ADVERTISEMENT

ಸಂಪಾದಕೀಯ | ಕೇಂದ್ರದಿಂದ ರಾಜ್ಯಪಾಲರ ನೇಮಕ; ಸೂಕ್ತವಲ್ಲದ ನಡೆ, ತಪ್ಪು ಸಂದೇಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 3:29 IST
Last Updated 16 ಫೆಬ್ರುವರಿ 2023, 3:29 IST
   

ರಾಜ್ಯಪಾಲರ ಬದಲಾವಣೆ ಹಾಗೂ ಹೊಸ ನೇಮಕಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಈಚೆಗೆ ಇರಿಸಿರುವ ಹೆಜ್ಜೆಯು ಬಹಳ ಮಹತ್ವದ್ದು. ಇದು ಮಹತ್ವ ಪಡೆದಿರುವುದಕ್ಕೆ ನೇಮಕಗೊಂಡ ರಾಜ್ಯಪಾಲರ ಸಂಖ್ಯೆ ಕಾರಣವಲ್ಲ. ಬದಲಿಗೆ, ಹೊಸದಾಗಿ ರಾಜ್ಯಪಾಲರಾಗಿ ನೇಮಕ ಆದವರಲ್ಲಿ ಯಾರೆಲ್ಲ ಇದ್ದಾರೆ ಎಂಬ ಕಾರಣಕ್ಕಾಗಿ ಇದು ಮಹತ್ವ ಪಡೆದಿದೆ. ಒಬ್ಬ ರಾಜ್ಯಪಾಲರು ರಾಜೀನಾಮೆ ನೀಡಿದರು. ಕೆಲವು ರಾಜ್ಯಪಾಲರನ್ನು ವರ್ಗಾವಣೆ ಮಾಡಲಾಯಿತು. ಇನ್ನು ಕೆಲವರನ್ನು ಹೊಸದಾಗಿ ನೇಮಕ ಮಾಡಲಾಯಿತು. ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೆಫ್ಟಿನೆಂಟ್‌ ಗವರ್ನರ್ ರಾಧಾಕೃಷ್ಣ ಮಾಥುರ್ ಅವರನ್ನು ಕೈಬಿಡಲಾಯಿತು. ಅವರ ಕೆಲವು ಕ್ರಮಗಳು ಹಾಗೂ ಅವರು ಅನುಸರಿಸಿದ ನೀತಿಗಳು ಅಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದರಿಂದಾಗಿ ಅವರನ್ನು ಕೈಬಿಟ್ಟಿರಬಹುದು. ಹೊಸದಾಗಿ ರಾಜ್ಯಪಾಲರಾಗಿ ನೇಮಕ ಆದವರಲ್ಲಿ ಬಿಜೆಪಿಯ ನಾಲ್ವರು ಮುಖಂಡರು ಸೇರಿದ್ದಾರೆ. ನಿವೃತ್ತ ಸೇನಾಧಿಕಾರಿಗಳು ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರೂ ರಾಜ್ಯಪಾಲರಾಗಿ ನೇಮಕಗೊಂಡವರ ಸಾಲಿನಲ್ಲಿ ಇದ್ದಾರೆ. ಬಿಜೆಪಿಯನ್ನು ವಿರೋಧಿಸುತ್ತಿರುವ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿಯೂ ರಾಜ್ಯಪಾಲರ ಬದಲಾವಣೆ ಆಗಿದೆ. ರಾಜ್ಯಪಾಲರ ಹುದ್ದೆಯು ಈಗ ರಾಜಕೀಯ ಹುದ್ದೆಯಂತೆ ಆಗಿರುವ ಕಾರಣ, ಈ ಹುದ್ದೆಗೆ ಆಗುವ ವರ್ಗಾವಣೆ ಅಥವಾ ನೇಮಕಾತಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಆದರೆ, ಈ ಬಾರಿ ಅತಿಹೆಚ್ಚಿನ ಗಮನ ಸೆಳೆದಿರುವುದು ನ್ಯಾಯಮೂರ್ತಿ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ ಕ್ರಮ.

ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರೊಬ್ಬರಿಗೆ ರಾಜ್ಯಪಾಲ ಹುದ್ದೆಯನ್ನು ನೀಡಿರುವುದು ಸರ್ಕಾರ ಎಸಗಿರುವ ತಪ್ಪು. ಹಾಗೆಯೇ, ಆ ಹುದ್ದೆಯನ್ನು ಒಪ್ಪಿಕೊಂಡಿದ್ದು ಕೂಡ ನ್ಯಾಯಮೂರ್ತಿಯಾಗಿ ನಿವೃತ್ತರಾದವರು ಮಾಡಿದ ತಪ್ಪು. ನ್ಯಾಯಮೂರ್ತಿ ನಜೀರ್ ಅವರು ಹಿಂದಿನ ತಿಂಗಳು ನಿವೃತ್ತರಾಗಿದ್ದಾರೆ. ಅದಾದ ಕೆಲವೇ ವಾರಗಳಲ್ಲಿ ಅವರು ರಾಜಕೀಯ ಹುದ್ದೆಯೊಂದನ್ನು ಒಪ್ಪಿಕೊಂಡಿದ್ದಾರೆ. ಸಶಸ್ತ್ರ ಪಡೆಗಳ ನಿವೃತ್ತ ಅಧಿಕಾರಿಗಳು ಅಥವಾ ಕಾರ್ಯಾಂಗದ ಮಾಜಿ ಅಧಿಕಾರಿಗಳನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡುವುದಕ್ಕೂ ಇದಕ್ಕೂ ವ್ಯತ್ಯಾಸವಿದೆ. ಏಕೆಂದರೆ, ಕಾರ್ಯಾಂಗದ ಅಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳ ಅಧಿಕಾರಿಗಳು ಸರ್ಕಾರದ ಜೊತೆ ಸಂವಹನ ನಡೆಸುವ ಬಗೆಗೂ, ನ್ಯಾಯಾಂಗದ ಅಧಿಕಾರಿಗಳು ಸರ್ಕಾರದ ಜೊತೆ ಸಂವಹನ ನಡೆಸುವುದಕ್ಕೂ ವ್ಯತ್ಯಾಸವಿದೆ. ನ್ಯಾಯಮೂರ್ತಿ ಸ್ಥಾನದಲ್ಲಿ ಇದ್ದವರು ಸರ್ಕಾರದ ತೀರ್ಮಾನಗಳ ಬಗ್ಗೆ ಹಾಗೂ ನೀತಿಗಳ ಬಗ್ಗೆ ತೀರ್ಪು ನೀಡಿರುತ್ತಾರೆ. ಅವರು ನಿವೃತ್ತಿಯ ನಂತರದಲ್ಲಿ ರಾಜಕೀಯ ಹುದ್ದೆಯನ್ನು ಒಪ್ಪಿಕೊಳ್ಳುವುದು ಖಂಡಿತವಾಗಿಯೂ ತಪ್ಪು ಸಂದೇಶ ರವಾನಿಸುತ್ತದೆ. ಅಯೋಧ್ಯೆಯಲ್ಲಿ ವಿವಾದಕ್ಕೆ ಗುರಿಯಾಗಿದ್ದ ಜಮೀನನ್ನು ಹಿಂದೂಗಳಿಗೆ ಹಸ್ತಾಂತರಿಸಿ ತೀರ್ಪು ನೀಡಿದ ಪೀಠದಲ್ಲಿ ನ್ಯಾಯಮೂರ್ತಿ ನಜೀರ್ ಅವರೂ ಇದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ನೋಟು ರದ್ದತಿ ತೀರ್ಮಾನದ ಕಾನೂನು ಮಾನ್ಯತೆಯನ್ನು ಎತ್ತಿಹಿಡಿದ ನ್ಯಾಯಪೀಠದಲ್ಲಿಯೂ ನ್ಯಾಯಮೂರ್ತಿ ನಜೀರ್ ಅವರು ಇದ್ದರು.

ಈ ನೇಮಕವು ನ್ಯಾಯಾಂಗದ ಘನತೆಗೆ ಕುಂದು ತರುವಂಥದ್ದು ಹಾಗೂ ನ್ಯಾಯಮೂರ್ತಿ ನಜೀರ್ ಅವರ ವೈಯಕ್ತಿಕ ವರ್ಚಸ್ಸಿಗೆ ಕೂಡ ಕುಂದು ಉಂಟುಮಾಡುವಂಥದ್ದು. ಹಿಂದೆಯೂ ಈ ಮಾದರಿಯಲ್ಲಿ ಕೆಲವು ನೇಮಕಾತಿಗಳು ಆಗಿವೆ ಎಂದು ಈಗ ಹೇಳಲಾಗುತ್ತಿದೆ. ಆದರೆ, ತಪ್ಪುನಿದರ್ಶನಗಳನ್ನು ಉಲ್ಲೇಖಿಸಿ ಈಗಿನ ತಪ್ಪೊಂದನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ನ್ಯಾಯಮೂರ್ತಿಯಾಗಿ ನಿವೃತ್ತರಾದವರು ಇಂತಹ ಹುದ್ದೆಗಳನ್ನು ಒಪ್ಪಿಕೊಳ್ಳಬಾರದು ಎಂಬ ನಿಯಮವೇನೂ ಇಲ್ಲ. ಆದರೆ, ಇಂತಹ ಹುದ್ದೆಗಳನ್ನು ಒಪ್ಪಿಕೊಳ್ಳುವುದು ಎಷ್ಟು ತಪ್ಪು ಎಂಬುದನ್ನು ಹೇಳಲು ತರ್ಕದ ಬಲವಾಗಲೀ, ಅಪಾರ ಪಾಂಡಿತ್ಯವಾಗಲೀ ಬೇಕಿಲ್ಲ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ನಂತರದಲ್ಲಿ ರಂಜನ್ ಗೊಗೊಯ್ ಅವರು ರಾಜ್ಯಸಭೆಯ ಸದಸ್ಯರಾಗಿ ನಾಮ ನಿರ್ದೇಶನಗೊಂಡರು. ಇದು ಕೂಡ ತಪ್ಪು. ಇಂತಹ ನೇಮಕಾತಿಗಳು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ. ಇಂತಹ ಸ್ಥಾನಗಳಿಗೆ, ಹುದ್ದೆಗಳಿಗೆ ನೇಮಕಗೊಂಡವರು ಹಿಂದೆ ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ತೀರ್ಪುಗಳು ಎಷ್ಟರಮಟ್ಟಿಗೆ ಸರಿಯಾಗಿದ್ದವು ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತವೆ. ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರು ಹೇಳಿದಂತೆ, ‘ನಿವೃತ್ತಿ ನಂತರದ ಹುದ್ದೆಗಳು, ನಿವೃತ್ತಿಪೂರ್ವದ ತೀರ್ಪುಗಳ’ ಕುರಿತು ಪ್ರಶ್ನೆಗಳು ಏಳುವಂತೆ ಮಾಡುವುದು ನ್ಯಾಯಾಂಗದ ಪಾಲಿಗೆ ಒಳ್ಳೆಯದಲ್ಲ. ಸಾಂವಿಧಾನಿಕ ವ್ಯವಸ್ಥೆಗೂ ಒಳ್ಳೆಯದಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.