ADVERTISEMENT

ವಾಹನ ಮಾರಾಟ ಕುಸಿತ ಆರ್ಥಿಕ ತಲ್ಲಣದ ಸಂಕೇತ

​ಪ್ರಜಾವಾಣಿ ವಾರ್ತೆ
Published 17 ಮೇ 2019, 20:10 IST
Last Updated 17 ಮೇ 2019, 20:10 IST
...
...   

ದೇಶಿ ವಾಹನ ತಯಾರಿಕಾ ಉದ್ದಿಮೆಯು ಮಾರಾಟ ಕುಸಿತದ ಬಿಕ್ಕಟ್ಟು ಎದುರಿಸುತ್ತಿದೆ. ಕಾರು, ದ್ವಿಚಕ್ರ ವಾಹನ, ವಾಣಿಜ್ಯ ವಾಹನ ಒಳಗೊಂಡಂತೆ ಎಲ್ಲ ಬಗೆಯ ವಾಹನಗಳ ಬೇಡಿಕೆ ಕಡಿಮೆಯಾಗಿದೆ. ಹೊಸ ಹಣಕಾಸು ವರ್ಷದ ಆರಂಭದ ಏಪ್ರಿಲ್‌ನಲ್ಲಿ ಪ್ರಯಾಣಿಕರ ವಾಹನ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.7ರಷ್ಟು ಕುಸಿದಿದೆ. 2011ರ ಅಕ್ಟೋಬರ್‌ನಲ್ಲಿ ಶೇ 19.87ರಷ್ಟು ಕುಸಿತ ಕಂಡಿತ್ತು. ಅದಾದ ಬಳಿಕ ಈಗಿನದ್ದೇ ಗರಿಷ್ಠ ಮಟ್ಟದ ಮಾರಾಟ ಕುಸಿತ. ಕುಸಿತವು ಈ ಒಂದು ತಿಂಗಳಿಗೆ ಸೀಮಿತವಲ್ಲ. ಹಿಂದಿನ 10 ತಿಂಗಳಲ್ಲಿಯೂ ಇದೇ ಪ್ರವೃತ್ತಿ ಕಂಡುಬಂದಿದೆ. ಇದು, ದೇಶದ ಒಟ್ಟಾರೆ ಆರ್ಥಿಕತೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ಜನರಲ್ಲಿ ವಾಹನ ಖರೀದಿಸುವ ಉತ್ಸಾಹ ಉಡುಗಿರುವುದನ್ನೂ ಸೂಚಿಸುತ್ತದೆ. ಮಹಾನಗರ, ಅರೆನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳ ಬೇಡಿಕೆ ಕುಸಿದಿರುವುದು ಸ್ಪಷ್ಟಗೊಳ್ಳುತ್ತದೆ. ಮಾರಾಟ ಕುಸಿತದಲ್ಲಿ ದಾಸ್ತಾನು ಹೊಂದಾಣಿಕೆಯ ಪಾಲು ಕೆಲಮಟ್ಟಿಗೆ ಇದೆ ಎಂದರೂ ನಗದು ಕೊರತೆ, ವಿಮೆ ಮೊತ್ತ ಹೆಚ್ಚಳ, ದುಬಾರಿ ಬೆಲೆಗಳೂ ಮಾರಾಟ ಕುಸಿಯುವಂತೆ, ಖರೀದಿ ಉತ್ಸಾಹ ಉಡುಗುವಂತೆ ಮಾಡಿವೆ. ಈ ವಾಸ್ತವವನ್ನು ವಾಹನ ತಯಾರಿಕಾ ಕಂಪನಿಗಳೇ ಒಪ್ಪಿಕೊಂಡಿವೆ. ವಾಹನ ಮಾರಾಟ ಕುಸಿತವು ಹಲವಾರು ಅರ್ಥಗಳನ್ನೂ ಧ್ವನಿಸುತ್ತದೆ. ದೇಶಿ ಅರ್ಥ ವ್ಯವಸ್ಥೆಯ ನಾಡಿಮಿಡಿತಗಳಾಗಿರುವ ಷೇರುಪೇಟೆ, ರಿಯಲ್‌ ಎಸ್ಟೇಟ್‌ ವಹಿವಾಟಿನಂತೆ ವಾಹನ ತಯಾರಿಕಾ ಉದ್ದಿಮೆಯ ವಹಿವಾಟನ್ನೂ ಆರ್ಥಿಕ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ. ದ್ವಿಚಕ್ರ ವಾಹನಗಳ ಮಾರಾಟವು ಶೇ 16.38ರಷ್ಟು ಕುಸಿದಿರುವುದು ಗ್ರಾಮೀಣ ಪ್ರದೇಶದ ಸಂಕಷ್ಟ ಮುಂದುವರಿದಿರುವುದರ ದ್ಯೋತಕ. ಇದಕ್ಕೆ ತಕ್ಷಣಕ್ಕೆ ಮದ್ದು ದೊರೆಯುವ ಸಾಧ್ಯತೆ ಕಾಣಿಸುತ್ತಿಲ್ಲ.

