
ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಹೇರಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಸಂಚಾರ ದಟ್ಟಣೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಉಸಿರುಗಟ್ಟಿರುವ ಬೆಂಗಳೂರು ಮಹಾನಗರಕ್ಕೆ ಅಗತ್ಯವಾಗಿದ್ದ ಮತ್ತೊಂದು ಸಾರ್ವಜನಿಕ ಸಂಚಾರ ಆಯ್ಕೆಯನ್ನು ಈ ತೀರ್ಪು ಮತ್ತೆ ಸಕ್ರಿಯಗೊಳಿಸಿದೆ; ಬೈಕ್ ಟ್ಯಾಕ್ಸಿ ಚಾಲಕರ ಜೀವನೋಪಾಯದ ಅವಕಾಶವನ್ನು ರಕ್ಷಿಸುವಂತಿದೆ. ಬೈಕ್ ಟ್ಯಾಕ್ಸಿ ಸೇವೆಗಳಿಗೆ ಬಳಸುವ ಮೋಟಾರ್ ಸೈಕಲ್‌ಗಳು, ಮೋಟಾರು ವಾಹನಗಳ ಕಾಯ್ದೆ–1988ರ ಅಡಿಯಲ್ಲಿ ಸಾರಿಗೆ ವಾಹನಗಳ ವ್ಯಾಖ್ಯಾನಕ್ಕೆ ಒಳಪಡುತ್ತವೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು, ಅವುಗಳ ಚಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವವರ ಸಾಂವಿಧಾನಿಕ ಹಕ್ಕಿಗೆ ವಿಧಿಸುವ ನಿರ್ಬಂಧವಾಗಿದೆ ಎಂದೂ ಕೋರ್ಟ್ ಹೇಳಿದೆ. ಇದಕ್ಕೆ ಮುನ್ನ, ಮೋಟಾರು ವಾಹನಗಳ ಕಾಯ್ದೆ–1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಆ ಆದೇಶದಿಂದಾಗಿ ಲಕ್ಷಾಂತರ ಬೈಕ್ ಸವಾರರ ದುಡಿಮೆಯ ದಾರಿ ಅನಿಶ್ಚಿತಗೊಂಡಿತ್ತು. ಅದೇ ಸಮಯಕ್ಕೆ, ಕೈಗೆಟಕುವ ದರದಲ್ಲಿ ತ್ವರಿತ ಸಂಚಾರದ ಸೇವೆಯ ಆಯ್ಕೆಯಿಂದ ಪ್ರಯಾಣಿಕರು ವಂಚಿತರಾಗಿದ್ದರು. ಆಟೊ ರಿಕ್ಷಾಗಳ ಸೇವೆಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ, ಬೈಕ್ ಟ್ಯಾಕ್ಸಿಗಳು ವಾಸ್ತವಿಕ ಅಗತ್ಯವಾಗಿ ಪ್ರಯಾಣಿಕರಿಗೆ ಕಾಣಿಸುತ್ತಿವೆ.
ಬೈಕ್ ಟ್ಯಾಕ್ಸಿ ನಿಷೇಧದ ಹಿನ್ನೆಲೆಯನ್ನು ಗಮನಿಸಿದರೆ ಆಡಳಿತದ ವೈಫಲ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರಾಜ್ಯ ಸರ್ಕಾರ 2021ರಲ್ಲೇ ಪ್ರಕಟಿಸಿದೆ. ನಂತರದಲ್ಲಿ, ಕೇಂದ್ರ ಸರ್ಕಾರವು ಕೂಡ ಬೈಕ್ ಟ್ಯಾಕ್ಸಿಯಂಥ ಸೇವೆಗಳಿಗೆ ಪ್ರೋತ್ಸಾಹ ಹಾಗೂ ಅನುಮತಿ ನೀಡಲು ಅಗತ್ಯವಾದ ಮಾರ್ಗಸೂಚಿಗಳನ್ನು ಹೊರಡಿಸಿತು. ಆದರೆ, ಆ ಮಾರ್ಗಸೂಚಿಗಳನ್ನು ತನ್ನ ನಿಯಂತ್ರಣದ ಚೌಕಟ್ಟಿಗೆ ಅಳವಡಿಸಿಕೊಳ್ಳದ ರಾಜ್ಯ, ಕೋರ್ಟ್ ಮುಂದೆಯೂ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸುವಲ್ಲಿ ವಿಫಲವಾಯಿತು. ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದಂತೆ ತನ್ನ ಬಳಿ ಯಾವುದೇ ನೀತಿ ಇಲ್ಲವೆಂದೂ, ಅಂತಹ ನೀತಿಯನ್ನು ರೂಪಿಸುವ ಉದ್ದೇಶವೂ ಇಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿತು. ಪ್ರಸ್ತುತ, ಬೈಕ್ ಟ್ಯಾಕ್ಸಿಗಳು ರಸ್ತೆಗೆ ಮರಳಿರುವುದರಿಂದ, ಯಾವುದೇ ಮಾರ್ಗಸೂಚಿ ಇಲ್ಲದ ಸ್ಥಿತಿಯಲ್ಲಿಯೇ ಅವುಗಳು ಕಾರ್ಯಾಚರಣೆ ನಡೆಸಬೇಕಾಗಿದೆ; ಪ್ರಯಾಣಿಕರು ಕೂಡ ಸ್ಪಷ್ಟವಾದ ಸುರಕ್ಷತಾ ನಿಯಮಗಳ ಗೈರುಹಾಜರಿಯಲ್ಲಿಯೇ ಆ ಸೇವೆಯನ್ನು ಬಳಸಬೇಕಾಗಿದೆ.
ನ್ಯಾಯಾಲಯದ ತೀರ್ಪಿನಿಂದ ಬೈಕ್ ಟ್ಯಾಕ್ಸಿಗಳಿಗೆ ಅಥವಾ ಅವುಗಳ ಚಾಲಕರಿಗೆ ಕಾನೂನಿನಿಂದ ಯಾವುದೇ ವಿನಾಯಿತಿ ದೊರೆಯುವುದಿಲ್ಲ. ಯಾವುದೇ ವಿಳಂಬವಿಲ್ಲದೆ ಸಮಗ್ರ ನಿಯಂತ್ರಣ ಸಂಹಿತೆಯೊಂದನ್ನು ರೂಪಿಸುವ ಅನಿವಾರ್ಯತೆ ಪ್ರಸ್ತುತ ಸರ್ಕಾರಕ್ಕೆ ಎದುರಾಗಿದೆ. ವಾಣಿಜ್ಯ ನೋಂದಣಿ, ಪರವಾನಗಿಗೆ ಸಂಬಂಧಿಸಿದ ಸ್ಪಷ್ಟ ಷರತ್ತುಗಳು ಮತ್ತು ಹಿಂಬದಿ ಸವಾರರಿಗೆ ವಿಮೆ ಕಲ್ಪಿಸುವುದನ್ನು ಆ ಸಂಹಿತೆ ಕಡ್ಡಾಯವಾಗಿ ಒಳಗೊಳ್ಳಬೇಕು. ಚಾಲಕನ ಪರಿಚಯ ಪತ್ರ, ಪೊಲೀಸ್ ಪರಿಶೀಲನೆ, ರಿಯಲ್ ಟೈಮ್ ಡಿಜಿಟಲ್ ಟ್ರ್ಯಾಕಿಂಗ್ ಮತ್ತು ಪರವಾನಗಿ ಪತ್ರವನ್ನು ವಾಹನದಲ್ಲಿ ಸುಲಭವಾಗಿ ಕಾಣುವಂತೆ ಪ್ರದರ್ಶಿಸುವುದು ಅಗತ್ಯ. ವಾಹನ ಚಾಲಕರು ಸಾಂಸ್ಥಿಕ ತರಬೇತಿ ಹೊಂದಿರುವುದೂ ಅಷ್ಟೇ ಮುಖ್ಯ. ರಸ್ತೆ ಸುರಕ್ಷತೆ, ಸುರಕ್ಷಿತ ಚಾಲನೆ, ಲಿಂಗಸೂಕ್ಷ್ಮತೆ ಹಾಗೂ ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಪರವಾನಗಿ ನೀಡುವ ಮೊದಲು ಕಡ್ಡಾಯವಾಗಬೇಕು; ಪ್ರಯಾಣಿಕರ ದೂರುಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಹೊಣೆಗಾರಿಕೆಯನ್ನೂ ನಿಗದಿಪಡಿಸಬೇಕು. ಬೈಕ್ ಟ್ಯಾಕ್ಸಿ, ಆಟೊ ಮತ್ತು ಕ್ಯಾಬ್ ಸೇವೆಗಳಿಗೆ ಸಂಬಂಧಿಸಿದಂತೆ ಏಕರೂಪದ ನಿಯಮಗಳನ್ನು ಅನ್ವಯಿಸುವ ಮೂಲಕ ಸಮಾನ ಅವಕಾಶಗಳು ದೊರೆಯುವಂತಾಗುವುದನ್ನು ಸರ್ಕಾರ ಖಚಿತಪಡಿಸಬೇಕು. ಬೈಕ್ ಟ್ಯಾಕ್ಸಿಗಳಿಗಿದ್ದ ಕಾನೂನು ಅಡಚಣೆಯನ್ನು ಹೈಕೋರ್ಟ್ ಮುಕ್ತಗೊಳಿಸಿದೆ. ಇದೀಗ, ಮಿತಿ ಮೀರಿ ಬೆಳೆದಿರುವ ನಗರಗಳಿಗೆ ತುರ್ತಾಗಿ ಬೇಕಾದ ಆಧುನಿಕ ಸಂಚಾರ ಸೇವಾವ್ಯವಸ್ಥೆಯ ನಿಯಂತ್ರಣ ತನಗೆ ಸಾಧ್ಯವೆನ್ನುವುದನ್ನು ಸರ್ಕಾರ ಸಾಬೀತುಪಡಿಸಬೇಕಾಗಿದೆ. ಸಾಂಪ್ರದಾಯಿಕ ಸಾರ್ವಜನಿಕ ಸೇವೆಯ ಏಕಸ್ವಾಮ್ಯಕ್ಕೆ ಎದುರಾಗಿರುವ ಆತಂಕದ ರೂಪದಲ್ಲಿ ನೋಡದೆ, ಸಂಯೋಜಿತ ನಗರ ಸಾರಿಗೆಯ ಅವಿಭಾಜ್ಯ ಅಂಗವಾಗಿ ಬೈಕ್ ಟ್ಯಾಕ್ಸಿಗಳನ್ನು ಒಪ್ಪಿಕೊಳ್ಳುವುದು ವರ್ತಮಾನದ ಅಗತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.