ADVERTISEMENT

ವ್ಯವಸ್ಥೆಯ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಮೊದಲು ಸವಿತಾ, ಈಗ ಜೆಸಿಂತಾ- ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಈ ಎರಡು ಅನ್ಯಾಯದ ಸಾವುಗಳು ಆಸ್ಪತ್ರೆ ಸೇರಿ ಒಟ್ಟು ಸಾಮಾಜಿಕ ವ್ಯವಸ್ಥೆಯ ಅನಾರೋಗ್ಯಕರ ಸ್ಥಿತಿಗತಿಯನ್ನು ಬಯಲುಮಾಡಿವೆ. ಲಂಡನ್‌ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಜೆಸಿಂತಾ ಸಲ್ಡಾನ, ತೀರಾ ವಿಚಿತ್ರವೆನಿಸುವ ಘಟನೆಗಳ ವಿಷವ್ಯೆಹಕ್ಕೆ ಬಲಿಯಾಗಿರುವ ಅನುಮಾನ ಸಹಜವಾಗಿಯೇ ಜಗತ್ತಿನಾದ್ಯಂತ ತೀವ್ರ ಆಕ್ರೋಶವನ್ನು ಕೆರಳಿಸಿದೆ.

ಜೆಸಿಂತಾರನ್ನು ನಿಜಕ್ಕೂ ಬಲಿ ತೆಗೆದುಕೊಂಡದ್ದು ಯಾವುದು? ಎಲ್ಲೆಡೆ ಅನಿಯಂತ್ರಿತವಾಗಿ ಬೆಳೆಯುತ್ತಿರುವ ಮಾಧ್ಯಮ ಹುಡುಗಾಟವೇ, ರಾಜಮನೆತನದ ಎಲ್ಲರೂ ಬಲ್ಲ ರಹಸ್ಯಗಳನ್ನು ಮುಚ್ಚಿಡದ ಕಾರಣಕ್ಕೆ ಎದುರಿಸಬೇಕಾದ ಆಸ್ಪತ್ರೆ ಆಡಳಿತ ಮಂಡಳಿಯ ಶಿಸ್ತಿನ ಕ್ರಮವೇ ಅಥವಾ ಕೆಲವು ಅಪ್ರಿಯ ಸತ್ಯಗಳನ್ನು ಹತ್ಯೆಗಳ ಮೂಲಕವೇ ಕಾಪಾಡುವ ಕ್ರೂರ ರಾಜತಾಂತ್ರಿಕ ನಿರ್ಧಾರವೇ? ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಇಂಥ ಪ್ರಶ್ನೆಗಳು ಹತ್ತಾರು. ಇದೊಂದು ಆತ್ಮಹತ್ಯೆ ಎಂಬ ಲಂಡನ್ ಪೊಲೀಸರ ಹೇಳಿಕೆ ಯಾರಲ್ಲೂ ನಂಬಿಕೆ ಹುಟ್ಟಿಸುತ್ತಿಲ್ಲ.

ಆಸ್ಟ್ರೇಲಿಯದ ಒಂದು ಹುಚ್ಚಾಟದ ದೂರವಾಣಿ ಕರೆ ಜೆಸಿಂತಾ ಪಾಲಿಗೆ ಯಮಲೋಕದ ಕರೆಯಾಗಿಬಿಟ್ಟ ಈ ಪ್ರಸಂಗದ ಸುತ್ತ ಇರುವ ನಿಗೂಢತೆಯ ಹುತ್ತವೇ ನಾಗರಿಕ ನ್ಯಾಯಕ್ಕೆ ಸವಾಲು ಹಾಕುವಂತಿದೆ.
ಜೆಸಿಂತಾ ಸಾವು ಮತ್ತೊಂದು ಮುಖ್ಯ ಪ್ರಶ್ನೆಯನ್ನು ಮಧ್ಯರಂಗಕ್ಕೆ ತಂದು ನಿಲ್ಲಿಸಿದೆ. ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಾಧ್ಯಮದ ಅತಿರೇಕ ಎಂಥ ವಿಕೃತ ಸ್ಥಿತಿ ತಲುಪಿದೆಯೆಂದರೆ, ಬಸುರಿಯ ವಾಂತಿಯೂ ಅವರಿಗೆ ಮಾರುಕಟ್ಟೆಯಲ್ಲಿ ಮೇಲುಗೈ ಪಡೆಯುವ `ಸಖತ್ತಾದ' ಸರಕಾಗುತ್ತದೆ. ಈಗ ಹೊಸದಾಗಿ ಜೆಸಿಂತಾ ಸಾವಿನ ಸೂತಕ ಮೆತ್ತಿಕೊಂಡ `ಪಾಪ್ಪರಾಝಿ'ಯ ಪಾತಕಗಳಿಗೆ ದೇಶಭಾಷೆಗಳ ಗಡಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ.

ಆಸ್ಟ್ರೇಲಿಯದ ಇಬ್ಬರು ರೇಡಿಯೋ ಜಾಕಿಗಳ ಈ ವಿಕೃತ ಹುಚ್ಚಾಟದಿಂದ ಮಾಧ್ಯಮದ ವಿಶ್ವಾಸಾರ್ಹತೆಯ ಗರ್ಭಪಾತವಾಗಿದೆ ಎಂದರೆ ತಪ್ಪಿಲ್ಲ. ಪ್ರತಿನಿತ್ಯ ತನ್ನ ಸೇವೆಯಿಂದ ಹಲವರ ಪ್ರಾಣ ಉಳಿಸುತ್ತಿದ್ದ ಜೆಸಿಂತಾ ತನ್ನದಲ್ಲದ ತಪ್ಪಿಗೆ ಬಲಿಯಾಗಬೇಕಾಯಿತು. ಈ ಸಾವಿನಿಂದ ಆಗಿರುವ ಗಾಯಕ್ಕೆ ಉಪ್ಪು ಸವರಿದಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ರೇಡಿಯೋ ಸಂಸ್ಥೆ ಪರಸ್ಪರ ದೂರಿಕೊಂಡು ಕೆಸರು ಎರಚಿಕೊಳ್ಳುತ್ತಿರುವುದಂತೂ ಅಮಾನವೀಯತೆಯ ಪರಮಾವಧಿ.

ADVERTISEMENT

ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಬದುಕನ್ನು ಆವರಿಸಿರುವ ಅಭದ್ರತೆ. ಎಲ್ಲಿದ್ದರೂ ಎಂತಾದರೂ ಭಾರತೀಯರೇ ಆಗಿರುವ ತನ್ನವರ ಬದುಕಿನ ಆಕಸ್ಮಿಕಗಳು ಮತ್ತು ದುರಂತಗಳಿಗೆ ಸೂಕ್ತ ರಾಜತಾಂತ್ರಿಕ ಪ್ರತಿಕ್ರಿಯೆ ನೀಡುವ ಸೂಕ್ಷ್ಮತೆಯನ್ನು ಸರ್ಕಾರ ಪ್ರದರ್ಶಿಸಬೇಕು. ನೊಂದವರ ಕುಟುಂಬಕ್ಕೆ ಎಲ್ಲ ಬಗೆಯ ನೆರವನ್ನು ನೀಡುವುದು ಅದರ ಕನಿಷ್ಠ ಸಾಮಾಜಿಕ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.