸರ್ಕಾರವೇ ಮಂಡಿಸಲಿ~ ಎಂದು ವಾದ ಹೂಡಿ ಗದ್ದಲ ಎಬ್ಬಿಸಿದರಷ್ಟೇ ಹೊರತು, `ಮಸೂದೆ ಅಂಗೀಕಾರಕ್ಕೆ ಇನ್ನಷ್ಟು ತಡ ಮಾಡುವುದು ಬೇಡ, ಈ ಅಧಿವೇಶನದಲ್ಲಿಯೇ ಅಂಗೀಕಾರ ಮಾಡೋಣ~ ಎಂದು ಹೇಳಲಿಲ್ಲ! ಅಂದರೆ, ಎಲ್ಲ ರಾಜಕೀಯ ಪಕ್ಷಗಳೂ ಸೇರಿಕೊಂಡು ಮಸೂದೆ ಕಾನೂನಾಗುವುದನ್ನು ಮುಂದೂಡುವಲ್ಲಿ `ಒಗ್ಗಟ್ಟು~ ಪ್ರದರ್ಶಿಸಿವೆ ಎಂದೇ ಅರ್ಥ.

ಅಣ್ಣಾ ಹಜಾರೆ ತಂಡದ ದನಿ ದುರ್ಬಲವಾಗಿರುವುದೂ ಇದಕ್ಕೆ ಕಾರಣವಿರಬಹುದು. ಈಗಾಗಲೆ ಉದ್ದೇಶಿತ ಲೋಕಪಾಲ ಮಸೂದೆಯ ಕೈಕಾಲು ಕತ್ತರಿಸಿ ಸಾಧ್ಯವಾದಷ್ಟು ದುರ್ಬಲಗೊಳಿಸಲಾಗಿದೆ. ಲೋಕಪಾಲ ಮಸೂದೆಗೆ ಶಾಸನಾತ್ಮಕ ಸ್ಥಾನಮಾನ ಕೊಡುವ ಸಾಧ್ಯತೆಯನ್ನು ನಿರಾಕರಿಸಲಾಗಿದೆ.

ಈ ಮಧ್ಯೆ ರಾಜ್ಯ ಶಾಸನಸಭೆಗಳು ಕೈಗೊಳ್ಳುವ ನಿರ್ಧಾರದ ಮೇಲೆ ಲೋಕಪಾಲ ಮಸೂದೆ ಆಯಾ ರಾಜ್ಯಗಳಿಗೆ ಅನ್ವಯವಾಗುತ್ತದೆ ಎಂಬ ತಿದ್ದುಪಡಿಯನ್ನೂ ಮಾಡಲಾಗಿದೆ. ದುರ್ಬಲ ಸ್ವರೂಪದಲ್ಲೂ ಲೋಕಪಾಲ ಮಸೂದೆ ಸುಲಭದಲ್ಲಿ ಅಂಗೀಕಾರವಾಗಬಾರದು ಎಂಬ ಸಂಸದರ ಈ ನಿಲುವು ಜನದ್ರೋಹವಲ್ಲದೆ ಮತ್ತೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.