ವಾಹನ ತಯಾರಿಕೆ ಉದ್ದಿಮೆಯಷ್ಟೇ ಬಾಧಿತವಾಗಿಲ್ಲ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಮಾರಾಟವೂ ಕುಸಿದಿದೆ. ತುಸು ಯೋಚಿಸಿ ಮಾಡುವ ವೆಚ್ಚಕ್ಕೆ ಗ್ರಾಹಕರು ಕಡಿವಾಣ ಹಾಕಿದ್ದಾರೆ. ಬೇಡಿಕೆ ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಬೆಂಬಲ ನೀಡುವ ಗ್ರಾಮೀಣ ಪ್ರದೇಶದಲ್ಲಿನ ಕೂಲಿ ದರ 2018–19ರಲ್ಲಿ ಹೆಚ್ಚಳಗೊಂಡಿಲ್ಲ. ಫೆಬ್ರುವರಿ ತಿಂಗಳಲ್ಲಿನ ಗ್ರಾಮೀಣ ಕೂಲಿ ದರವು ಹಣದುಬ್ಬರದ ಜತೆ ಹೊಂದಾಣಿಕೆ ಮಾಡಿಕೊಂಡ ನಂತರ ಕೇವಲ ಶೇ 2ರಷ್ಟು ಹೆಚ್ಚಳಗೊಂಡಿದೆ. ಜನವರಿಯಲ್ಲಿ ಇದು ಇನ್ನೂ ಕಡಿಮೆ ಮಟ್ಟದಲ್ಲಿತ್ತು. ಕೃಷಿಯೇತರ ವಲಯಗಳಲ್ಲಿನ ವೇತನ ಹೆಚ್ಚಳವೂ ಸರಿಸುಮಾರು ಇದೇ ಮಟ್ಟದಲ್ಲಿತ್ತು. ರೈತಾಪಿ ವರ್ಗದ ಆದಾಯ ಕಡಿಮೆ ಆಗಿದೆ. ಮಳೆ ಅನಿಶ್ಚಿತತೆ,ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗದಿರುವುದರಿಂದ ರೈತರ ಬವಣೆ ಹೆಚ್ಚಿದೆ. ವಾಹನ ಮಾರಾಟ ಕುಸಿತಕ್ಕೆ ಇದರ ಕೊಡುಗೆಯೂ ಉಂಟು. ಮಾರ್ಚ್‌ ತಿಂಗಳ ಕೈಗಾರಿಕಾ ತಯಾರಿಕೆ ಸೂಚ್ಯಂಕವು ಶೇ 0.1ರಷ್ಟಕ್ಕೆ ಕುಸಿದಿರುವುದೂ ದೇಶಿ ಆರ್ಥಿಕತೆಯಲ್ಲಿನ ಕುಂಠಿತ ಪ್ರಗತಿಗೆ ಕನ್ನಡಿ ಹಿಡಿಯುತ್ತದೆ. ಆದರೆ, ದೇಶಿ ಆರ್ಥಿಕತೆ ಬಗ್ಗೆ ಆಡಳಿತಾರೂಢರು ನೀಡುವ ಬಣ್ಣದ ಮಾತಿನ ಸಮಜಾಯಿಷಿಗೆ ತಾರ್ಕಿಕ ಸಮರ್ಥನೆಯೇ ಕಂಡುಬರುತ್ತಿಲ್ಲ. ಚುನಾವಣೆ ನಂತರ ಕೇಂದ್ರದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಆಶಿಸಬಹುದು. ಕುಂಟುತ್ತಿರುವ ಆರ್ಥಿಕತೆಗೆ ಉತ್ತೇಜನಾ ಕೊಡುಗೆ ಪ್ರಕಟಿಸಿದರೆ ಅದು ಪ್ರಗತಿಯ ಹಳಿಗೆ ಮರಳೀತು. 2009ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ದೇಶಿ ಆರ್ಥಿಕತೆಯನ್ನು ಪಾರು ಮಾಡಲು ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರವು ₹1.86 ಲಕ್ಷ ಕೋಟಿ ಕೊಡುಗೆ ನೀಡಿತ್ತು. ಈಗಲೂ ಇಂತಹ ಕೊಡುಗೆ ಬೇಕಾಗಬಹುದು. ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರವು ವಿಶ್ವ ಆರ್ಥಿಕತೆಗೆ ಬೆದರಿಕೆ ಒಡ್ಡಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಮಂದಗತಿಯ ಆರ್ಥಿಕತೆ ಮತ್ತು ಉಪಭೋಗ ಕುಸಿತಕ್ಕೆ ತಡೆಹಾಕಲು ಲಭ್ಯವಿರುವ ಮಾರ್ಗೋಪಾಯಗಳನ್ನೆಲ್ಲ ಬಳಸಿಕೊಂಡರೆ ಆತಂಕದ ಕಾರ್ಮೋಡಗಳು ದೂರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT