ADVERTISEMENT

ವಿಶ್ವಸಂಸ್ಥೆ ವರದಿ ಕಣ್ತೆರೆಸಲಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಬೆಂಗಳೂರಿನ ಐಟಿ ಕ್ರಾಂತಿ ಬಗ್ಗೆ ವಿಶ್ವಸಂಸ್ಥೆ ವರದಿ ಮೆಚ್ಚುಗೆ ಸೂಚಿಸಿರುವುದು ಬೆಂಗಳೂರಿಗೆ ಒಂದು ಹೊಸ ಗರಿ ಮೂಡಿಸಿದಂತಾಗಿದೆ. ಆದರೆ ಈ ಮೆಚ್ಚುಗೆಯ ಜೊತೆಗೇ, ಬೆಂಗಳೂರು ನಗರದ ಪರಿಸರದ ಮೇಲಾಗಿರುವ ಪ್ರತಿಕೂಲ ಪರಿಣಾಮಗಳ ಬಗೆಗೂ ಈ ವರದಿ ಎಚ್ಚರಿಕೆಯ ಕರೆಗಂಟೆ ನೀಡಿರುವುದನ್ನು ಕಡೆಗಣಿಸಲಾಗದು.

ಕ್ಯಾಲಿಫೋರ್ನಿಯಾದ ಸಿಲಿಕಾನ್ ಕಣಿವೆ, ಬೋಸ್ಟನ್‌ನ ರೂಟ್ 128ರ ಹಾದಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಕೆಲವೊಂದು ನಗರಗಳು `ಹೈಟೆಕ್ ವಲಯ~ಗಳಾಗಿ ರೂಪುಗೊಂಡಿವೆ ಎಂಬುದನ್ನು ಈ ವರದಿ ಗುರುತಿಸಿದೆ.

ಈ ಪೈಕಿ ಬೆಂಗಳೂರು ಸಹ ಒಂದು. ಉತ್ಕೃಷ್ಟ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳು ಮತ್ತು ಗಣನೀಯ ಪ್ರಮಾಣದ ಸಾರ್ವಜನಿಕ, ಕಾರ್ಪೊರೆಟ್ ಹಣಹೂಡಿಕೆಗಳಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ವರದಿ ವಿಶ್ಲೇಷಿಸಿದೆ.  ಬಹು ಸಂಖ್ಯೆಯ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್‌ಗಳು ಬೆಂಗಳೂರಿನ ಶಕ್ತಿಯಾಗಿದೆ.
 
ಹೀಗಾಗಿ ವೈಜ್ಞಾನಿಕ ಆವಿಷ್ಕಾರ, ವೈಮಾನಿಕ ಸಂಶೋಧನೆ ಹಾಗೂ ಎಲೆಕ್ಟ್ರಾನಿಕ್ಸ್ ಕೇಂದ್ರವಾಗಿ ಬೆಂಗಳೂರು ಅಭಿವೃದ್ಧಿ ಸಾಧಿಸಿದೆ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ. ಆದರೆ ಈ ಅಭಿವೃದ್ಧಿಯ ಕಥಾನಕದೊಳಗೆ ಮೂಲಸೌಕರ್ಯಗಳ ಅಸಮಾನ ಬೆಳವಣಿಗೆ ಹಾಗೂ ಹದಗೆಡುತ್ತಿರುವ ಪರಿಸರ ಕುರಿತಂತೆ ವ್ಯಕ್ತವಾಗಿರುವ ಆತಂಕವನ್ನು ನೀತಿ ನಿರೂಪಕರು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಹಲವು ತಜ್ಞರ ಅಭಿಪ್ರಾಯಗಳನ್ನು ವಿಶ್ವಸಂಸ್ಥೆಯ ಈ ವರದಿ ಗಣನೆಗೆ ತೆಗೆದುಕೊಂಡಿರುವುದು ನಮ್ಮ ಆಡಳಿತಗಾರರ ಕಣ್ತೆರೆಸಬೇಕಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಕುಸಿಯುತ್ತಿರುವ ಅಂತರ್ಜಲ ಹಾಗೂ ಕೆರೆಗಳ ಕಣ್ಮರೆ ಕುರಿತು ಈ ವರದಿ ವ್ಯಕ್ತ ಪಡಿಸಿರುವ ಕಳವಳ ಸಕಾಲಿಕ.
 
