
ಬಿಹಾರ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿನ ಸೀಟು ಹೊಂದಾಣಿಕೆಯ ಗೊಂದಲ ‘ಮಹಾಘಟಬಂಧನ’ದ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಿದೆ.
ನವೆಂಬರ್ 6 ಮತ್ತು 11ರಂದು ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ‘ಎನ್‌ಡಿಎ’ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸುತ್ತಿರುವ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ, ಆಂತರಿಕ ಸಂಘರ್ಷದಿಂದ ಬಳಲುತ್ತಿದೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಲು ಪ್ರಯಾಸಪಡುತ್ತಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡಿದೆ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಆದರೆ, ಸೀಟು ಹೊಂದಾಣಿಕೆಗೆ ಸಂಬಂಧಿಸಿದ ಒಳಗುದಿ ಮುಂದುವರಿದೇ ಇರುವುದು ಮತದಾರರಿಗೆ ಮೈತ್ರಿಕೂಟ ನೀಡುತ್ತಿರುವ ಒಳ್ಳೆಯ ಸಂದೇಶವೇನಲ್ಲ. ಎನ್‌ಡಿಎ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲು ಒಮ್ಮತದ ಪ್ರಯತ್ನಗಳನ್ನು ನಡೆಸುವ ಬದಲು, ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳೇ ಪರಸ್ಪರ ಎದುರಾಳಿಗಳಾಗಿದ್ದಾರೆ; ಒಂದು ಪಕ್ಷ ಮೈತ್ರಿಕೂಟದಿಂದ ಹೊರಬಂದಿದೆ. ಆರ್‌ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ ಹಾಗೂ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ‘ಮಹಾಘಟಬಂಧನ’ದಲ್ಲಿ ಇರುವ ಪಕ್ಷಗಳಾಗಿವೆ. ಇದುವರೆಗೆ, ಮೈತ್ರಿಕೂಟದ ಭಾಗವಾಗಿದ್ದ ‘ಜೆಎಂಎಂ’, ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತನ್ನ ಒತ್ತಾಯ ತಿರಸ್ಕೃತಗೊಂಡ ನಂತರ ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಹೇಳಿದೆ. ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆಗೂಡಿ ಜಾರ್ಖಂಡ್‌ನಲ್ಲಿ ಆಡಳಿತದಲ್ಲಿರುವ ಜೆಎಂಎಂ, ಅಲ್ಲಿಯೂ ಮೈತ್ರಿ ಮುಂದುವರಿಕೆಯ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಪಕ್ಷದ ಮುಖಂಡ ಹೇಮಂತ್ ಸೊರೇನ್ ಹೇಳಿದ್ದಾರೆ.
ಸುದೀರ್ಘ ಮಾತುಕತೆಗಳ ನಂತರವೂ ಆರ್‌ಜೆಡಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಸಹಮತಕ್ಕೆ ಬರುವುದು ಸಾಧ್ಯವಾಗಿಲ್ಲ. ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕನಿಷ್ಠ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳು ಮುಖಾಮುಖಿ ಆಗಿದ್ದಾರೆ. ಕೆಲವೆಡೆ ಕಾಂಗ್ರೆಸ್ ಮತ್ತು ಸಿಪಿಐ ಎದುರಾಳಿಗಳಾಗಿವೆ. ಆರ್‌ಜೆಡಿ ಮತ್ತು ವಿಐಪಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಗಳಾಗಿವೆ. 2020ರ ವಿಧಾನಸಭಾ ಚುನಾವಣೆಯಲ್ಲಿ 144 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ, ಈ ಬಾರಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ ಹಾಗೂ ಎಪ್ಪತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಈ ಬಾರಿ ಒಂಬತ್ತು ಕ್ಷೇತ್ರಗಳನ್ನು ಬಿಟ್ಟುಕೊಟ್ಟು 61 ಕ್ಷೇತ್ರಗಳಲ್ಲಿ ಆಯ್ಕೆ ಬಯಸಿದೆ. ಎಲ್ಲ ಸಮುದಾಯಗಳನ್ನೂ ಒಳಗೊಂಡ ಒಕ್ಕೂಟದ ರೂಪದಲ್ಲಿ ‘ಮಹಾಘಟಬಂಧನ’ವನ್ನು ಮೈತ್ರಿಕೂಟದ ಮುಖಂಡರು ಇದುವರೆಗೆ ಬಿಂಬಿಸಿದ್ದರು. ಇತ್ತೀಚೆಗಷ್ಟೇ ರೂಪುಗೊಂಡ, ಎರಡು ಸಣ್ಣ ಸಮುದಾಯಗಳನ್ನು ಪ್ರತಿನಿಧಿಸುವ ಇಂಡಿಯನ್ ಇನ್‌ಕ್ಲೂಸಿವ್ ಪಾರ್ಟಿ(ಐಐಪಿ)ಗೂ ಸೀಟು ಹೊಂದಾಣಿಕೆಯಲ್ಲಿ ಪಾಲು ದೊರೆಯುವುದಾಗಿ ಹೇಳಲಾಗಿತ್ತು. ಆದರೆ, ಪ್ರಮುಖ ನಾಯಕರ ನಡುವಿನ ಭಿನ್ನಮತವು ಮೈತ್ರಿಕೂಟದಲ್ಲಿ ಒಮ್ಮತ ಇಲ್ಲದಿರುವ ಸಂದೇಶವನ್ನು ನೀಡುವಂತಿದೆ.
