ADVERTISEMENT

ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆ: ಆಂದೋಲನದ ರೂಪು ಪಡೆಯಲಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 21:30 IST
Last Updated 2 ಡಿಸೆಂಬರ್ 2020, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜನಪ್ರತಿನಿಧಿಗಳು ಮತ್ತು ಖಾಸಗಿ ಸಂಸ್ಥೆಗಳು ದತ್ತು ಪಡೆಯುವ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಪ್ರಕ್ರಿಯೆ ಸಾಮುದಾಯಿಕ ರೂಪು ಪಡೆದುಕೊಳ್ಳುತ್ತಿರುವುದು, ಸಾಮಾಜಿಕ ನ್ಯಾಯವನ್ನು ಬಲಪಡಿಸುವ ದಿಸೆಯಲ್ಲಿ ನಡೆಯುತ್ತಿರುವ ಮಹತ್ವದ ವಿದ್ಯಮಾನ. ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ಸಶಕ್ತಗೊಳಿಸುವ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆ ನಿರೀಕ್ಷಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆಯನ್ನು ತೊಡೆದುಹಾಕುವ ದಿಸೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣವು ಪರಿಣಾಮಕಾರಿ ಹೆಜ್ಜೆಯಾಗಬಲ್ಲದು. ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರಿಗೆ ತಲಾ ಮೂರು ಶಾಲೆಗಳನ್ನು ದತ್ತು ನೀಡಿ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಳಸಿಕೊಂಡು ಆ ಶಾಲೆಗಳನ್ನು ಅಭಿವೃದ್ಧಿಪಡಿಸುವುದಾಗಿ 2020–21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಯೋಜನೆಯಲ್ಲಿ ಶಾಸಕರು, ರಾಜ್ಯಸಭೆ ಮತ್ತು ಲೋಕಸಭೆಯ ಪ್ರತಿನಿಧಿಗಳು ಹಾಗೂ ಸರ್ಕಾರಿ–ಖಾಸಗಿ ವಿಶ್ವವಿದ್ಯಾಲಯಗಳು ಭಾಗಿಯಾಗಿದ್ದು, ಈಗಾಗಲೇ 1,400ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಐ.ಟಿ. ಕಂಪನಿಗಳು, ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಆಸಕ್ತ ದಾನಿಗಳು 35 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ. ಈ ಲೆಕ್ಕಾಚಾರ ನಿಜವಾದಲ್ಲಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯ ದೊಡ್ಡ ಪ್ರಮಾಣದಲ್ಲಿ ಭಾಗಿಯಾದಂತಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉತ್ತರದಾಯಿತ್ವದಲ್ಲಿ ಸಮಾಜ ಭಾಗಿಯಾದಾಗ, ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿರುವ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವುದು ಸರ್ಕಾರಿ ಶಾಲೆಗಳಿಗೆ ಸಾಧ್ಯವಾಗುತ್ತದೆ.

ಕನ್ನಡ ಶಾಲೆಗಳನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಸಾಮುದಾಯಿಕಗೊಳಿಸುವ ಪ್ರಯತ್ನ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ಪ್ರಯತ್ನದ ಭಾಗವಾಗಿ ಚಲನಚಿತ್ರ ಕಲಾವಿದರು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿರುವುದನ್ನು ಗಮನಿಸಬಹುದು. ಜನಪ್ರಿಯ ನಟ ಸುದೀಪ್‌ ಅವರು ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಚಲನಚಿತ್ರ ಕಲಾವಿದರಾದ ದರ್ಶನ್‌, ರಿಷಬ್ ಶೆಟ್ಟಿ, ದೇವರಾಜ್‌, ಪ್ರಣೀತಾ ಸುಭಾಷ್‌ ಮುಂತಾದವರು ಶಾಲೆಗಳನ್ನು ದತ್ತು ಪಡೆದಿದ್ದುದು ಸುದ್ದಿಯಾಗಿತ್ತು. ಈಗ ಚಲನಚಿತ್ರ ಕಲಾವಿದರ ಜೊತೆಗೆ ಕೆಲವು ಐ.ಟಿ. ಕಂಪನಿಗಳೂ ಸೇರಿಕೊಳ್ಳುತ್ತಿವೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಬಳಸುವಂತೆ ಹೆಚ್ಚಿನ ಕಾರ್ಪೊರೇಟ್‌ ಸಂಸ್ಥೆಗಳ ಮನವೊಲಿಸಬೇಕಾಗಿದೆ. ಸಮಾಜದ ಬೇರೆ ಬೇರೆ ವರ್ಗಗಳು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವ ಕೆಲಸದಲ್ಲಿ ತೊಡಗಿಕೊಳ್ಳುವ ಪ್ರಯತ್ನಗಳು ಸಮುದಾಯದ ಗಮನವನ್ನು ಸೆಳೆಯುತ್ತವೆ. ಹೆಚ್ಚು ಜನರು ಭಾಗಿಯಾದಷ್ಟೂ ಶಾಲೆಗಳ ಬದಲಾವಣೆಯ ವೇಗವೂ ಹೆಚ್ಚುತ್ತದೆ. ಜನಪ್ರತಿನಿಧಿಗಳೊಂದಿಗೆ ವಿವಿಧ ಸಂಘ– ಸಂಸ್ಥೆಗಳು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಪರಿಕಲ್ಪನೆ ದೇಶದಲ್ಲೇ ಮೊದಲನೆಯದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಇಂಥ ವಿನೂತನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಅವರ ಮೇಲೆಯೇ ಇದೆ. ದತ್ತು ಪಡೆದ ಶಾಲೆಗಳಿಗೆ ಶಾಸಕರ ಕ್ಷೇತ್ರಾಭಿವೃದ್ಧಿನಿಧಿಯಿಂದ ಬಿಡುಗಡೆಯಾಗುವ ಮೊತ್ತ ಹಾಗೂ ಅದರ ವಿನಿಯೋಗದ ಬಗ್ಗೆ ವಿವೇಚನೆ ಅಗತ್ಯ. ಈ ಪ್ರಯತ್ನದಲ್ಲಿ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ತಮ್ಮ ಸಮುದಾಯಕ್ಕೆ ಸೇರಿದ ಇಲ್ಲವೇ ಕ್ಷೇತ್ರದ ಪ್ರಬಲ ಸಮುದಾಯ, ಮಠಗಳ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಧಾರಾಳವಾಗಿ ಅನುದಾನ ನೀಡುವ ಶಾಸಕರು, ಸರ್ಕಾರಿ ಶಾಲೆಗಳ ವಿಷಯದಲ್ಲಿ ಕೈಬಿಗಿ ಮಾಡುತ್ತಾರೆ ಎನ್ನಲಾಗಿದೆ. ‘ಮತಬೇಟೆ’ಯ ಈ ರಾಜಕಾರಣವು ದತ್ತಕ ಶಾಲೆಗಳ ವಿಷಯದಲ್ಲೂ ನಡೆದರೆ, ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ದತ್ತು ಪಡೆದ ಶಾಲೆಗಳ ಅಭಿವೃದ್ಧಿಯನ್ನುಶಾಸಕರ ಕಾರ್ಯವೈಖರಿಯ ಅಳತೆಗೋಲು ಎಂಬಂತೆ ನೋಡುವುದು ಸರ್ಕಾರ ಹಾಗೂ ಮತದಾರರಿಗೆ ಸಾಧ್ಯವಾದಲ್ಲಿ, ದತ್ತಕ ಶಾಲೆಗಳ ದಿಕ್ಕುದೆಸೆ ಬದಲಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT