ADVERTISEMENT

ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ: ಸರ್ಕಾರ ಇನ್ನಾದರೂ ಬದ್ಧತೆ ತೋರಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 19:30 IST
Last Updated 9 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಯಾ ಪ್ರದೇಶದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮತ್ತು ಸ್ಥಳೀಯ ಅಗತ್ಯಗಳಿಗೆ ಪೂರಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಉದ್ದೇಶದಿಂದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿ 27 ವರ್ಷಗಳು ಕಳೆದಿವೆ. ಆದರೆ, ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಕರ್ನಾಟಕದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಸಂಪೂರ್ಣವಾಗಿ ಸ್ವಾಯತ್ತತೆ ಪಡೆಯುವಲ್ಲಿ ವಿಫಲವಾಗಿವೆ ಎಂಬುದನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಕುರಿತು ಮಹಾಲೇಖಪಾಲರು (ಸಿಎಜಿ) ನಡೆಸಿರುವ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ವರದಿ ಬಹಿರಂಗಪಡಿಸಿದೆ. ಸಂವಿಧಾನದ 74ನೇ ತಿದ್ದುಪಡಿಗೆ ಪೂರಕವಾಗಿ ಕಾಯ್ದೆಗಳನ್ನು ರೂಪಿಸಿದ್ದರೂ ಅವುಗಳನ್ನು ಅನುಷ್ಠಾನಕ್ಕೆ ತರುವ ಹಂತದಲ್ಲಿ ನಿರ್ಣಾಯಕ ಕ್ರಿಯೆಗಳಿಂದ ಬೆಂಬಲಿಸದ ಕಾರಣದಿಂದ ಅವು ಫಲಪ್ರದವಾಗಿಲ್ಲ ಎಂದು ವರದಿ ಹೇಳಿದೆ. ‘ಸ್ಥಳೀಯ ಸರ್ಕಾರ’ ಎಂದು ಕರೆಸಿಕೊಳ್ಳುವ ನಗರ ಸ್ಥಳೀಯ ಸಂಸ್ಥೆಗಳು ರಾಜ್ಯದಲ್ಲಿ ಯಾವ ಹಂತದಲ್ಲೂ ಸ್ವಾಯತ್ತ ಸಂಸ್ಥೆಗಳಾಗಿ ಬಲಗೊಂಡಿಲ್ಲ. ಬಹುತೇಕ ವಿಚಾರಗಳಲ್ಲಿ ಈ ಸಂಸ್ಥೆಗಳು ಜಿಲ್ಲಾ ಆಡಳಿತ ಮತ್ತು ರಾಜ್ಯ ಸರ್ಕಾರದ ಅಡಿಯಾಳಿನ ರೀತಿಯಲ್ಲೇ ಕೆಲಸ ಮಾಡುತ್ತಿವೆ ಎಂಬುದನ್ನು, ರಾಜ್ಯದ 280 ನಗರ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿಯ ತಪಾಸಣೆ ನಡೆಸಿ ಸಿಎಜಿ ನೀಡಿರುವ ವರದಿ ಹೇಳಿದೆ.ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ, 17 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕಿತ್ತು. ಆದರೆ, ಮೂರು ಕ್ಷೇತ್ರಗಳಲ್ಲಿ ಮಾತ್ರ ಸಂಪೂರ್ಣ ಅಧಿಕಾರ ಲಭಿಸಿದೆ. ತೆರಿಗೆ ಸಂಗ್ರಹದ ವಿಷಯದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದೇ ಇರುವುದರಿಂದ ಈ ಸಂಸ್ಥೆಗಳು ಅನುದಾನಕ್ಕಾಗಿ ರಾಜ್ಯ ಸರ್ಕಾರವನ್ನೇ ಸದಾ ಅವಲಂಬಿಸಬೇಕಾದ ಸ್ಥಿತಿ ಇದೆ. ಮಂಜೂರಾದ ಹುದ್ದೆಗಳಲ್ಲಿ ಶೇಕಡ 31ರಷ್ಟು ಖಾಲಿ ಉಳಿದಿದ್ದು, ಸಕಾಲಕ್ಕೆ ಚುನಾವಣೆಗಳೂ ನಡೆಯುತ್ತಿಲ್ಲ ಎಂಬ ಅಂಶಗಳನ್ನು ಸಿಎಜಿ ಎತ್ತಿ ತೋರಿಸಿದೆ. ಇದು, ಅಧಿಕಾರಸ್ಥರ ಕಣ್ಣು ತೆರೆಸಬೇಕಿದೆ.

ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ಸಂಪೂರ್ಣವಾಗಿ ಸ್ವಾಯತ್ತಗೊಳಿಸುವ ಕುರಿತ ಚರ್ಚೆ ಇಂದು–ನಿನ್ನೆಯದಲ್ಲ. ಆದರೆ, ಆಡಳಿತದ ಚುಕ್ಕಾಣಿ ಹಿಡಿದ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಅದನ್ನು ಕಾರ್ಯರೂಪಕ್ಕೆ ತರಲು ಪೂರ್ಣಪ್ರಮಾಣ ದಲ್ಲಿ ಬದ್ಧತೆ ತೋರಿಲ್ಲ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ನಿಚ್ಚಳವಾದುದು. ಅತ್ಯಂತ ಹೆಚ್ಚು ತೆರಿಗೆ ಸಂಗ್ರಹವಾಗುವುದು ಮತ್ತು ಸರ್ಕಾರದ ಅನುದಾನ ಹೆಚ್ಚು ವಿನಿಯೋಗವಾಗುವುದು ನಗರ ಪ್ರದೇಶಗಳಲ್ಲೇ. ಹೀಗಾಗಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಮೇಲಿನ ‘ಹಿಡಿತ’ ತಮ್ಮ ಬಳಿಯೇ ಇರಬೇಕು ಎಂಬುದು ಅಧಿಕಾರಸ್ಥರ ಅಪೇಕ್ಷೆ. ಇನ್ನೊಂದೆಡೆ, 2008ರ ಕ್ಷೇತ್ರ ಪುನರ್‌ ವಿಂಗಡಣೆಯ ಬಳಿಕ ಬೆಂಗಳೂರಿನಂತಹ ಮಹಾನಗರ ಪ್ರದೇಶಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಕ್ಷೇತ್ರಗಳು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ನಿರ್ಣಾಯಕ ಎಂಬಂತಾಗಿವೆ. ಬೃಹತ್‌ ಮೊತ್ತದ ಕಾಮಗಾರಿಗಳ ಮೇಲೆ ಹಿಡಿತ ಸಾಧಿಸಲು ಮತ್ತು ಚುನಾವಣಾ ರಾಜಕೀಯದಲ್ಲಿನ ಪ್ರಾಬಲ್ಯದ ಕಾರಣದಿಂದ, ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವುದಕ್ಕೆ ಕೆಲವು ಶಾಸಕರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲದೆ ಇಲ್ಲ. ಮಹಾನಗರ ಪಾಲಿಕೆಗಳ ಮೇಯರ್‌ಗಳ ಆಯ್ಕೆಗೆ ನೇರ ಚುನಾವಣೆ ನಡೆಸುವ, ಅವರ ಅಧಿಕಾರ ಅವಧಿಯನ್ನು ಹೆಚ್ಚಿಸುವ ಪ್ರಸ್ತಾವ ಕಾರ್ಯರೂಪಕ್ಕೆ ಬರದಿರುವುದಕ್ಕೂ ಇದೇ ಕಾರಣ ಎಂಬ ಮಾತು ಇದೆ. ಸಂವಿಧಾನ ತಿದ್ದುಪಡಿಯ ಆಶಯಗಳು ಸಂಪೂರ್ಣವಾಗಿ ಸಾಕಾರಗೊಂಡರೆ ಸ್ಥಳೀಯ ಸಂಸ್ಥೆಗಳು ಬಲಗೊಳ್ಳುವುದರೊಂದಿಗೆ, ಜನರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ದೊರಕುವ ವ್ಯವಸ್ಥೆ ರೂಪುಗೊಳ್ಳುತ್ತದೆ. ಅಂತಹ ಪರಿಣಾಮಕಾರಿಯಾದ ಹಾಗೂ ಬಲಿಷ್ಠವಾದ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಗುರುತರ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬುದು ಆಡಳಿತದ ಚುಕ್ಕಾಣಿ ಹಿಡಿದವರಿಗೆ ನೆನಪಿನಲ್ಲಿ ಇರಬೇಕಾದುದು ಅಗತ್ಯ.ಎಲ್ಲ ಬಗೆಯ ಒತ್ತಡಗಳನ್ನೂ ಮೀರಿ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ದೊರಕಿಸಿಕೊಡುವ ಬದ್ಧತೆಯನ್ನು ಸರ್ಕಾರ ಇನ್ನಾದರೂ ತೋರುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT