ADVERTISEMENT

ಬಂದ್‌: ರಾಜಕೀಯ ಲೇಪನಕ್ಕೆ ಅವಕಾಶ ಕೊಡಬಾರದಾಗಿತ್ತು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಬಂದ್‌: ರಾಜಕೀಯ ಲೇಪನಕ್ಕೆ ಅವಕಾಶ ಕೊಡಬಾರದಾಗಿತ್ತು
ಬಂದ್‌: ರಾಜಕೀಯ ಲೇಪನಕ್ಕೆ ಅವಕಾಶ ಕೊಡಬಾರದಾಗಿತ್ತು   

ಮಹದಾಯಿ ನೀರಿಗೆ ಸಂಬಂಧಪಟ್ಟಂತೆ ಕೆಲ ಕನ್ನಡಪರ ಸಂಘಟನೆಗಳ ಕರೆಯ ಮೇರೆಗೆ ನಮ್ಮ ರಾಜ್ಯದಲ್ಲಿ ಮತ್ತೊಮ್ಮೆ ಬಂದ್‌ ನಡೆಯುತ್ತಿದೆ. ಹಿಂದೆಯೂ ಇದೇ ವಿಷಯದಲ್ಲಿ ಅನೇಕ ಸಲ ಬಂದ್‌ ನಡೆದಿದ್ದರೂ ಬಿಕ್ಕಟ್ಟು ಮಾತ್ರ ಪರಿಹಾರ ಆಗಿರಲಿಲ್ಲ. ಈ ಸಲವೂ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ‘ಕುಡಿಯುವ ನೀರಿಗೆ ಮಾತ್ರ ಯಾವುದೇ ತಕರಾರಿಲ್ಲ’ ಎಂದಿದ್ದ ಗೋವಾ ಕೊನೆ ಗಳಿಗೆಯಲ್ಲಿ ಮತ್ತೆ ಹಿಂದೆ ಸರಿದಿದೆ. ನ್ಯಾಯಮಂಡಳಿಯಲ್ಲೇ ಇತ್ಯರ್ಥವಾಗಲಿ ಎನ್ನುವ ಬಿಗಿ ನಿಲುವು ತಳೆದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗಳಂತೂ ಕೆಸರೆರಚಾಟದಲ್ಲಿ ತೊಡಗಿವೆ. ಇದರಿಂದ ನ್ಯಾಯಮಂಡಳಿಯ ಹೊರಗೆ ಇತ್ಯರ್ಥ ಮಾಡಿಕೊಳ್ಳುವ ದಾರಿ ಬಹುತೇಕ ಮುಚ್ಚಿದಂತಾಗಿದೆ. ಮಂಡಳಿಯ ತೀರ್ಪಿಗೆ ಕಾಯುವುದು ಅನಿವಾರ್ಯ. ಹೀಗಿರುವಾಗ ಈ ಬಂದ್‌ ಬೇಕಿತ್ತೇ ಎನ್ನುವ ಪ್ರಶ್ನೆಯೂ ಇದೆ. ಮಹದಾಯಿ ನೀರು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಪಾಲಿಗಂತೂ ಬಹಳ ಮುಖ್ಯ. ಆದ್ದರಿಂದ ನಮಗೆ ನ್ಯಾಯಯುತವಾಗಿ ಸಿಗಬೇಕಾದ ನೀರಿನ ಪಾಲು ಪಡೆಯಲು ಒಕ್ಕೊರಲಿನ ಸಂಘಟಿತ ಪ್ರಯತ್ನ ಬೇಕು. ಅದಕ್ಕಿರುವ ದಾರಿ ಎಂದರೆ ಕಾನೂನು ಹೋರಾಟ ಅಥವಾ ರಾಜಕೀಯ ಒತ್ತಡ ಹೇರುವುದು. ಆದರೆ ಹೀಗೆ ಪದೇ ಪದೇ ಬಂದ್‌ನಿಂದ ಈ ಗುರಿ ತಲುಪುವುದು ಕಷ್ಟ. ಕಾವೇರಿ ವಿಷಯದಲ್ಲಿ ಪದೇ ಪದೇ ಬಂದ್‌ನಿಂದಾಗಿ ಹಿನ್ನಡೆ ಅನುಭವಿಸಬೇಕಾಯಿತು. ಆದ್ದರಿಂದ ಬಂದ್‌ ಕರೆಯನ್ನು ಕೊನೆಯ ಮತ್ತು ವಿರಳವಾಗಿ ಪ್ರಯೋಗಿಸುವ ಬ್ರಹ್ಮಾಸ್ತ್ರದಂತೆ ಬಳಸಬೇಕು. ಏಕೆಂದರೆ ಬಂದ್‌ ಎನ್ನುವುದು ಜನಸಾಮಾನ್ಯರ ನಿತ್ಯದ ಬದುಕನ್ನೇ ಏರುಪೇರು ಮಾಡುತ್ತದೆ. ಆರ್ಥಿಕ ಹಾನಿ ಅನುಭವಿಸಬೇಕಾಗುತ್ತದೆ. ಹೊರ ರಾಜ್ಯಗಳಲ್ಲಿ ನಮ್ಮ ಬಗ್ಗೆ ಬೇರೆಯೇ ಅಭಿಪ್ರಾಯ ಮೂಡಿಸುತ್ತದೆ. ಬಂದ್‌ಗೆ ಕರೆ ಕೊಡುವ ಮುನ್ನ ಇದನ್ನೆಲ್ಲ ಆಲೋಚಿಸಬೇಕಾಗಿತ್ತು.

ಈ ಬಾರಿಯ ಬಂದ್‌ಗೆ ರಾಜಕೀಯ ಬಣ್ಣವೂ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಸರ್ಕಾರ ಇದನ್ನು ತಳ್ಳಿ ಹಾಕಿದ್ದರೂ ಬಂದ್‌ನ ಸಂದರ್ಭ ಮಾತ್ರ ಆರೋಪವನ್ನು ಪುಷ್ಟೀಕರಿಸುವಂತಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಇಂದು ಮೈಸೂರಿನಲ್ಲಿ ನಡೆಯುತ್ತಿದ್ದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸುವ ಕಾರ್ಯಕ್ರಮವಿದೆ. ಇದು ಗೊತ್ತಿದ್ದೂ ಇಂದೇ ಕರ್ನಾಟಕ ಬಂದ್‌ ಹಮ್ಮಿಕೊಳ್ಳುವುದು, ಫೆ. 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿರುವಾಗಲೇ ‘ಬೆಂಗಳೂರು ಬಂದ್‌’ ನಡೆಸುವುದರ ಹಿಂದೆ ರಾಜಕೀಯ ಇಲ್ಲ ಎಂದರೆ ನಂಬುವುದು ಕಷ್ಟ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ರಾಜ್ಯ ಭೇಟಿ ಕಾಲಕ್ಕೆ ಬಂದ್‌ ನಡೆಸುವುದಾಗಿ ಬಿಜೆಪಿ ಕೂಡ ಎಚ್ಚರಿಕೆ ಕೊಟ್ಟಿದೆ. ಇದರಿಂದ ಮುಖ್ಯವಾದ ಮಹದಾಯಿ ನೀರಿನ ವಿಷಯ ಹಿಂದಕ್ಕೆ ಹೋಗಿ ರಾಜಕೀಯ ಲಾಭ– ನಷ್ಟವೇ ಮುನ್ನೆಲೆಗೆ ಬರುತ್ತದೆ. ಅಲ್ಲದೆ ಇದು ರಾಜಕೀಯ ಸಭ್ಯತೆಗೆ ಮಾಡುವ ಅಪಚಾರವೂ ಹೌದು. ‘ರಾಜಕೀಯ ಬಂದ್‌ಗಳು ಸಂವಿಧಾನಬಾಹಿರ ಮತ್ತು ಕಾಯ್ದೆಬಾಹಿರ’ ಎಂದು ಸುಪ್ರೀಂ ಕೋರ್ಟ್ 1998ರಲ್ಲಿಯೇ ಘೋಷಿಸಿತ್ತು. ‘ಕೈಗಾರಿಕಾ ಬಂದ್‌ಗಳಿಗೆ ಮಾತ್ರ ಅವಕಾಶ ಇದೆ; ಆದರೆ ಅದು ಕೂಡ ರಾಜ್ಯವ್ಯಾಪಿ ಬಂದ್‌ ಆಗದೇ ಸ್ಥಳೀಯ ಪ್ರದೇಶಕ್ಕೆ ಸೀಮಿತವಾಗಬೇಕು’ ಎಂದು ಹೇಳಿತ್ತು. ಅದನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ‘ಬಂದ್‌ಗೆ ಕರೆಕೊಟ್ಟಿರುವುದು ಕನ್ನಡಪರ ಸಂಘಟನೆಗಳು; ಸರ್ಕಾರಕ್ಕೇನೂ ಸಂಬಂಧ ಇಲ್ಲ’ ಎಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ಸರ್ಕಾರದ ಹೊಣೆ ಮುಗಿದಂತಾಗಲಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆಗೆ ಧಕ್ಕೆಯಾಗದಂತೆ ಅದು ಕಟ್ಟೆಚ್ಚರ ವಹಿಸಬೇಕು. ಏನೇ ಆದರೂ ಬಂದ್‌ಗೆ ರಾಜಕೀಯ ಲೇಪ ಸೋಂಕಬಾರದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT