ADVERTISEMENT

ಸಂಪಾದಕೀಯ | ಬಾಲ ಗರ್ಭಿಣಿ ಪ್ರಕರಣಗಳ ಹೆಚ್ಚಳ: ಮಕ್ಕಳ ಸುರಕ್ಷತೆಗೆ ಆದ್ಯತೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 23:51 IST
Last Updated 28 ಆಗಸ್ಟ್ 2025, 23:51 IST
<div class="paragraphs"><p>.ಸಂಪಾದಕೀಯ</p></div>

.ಸಂಪಾದಕೀಯ

   

ಹೆಣ್ಣುಮಕ್ಕಳ ಸಬಲೀಕರಣಕ್ಕೆ ಒತ್ತು ನೀಡುವ ಹತ್ತಾರು ಸರ್ಕಾರಿ ಕಾರ್ಯಕ್ರಮಗಳ ನಡುವೆಯೂ ಹದಿನೆಂಟು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭ ಧರಿಸುತ್ತಿರುವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದು ಕಳವಳಕಾರಿ. ‘ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ’ (ಆರ್‌ಸಿಎಚ್‌) ಪೋರ್ಟಲ್‌ ಮಾಹಿತಿಯ ಪ್ರಕಾರ, 2023ರಿಂದ 2025ರ ಜುಲೈವರೆಗಿನ ಎರಡು ವರ್ಷ ಏಳು ತಿಂಗಳ ಅವಧಿಯಲ್ಲಿ 14ರಿಂದ 18 ವರ್ಷದೊಳಗಿನ ವಯಸ್ಸಿನ 80,813 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಅಪ್ತಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯರಾಗಿರುವ ಜಿಲ್ಲೆಗಳಲ್ಲಿ ಬೆಂಗಳೂರು (8,891), ಬೆಳಗಾವಿ (8,169) ಹಾಗೂ ವಿಜಯಪುರ (6,229) ಮುಂಚೂಣಿಯಲ್ಲಿದ್ದರೆ, ಉಡುಪಿಯಲ್ಲಿ ಅತಿ ಕಡಿಮೆ (182) ಬಾಲಗರ್ಭಿಣಿಯರಿದ್ದಾರೆ. ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವ ವರದಿ ಪ್ರಕಟಗೊಂಡಿರುವ ಸಂದರ್ಭದಲ್ಲೇ, ಯಾದಗಿರಿ ಜಿಲ್ಲೆಯ ಶಹಾ‍ಪುರದ ವಸತಿ ಶಾಲೆಯೊಂದರ ಶೌಚಾಲಯದಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಪ್ರಕರಣವನ್ನು ವಸತಿಶಾಲೆಯ ಅಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೂ ತಂದಿಲ್ಲ. ಬೇರೆ ಮೂಲಗಳಿಂದ ವಿಷಯ ತಿಳಿದುಕೊಂಡ ಆಯೋಗ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಶಹಾಪುರದಲ್ಲಿನ ಪ್ರಕರಣ, ಬಾಲಕಿಯರ ಸುರಕ್ಷತೆಯ ಬಗ್ಗೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ನಿದರ್ಶನದಂತಿದೆ.

ಬಾಲಕಿಯರ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲೆ, ಮನೆಗಳಲ್ಲಿಯೂ ನಿರ್ಲಕ್ಷ್ಯ ವ್ಯಕ್ತವಾಗುವುದಿದೆ. ಶಾಲಾ ಪರಿಸರದಲ್ಲಿ ಬಾಲಕಿಯರ ಸುರಕ್ಷತೆಯ ಕಾಳಜಿ ಶಿಕ್ಷಣ ಸಂಸ್ಥೆಯದ್ದಾದರೆ, ಮನೆಯಲ್ಲಿ ಆ ಜವಾಬ್ದಾರಿಯನ್ನು ಪೋಷಕರೇ ನಿರ್ವಹಿಸಬೇಕಾಗಿದೆ. ಅಪ್ರಾಪ್ತರ ಗರ್ಭಧಾರಣೆಗೆ ಬಾಲ್ಯ ವಿವಾಹ ಸೇರಿದಂತೆ ಹಲವು ಕಾರಣಗಳಿವೆ. ಪ್ರೀತಿಯ ನೆಪದಲ್ಲಿ ಅಮಾಯಕ ಹುಡುಗಿಯರನ್ನು ವಂಚಿಸುವುದು ಹಾಗೂ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿ ಕೊಳ್ಳುವುದು ಹೆಚ್ಚಿನ ಪ್ರಕರಣಗಳಲ್ಲಿ ಕಂಡುಬಂದಿದೆ. ಬಾಲಕಿಯರು ಶಾಲೆ ಬಿಡುವುದು, ಸಾಮಾಜಿಕ ಮಾಧ್ಯಮಗಳ ಬಳಕೆ, ಮೊಬೈಲ್‌ ಆಮಿಷ ಸೇರಿದಂತೆ ಹಲವು ಕಾರಣಗಳಿಂದಾಗಿ ಎಳೆಯ ವಯಸ್ಸಿನಲ್ಲಿ ತಾಯ್ತನದ ಹೊರೆಯನ್ನು ಹೊರುವಂತಾಗಿದೆ. ಕಾರಣ ಯಾವುದೇ ಆದರೂ, ಬಾಲಗರ್ಭಿಣಿಯರ ಪ್ರಕರಣಗಳು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವೂ ಆಗಿದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ‘ಪೋಕ್ಸೊ’ದಡಿ ದೂರು ದಾಖಲಾಗದಿರುವುದು ಕಾನೂನು ಅನುಷ್ಠಾನದ ಗಂಭೀರ ಲೋಪವಾಗಿದೆ.

ADVERTISEMENT

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಹಲವು ಕಾರ್ಯಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಳಗೊಂಡ ಕಾವಲು ಸಮಿತಿಗಳನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ ರಚಿಸಲಾಗಿದೆ. ಈ ಕಾವಲು ಸಮಿತಿಗಳು ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ಎಚ್ಚರ ವಹಿಸುತ್ತವೆ. ಆದರೆ, ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾರ್ಯಕ್ರಮಗಳ ವೈಫಲ್ಯವನ್ನು ಸೂಚಿಸುವಂತಿದೆ. ವಲಸೆ ಕಾರ್ಮಿಕರ ಬಹಳಷ್ಟು ಮಕ್ಕಳಿಗೆ ಊರಿನಲ್ಲಿ ಸಿಗುವ ಸುರಕ್ಷತೆ, ವಲಸೆ ಬಂದ ನಗರಪ್ರದೇಶಗಳಲ್ಲಿ ದೊರೆಯುವುದಿಲ್ಲ. ಶಾಲಾಕಾಲೇಜುಗಳಲ್ಲಿ ಲೈಂಗಿಕತೆಯ ಕುರಿತು ಅರಿವು ಮೂಡಿಸುವ ಹಾಗೂ ಲೈಂಗಿಕ ದೌರ್ಜನ್ಯದ ಬಗ್ಗೆ ಎಚ್ಚರ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಾಗಿದೆ. ಅಗತ್ಯವಿರುವ ಮಕ್ಕಳಿಗೆ ಆಪ್ತಸಮಾಲೋಚನೆ ಒದಗಿಸುವ ಸೌಕರ್ಯವೂ ಶಾಲಾಕಾಲೇಜುಗಳಲ್ಲಿ ಕಡ್ಡಾಯವಾಗಿ ಇರಬೇಕು. ಹದಿನೆಂಟು ವರ್ಷದೊಳಗೆ ಗರ್ಭ ಧರಿಸುವುದು ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ; ಹದಿನೆಂಟು ಎನ್ನುವುದು ವಿವಾಹ ಹಾಗೂ ಗರ್ಭಧಾರಣೆಗೆ ಗೊತ್ತುಪಡಿಸಿರುವ ಕನಿಷ್ಠ ವಯಸ್ಸೇ ಹೊರತು, ಅದು ಸಮರ್ಪಕವಾದ ವಯಸ್ಸಲ್ಲ ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ಹದಿಹರೆಯದಲ್ಲಿ ಮಕ್ಕಳ ಮನಸ್ಸು ಬಹು ಸೂಕ್ಷ್ಮವಾಗಿದ್ದು, ಅವರು ಕುತೂಹಲದಿಂದ ಸಲ್ಲದ ಸಾಹಸಗಳಿಗೆ ಕೈಹಾಕುವುದೂ ಇದೆ. ಹೊಣೆಗೇಡಿ ಸಮೂಹಮಾಧ್ಯಮಗಳು ಕೂಡ ಮಕ್ಕಳ ಮನಸ್ಸು ಚಂಚಲವಾಗಲು ಪೂರಕವಾಗಿವೆ. ಮಕ್ಕಳ ಮನಸ್ಸು ಸ್ವಸ್ಥವಾಗಿ ಇರುವಂತೆ ನೋಡಿಕೊಳ್ಳುವ ಸಾಮೂಹಿಕ ಹೊಣೆಗಾರಿಕೆಯನ್ನು ಸಮಾಜ ನಿರ್ವಹಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.