
.ಸಂಪಾದಕೀಯ
ಎಲ್ಲೆಂದರಲ್ಲಿ ಕಸ ಸುರಿಯುವವರ ಮನೆಯ ಮುಂದೆ ತ್ಯಾಜ್ಯವನ್ನು ಸುರಿಯುವ ಮೂಲಕ ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ’ (ಬಿಎಸ್‌ಡಬ್ಲ್ಯುಎಂಎಲ್) ನಡೆಸಿದೆ. ‘ಕಸ ಸುರಿಯುವ ಹಬ್ಬ’ ಹೆಸರಿನ ಈ ಅಭಿಯಾನ, ಸಮಸ್ಯೆಯನ್ನು ಸರಳೀಕರಿಸುವ ಹಾಗೂ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ. ರಸ್ತೆ, ಖಾಲಿ ನಿವೇಶನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ಅಭ್ಯಾಸ ಮಾಡಿಕೊಂಡಿರುವವರ ಮನೆಯ ಮುಂದೆ ತ್ಯಾಜ್ಯವನ್ನು ಸುರಿಯುವುದರ ಜೊತೆಗೆ ದಂಡವನ್ನೂ ವಿಧಿಸುವುದರ ಮೂಲಕ ಅವರಿಗೆ ಕಸದ ಸಮಸ್ಯೆಯ ಗಾಂಭೀರ್ಯವನ್ನು ಅರ್ಥ ಮಾಡಿಸುವುದು ‘ಬಿಎಸ್‌ಡಬ್ಲ್ಯುಎಂಎಲ್’ ಉದ್ದೇಶ. ಆದರೆ, ಹಬ್ಬ ಎಂದು ಕರೆಯಲಾಗುತ್ತಿರುವ ಈ ಅಭಿಯಾನ ವ್ಯಂಗ್ಯದಂತಿದ್ದು, ಎಚ್ಚರಿಕೆಯ ಬದಲಾಗಿ ಪ್ರತೀಕಾರ ನ್ಯಾಯದ ಪರಿಕಲ್ಪನೆಯನ್ನು ಒಳಗೊಂಡಿರುವಂತಿದೆ. ನಾಗರಿಕರ ಮನೆಗಳ ಮುಂದೆ ಕಸ ಸುರಿಯುವುದನ್ನು ಸಾಂಕೇತಿಕ ಎಂದು ಭಾವಿಸುವುದಾದರೂ, ಅದು ಸಾರ್ವಜನಿಕರ ಅಶಿಸ್ತಿಗಿಂತಲೂ ಹೆಚ್ಚಾಗಿ ನಾಗರಿಕ ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುವಂತಿದೆ.
ಸಮಸ್ಯೆ ಉಲ್ಬಣಗೊಂಡಿರುವುದರಲ್ಲಿ ಜನರ ಪಾತ್ರವೂ ಇದೆ ಎನ್ನುವುದು ನಿರ್ವಿವಾದ. ಸಾರ್ವಜನಿಕರ ಹೊಣೆಗೇಡಿತನ ಬೆಂಗಳೂರಿನಲ್ಲಿ ಆಳವಾಗಿ ಬೇರೂರಿದೆ. ಯಾವುದೇ ಅಳುಕಿಲ್ಲದೆ ರಸ್ತೆಗಳಲ್ಲಿ ಕಸವನ್ನು ಚೆಲ್ಲುವವರು ಇರುವಂತೆಯೇ, ಆ ಕಸವನ್ನು ಸ್ವಚ್ಛಗೊಳಿಸುವುದು ಮತ್ತೊಬ್ಬರ ಕರ್ತವ್ಯ ಎಂದು ಭಾವಿಸಿರುವ ನಿವಾಸಿಗಳೂ ಇದ್ದಾರೆ. ಈ ಮನೋಧರ್ಮ ನಗರವಾಸಿಗಳಲ್ಲಿ ನೈತಿಕಪ್ರಜ್ಞೆ ಕ್ಷೀಣವಾಗಿರುವುದರ ಸಂಕೇತದಂತಿದೆ. ಆದರೆ, ಈ ಹೊಣೆಗೇಡಿತನವನ್ನು ಮುಂದುಮಾಡಿ, ಅಧಿಕಾರಿಗಳು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು ಸಾಧ್ಯವಿಲ್ಲ. ಶಿಸ್ತಿನ ಬಗ್ಗೆ ಪಾಠ ಮಾಡುವ ಮೊದಲು, ಬಿಎಸ್‌ಡಬ್ಲ್ಯುಎಂಎಲ್ ಹಾಗೂ ಅದರ ಮಾತೃಸಂಸ್ಥೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಮ್ಮ ಕಾರ್ಯನಿರ್ವಹಣೆಯನ್ನು ಮೊದಲು ಸುಧಾರಿಸಿಕೊಳ್ಳಬೇಕು. ಘನ ತ್ಯಾಜ್ಯ ನಿರ್ವಹಣೆಗಾಗಿ ಪ್ರತಿ ವರ್ಷ ದುಬಾರಿ ಸುಂಕ ಸಂಗ್ರಹಿಸುವ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ. ‘ಕಸದ ಮಾಫಿಯಾ’ ಸಕ್ರಿಯವಾಗಿರುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿಂದೊಮ್ಮೆ ಆಡಿದ್ದ ಮಾತೇ ವ್ಯವಸ್ಥೆಯಲ್ಲಿನ ಹುಳುಕನ್ನೂ ಕಾಣಿಸುವಂತಿದೆ. ಭ್ರಷ್ಟಾಚಾರ ಹಾಗೂ ಅದಕ್ಷತೆ ಸಮಸ್ಯೆ ಹೆಚ್ಚಾಗಲಿಕ್ಕೆ ಪ್ರಮುಖ ಕಾರಣಗಳು. ವಾಸ್ತವ ಹೀಗಿರುವಾಗ, ಸಾಂಕೇತಿಕ ಕ್ರಮಗಳಿಂದ ಹೆಚ್ಚಿನ ಉಪಯೋಗವಿಲ್ಲ. ಕಸ ಎಸೆಯುವವರಲ್ಲಿ ಲಜ್ಜೆ ಉಂಟುಮಾಡುವ ಪ್ರಯತ್ನದಿಂದ ಸಾಧ್ಯವಾಗಬಹುದಾದ ಸಾರ್ವಜನಿಕ ಎಚ್ಚರ ದೀರ್ಘ ಕಾಲ ಉಳಿಯುವುದೂ ಇಲ್ಲ. ಗಡಿಯಾರದಂತೆ ಎಚ್ಚರತಪ್ಪದೆ ಕಾರ್ಯ ನಿರ್ವಹಿಸುವ ದಕ್ಷ ಹಾಗೂ ಪ್ರಾಮಾಣಿಕ ಕಸ ನಿರ್ವಹಣಾ ವ್ಯವಸ್ಥೆ ಬೆಂಗಳೂರಿಗೆ ಅತ್ಯಗತ್ಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸದ ತೊಟ್ಟಿಗಳು ಇಲ್ಲದಿರುವುದು ಸಮಸ್ಯೆ ಹೆಚ್ಚಾಗಲಿಕ್ಕೆ ಕಾರಣಗಳಲ್ಲೊಂದು. ಮನೆಯ ಹಂತದಲ್ಲೇ ಕಸ ವಿಂಗಡಣೆ ನಡೆಯಬೇಕೆನ್ನುವ ಉದ್ದೇಶದಿಂದ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಕಸದ ತೊಟ್ಟಿಗಳನ್ನು ತೆರವುಗೊಳಿಸಲಾಗಿದೆ. ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ನೌಕರರು ಬೆಳಗಿನ ಸಮಯದಲ್ಲಿ ಮನೆಯ ಮುಂದೆ ಬರುವ ತ್ಯಾಜ್ಯ ಸಂಗ್ರಹದ ವಾಹನಗಳಿಗೆ ಕಸ ನೀಡಬೇಕೆಂದು ನಿರೀಕ್ಷಿಸಲಾಗದು. ತ್ಯಾಜ್ಯ ವಿಲೇವಾರಿಗೆ ತೊಟ್ಟಿಗಳು ಇಲ್ಲದೆ ಹೋದಾಗ, ಆ ಕಸ ರಸ್ತೆಯ ಪಾಲಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕಸ ಸಂಗ್ರಹ ವಾಹನಗಳು ನಿಯಮಿತವಾಗಿ ಬರುವುದಿಲ್ಲ ಎನ್ನುವ ದೂರುಗಳೂ ಇವೆ. ಕಸ ಎಸೆಯುವವರನ್ನು ಶಿಕ್ಷಿಸಬೇಕೆನ್ನುವ ಮನಃಸ್ಥಿತಿಯಿಂದ ಹೊರಬಂದು, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ‘ಜಿಬಿಎ’ ಮುಂದಾಗಬೇಕು. ತ್ಯಾಜ್ಯ ಸಂಗ್ರಹದ ಸಮಯ, ಮಾನವ ಸಂಪನ್ಮೂಲಗಳ ಕೊರತೆ ಹಾಗೂ ನಾಗರಿಕರ ಅಸಡ್ಡೆ ಸೇರಿದಂತೆ ಯಾವ ಕಾರಣದಿಂದಾಗಿ ಸಮಸ್ಯೆ ತೀವ್ರಗೊಂಡಿದೆ ಎನ್ನುವುದನ್ನು ಕಂಡುಕೊಳ್ಳಲಿಕ್ಕಾಗಿ, ಕಸದ ಸಮಸ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬಹುದಾಗಿದೆ. ಕಾನೂನಿನ ಅನುಷ್ಠಾನ ನ್ಯಾಯಯುತವಾಗಿ ಇರಬೇಕೇ ಹೊರತು, ಪ್ರತೀಕಾರದಂತೆ ಪ್ರತಿಕ್ರಿಯಾತ್ಮಕವಾಗಿ ಇರಬಾರದು. ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಸಮಸ್ಯೆ ರಸ್ತೆಗಳಲ್ಲಿನ ಗಲೀಜಿಗೆ ಸಂಬಂಧಿಸಿದಷ್ಟೇ ಅಲ್ಲ; ಅದು, ವರ್ತನೆಯಲ್ಲಿನ ಕೊಳಕಿಗೆ ಸಂಬಂಧಿಸಿದ್ದೂ ಆಗಿದೆ. ನಗರದ ಸ್ವಚ್ಛತೆ ಸಾರ್ವಜನಿಕರ ಹೊಣೆಗಾರಿಕೆ ಆಗಿರುವಂತೆ, ಗುಣಮಟ್ಟದ ಸೇವೆ ಕಲ್ಪಿಸುವುದು ಆಡಳಿತದ ಕರ್ತವ್ಯವೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.