ADVERTISEMENT

ಸ್ಥೈರ್ಯ ಕುಗ್ಗಿಸಬೇಡಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಪ್ರಾಮಾಣಿಕ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡುವುದನ್ನು ಭ್ರಷ್ಟ ರಾಜಕೀಯ ವ್ಯವಸ್ಥೆ ಸಹಿಸಿಕೊಳ್ಳುವುದಿಲ್ಲ ಎಂಬುದು ಹರಿಯಾಣದ ಹಿರಿಯ ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ, ಉತ್ತರ ಪ್ರದೇಶದ ಮೈನ್‌ಪುರಿಯ ಪೊಲೀಸ್ ಠಾಣಾಧಿಕಾರಿ ಅಲೋಕ್ ಕುಮಾರ್ ಅವರ ದಿಢೀರ್ ಎತ್ತಂಗಡಿಯಿಂದ ಮತ್ತೆ ರುಜುವಾತಾಗಿದೆ. ಅಧಿಕಾರದ ಲಗಾಮು ಹಿಡಿದ ರಾಜಕಾರಣಿಗಳಿಗೆ `ಹೌದಪ್ಪ~ಗಳು ಬೇಕು, ಅಂಥವರಿಗಷ್ಟೇ ಮಣೆ ಎನ್ನುವುದು ಜನಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ.

ಆದರೆ ಅನೇಕ ಸಲ ರಾಜಕಾರಣಿಗಳು ಎಷ್ಟು ನಿರ್ಲಜ್ಜವಾಗಿ ವರ್ತಿಸುತ್ತಾರೆ ಮತ್ತು ತಮ್ಮ ರಾಜಕೀಯ ಗಾಡ್‌ಫಾದರ್‌ಗಳನ್ನು ಮೆಚ್ಚಿಸಲು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದು ನೋಡಿದಾಗ ಎಂಥವರೂ ತಲೆತಗ್ಗಿಸುವಂತಾಗುತ್ತದೆ. ಅಲ್ಲದೆ ಇಂಥ ವರ್ಗಾವಣೆಗಳ ಹಿಂದೆ `ಪ್ರಭಾವಿಗಳನ್ನು ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ~ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುವ, ಶಿಕ್ಷೆ ನೀಡುವ ಸಂದೇಶವೂ ಇದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಮತ್ತು ಭೂಮಿ, ವಸತಿ ಅಭಿವೃದ್ಧಿ ಕಂಪೆನಿ `ಡಿಎಲ್‌ಎಫ್~ ನಡುವಿನ ಅನುಮಾನಾಸ್ಪದ ಭೂ ವಹಿವಾಟುಗಳ ತನಿಖೆಗೆ ಮುಂದಾಗಿದ್ದೇ ಖೇಮ್ಕಾಗೆ ಮುಳುವಾಯಿತು. ಹರಿಯಾಣದ ನೋಂದಣಿ ಮತ್ತು ಭೂದಾಖಲೆಗಳ ಮಹಾನಿರ್ದೇಶಕ ಹುದ್ದೆಗೆ ಅವರು ವರ್ಗವಾಗಿ ಬಂದದ್ದು ಕೇವಲ 50 ದಿನಗಳ ಹಿಂದೆ.

ವಾದ್ರಾರಿಂದ ದುಬಾರಿ ಬೆಲೆಗೆ ಡಿಎಲ್‌ಎಫ್ ಖರೀದಿಸಿದ್ದ 3.5 ಎಕರೆ ಭೂಮಿಯ ಮ್ಯುಟೇಷನ್ ರದ್ದು ಮಾಡಿ ಕಾನೂನನ್ನು ಎತ್ತಿ ಹಿಡಿದ ಅವರಿಗೆ ಸಿಕ್ಕ ಬಳುವಳಿಯೇ `ಅವಧಿಪೂರ್ವ ವರ್ಗಾವಣೆ~. 21 ವರ್ಷಗಳ ಸೇವಾವಧಿಯಲ್ಲಿ ಇದು ತಮ್ಮ 43ನೇ ವರ್ಗಾವಣೆ ಎಂದು ಅವರೇ ಹೇಳಿಕೊಂಡಿದ್ದಾರೆ.
 
