
ಬೆಂಗಳೂರಿನ ರೈಲ್ವೆ ಕಂಟೋನ್ಮೆಂಟ್ ಕಾಲೊನಿಯಲ್ಲಿ 371 ಮರಗಳಿರುವ 8.61 ಎಕರೆ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ (ಬಿಎಚ್‌ಎಸ್) ಎಂದು ಹೊರಡಿಸಿದ್ದ ಆದೇಶವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಿಂಪಡೆದಿದೆ. ಈ ನಿರ್ಧಾರ, ಪರಿಸರ ಸಂರಕ್ಷಣೆಯ ಬಗ್ಗೆ ಸರ್ಕಾರಕ್ಕಿರುವ ಬದ್ಧತೆಯ ಕೊರತೆಯನ್ನು ಸಂಕೇತಿಸುವಂತಿದೆ. ಹಸುರು ವಲಯಗಳೇ ವಿರಳವಾಗಿರುವ ಸಂದರ್ಭದಲ್ಲಿ, ಪಾರಿಸರಿಕ ಪ್ರದೇಶಗಳಿಗೆ ಇರುವ ಕಾನೂನಿನ ಸುರಕ್ಷತೆಯನ್ನು ಬಿಟ್ಟುಕೊಡುವ ನಿರ್ಧಾರಗಳನ್ನು ಆತ್ಮಹತ್ಯಾಘಾತುಕ ಕೃತ್ಯವೆಂದೇ ಭಾವಿಸಬೇಕಾಗುತ್ತದೆ. ಈ ಮೊದಲು, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ನಿಧಿ ಸಂಗ್ರಹಿಸುವುದಕ್ಕಾಗಿ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ, ವಸಂತನಗರ ದಂಡು ಪ್ರದೇಶದ ಬಳಿಯಿರುವ ಕಾಲೊನಿಯಲ್ಲಿನ ಈ ಪ್ರದೇಶವನ್ನು ಖಾಸಗಿ ಸಂಸ್ಥೆಯೊಂದಕ್ಕೆ 60 ವರ್ಷಗಳ ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದವರು ಬೃಹತ್ ಮರಗಳನ್ನು ಕಡಿಯಲು ಮುಂದಾದಾಗ, ನಾಗರಿಕರು ಮತ್ತು ಪರಿಸರ ಕಾರ್ಯಕರ್ತರ ಪ್ರತಿರೋಧ ಎದುರಾಗಿತ್ತು. ಮರಗಳನ್ನು ಕಡಿಯುವುದರ ವಿರುದ್ಧ ಸಾವಿರಾರು ಜನರು ಸರ್ಕಾರಕ್ಕೆ ಪತ್ರ ಹಾಗೂ ಇ–ಮೇಲ್ ಬರೆಯುವ ಮೂಲಕ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆ ಹೋರಾಟದಿಂದಾಗಿ, ಜೀವವೈವಿಧ್ಯ ಕಾಯ್ದೆ–2002ರ ನಿಬಂಧನೆಗಳ ಅಡಿಯಲ್ಲಿ 8.61 ಎಕರೆ ಪ್ರದೇಶವನ್ನು ‘ಬಿಎಚ್‌ಎಸ್’ ಎಂದು 2025ರ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿತ್ತು. ಈಗ ಆ ಪ್ರಕಟಣೆಯನ್ನು ಇದ್ದಕ್ಕಿದ್ದಂತೆ ಹಿಂದಕ್ಕೆ ಪಡೆದಿರುವುದರಿಂದಾಗಿ, ಮರಗಳ ಸುರಕ್ಷತೆಗೆ ಮತ್ತೆ ಗಂಡಾಂತರ ಎದುರಾದಂತಾಗಿದೆ. ಸಸ್ಯಪ್ರಭೇದಗಳ ಜೊತೆಗೆ, ಅಲ್ಲಿನ ಪರಿಸರದಲ್ಲಿ ಆಸರೆ ಕಂಡುಕೊಂಡಿರುವ ಪಕ್ಷಿ ಹಾಗೂ ಕೀಟ ಸಂಕುಲಗಳೂ ಅಪಾಯ ಎದುರಿಸುವಂತಾಗಿದೆ.
ಮೂರು ತಿಂಗಳ ಹಿಂದಷ್ಟೇ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದಿರುವುದಕ್ಕೆ ಅರಣ್ಯ ಇಲಾಖೆ ಯಾವುದೇ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. ರೈಲ್ವೆ ಇಲಾಖೆಯ ಲಾಭ ದಾಯಕ ಯೋಜನೆಗಳಿಗೆ ಉತ್ತೇಜನ ನೀಡುವುದಕ್ಕೆ ಉತ್ಸುಕವಾದಂತಿರುವ ಸರ್ಕಾರ, ಅದಕ್ಕೆ ತೆರಬೇಕಾದ ಬೆಲೆಯನ್ನು ನಿರ್ಲಕ್ಷಿಸಿದೆ. ಪರಿಸರ ಕಾಳಜಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿದು, 8.61 ಎಕರೆ ಪ್ರದೇಶಕ್ಕೆ ನೀಡಿದ್ದ ‘ಬಿಎಚ್‌ಎಸ್’ ಮಾನ್ಯತೆಯ ಸುರಕ್ಷತೆಯನ್ನು ವಿಳಂಬವಿಲ್ಲದೆ ಮತ್ತೆ ಜಾರಿಗೊಳಿಸಬೇಕು. ಅರಣ್ಯ ಇಲಾಖೆ ನಿರ್ಧಾರ ಬದಲಿಸಿರುವುದರ ಹಿಂದೆ ಇರುವ ಕಾರಣಗಳು ಬಹಿರಂಗವಾಗಬೇಕು. ರಿಯಲ್ ಎಸ್ಟೇಟ್ ಉದ್ಯಮದ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆ ತನ್ನ ಬದ್ಧತೆಯಿಂದ ಹಿಂದಕ್ಕೆ ಸರಿದಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಈ ಕ್ರಮ ಸಾರ್ವಜನಿಕ ಹೋರಾಟಗಳನ್ನು ಅಗೌರವಿಸುವ ನಡೆಯೂ ಆಗಿದೆ.
ಬೆಂಗಳೂರು ಮಹಾನಗರದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರದ ಚಿಂತನೆಗಳು ದೂರದೃಷ್ಟಿಯ ಕೊರತೆಯನ್ನು ಹೊಂದಿವೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನೆಪದಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಜೋಡಿ ಸುರಂಗ ರಸ್ತೆ ನಿರ್ಮಾಣ ಯೋಜನೆಯಿಂದ, ಲಾಲ್‌ಬಾಗ್ ಉದ್ಯಾನದ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗುವ ಆತಂಕವನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ. ಒಳಚರಂಡಿ ಮತ್ತು ರಾಜಕಾಲುವೆ ಮಾರ್ಗಗಳ ಮೇಲೂ ಸುರಂಗ ಮಾರ್ಗ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಕೆರೆಗಳಿಗೆ ಕಡ್ಡಾಯವಾಗಿದ್ದ 30 ಮೀಟರ್ ಸಂರಕ್ಷಿತಾ ಪ್ರದೇಶವನ್ನು ಕಡಿತಗೊಳಿಸುವ ಮೂಲಕ, ಆ ಪ್ರದೇಶದಲ್ಲಿ ನಾಗರಿಕರಿಗೆ ಅನುಕೂಲವಾಗುವ ಮೂಲಸೌಕರ್ಯ ಕಾಮಗಾರಿಗಳನ್ನು ನಡೆಸುವ ಸರ್ಕಾರದ ಚಿಂತನೆಗೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ವಿವಾದಾಸ್ಪದ ನಿಲುವುಗಳ ಸಾಲಿಗೆ ಕಂಟೋನ್ಮೆಂಟ್ ಕಾಲೊನಿಯನ್ನು‘ಜೀವವೈವಿಧ್ಯ ಪಾರಂಪರಿಕ ತಾಣ’ ವ್ಯಾಪ್ತಿಯಿಂದ ಹೊರಗಿಟ್ಟಿರುವ ಪ್ರಸ್ತುತ ನಿರ್ಧಾರವೂ ಸೇರಿಕೊಂಡಿದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ವಿವೇಕವನ್ನು ಸರ್ಕಾರ ಪ್ರದರ್ಶಿಸದೆ, ಅನಾಹುತಕಾರಿ ಯೋಜನೆಗಳಿಗೆ ಅವಕಾಶ ಕಲ್ಪಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಗರದ ನಿರ್ಮಾಣವೆಂದರೆ ರಸ್ತೆ ಹಾಗೂ ಬೃಹತ್ ಕಟ್ಟಡಗಳ ನಿರ್ಮಾಣ ಮಾತ್ರವಲ್ಲ; ಹಸುರು ವಲಯವನ್ನು ನಿಧಿಯಂತೆ ಜತನವಾಗಿ ಇರಿಸುವುದೂ ನಗರ ನಾಗರಿಕತೆಯ ಲಕ್ಷಣವೇ ಆಗಿದೆ ಹಾಗೂ ಅದು ಸರ್ಕಾರದ ಕರ್ತವ್ಯವೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.