ADVERTISEMENT

ಸಾಹಿತ್ಯ ಸಮ್ಮೇಳನದ ಸಾರ್ಥಕ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2013, 19:59 IST
Last Updated 7 ಜನವರಿ 2013, 19:59 IST

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಪರಿಭಾವಿಸಲಾಗುವ ಕನ್ನಡ ಸಾಹಿತ್ಯ ಪರಿಷತ್ತು, ಫೆಬ್ರುವರಿಯಲ್ಲಿ ನಡೆಸಲು ಉದ್ದೇಶಿಸಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಂಸ್ಕೃತಿಯ ಪ್ರತೀಕವೂ ಹೌದು. ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಕೂಡ ಎಷ್ಟೋ ಬಾರಿ ಕ್ಲಿಷ್ಟವಾದ ಸಂದರ್ಭವನ್ನು ಸೃಷ್ಟಿಸಿದೆ. ವಿವಾದ, ಚರ್ಚೆಗೂ ಆಸ್ಪದವಾಗಿದೆ. ಆದರೆ ಈ ಬಾರಿ ಯಾವುದೇ ವಿವಾದವಿಲ್ಲದೆ ಸಮ್ಮೇಳನಾಧ್ಯಕ್ಷರನ್ನಾಗಿ  ಕೋ.ಚೆನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಇನ್ನೂ ಹಲವು ವಿದ್ವಾಂಸರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಅಂತಿಮವಾಗಿ ಕೋ.ಚೆನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಕೊನೆಯ ಕೊಂಡಿ ಚೆನ್ನಬಸಪ್ಪ ಎಂದು ಬಣ್ಣಿಸಲಾಗಿದೆ. 91 ವರ್ಷ ವಯಸ್ಸಿನ ಕೋ.ಚೆ. ಕಾನೂನು ಮತ್ತು ಸಾಹಿತ್ಯ ಎರಡನ್ನೂ ಅಪ್ಪಿಕೊಂಡವರು. ವೃತ್ತಿಯಲ್ಲಿ ನ್ಯಾಯಾಧೀಶರಾಗಿದ್ದರೂ ನಾಡು-ನುಡಿಯ ಬಗ್ಗೆ ಅದಮ್ಯ ಪ್ರೀತಿ ಬೆಳೆಸಿ ಕೊಂಡವರು. 80ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

ಈ ಆಯ್ಕೆಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಕ ನೆಲೆಗಳ ವ್ಯಾಪ್ತಿಯನ್ನು ಹಿಗ್ಗಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪರಿಧಿಯಲ್ಲಿ ಸಾಹಿತ್ಯವನ್ನೂ ಒಳಗೊಂಡಂತೆ ಭಾಷೆ, ಪರಿಚಾರಿಕೆಯ ವಿವಿಧ ಆಯಾಮಗಳು ಸೇರಿಕೊಂಡಿರುವುದನ್ನು ತೋರಿಸಿಕೊಳ್ಳುವ ಯತ್ನವೂ ಇದಾಗಿದೆ. ಸಾಹಿತ್ಯ ಸಮ್ಮೇಳನ 70 ವರ್ಷಗಳ ಹಿಂದಿನ ಶುದ್ಧ ಸಾಹಿತ್ಯಕ ಸಮ್ಮೇಳನವಾಗಿಲ್ಲ ಎನ್ನುವುದು ಅದು ನಡೆದು ಬಂದ ದಾರಿಯ ಮೂಲಕ ಸ್ಪಷ್ಟವಿದೆ.