ಮತದಾರರ ಮುಂದೆ ಹೋಗುವ ಯಾವುದೇ ಮೈತ್ರಿಕೂಟ ಒಗ್ಗಟ್ಟು ಪ್ರದರ್ಶಿಸುವುದು ಹಾಗೂ ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ ಹೊಂದಿರುವುದು ಅತ್ಯವಶ್ಯ. ಆದರೆ, ಮಹಾಘಟಬಂಧನದ ಪಕ್ಷಗಳು ಚುನಾವಣೆಯ ಒಟ್ಟಾರೆ ಫಲಿತಾಂಶದ ಬಗ್ಗೆ ತಂತ್ರಗಾರಿಕೆ ರೂಪಿಸುವುದರ ಬದಲು, ಚುನಾವಣಾ ನಂತರದ ತಮ್ಮ ವೈಯಕ್ತಿಕ ಸಾಧನೆಯ ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವಂತೆ ಕಾಣಿಸುತ್ತದೆ. ಈ ಒಡಕು ಮೈತ್ರಿಕೂಟಕ್ಕೆ ದುಬಾರಿಯಾಗಬಹುದು. ಪರಸ್ಪರ ಅನುಮಾನ, ಅವಾಸ್ತವಿಕ ಅಪೇಕ್ಷೆಗಳು, ಮಿತಿ ಮೀರಿದ ಆಸೆ ಹಾಗೂ ಸಾಮಾನ್ಯ ಹಿತಾಸಕ್ತಿಯೊಂದಿಗೆ ಮಾಡಿಕೊಳ್ಳುವ ರಾಜಿ, ಒಕ್ಕೂಟದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡಬಲ್ಲವು. ಪಕ್ಷಗಳಲ್ಲೂ ಆಂತರಿಕ ಸಂಘರ್ಷವಿದ್ದು, ಟಿಕೆಟ್ ಹಂಚಿಕೆ ಸಮಾಧಾನಕರ ರೀತಿಯಲ್ಲಿ ನಡೆದಂತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ನಡೆಸಿದ ‘ಮತದಾರರ ಅಧಿಕಾರ ಯಾತ್ರೆ’ಗೆ ದೊರೆತ ಅಭೂತಪೂರ್ವ ಸ್ಪಂದನ ಮಹಾಘಟಬಂಧನದ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಮಿತ್ರಪಕ್ಷಗಳ ಒಗ್ಗಟ್ಟು ಮತ್ತು ಸಾಮಾನ್ಯ ಗ್ರಹಿಕೆಗಳ ಪ್ರದರ್ಶನಕ್ಕೆ ಚುನಾವಣಾ ಸಂದರ್ಭ ಅತ್ಯುತ್ತಮ ಸಮಯವಾಗಿದೆ. ಆದರೆ, ದೇಶದ ಮೇಲೆ ಪರಿಣಾಮ ಬೀರಬಹುದಾದ ನಿರ್ಣಾಯಕ ಚುನಾವಣೆಯ ಸಂದರ್ಭದಲ್ಲಿ ಮೈತ್ರಿಕೂಟ ಅತ್ಯುತ್ತಮ ಆರಂಭ ಪಡೆಯುವಲ್ಲಿ ತಕ್ಕ ಪ್ರಯತ್ನ ನಡೆಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.