ಜೊತೆಗೆ ಇತ್ತೀಚಿನ ವರದಿಯೊಂದರ ಪ್ರಕಾರ, ರಾಷ್ಟ್ರದಲ್ಲಿ ಅತಿ ಹೆಚ್ಚು ಶಬ್ದ ಮಾಲಿನ್ಯವಿರುವ ನಗರಗಳ ಪೈಕಿ ಬೆಂಗಳೂರಿಗೆ ಏಳನೇ ಸ್ಥಾನ ಸಿಕ್ಕಿದೆ. ಅಷ್ಟೇ ಅಲ್ಲ ಈಚಿನ ದಿನಗಳಲ್ಲಿ ಕಸ ವಿಲೇವಾರಿ ಸಮಸ್ಯೆಯಿಂದ `ಉದ್ಯಾನ ನಗರಿ~ ಬೆಂಗಳೂರು `ಕಸ ನಗರ~ವಾಗಿರುವ ಕಟುವಾಸ್ತವವನ್ನು ಬೆಂಗಳೂರಿನ ಜನತೆ ಅನುಭವಿಸುತ್ತಿದ್ದಾರೆ.
 
ಇಷ್ಟೆಲ್ಲಾ ಸಮಸ್ಯೆಗಳು ನಗರವನ್ನು ಆವರಿಸಿರುವಾಗ ಪಕ್ಷಭೇದವಿಲ್ಲದೆ ಜಾತಿಗುಂಪುಗಾರಿಕೆ ನಡೆಸುತ್ತಾ ಬಿಬಿಎಂಪಿ ಸದಸ್ಯರು ಮೋಜಿನ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿರುವುದು ವಿಪರ್ಯಾಸ.

ಗ್ರಾಮಗಳಿಗಿಂತ ಭಾರತದ ನಗರಗಳು ವೇಗವಾಗಿ ಹೆಚ್ಚು ಪಟ್ಟು ಬೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ನಗರಗಳಲ್ಲಿನ ಭೂ ಬಳಕೆಯ ಬಗ್ಗೆ  ಸೂಕ್ತ ನೀತಿ ರೂಪಿಸುವುದು ಅಗತ್ಯ.

ತಮ್ಮ ಅಭಿವೃದ್ಧಿಯ ಬಗ್ಗೆ ಗಮನ ನೀಡುವಂತಹ ನಿರ್ದಿಷ್ಟ ಕಾನೂನುಗಳನ್ನು ವಿಶ್ವದಾದ್ಯಂತ ನಗರಗಳು ಜಾರಿಗೊಳಿಸಬೇಕೆಂದೂ ವಿಶ್ವಸಂಸ್ಥೆಯ ಈ ವರದಿ ವ್ಯಕ್ತಪಡಿಸಿರುವ ಆಶಯ ಸೂಕ್ತವಾದುದು. ಹಾಗಾದಾಗ ಮಾತ್ರವೇ ನಗರಗಳ ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ ಹಾಕುವುದು ಸಾಧ್ಯ.
 
ನಗರಗಳಲ್ಲಿನ ಜೀವನ ಗುಣಮಟ್ಟ ಹೆಚ್ಚಿಸಲು ಅಭಿವೃದ್ಧಿಯ ಹಾದಿಯ ಬಗ್ಗೆ  ಸಮರ್ಪಕ ದೃಷ್ಟಿಕೋನ ಇರಬೇಕು. ಅಭಿವೃದ್ಧಿಯ ಫಲಗಳು ಸಮಾನವಾಗಿ ಹಂಚಿಕೆಯಾಗಬೇಕು. ಇದಕ್ಕಾಗಿ ನಗರಗಳಲ್ಲಿನ ಮೂಲಸೌಕರ್ಯಗಳು ಹಾಗೂ ಉತ್ಪಾದಕತೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.