ಸಾಹಿತ್ಯಕ್ಕಿಂತ ಸಾಹಿತ್ಯದ ಹಿಂದಿನ ಪ್ರೇರಣೆಗಳ ಬಗ್ಗೆ ಹಾಗೂ ಅದರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಸಾಹಿತ್ಯ ಸಮ್ಮೇಳನ ಹೆಚ್ಚು ಒತ್ತುಕೊಡುತ್ತಿದೆ. ರೈತರ ಆತ್ಮಹತ್ಯೆ, ಪರಿಸರ ನಾಶ, ಭೂ ಮಾಫಿಯಾ ಹಾವಳಿ, ಕಾವೇರಿ ನೀರು ಹಂಚಿಕೆ ವಿವಾದ, ಶೋಷಣೆ, ಜಾಗತೀಕರಣದ ಬಗ್ಗೆ ಸಾಹಿತ್ಯ ಸಮ್ಮೇಳನ ಚರ್ಚೆ ನಡೆಸುವ ಮೂಲಕ ಸಮಕಾಲೀನತೆಗೆ ಸ್ಪಂದಿಸಲು ತವಕಿಸುವುದು ಕಂಡುಬರುತ್ತದೆ. ಹೀಗಾಗಿ ಏಕೀಕರಣಕ್ಕೆ ಶ್ರಮಿಸಿದ ಚಿಂತಕರೊಬ್ಬರ ಆಯ್ಕೆ ಮೂಲಕ, ಸಾಹಿತ್ಯದ ಹೊಸ ಚಿಗುರು, ಹಳೆಬೇರುಗಳ ಸಂಗಮವೂ ಇಲ್ಲಿ ಆಗಲಿದೆ.

ಅಪಾರ ವೆಚ್ಚದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ `ಹಬ್ಬ'ದ ವಾತಾವರಣವನ್ನು ಉಂಟುಮಾಡುತ್ತದೇನೋ ನಿಜ. ಆದರೆ ಸಾಹಿತ್ಯಾಸಕ್ತಿಯೇ ಹೆಚ್ಚಾಗಿ ಮೆರೆಯಬೇಕು, ಉನ್ನತ ಚಿಂತನೆಗಳು ಭಿನ್ನ ನೆಲೆಗಳಲ್ಲಿ ಪ್ರತಿಪಾದನೆಯಾಗಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಸಮ್ಮೇಳನಾಧ್ಯಕ್ಷರ ಹೊಣೆಗಾರಿಕೆ ಏನು ಎನ್ನುವ ಪ್ರಶ್ನೆ ಪ್ರತೀ ಸಮ್ಮೇಳನದ ಸಮಯದಲ್ಲಿ ಚರ್ಚೆಗೆ ಬರುತ್ತದೆ.

ಸಮ್ಮೇಳನಾಧ್ಯಕ್ಷರು ಭಾಷಣ ಮಾಡಿ ಹೋದ ಮೇಲೆ ಅದನ್ನು ಮರೆತರೆ ಏನು ಪ್ರಯೋಜನ? ಅವರ ವಿದ್ವತ್ತು ಯಾವ ರೀತಿಯಲ್ಲಿ ಸದುಪಯೋಗವಾಗುತ್ತದೆ? ಅಧ್ಯಕ್ಷರ ಮಾತುಗಳಿಗಾಗಲಿ, ಸಮ್ಮೇಳನದ ನಿರ್ಣಯಗಳಿಗಾಗಲಿ ಸರ್ಕಾರ ಬೆಲೆ ಕೊಡುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆಯ ಕೊರತೆ ಇದೆ. ಸಾಹಿತ್ಯ ಸಮ್ಮೇಳನದ ಸಾರ್ಥಕ್ಯವಿರುವುದು ಅದು ಕಾಲಕ್ಕೆ ತಕ್ಕಂತೆ ಪರಿವರ್ತನೆಯಾಗುವುದರಲ್ಲಿ. ಜಾಗತಿಕವಾಗಿ ನಡೆಯುತ್ತಿರುವ ಸಾಹಿತ್ಯಕ ವಿದ್ಯಮಾನಗಳಿಗೆ ಕನ್ನಡವನ್ನು ಹೊಂದಿಸಿಕೊಳ್ಳುವುದರಲ್ಲಿ. ಅಂಥ ಬೆಳವಣಿಗೆ ಮುಂದಿನ ಸಮ್ಮೇಳನದಲ್ಲಿ ನಡೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.