ADVERTISEMENT

ಸಂಪಾದಕೀಯ: ಬಿಡಿಎ ಅಕ್ರಮ– ಸಮಗ್ರ ತನಿಖೆ ಆಗಲಿ, ಭ್ರಷ್ಟಾಚಾರದ ಕೂಪದಿಂದ ಹೊರಬರಲಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:45 IST
Last Updated 6 ಫೆಬ್ರುವರಿ 2022, 20:45 IST
Sampadakiya 07-02-2022.jpg
Sampadakiya 07-02-2022.jpg   

ಬೆಂಗಳೂರು ನಗರದಲ್ಲಿ ವಸತಿ ಬಡಾವಣೆಗಳ ಅಭಿವೃದ್ಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪಾತ್ರ ಮಹತ್ತರವಾದುದು. ನಗರದ ಜನಸಂಖ್ಯೆ ಹೆಚ್ಚಿದಂತೆಲ್ಲಾ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡುವ ಹೊಣೆ ಬಿಡಿಎಯದು. ಬಿಡಿಎಯಿಂದ ನಿವೇಶನ ಖರೀದಿಸಿದರೆ ಸಮಸ್ಯೆ ಇರುವುದಿಲ್ಲ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಮನೆಮಾಡಿತ್ತು.

ಆದರೆ, ಈ ವಿಶ್ವಾಸಾರ್ಹತೆ ಕಳೆದುಹೋಗಿ ವರ್ಷಗಳೇ ಸಂದಿವೆ. ದಿನಕ್ಕೊಂದರಂತೆ ಬಯಲಿಗೆ ಬರುತ್ತಿರುವ ಹಗರಣಗಳು ಬಿಡಿಎ ಎಷ್ಟರಮಟ್ಟಿಗೆ ಭ್ರಷ್ಟಾಚಾರದ ಕೂಪವಾಗಿಬಿಟ್ಟಿದೆ ಎಂಬುದಕ್ಕೆ ಕನ್ನಡಿ. ಯಾವುದೋ ಬಡಾವಣೆಯಲ್ಲಿ ಯಾರಿಗೋ ಹಂಚಿಕೆ ಆಗಿರುವ ನಿವೇಶನವನ್ನು ಇನ್ಯಾರಿಗೋ ಶುದ್ಧ ಕ್ರಯಪತ್ರ ಮಾಡಿಕೊಡುವ ಭ್ರಷ್ಟ ಅಧಿಕಾರಿಗಳು ಪ್ರಾಧಿಕಾರದಲ್ಲಿದ್ದಾರೆ. ದುಬಾರಿ ಬೆಲೆಯ ಮೂಲೆ ನಿವೇಶನಗಳನ್ನು ವಸತಿ ನಿವೇಶನಕ್ಕೆ ಬದಲಿಯಾಗಿ ಹಂಚಿಕೆ ಮಾಡುವುದಕ್ಕೆ ಬಿಡಿಎ ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಇವುಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು.

ಆದರೂ ಇಂತಹ ನಿವೇಶನಗಳನ್ನು ವಸತಿ ನಿವೇಶನಕ್ಕೆ ಬದಲಿ ನಿವೇಶನವಾಗಿ ಹಂಚಿಕೆ ಮಾಡುವ ಅಧಿಕಾರಿಗಳಿಗೂ ಇಲ್ಲಿ ಕೊರತೆ ಇಲ್ಲ. ನಿವೇಶನದಾರರ ಗಮನಕ್ಕೇ ತಾರದೆ, ಅವರ ನಿವೇಶನದ ಹಂಚಿಕೆಯನ್ನೇ ರದ್ದುಪಡಿಸಿ ಬೇರೆ ಯಾರದೋ ಹೆಸರಿಗೆ ಅದನ್ನು ಬದಲಿ ನಿವೇಶನ ವನ್ನಾಗಿ ನೀಡಿದ ಉದಾಹರಣೆಗಳು ಪ್ರಾಧಿಕಾರದಲ್ಲಿ ಬಹಳಷ್ಟಿವೆ. ಹೈಕೋರ್ಟ್‌ ಆದೇಶವನ್ನೂ ಧಿಕ್ಕರಿಸಿ ನಿವೇಶನವನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣಗಳೂ ಇಲ್ಲಿ ನಡೆದಿವೆ.

ADVERTISEMENT

ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿಯೂ ಇಲ್ಲಿನ ಅಧಿಕಾರಿಗಳದ್ದು ಎತ್ತಿದ ಕೈ. ನಿವೇಶನ ಹಂಚಿಕೆಯ ನೋಂದಣಿ ಪುಸ್ತಕಗಳ ಹಾಳೆಗಳನ್ನೇ ಬದಲಾಯಿಸುವ ಚಾಕಚಕ್ಯತೆಯನ್ನು ಇಲ್ಲಿನ ಕೆಲವು ಸಿಬ್ಬಂದಿ ಹೊಂದಿದ್ದಾರೆ. ಇದೇ ಮಾದರಿಯ 15ಕ್ಕೂ ಅಧಿಕ ಅಕ್ರಮ ಪ್ರಕರಣಗಳು ಬಿಡಿಎಯ ವಿಶೇಷ ಕಾರ್ಯಪಡೆ ಹಾಗೂ ಜಾಗೃತ ದಳ ನಡೆಸಿರುವ ಆಂತರಿಕ ತನಿಖೆಯಲ್ಲಿ ದೃಢಪಟ್ಟಿವೆ. ಕೆಎಎಸ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾದ ಈ ಭ್ರಷ್ಟಾಚಾರದ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ನಡೆಸುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅನುಮತಿ ನೀಡಬೇಕು.

ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ – 1988ರ ನಿಯಮ 17(ಎ) ಅನ್ವಯ ವಿಸ್ತೃತ ವಿಚಾರಣೆ ನಡೆಸಲು ಎಸಿಬಿಗೆ ಅನುಮತಿ ನೀಡಬಹುದು ಎಂದು ಬಿಡಿಎ ಆಯುಕ್ತರು ಶಿಫಾರಸು ಮಾಡಿದ್ದಾರೆ. ಇದಾಗಿ 10ಕ್ಕೂ ಹೆಚ್ಚು ದಿನಗಳು ಕಳೆದಿವೆ. ಈ ಭ್ರಷ್ಟಾಚಾರ ಪ್ರಕರಣಗಳನ್ನು ಎಸಿಬಿಯಿಂದ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿ ಇನ್ನೂ ಅನುಮತಿ ನೀಡಿಲ್ಲ.

ಇದುವರೆಗೆ ಉಪಕಾರ್ಯದರ್ಶಿ ಹಾಗೂ ಭೂಸ್ವಾಧೀನಾಧಿಕಾರಿ ದರ್ಜೆಯ ಕೆಎಎಸ್‌ ಅಧಿಕಾರಿಗಳು ಹಾಗೂ ತಳಮಟ್ಟದ ಸಿಬ್ಬಂದಿಯನ್ನು ಮಾತ್ರ ಎಸಿಬಿಯಿಂದ ವಿಸ್ತೃತ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಲಾಗಿದೆ. ಇವರಿಗಿಂತಲೂ ಉನ್ನತ ಸ್ಥಾನಗಳಲ್ಲಿರುವ ಅಧಿಕಾರಿಗಳ ಕೃಪಾಕಟಾಕ್ಷ ಇಲ್ಲದೆ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮಗಳು ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಜಕಾರಣಿಗಳ ಪ್ರಭಾವವೂ ಕೆಲಸ ಮಾಡಿರುವುದು ಸ್ಪಷ್ಟ. ಈ ಬಗ್ಗೆ ಬಿಡಿಎ ಆಯುಕ್ತರ ವರದಿಗಳೂ ಮೌನ ವಹಿಸಿವೆ. ಎಸಿಬಿ ವಿಚಾರಣೆ ನಡೆಸಿರುವ ಒಟ್ಟು ಪ್ರಕರಣಗಳಲ್ಲಿ ಶೇ 3ರಷ್ಟುಪ್ರಕರಣಗಳಲ್ಲೂ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ.

ಹಾಗಾಗಿ ಬಿಡಿಎಯ ಈ ಭ್ರಷ್ಟಾಚಾರ ಪ್ರಕರಣಗಳನ್ನು ಎಸಿಬಿಯಿಂದ ತನಿಖೆಗೆ ಒಳಪಡಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂಬ ಭರವಸೆ ಉಳಿದಿಲ್ಲ. ಇದರಿಂದ ಇನ್ನೊಂದಿಷ್ಟು ಕಾಲಹರಣವಾದೀತು. ದೂರು ಬಂದ ಪ್ರಕರಣಗಳಿಗೆ ಸಂಬಂಧಿಸಿ ಆಯುಕ್ತರು
ಅಧಿಕಾರಿಗಳನ್ನು ಎಸಿಬಿಯಿಂದ ತನಿಖೆಗೆ ಒಳಪಡಿಸಲು ಶಿಫಾರಸು ಮಾಡಿದ್ದಾರೆ. ಇಂತಹ ನೂರಾರು ಪ್ರಕರಣಗಳು ದೂರು ದಾಖಲಾಗದ ಕಾರಣಕ್ಕೆ ಮುಚ್ಚಿಹೋಗಿವೆ. ಇವೆಲ್ಲವೂ ಹೊರ ಬರಬೇಕಾದರೆ ಬಿಡಿಎಯಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡವನ್ನೇ (ಎಸ್‌ಐಟಿ) ರಚಿಸಬೇಕು. ಪ್ರಾಧಿಕಾರದಲ್ಲಿ ನಡೆದಿರುವ ಎಲ್ಲ ರೀತಿಯ ಅಕ್ರಮಗಳನ್ನೂ ಸ್ವತಂತ್ರವಾಗಿ ಮತ್ತುನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸುವುದಕ್ಕೆ ಈ ವಿಶೇಷ ತನಿಖಾ ತಂಡಕ್ಕೆ ಸಂಪೂರ್ಣ ಅಧಿಕಾರವನ್ನು ನೀಡಬೇಕು.

ಬಿಡಿಎ ಅಧಿಕಾರಿಗಳು ಹಾಗೂ ನೌಕರರೇ ಮಧ್ಯವರ್ತಿಗಳ ಜೊತೆ ಸೇರಿ ಭಾರಿ ಅಕ್ರಮ ನಡೆಸುತ್ತಿರು ವುದು ಗುಟ್ಟಿನ ವಿಚಾರವೇನಲ್ಲ. ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಿ ವಂಚಿಸುತ್ತಿದ್ದ ಆರೋಪದಡಿ, ಪ್ರಾಧಿಕಾರದ ನೌಕರರು ಸೇರಿ ಆರು ಮಂದಿಯನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪವನ್ನು ಬಿಡಿಎಯ ಒಬ್ಬ ಪ್ರಥಮ ದರ್ಜೆ ಸಹಾಯಕ ಹಾಗೂ ಒಬ್ಬ ಕಂಪ್ಯೂಟರ್‌ ಆಪರೇಟರ್‌ ಕೂಡಾ ಎದುರಿಸುತ್ತಿದ್ದಾರೆ. ಬಿಡಿಎಯ ಮೂಲೆನಿವೇಶನಗಳ ಹರಾಜಿನ ವೇಳೆ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಅಕ್ರಮ ಕೂಟ ರಚಿಸಿ ಭ್ರಷ್ಟಾಚಾರ ನಡೆಸುವುದನ್ನು ತಪ್ಪಿಸಲು ಇ–ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಆದರೆ, ಇತ್ತೀಚೆಗೆ ಎಂಟು ಬಡಾವಣೆಗಳ ಮೂಲೆನಿವೇಶನಗಳ ಇ–ಹರಾಜು ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿರುವುದು ಬಯಲಾಗಿದೆ. ಮೂಲೆ ನಿವೇಶನಗಳಿಗೆ ಗರಿಷ್ಠ ದರವನ್ನು ಕೂಗುವ ಮೂಲಕ ದಲ್ಲಾಳಿಗಳು ಅದನ್ನು ಬ್ಲಾಕ್‌ ಮಾಡುತ್ತಿದ್ದರು.

ನಂತರ ಬ್ಯಾಂಕ್‌ನ ನಕಲಿ ಚಲನ್‌ ಒದಗಿಸಿ ಪೂರ್ತಿ ಮೌಲ್ಯ ಪಾವತಿಸಿದಂತೆ ತೋರಿಸಿ ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುತ್ತಿದ್ದರು. ಇದರಿಂದ ಅರ್ಹ ಬಿಡ್ಡರ್‌ಗಳಿಗೆ ಅನ್ಯಾಯವಾಗುತ್ತಿತ್ತು. ಬಿಡಿಎಯಲ್ಲಿ ನಡೆದಿರುವ ಅಕ್ರಮಗಳು ಬಯಲಿಗೆ ಬಂದ ಬಳಿಕವೂ ಅವುಗಳ ತನಿಖೆ ಹಳ್ಳಹಿಡಿದಿರುವುದೇ ಜಾಸ್ತಿ. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾದ ಪ್ರಕರಣಗಳು ವಿರಳಾತಿವಿರಳ. ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿಯವರು ಪ್ರಾಧಿಕಾರವನ್ನು ಅಕ್ರಮಗಳ ಕೂಪದಿಂದ ಮೇಲಕ್ಕೆತ್ತುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.