ADVERTISEMENT

ವಿವೇಚನೆಯ ಕ್ರಮವಲ್ಲ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ದರ ಏರಿಕೆಯ ಅಧಿಕಾರ ನೀಡಿದ ಮೇಲೆ ಮನಬಂದಂತೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಸುತ್ತಲೇ ಇವೆ. ಈ ವರ್ಷ ಪದೇ ಪದೇ ಪೆಟ್ರೋಲ್ ದರವನ್ನು ಹೆಚ್ಚಿಸುತ್ತಿರುವುದು ಜನರು ತಲ್ಲಣಗೊಳ್ಳುವಂತೆ ಮಾಡಿದೆ.
 
ಡಾಲರ್ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದ್ದರಿಂದ ಲೀಟರ್ ಪೆಟ್ರೋಲ್ ದರವನ್ನು 3 ರೂಪಾಯಿಗೆ ಏರಿಸಲಾಗಿದೆ. ಮೇ ತಿಂಗಳಲ್ಲಿ ಲೀಟರ್‌ಗೆ 5 ರೂಪಾಯಿ ಹೆಚ್ಚಿಸಲಾಗಿತ್ತು. ಆದರೆ ಇಷ್ಟು ಬೇಗ ದರ ಹೆಚ್ಚಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ.
 
ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಿದಾಗ ತೈಲ ಕಂಪೆನಿಗಳು ಹೆಚ್ಚು ನಷ್ಟ ಅನುಭವಿಸುವುದರಿಂದ ದರ ಏರಿಕೆ ಅನಿವಾರ್ಯ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುವುದು ವಿವೇಚನೆಯಿಂದ ಕೂಡಿದ ತೀರ್ಮಾನವಲ್ಲ.
 
ಜೊತೆಗೆ ಅಡುಗೆ ಅನಿಲದ ದರವನ್ನೂ ಹೆಚ್ಚಿಸುವ ಪ್ರಯತ್ನಕ್ಕೆ ಯುಪಿಎ ಅಂಗಪಕ್ಷಗಳೇ ಕಡಿವಾಣ ಹಾಕಿರುವುದರಿಂದ ಜನರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ತೈಲ ಬೆಲೆಯನ್ನು ಹೆಚ್ಚಿಸುತ್ತಲೇ ಹೋಗುವುದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರು ಕಾರಣವಾದರೂ, ದೇಶದ ಆರ್ಥಿಕ ಸ್ಥಿತಿಗತಿ, ಹಣದುಬ್ಬರವನ್ನು ನಿಯಂತ್ರಿಸಲಾಗದ ಸರ್ಕಾರದ ನಿಷ್ಕ್ರಿಯತೆಯೂ ಕಾರಣ ಎನ್ನುವ ಸತ್ಯವನ್ನು ನಿರಾಕರಿಸುವಂತಿಲ್ಲ.

ತೈಲಗಳ ಮೇಲೆ ನಿಯಂತ್ರಣ ನೀತಿ ಇದ್ದಾಗ ಬೆಲೆ ಹೆಚ್ಚಿಸುವ ಸಂದರ್ಭ ಬಂದಾಗಲೆಲ್ಲ ಜನರ ಬದುಕಿನ ಮೇಲಾಗುವ ಪರಿಣಾಮವನ್ನು ಸರ್ಕಾರ ಗಂಭೀರವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳುತ್ತಿತ್ತು.

ಪದೇ ಪದೇ ತೈಲ ಬೆಲೆ ಹೆಚ್ಚಿಸುತ್ತಾ ಹೋದಂತೆ ಪ್ರಯಾಣ ದರ ಮತ್ತು ಸರಕು ಸಾಗಣೆ ದರವೂ ಹೆಚ್ಚಿ ಅವಶ್ಯ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಇದೆಲ್ಲ ಸರ್ಕಾರಕ್ಕೆ ತಿಳಿಯದ ಸಂಗತಿಯೇನಲ್ಲ. ಆದರೆ ಹೊಸ ನೀತಿಯಿಂದಾಗಿ ತೈಲ ಕಂಪೆನಿಗಳು ಸ್ವಲ್ಪ ನಷ್ಟವನ್ನೂ ತಮ್ಮ ಮೇಲೆ ಹಾಕಿಕೊಳ್ಳಲು ಸಿದ್ಧವಿಲ್ಲ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದಾಗಲೆಲ್ಲ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಾ ಹೋಗುವುದರಲ್ಲಿ ಯಾವ ಆರ್ಥಿಕ ಪರಿಣತಿಯೂ ಕಾಣುತ್ತಿಲ್ಲ. ಇಷ್ಟಾದರೂ ತೈಲಗಳ ಅತಿಯಾದ ಬಳಕೆಯ ಮೇಲೆ ನಿಯಂತ್ರಣ ತರುವ ಮತ್ತು ಬದಲಿ ಇಂಧನ ಕಂಡು ಹಿಡಿಯಲು ಸರ್ಕಾರ ವಿಫಲವಾಗಿರುವುದು ವಿಪರ್ಯಾಸ.

ಮೊದಲು ಸರ್ಕಾರಿ ವಾಹನಗಳ ದುರ್ಬಳಕೆಯನ್ನು ನಿಯಂತ್ರಿಸಬೇಕು. ಸರ್ಕಾರದ ಮಟ್ಟದಲ್ಲಿ ತೈಲ ಬಳಕೆಯ ಮೇಲೆ ಮಿತಿ ಹಾಕಬೇಕು. ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಬೇಕು.

ಈ ಮಧ್ಯೆ ಮೇ ತಿಂಗಳಲ್ಲಿ ಪೆಟ್ರೋಲ್ ದರ ಹೆಚ್ಚಿದಾಗ ಕೆಲವು ರಾಜ್ಯಗಳು ಜನರ ಸಂಕಷ್ಟವನ್ನು ಅರಿತು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಇಳಿಸಿದವು. ಆದರೆ ಕರ್ನಾಟಕ ಸರ್ಕಾರ, ಕೇಂದ್ರ ಮತ್ತು ಜನರಿಂದ ಒತ್ತಾಯ ಬಂದರೂ ಜನರ ಸಂಕಷ್ಟಕ್ಕೆ ಕಿವುಡಾಗಿದ್ದು ಅದರ ಜನವಿರೋಧಿ ನಿಲುವನ್ನು ತೋರಿಸಿತು.

ಈಗಲಾದರೂ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಇಳಿಸಲು ಆದಷ್ಟು ಬೇಗನೆ ತೀರ್ಮಾನ ಕೈಗೊಳ್ಳುವ ಮೂಲಕ ಜನರ ಸಂಕಷ್ಟವನ್ನೂ ಹಂಚಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.