ಇದರ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ಪ್ರತಿಭಟನಾ ಪತ್ರ ಬರೆದಿದ್ದ ಅವರು ಒಂದೇ ದಿನದಲ್ಲಿ ರಾಗ ಬದಲಿಸಿ, `ಸಕಾರಣದಿಂದಲೇ ನನ್ನ ವರ್ಗಾವಣೆಗೆ ನಡೆದಿದೆ ಎಂಬುದು ನನಗೆ ಮನವರಿಕೆಯಾಗಿದೆ~ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅಂದರೆ ಒತ್ತಡ ಹೇರಿ ಹಿರಿಯ ಅಧಿಕಾರಿಯ ಬಾಯಿಯನ್ನೂ ಸರ್ಕಾರ ಹೇಗೆ ಮುಚ್ಚಿಸಬಲ್ಲದು ಎಂಬುದಕ್ಕೆ ಇದೊಂದು ನಿದರ್ಶನ.

ಇನ್ನು, ಪೊಲೀಸ್ ಅಧಿಕಾರಿಗಳನ್ನಂತೂ ಜೀತದಾಳುಗಳಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹಿಂದೊಮ್ಮೆ ಹೇಳಿದ್ದರು. ರಾಜ್ಯ ಸರ್ಕಾರಗಳ ಕೈಯಲ್ಲಿ ಪೊಲೀಸರು `ಫುಟ್ಬಾಲ್ ಚೆಂಡಿನಂತಾಗಿದ್ದಾರೆ~ ಎಂದು ಪಿ.ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ ಹೇಳಿಕೆ ನೀಡಿದ್ದರು.
 
ಆದರೆ ಅವರದೇ ಸಹೋದ್ಯೋಗಿ, ಕೇಂದ್ರ ಕಾನೂನು ಮಂತ್ರಿ ಸಲ್ಮಾನ್ ಖುರ್ಷಿದ್ ನೇತೃತ್ವದ ಟ್ರಸ್ಟ್‌ನ ಅಕ್ರಮಗಳ ಬಗ್ಗೆ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಮೈನಪುರ ಠಾಣಾಧಿಕಾರಿಗೂ ಎತ್ತಂಗಡಿ ಶಿಕ್ಷೆ ಕೊಡಲಾಗಿದೆ. ಜನತಂತ್ರ ವ್ಯವಸ್ಥೆಯಲ್ಲಿ ನೌಕರರನ್ನು ವರ್ಗಾಯಿಸಲು  ಸರ್ಕಾರಕ್ಕೆ ಅಧಿಕಾರವಿದೆ; ಅದು ಅದರ ಹಕ್ಕು ಕೂಡ ಹೌದು.


ಆದರೆ ಭ್ರಷ್ಟಾಚಾರ, ಪ್ರಭಾವಿಗಳ ಹಗರಣದ ತನಿಖೆಗೆ ಮುಂದಾಗುವ ಅಧಿಕಾರಿಗಳಿಗೆ ಕಿರುಕುಳ ಕೊಡಲು, ದನಿ ಅಡಗಿಸಲು ವರ್ಗಾವಣೆಯನ್ನು ಅಸ್ತ್ರವಾಗಿ ಬಳಸುವುದು ಮಾತ್ರ ಅಕ್ಷಮ್ಯ. ಇದು ಅಧಿಕಾರಶಾಹಿಯ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುತ್ತದೆ. ಆದ್ದರಿಂದಲೇ ವರ್ಗಾವಣೆಗೆ ಒಂದು ಸ್ಪಷ್ಟ, ಶಾಸನಬದ್ಧ ನೀತಿ ಇರಬೇಕು ಎನ್ನುವುದನ್ನು ಗಂಭಿರವಾಗಿ ಪರಿಗಣಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT