ADVERTISEMENT

ಸ್ವರಸಾಧಕನ ಸ್ಮರಣೆಯಲ್ಲಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:30 IST
Last Updated 2 ಫೆಬ್ರುವರಿ 2011, 6:30 IST

ಪಂಡಿತ ಭೀಮಸೇನ ಜೋಶಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕ. ಸರ್ ಎಂ. ವಿಶ್ವೇಶ್ವರಯ್ಯ ಅವರ ನಂತರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ಕ್ಕೆ ಭಾಜನರಾದ ಶ್ರೇಷ್ಠ ಕನ್ನಡಿಗ. ಜೋಶಿ ಅವರಂಥ ಅರ್ಹ ವ್ಯಕ್ತಿಗೆ ನೀಡಿದ್ದರಿಂದ ‘ಭಾರತರತ್ನ’ ಪ್ರಶಸ್ತಿಗೂ ಗೌರವ. ತಮ್ಮ ಅಮೋಘ ಗಾಯನದಿಂದ ಕರ್ನಾಟಕದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಂಗೀತ ರಸಿಕರನ್ನು ಪಡೆದಿರುವ ಭೀಮಸೇನ ಜೋಶಿ ಸಂಗೀತ ಕಲೆಗೆ ಭಾಷೆ, ಪ್ರಾಂತ್ಯದ ಗಡಿಗಳಿಲ್ಲ ಎಂಬುದನ್ನು ತೋರಿಸಿರುವ ಅಪ್ರತಿಮ ಗಾಯಕ. ಗುರುಶಿಷ್ಯ ಪರಂಪರೆಯಲ್ಲಿ ಸಂಗೀತವನ್ನು ಕಲಿತಿದ್ದ ಅವರು ಖ್ಯಾಲ್ ಗಾಯನದಲ್ಲಿ ಕಿರಾಣ ಘರಾನದ ಶ್ರೇಷ್ಠ ಪ್ರತಿನಿಧಿ. ಆದರೂ ಅವರ ಗಾಯನ ಎಲ್ಲ ಘರಾಣೆಗಳ ಉತ್ತಮ ಅಂಶಗಳನ್ನು ಹದವಾಗಿ ಮೇಳೈಸಿದ ರಸಪಾಕದಂತೆ.

ಗುರುವಿನ ಪದತಲದಲ್ಲಿ ಕಲಿತದ್ದನ್ನು ಸ್ವಂತ ಸ್ವರಸಾಧನೆಯಿಂದ ವಿಸ್ತರಿಸಿ ತನ್ನದೇ ಆದ ಗಾಯನ ಶೈಲಿಯನ್ನು ರೂಪಿಸಿಕೊಂಡ ಅನನ್ಯ ಗಾಯಕ ಅವರು.  ದಾಸರ ಪದಗಳಿಗೆ ಹಿಂದೂಸ್ತಾನಿಯ ಭಾವಪೂರ್ಣ ಅಭಿವ್ಯಕ್ತಿ ಒದಗಿಸಿದ ಅವರ ಸಂತವಾಣಿ ಕರ್ನಾಟಕದಲ್ಲಿ ಎಲ್ಲ ಬಗೆಯ ಸಂಗೀತ ರಸಿಕರ ಮನಸ್ಸನ್ನು ಸೂರೆಗೊಂಡರೆ, ಮಹಾರಾಷ್ಟ್ರದಲ್ಲಿ ಅವರ ಅಭಂಗವಾಣಿ ಪಂಡಿತ ಪಾಮರರ ಇಷ್ಟ ಸಂಗೀತ. ಠುಮ್ರಿ, ಹಿಂದಿ ಭಜನೆಗಳನ್ನು ರಾಗರಸದಲ್ಲಿ ಅದ್ದಿ ತೆಗೆದಂತೆ ಅಭಿವ್ಯಕ್ತಿಸುವ ಪಂಡಿತಜೀ ದೇಶದಾದ್ಯಂತ ಅಭಿಮಾನಿಗಳನ್ನು ಜನಪ್ರಿಯ ಗಾಯಕ. 89 ವರ್ಷಗಳ ತುಂಬು ಬಾಳಿನ ನಂತರ ಈಚೆಗೆ ವಿಧಿವಶರಾದ ಅವರ ನೆನಪಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಅನನ್ಯ ಸಾಧಕನಿಗೆ ಅರ್ಹ ಗೌರವ.

ಆದರೆ, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸಭೆಯಲ್ಲಿ ಜೋಶಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸದಸ್ಯರೊಬ್ಬರು ಅವರ ಜೀವನಶೈಲಿ ಕುರಿತಾಗಿ ಮಾಡಿದ ಕೀಳುಮಟ್ಟದ ಹೇಳಿಕೆಯಿಂದ ನಾಗರಿಕ ಜನತೆ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ದೇಶದ ಹೆಮ್ಮೆಯ ಪರಂಪರೆಯನ್ನು ಪ್ರತಿನಿಧಿಸಿದ ಹಿರಿಯ ಚೇತನದ ಬಗ್ಗೆ ಆಡಿದ ಮಾತು ಸದಸ್ಯರು ಪ್ರತಿನಿಧಿಸುವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂಥದ್ದಲ್ಲ. ಜವಾಬ್ದಾರಿಯುತ ಜನಪ್ರತಿನಿಧಿಗಳಿಗೆ ಕನಿಷ್ಠ ಮಟ್ಟದ ಸಾಂಸ್ಕೃತಿಕ ಪರಿಜ್ಞಾನ ಇರುವುದು ಅವಶ್ಯಕ.

ರಾಜ್ಯಾಡಳಿತದ ಹೊಣೆ ಹೊತ್ತ ನಾಯಕರೇ ‘ಭ್ರಷ್ಟರ ಕೈ ಕಡಿಯಿರಿ’ ಎಂದು ಸಾರ್ವಜನಿಕವಾಗಿ ಕರೆ ಕೊಟ್ಟರೆ, ಪಕ್ಷದ ಅಧ್ಯಕ್ಷರೇ ‘ಗೋಹತ್ಯೆ ಮಾಡುವವರ ತಲೆ ತೆಗೆಯಿರಿ’ ಎಂಬಂಥ ಪ್ರಚೋದನಕಾರಿ ಹೇಳಿಕೆ ನೀಡಿದರೆ ಇಂಥ ರಾಜಕೀಯ ಸಂಸ್ಕೃತಿಯ ಆಸರೆಯಲ್ಲಿ ಮಾತ್ರ ಈ ರೀತಿಯ ದುಷ್ಟ ವರ್ತನೆಗಳು ಪ್ರಕಟಗೊಳ್ಳುವುದು ಸಾಧ್ಯ. ಇದು ಪ್ರಚಲಿತ ರಾಜಕೀಯ ವ್ಯವಸ್ಥೆ ಮುಟ್ಟಿರುವ ನೈತಿಕ ಅಧಃಪತನದ ಸಂಕೇತ. ರಾಜ್ಯದ ಜನ ಯಾವತ್ತೂ ಇಷ್ಟರಮಟ್ಟಿನ ಸಾಂಸ್ಕೃತಿಕ ದಿವಾಳಿತನವನ್ನು ಕಂಡಿರಲಿಲ್ಲ. ಪಕ್ಷದ ಸದಸ್ಯರೊಬ್ಬರು ಗೌರವಾನ್ವಿತರ ಬಗ್ಗೆ ಅಸಂಬದ್ಧವಾಗಿ ಕೀಳು ಮಾತಿನಲ್ಲಿ ಬಣ್ಣಿಸಿದರೆ ಅದನ್ನು ನಿಯಂತ್ರಿಸುವಂಥ ನೈತಿಕ ಸ್ಥೈರ್ಯವೂ ಆಡಳಿತ ನಡೆಸುವ ರಾಜಕೀಯ ಪಕ್ಷಕ್ಕೆ ಇಲ್ಲವೆಂಬುದು ಜನತೆಯ ದೌರ್ಭಾಗ್ಯ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.