ADVERTISEMENT

ವಿತ್ತೀಯ ವಿವೇಕ ಪಾಲನೆ ಮರೆತ ಓಲೈಕೆ ಬಜೆಟ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 16:47 IST
Last Updated 2 ಜುಲೈ 2019, 16:47 IST
ಬಜೆಟ್‌
ಬಜೆಟ್‌   

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡಿಸಿದ ತನ್ನ ಕೊನೆಯ ಬಜೆಟ್‌ನಲ್ಲಿ ಸಮಾಜದ ಎಲ್ಲ ವರ್ಗದವರನ್ನು ಓಲೈಸಲು ಕಸರತ್ತು ನಡೆಸಿದೆ. ಬಜೆಟ್‌ ಸ್ವರೂಪದ ಬಗೆಗಿನ ಹಲವು ಅನುಮಾನಗಳ ಮಧ್ಯೆಯೇ, ಹಂಗಾಮಿ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು 2019–20ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ.

ಲೇಖಾನುದಾನ ಕೋರಿಕೆಯನ್ನು ಪೂರ್ಣಪ್ರಮಾಣದ ಬಜೆಟ್‌ ಭಾಷಣವಾಗಿ ಪರಿವರ್ತಿಸುವ ಜಾಣ್ಮೆಯನ್ನು ಅವರು ತೋರಿದ್ದಾರೆ. ಮಧ್ಯಮ ವರ್ಗ, ರೈತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳಿಗೆ ಭರಪೂರ ಕೊಡುಗೆ, ವಿನಾಯಿತಿ ಘೋಷಿಸಲಾಗಿದೆ. ಸರ್ಕಾರವು ಉದ್ಯಮಿಗಳ ಪರವಾಗಿದೆ ಎನ್ನುವ ‘ಹಣೆಪಟ್ಟಿ’ ಕಳಚಿಕೊಂಡು, ಕಾರ್ಮಿಕರು, ರೈತರು ಮತ್ತು ವೇತನ ವರ್ಗದ ಹಿತ ಕಾಯುವುದಕ್ಕೂ ತಾನು ಬದ್ಧ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಇದೆ. ಆದಾಯ ತೆರಿಗೆ ವಿನಾಯ್ತಿಯ ಗರಿಷ್ಠ ಮಿತಿಯನ್ನು ದುಪ್ಪಟ್ಟುಗೊಳಿಸಿದೆ.

ಇದರಿಂದ ಮಧ್ಯಮ ವರ್ಗದ ಸುಮಾರು 3 ಕೋಟಿಯಷ್ಟು ಜನರಿಗೆ ಅನುಕೂಲವಾಗಲಿದೆ. ಅವರ ಖರೀದಿ ಸಾಮರ್ಥ್ಯ ಹೆಚ್ಚಲಿದೆ. ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿದ 12 ಕೋಟಿಯಷ್ಟು ಸಣ್ಣ ರೈತರಿಗೆ ವರ್ಷಕ್ಕೆ ₹6 ಸಾವಿರ ಮೂಲ ಆದಾಯ ಒದಗಿಸುವ ಹಾಗೂ ಕೃಷಿಸಾಲಕ್ಕೆ ಸಹಾಯಧನ ಘೋಷಿಸಿರುವುದರಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರೆಯುವ ಸಾಧ್ಯತೆ ಇದೆ. ಅಸಂಘಟಿತ ವಲಯದ ಸುಮಾರು 10 ಕೋಟಿ ಕಾರ್ಮಿಕರಿಗೆ ತಿಂಗಳಿಗೆ ₹ 3 ಸಾವಿರ ಪಿಂಚಣಿ ಕೊಡುವ ಪ್ರಸ್ತಾವ ಮುಂದಿಡಲಾಗಿದೆ. ಈ ಕೊಡುಗೆಗಳು ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಿಸಲಿವೆ.

ADVERTISEMENT

ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ₹ 40 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಿರುವುದು, ತೆರಿಗೆಮುಕ್ತ ಗ್ರಾಚ್ಯುಟಿ ಮಿತಿಯನ್ನು ₹30 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವವು ವೇತನ ವರ್ಗಕ್ಕೆ ಖುಷಿ ನೀಡುವ ವಿಚಾರ. ಐದು ರಾಜ್ಯಗಳಿಗೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆಗೆ ರೈತರು ಮತ್ತು ಮಧ್ಯಮ ವರ್ಗದವರ ಆಕ್ರೋಶವೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು.

