ADVERTISEMENT

ಸಂಸತ್ತಿಗೆ ಕಪ್ಪುಚುಕ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2014, 19:30 IST
Last Updated 13 ಫೆಬ್ರುವರಿ 2014, 19:30 IST

ಲೋಕಸಭೆಯಲ್ಲಿ ಬುಧವಾರ ಮತ್ತು ಗುರುವಾರ­ ನಡೆದ ವಿದ್ಯಮಾನಗಳು ದೇಶದ ಸಂಸದೀಯ ಪ್ರಜಾಸತ್ತೆಗೆ ಬಳಿದ ಕಪ್ಪು ಮಸಿ, ಸಂಸದೀಯ ನಡವಳಿಕೆಗಳಿಗೆ ಕಳಂಕ ಎಂದೇ ಹೇಳಬೇಕಾಗಿದೆ. ಜನ­ಪ್ರತಿನಿಧಿಗಳ ಮೇಲೆ ಇಡೀ ದೇಶ ಇಟ್ಟಿದ್ದ ವಿಶ್ವಾಸಕ್ಕೆ, ಗೌರವಕ್ಕೆ ಇದರಿಂದ ಭಂಗ ಬಂದಿದೆ. ಸದನದ ಒಳಗೆ ‘ಪೆಪ್ಪರ್‌ ಸ್ಪ್ರೇ’ (ಕಣ್ಣು ಮತ್ತು ತ್ವಚೆ ಉರಿಯುವಂತೆ ಮಾಡುವ ರಾಸಾಯನಿಕ ದ್ರಾವಣ) ಬಳಸಿ ಸಹಸದಸ್ಯರಿಗೆ ತೊಂದರೆ ಕೊಟ್ಟಿದ್ದು, ಚಾಕು ಪ್ರದರ್ಶಿಸಿದ್ದಂತೂ ನಮ್ಮ ಕೆಲ ಜನಪ್ರತಿನಿಧಿಗಳ ದುಂಡಾ­ವರ್ತನೆಯ ಪರಮಾವಧಿ.

ಪೆಪ್ಪರ್‌ ಸ್ಪ್ರೇ­ಯಿಂದಾಗಿ ಮುಖ ಮತ್ತು ಕಣ್ಣುಗಳಿಗೆ ತೊಂದರೆ ಅನುಭವಿಸಿದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಾಯಶಃ ಸಂಸತ್ತಿನ ಇತಿಹಾಸದಲ್ಲಿ ಹಿಂದೆಂದೂ ಇಂಥ ಕರಾಳ ಘಟನೆಗಳು ನಡೆದಿರಲಿಲ್ಲ. ಸೋಮವಾರ ಕೇಂದ್ರ ಸಚಿವ ಸಂಪುಟದ ನಾಲ್ವರು ಸಚಿವರು ಸ್ಪೀಕರ್‌ ಆಸನದ ಮುಂಭಾಗದ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮೊದಲು ಒಮ್ಮೆ  ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಕೆಲ ಸದ­ಸ್ಯರು ತಮ್ಮದೇ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ್ದರು. ಇದು ರಾಜ­ಕೀಯ ಅರಾಜಕತೆಗೆ  ಸಮನಾದದ್ದು.

ಮಸೂದೆ ಪ್ರತಿಗಳನ್ನು ಹರಿದು­ಹಾಕಿದ ಸಂಗ­ತಿಗಳು ಅನೇಕ ಸಲ ನಡೆದಿವೆ. ಆದರೆ ಈಗ ನಡೆದದ್ದು ಅವೆಲ್ಲವನ್ನೂ ಮೀರಿದ್ದು. ಅತ್ಯಂತ ಬಿಗಿ ಪಹರೆ ಇರುವ ಸಂಸತ್ತಿನ ಆವರಣದ ಒಳಗೆ ಚಾಕು, ಪೆಪ್ಪರ್‌ ಸ್ಪ್ರೇಯಂಥ ಅಪಾಯಕಾರಿ ವಸ್ತುಗಳನ್ನು ತರಲು ಸಂಸದರಿಗೆ ಅವಕಾಶ ಸಿಕ್ಕಿದ್ದು ಹೇಗೆ? ಹಾಗಾದರೆ ಅಲ್ಲಿ ಅವರನ್ನು ಯಾರೂ ತಪಾಸಣೆ ಮಾಡುವುದಿಲ್ಲವೇ? ಸಂಸದರೆಂದರೆ ಎಲ್ಲ ಬಗೆಯ ತಪಾಸಣೆಯಿಂದ ಹೊರತಾದವರೇ ಎಂಬ ಅನುಮಾನ ಮೂಡುತ್ತದೆ.

ಇಷ್ಟೆಲ್ಲ ಕೋಲಾಹಲಕ್ಕೆ ಕಾರಣ ಆಂಧ್ರಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸುವ ಮಸೂದೆ ಮಂಡನೆ. ಈ ವಿಷಯ ಆರಂಭ­ದಿಂದಲೂ ಒಂದಲ್ಲ ಒಂದು ವಿವಾದಕ್ಕೆ ಸಾಮಗ್ರಿಯಾಗುತ್ತಲೇ ಬಂದಿದೆ. ಸ್ವಾತಂತ್ರ್ಯ ಬಂದ ಬಳಿಕ ಅನೇಕ ರಾಜ್ಯಗಳನ್ನು ವಿಭಜಿಸಿ ಹೊಸ ರಾಜ್ಯಗಳನ್ನು ರಚಿಸ­ಲಾಗಿದೆ. ಆದರೆ ಆಗೆಲ್ಲ ಇಷ್ಟೊಂದು ತೀವ್ರ ಸ್ವರೂಪದ ಪ್ರತಿಭಟನೆ, ದಾಂದಲೆ ನಡೆದಿರಲಿಲ್ಲ. ಈ ಬೆಳವಣಿಗೆಗಳನ್ನು ನೋಡಿದರೆ ಇಡೀ ವಿಷಯ­ವನ್ನು ನಿಭಾಯಿಸುವಲ್ಲಿ ಕಾಂಗ್ರೆಸ್‌ ವರಿಷ್ಠರ ಮತ್ತು ಪ್ರಧಾನಿಯವರ ವೈಫಲ್ಯ ಎದ್ದು ಕಾಣುತ್ತದೆ. ಇದು ಜನರ ಭಾವನೆಗಳ ಜತೆ ಚೆಲ್ಲಾಟ­ವಾಡುತ್ತ ಚುನಾವಣೆ ಸನಿಹದಲ್ಲಿದ್ದಾಗ ರಾಜಕೀಯ ಲಾಭದ ಬೆಳೆ ತೆಗೆ­ಯಲು ಮಸೂದೆ ಮಂಡನೆಗೆ ಮುಂದಾದ ಕಾಂಗ್ರೆಸ್‌ನ ಅಪ್ರಬುದ್ಧತೆಗೆ ಹಿಡಿದ ಕನ್ನಡಿ. ಇದರಿಂದಾಗಿಯೇ ಸೀಮಾಂಧ್ರ ಮತ್ತು ತೆಲಂಗಾಣ ಭಾಗದ ಜನರಲ್ಲಿ ಪರಸ್ಪರ ಅಪನಂಬಿಕೆ ಬೆಳೆಯುವಂತಾಗಿದೆ.

ಎರಡೂ ಭಾಗದ ಜನರ ಮನ­ವೊಲಿಸಿ, ವಿಶ್ವಾಸ ಗಳಿಸಿ ವಿಭಜನೆಗೆ ಒಪ್ಪುವಂತೆ ಮಾಡುವ ಬುದ್ಧಿ­ವಂತಿಕೆ­ಯನ್ನು ಪ್ರದರ್ಶಿಸಬೇಕಿತ್ತು. ಆದರೆ ರಾಜಕೀಯ ಲಾಭ– ನಷ್ಟದ ಲೆಕ್ಕಾ­­ಚಾರವೇ ಮುಖ್ಯವಾಗಿರುವಾಗ ಅಂಥ ವಿವೇಕಕ್ಕೆ ಅವಕಾಶವಾದರೂ ಎಲ್ಲಿದೆ? ಒಂದೇ ಒಂದು ಮಸೂದೆ ಸಂಸತ್ತಿನ ಕಲಾಪಗಳನ್ನೇ ನುಂಗುತ್ತಿದೆ. ಇಂಥ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಕೂಡ ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ಯುಪಿಎ­ಗಂತೂ ಇಂಥ ಸೂಕ್ಷ್ಮ ವಿಷಯವನ್ನು ಸರಿಯಾಗಿ ನಿಭಾಯಿಸುವ ಕೌಶಲವೂ ಇಲ್ಲ. ಇದು ದೇಶದ ದುರಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.