ADVERTISEMENT

ಸಂಪಾದಕೀಯ | ‘ಸಾಮಾಜಿಕ ನ್ಯಾಯ’ದ ಸಮೀಕ್ಷೆ: ಗೊಂದಲ ಸೃಷ್ಟಿ, ಬಹಿಷ್ಕಾರ ಸಲ್ಲದು

ಸಂಪಾದಕೀಯ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ
ಸಂಪಾದಕೀಯ   

ರಾಜ್ಯದಲ್ಲಿ ನಡೆಯುತ್ತಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯನ್ನು ಬಹಿಷ್ಕರಿಸುವಂತೆ ಕರೆ ನೀಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸಮೀಕ್ಷಕರೊಂದಿಗೆ ತಾವು ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ; ಸಮೀಕ್ಷೆಯನ್ನು ‘ಸಿದ್ದರಾಮಯ್ಯ ಸಮೀಕ್ಷೆ’ ಎಂದು ಕರೆದಿದ್ದಾರೆ. ಆಳವಾದ ನಗರ ಪಕ್ಷಪಾತಿ ಧೋರಣೆಯಂತೆ ಕಾಣಿಸುವ ಈ ನಿಲುವು ಸಮೀಕ್ಷೆಯ ನೈಜ ಉದ್ದೇಶಕ್ಕೆ ತೊಡಕು ಉಂಟುಮಾಡುತ್ತದೆ. ಈಗ ನಡೆಯುತ್ತಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ ಹೊರತು ಸಾಂಪ್ರದಾಯಿಕ ಸ್ವರೂಪದ ಜಾತಿಜನಗಣತಿ ಅಲ್ಲ ಎಂದು ರಾಜ್ಯ ಸರ್ಕಾರ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಸಮುದಾಯಗಳ ಹಿಂದುಳಿಯುವಿಕೆಗೆ ಅಧಿಕೃತ ಕಾರಣಗಳನ್ನು ಕಂಡುಕೊಳ್ಳುವುದು ಸಮೀಕ್ಷೆಯ ಉದ್ದೇಶವಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಸರಿಯಾಗಿ ಮುಟ್ಟದ ಸಮುದಾಯಗಳನ್ನು ಗುರ್ತಿಸುವುದು ಹಾಗೂ ಅವರಿಗೆ ಭವಿಷ್ಯದಲ್ಲಿ ಅಗತ್ಯ ಸವಲತ್ತುಗಳನ್ನು ಕಲ್ಪಿಸುವುದಕ್ಕೆ ಅಗತ್ಯವಾದ ಮಾಹಿತಿಯನ್ನು ಸಮೀಕ್ಷೆ ದೊರಕಿಸಿಕೊಡಲಿದೆ. ಭಾರತೀಯ ಸಮಾಜದಲ್ಲಿ ಜಾತಿ ಒಂದು ನಿರಾಕರಿಸಲಾಗದ ವಾಸ್ತವವಾಗಿದೆ. ಸಮೀಕ್ಷೆಯ ಹೊರತಾಗಿ ಹಿಂದುಳಿದ ಸಮುದಾಯಗಳನ್ನು ಗುರ್ತಿಸುವುದಕ್ಕೆ ಸರ್ಕಾರಕ್ಕೆ ಬೇರೆ ದಾರಿಯಾದರೂ ಯಾವುದಿದೆ? ಸಮೀಕ್ಷೆಗೆ ಒಳಪಡುವವರು ನಿರ್ದಿಷ್ಟ ಜಾತಿಯೊಂದಿಗೆ ಗುರ್ತಿಸಿಕೊಳ್ಳುವ ಬದಲಾಗಿ, ‘ಹಿಂದೂ’ ಎಂದು ಉಲ್ಲೇಖಿಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣ ಆಗುವಂತಿದೆ. ಸಮೀಕ್ಷೆಯನ್ನು ಧರ್ಮದ ಅಂಕಿಅಂಶಗಳಿಗಾಗಿ ನಡೆಸುತ್ತಿಲ್ಲ ಎನ್ನುವುದನ್ನು ಗಮನಿಸದೆ ವಿಜಯೇಂದ್ರ ಅವರು ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಅವರು ಪ್ರತಿನಿಧಿಸುವ ಪಕ್ಷದ ಬದ್ಧತೆಯ ಬಗ್ಗೆ ಸಂಶಯ ಹುಟ್ಟಿಸುವಂತಿದೆ.

ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನಲ್ಲ ಎಂದು ಹೈಕೋರ್ಟ್‌ನೀಡಿರುವ ನಿರ್ದೇಶನವನ್ನು, ಸಮೀಕ್ಷೆ ಯನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿರುವ ವರ್ಗ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಪಂಜಾಬ್‌ ಸರ್ಕಾರ ವರ್ಸಸ್‌ ದೇವಿಂದರ್‌ ಸಿಂಗ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಮಾರ್ಗದರ್ಶಕ ಸೂತ್ರವನ್ನಾಗಿ ಪರಿಗಣಿಸಿ ಹೈಕೋರ್ಟ್‌ ನಿರ್ದೇಶನ ನೀಡಿದ್ದಲ್ಲಿ, ಸಮೀಕ್ಷೆಯ ಕುರಿತ ಗೊಂದಲಗಳಿಗೆ ಆಸ್ಪದ ಇರುತ್ತಿರಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಒಂದೇ ಕುಟುಂಬಕ್ಕೆ ಸೇರಿದವುಗಳಲ್ಲ ಎನ್ನುವುದನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್‌, ಮೀಸಲಾತಿ ಸೌಲಭ್ಯವನ್ನು ನ್ಯಾಯಬದ್ಧವಾಗಿ ನೀಡುವುದಕ್ಕಾಗಿ ಉಪ ವರ್ಗೀಕರಣವನ್ನು ರಾಜ್ಯ ಸರ್ಕಾರಗಳು ಮಾಡಿಕೊಳ್ಳಬಹುದು ಎಂದು ಹೇಳಿತ್ತು. ವಿವಿಧ ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದಂತೆ ಪ್ರಮಾಣೀಕರಿಸಬಹುದಾದ ಅಧಿಕೃತ ದತ್ತಾಂಶ ಇಲ್ಲದೆ ಹೋದಲ್ಲಿ, ಬಲಿಷ್ಠ ಉಪಜಾತಿಗಳ ಏಕಸ್ವಾಮ್ಯದ ಅಪಾಯ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ, ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲಪಿಸಲು ಅನುಕೂಲವಾಗುವಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸುತ್ತಿರುವುದು ಸೂಕ್ತವಾಗಿದೆ. ಈ ಸಮೀಕ್ಷೆಯಿಂದ ಅತ್ಯಂತ ಸಣ್ಣ ಹಾಗೂ ಬಡತನಕ್ಕೆ ಸಿಲುಕಿರುವ ಜಾತಿಗಳಿಗೆ ದೊರೆಯಬೇಕಾದ ಪ್ರಯೋಜನಗಳನ್ನು ಸಬಲ ಜಾತಿಗಳು ಕಬಳಿಸದಂತೆ ತಡೆಯಲು ಸಾಧ್ಯವಾಗಲಿದೆ.  

ಸಮೀಕ್ಷೆಯ ಕುರಿತು ಎದುರಾಗಿರುವ ವಿರೋಧಕ್ಕೆ ಸರ್ಕಾರವೂ ಅವಕಾಶ ಕಲ್ಪಿಸಿದೆ. ಸಮೀಕ್ಷೆಯ ಉದ್ದೇಶಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲಪಿಸುವಲ್ಲಿ ಆಗಿರುವ ವೈಫಲ್ಯ, ವದಂತಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಗೊಂದಲಗಳೇನೇ ಇದ್ದರೂ, ಸಾಮಾಜಿಕ ನ್ಯಾಯ ಖಾತರಿಪಡಿಸುವ ಪ್ರಕ್ರಿಯೆಯ ರೂಪದಲ್ಲಿ ಸಮೀಕ್ಷೆ ಅನಿವಾರ್ಯವಾಗಿದೆ. ಅಂಚಿನ ವರ್ಗಕ್ಕೆ ಸೇರಿದವರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದೇ ಆದಲ್ಲಿ, ಅದರಿಂದ ಅವರಿಗೇ ನಷ್ಟವಾಗುತ್ತದೆ ಹಾಗೂ ಸಮುದಾಯಗಳ ಹಿಂದುಳಿದಿರುವಿಕೆಯ ಸ್ವರೂಪ ಅಸ್ಪಷ್ಟವಾಗಿಯೇ ಉಳಿಯುತ್ತದೆ. ಸ್ವಪ್ರತಿಷ್ಠೆಯ ರಾಜಕಾರಣ ಅಥವಾ ಜಾತಿಗಳ ನಡುವಣ ಸಂಘರ್ಷದ ರೂಪದಲ್ಲಿ ಸಮೀಕ್ಷೆಯನ್ನು ಬಿಂಬಿಸುವುದು ಇನ್ನಾದರೂ ಕೊನೆಗೊಳ್ಳಬೇಕು. ಸಾರ್ವಜನಿಕ ನೀತಿಯಲ್ಲಿ ನಿರ್ಲಕ್ಷಿತ ಸಮುದಾಯಗಳು ನ್ಯಾಯಬದ್ಧ ಪಾಲನ್ನು ಹೊಂದುವ ಹಕ್ಕೊತ್ತಾಯಕ್ಕೆ ಸಮೀಕ್ಷೆ ಬಲ ಒದಗಿಸಲಿದೆ. ಸಮೀಕ್ಷೆಯನ್ನು ಬಹಿಷ್ಕರಿಸುವ ಮನಃಸ್ಥಿತಿಯಿಂದ ಕೇಳಿಸಿಕೊಳ್ಳಲೇಬೇಕಾದ ಧ್ವನಿಗಳನ್ನು ಹತ್ತಿಕ್ಕಿದಂತಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.