ಹೀಗಾಗಿ ಈ ವರ್ಗಗಳಿಗೆ ತಲುಪುವಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವ ಒತ್ತಡ ಆಳುವ ಪಕ್ಷದ ಮೇಲೆ ಇತ್ತು. ಆದರೆ ತನ್ನ ರಾಜಕೀಯ ಲಾಭಕ್ಕಾಗಿ ಮುಂದೆ ಬರುವ ಸರ್ಕಾರದ ಮೇಲೆ ಹೊರೆ ಹೊರಿಸುವುದು ಸಮಂಜಸವೆನಿಸದು. ಅನುಷ್ಠಾನಗೊಳಿಸಲು ತನಗೆ ಕಾಲಾವಕಾಶ ಇಲ್ಲದ ಇಂತಹ ಸಂದರ್ಭಗಳಲ್ಲಿ ಬೊಕ್ಕಸಕ್ಕೆ ಭಾರವಾಗುವ ಜನಪ್ರಿಯ ನಿರ್ಧಾರಗಳನ್ನು ಪ್ರಕಟಿಸುವುದು ಉಚಿತವಲ್ಲ. ಸರ್ಕಾರದ ವರಮಾನ ಮತ್ತು ವೆಚ್ಚದ ನಡುವೆ ಅಂತರ ಹೆಚ್ಚುತ್ತಿದೆ. ಇದು, ಕಳವಳಕಾರಿ ಸಂಗತಿ. ಓಲೈಕೆ ರಾಜಕಾರಣವು ವಿತ್ತೀಯ ವಿವೇಕವನ್ನು ನೇಪಥ್ಯಕ್ಕೆ ಸರಿಸಿದೆ. ಸಣ್ಣ ರೈತರಿಗೆ ಮೂಲ ಆದಾಯ ಒದಗಿಸುವ ಪ್ರಸ್ತಾವಕ್ಕೆ ವರ್ಷಕ್ಕೆ ₹ 75 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಅದೇ ವೇಳೆ, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸಿರುವುದರಿಂದ ಸರ್ಕಾರಕ್ಕೆ ಬರುವ ವರಮಾನವು ಗಣನೀಯವಾಗಿ ಖೋತಾ ಆಗಲಿದೆ. ಇದರಿಂದ ವಿತ್ತೀಯ ಲೆಕ್ಕಾಚಾರ ಏರುಪೇರಾಗಲಿದೆ. ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯ ಗುರಿಯನ್ನು ಸರ್ಕಾರ ನಿರ್ಲಕ್ಷಿಸಿರುವುದೂ ಕಂಡುಬಂದಿದೆ. ಸರ್ಕಾರದ ಒಟ್ಟು ವೆಚ್ಚ ಶೇ 13ರಷ್ಟು ಏರಿಕೆಯಾಗಿದೆ. ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.3ಕ್ಕೆ ಮಿತಿಗೊಳಿಸುವ ಗುರಿ ತಲುಪಲು ಸಾಧ್ಯವಾಗಿಲ್ಲ. ಶೇ 3.4ಕ್ಕೆ ಏರಲಿರುವ ವಿತ್ತೀಯ ಕೊರತೆಯು ಮುಂದಿನ ವರ್ಷವೂ ಇದೇ ಮಟ್ಟದಲ್ಲಿ ಇರಲಿದೆ ಎಂದು ಸರ್ಕಾರವೇ ಹೇಳಿದೆ.

ಹಣಕಾಸು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲಗೊಂಡಿರುವುದನ್ನು ಇದು ಸೂಚಿಸುತ್ತದೆ. ವರಮಾನ ಹೆಚ್ಚಳದ ಹೊಸ ಯೋಜನೆಗಳೇ ಇಲ್ಲ. ಉದ್ಯೋಗ ಸೃಷ್ಟಿಯು ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೂ ಬಜೆಟ್‌ನಲ್ಲಿ ಆ ಬಗ್ಗೆ ಒಂದಕ್ಷರದ ಪ್ರಸ್ತಾಪವೂ ಇಲ್ಲದಿರುವುದು ಸರ್ಕಾರದ ಜಾಣ ಮೌನಕ್ಕೆ ಕನ್ನಡಿ ಹಿಡಿಯುತ್ತದೆ. ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್‌ ಇದಾಗಿದೆ. ಮಧ್ಯಂತರ ಬಜೆಟ್‌ ಆದಕಾರಣ ಈ ಎಲ್ಲ ಕೊಡುಗೆಗಳು ಹೊಸ ಹಣಕಾಸು ವರ್ಷದಿಂದ ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ಕುರಿತು ಅನಿಶ್ಚಿತತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.