ADVERTISEMENT

ಕ್ರೀಡಾ ಚಟುವಟಿಕೆ ಮೇಲೆ ಕೋವಿಡ್ ಕರಿನೆರಳು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:47 IST
Last Updated 3 ಮಾರ್ಚ್ 2020, 19:47 IST
.
.   

ಒಲಿಂಪಿಕ್ ಕ್ರೀಡಾಕೂಟವೆಂದರೆ ವಿಶ್ವಬಂಧುತ್ವ ಮತ್ತು ಸಾಮರಸ್ಯದ ಸಂದೇಶ ಸಾರುವ ಮಹಾಉತ್ಸವ. ಆಯೋಜನೆ ಮಾಡುವ ದೇಶದ ಪ್ರತಿಷ್ಠೆ, ಶ್ರೀಮಂತಿಕೆಯನ್ನು ಮೆರೆಸುವ ವೇದಿಕೆಯೂ ಹೌದು. ಅಂತಹದ್ದೊಂದು ಕೂಟವನ್ನು ಆಯೋಜಿಸಲು ಜಪಾನ್ ದೇಶದ ರಾಜಧಾನಿ ಟೋಕಿಯೊ ಈಗಾಗಲೇ ಸಿದ್ಧಗೊಂಡಿದೆ. ಜುಲೈ 24ರಿಂದ ಆಗಸ್ಟ್‌ 9ರವರೆಗೆ ನಡೆಯಬೇಕಾಗಿರುವ ಈ ಕೂಟಕ್ಕೆ ಈಗ ಕೋವಿಡ್–19 ಸೋಂಕಿನಕರಿನೆರಳು ಆವರಿಸಿದೆ.

ಈ ವೈರಸ್‌ ಉಪಟಳಕ್ಕೆ ಎರಡು ತಿಂಗಳಿನಿಂದ ಮೂರು ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಒಟ್ಟು 80 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ವೈರಸ್‌ನಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗಿದೆ.ಕ್ರೀಡಾ ಕ್ಷೇತ್ರದ ಮೇಲೂ ಅದರ ಕರಿಛಾಯೆ ಬಿದ್ದಿದೆ. ಒಲಿಂಪಿಕ್ ವರ್ಷವೆಂದರೆ ಅದು ವಿಶ್ವದ ಎಲ್ಲ ಸಣ್ಣ, ದೊಡ್ಡ ರಾಷ್ಟ್ರಗಳಿಗೆ ಆಟೋಟಗಳ ಉತ್ಸವದ ಸಂಭ್ರಮ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾಮೇಳದಲ್ಲಿ ಸ್ಪರ್ಧಿಸುವ ಕನಸು ಬಹುಪಾಲು ಕ್ರೀಡಾಪಟುಗಳಲ್ಲಿ ಇರುತ್ತದೆ. ಅದಕ್ಕಾಗಿ ನಾಲ್ಕಾರು ವರ್ಷಗಳ ಕಾಲ ಅವರು ಶ್ರಮಪಟ್ಟಿರುತ್ತಾರೆ. ಹಲವಾರು ಹಂತಗಳಲ್ಲಿ ಸ್ಪರ್ಧಿಸಿ, ಕೆಲವರು ಅರ್ಹತೆ ಗಿಟ್ಟಿಸುತ್ತಾರೆ.

ಆಯೋಜನೆ ಮಾಡುವ ದೇಶಕ್ಕೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಇದಕ್ಕಾಗಿ, ಜಪಾನ್ ಸುಮಾರು ₹ 89 ಸಾವಿರ ಕೋಟಿ ಖರ್ಚು ಮಾಡಿದೆ. ಈ ಕ್ರೀಡಾಕೂಟಕ್ಕೆ ವಿಮೆ ಸೌಲಭ್ಯ ಒದಗಿಸಿರುವ ವಿಮಾ ಕಂಪನಿಗಳು ಕೂಡ ಈಗ ಆತಂಕದಲ್ಲಿವೆ. ಕ್ರೀಡಾಕೂಟಒಂದೊಮ್ಮೆ ರದ್ದಾದರೆ ಈ ಕಂಪನಿಗಳು ದೊಡ್ಡ ಮೊತ್ತದ ಪರಿಹಾರ ನೀಡಬೇಕಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಕ್ರೀಡಾಕೂಟದಲ್ಲಿ ಭಾಗವಹಿಸಲು ಅಣಿಯಾಗಿರುವ ಆಟಗಾರರ ಕನಸು ನುಚ್ಚುನೂರಾಗಲಿದೆ. ಒಂದೊಮ್ಮೆ ನಡೆದರೂ ಒಲಿಂಪಿಕ್‌ ಕೂಟದಲ್ಲಿ ಪ್ರತಿಬಾರಿಯೂ ಅಮೆರಿಕ ಮತ್ತು ಯುರೋಪ್‌ ದೇಶಗಳಿಗೆ ಸಡ್ಡು ಹೊಡೆದು ಪದಕಗಳ ರಾಶಿ ಪೇರಿಸುವ ಚೀನಾ ಕ್ರೀಡಾಪಟುಗಳು ಭಾಗವಹಿಸುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯಗಳಿವೆ.

ADVERTISEMENT

ಕೋವಿಡ್ ದಾಳಿಗೆ ತತ್ತರಿಸಿರುವ ವುಹಾನ್ ನಗರವೂ ಚೀನಾದ ಪ್ರಮುಖ ಕ್ರೀಡಾಕೇಂದ್ರಗಳಲ್ಲಿ ಒಂದು. ಆದರೆ ಈ ಮಾರಕ ವೈರಸ್ ಈಗ ಚೀನಾ ದಾಟಿ ಹಲವಾರು ದೇಶಗಳಿಗೆ ಹರಡಿದೆ. ಆದ್ದರಿಂದ ಕೂಟಕ್ಕೆ ಬರುವ ಕ್ರೀಡಾಪಟುಗಳು, ಅಭಿಮಾನಿಗಳು ಮತ್ತು ಪ್ರವಾಸಿಗರಿಂದ ಸೋಂಕು ಉಲ್ಬಣಿಸಬಹುದು ಎಂಬ ಭೀತಿ ವ್ಯಕ್ತವಾಗಿದೆ. ಇದೇ ಕಾರಣಕ್ಕಾಗಿ ಕೂಟವನ್ನು ರದ್ದುಪಡಿಸುವಂತೆ ಹಲವುದೇಶಗಳು ಒತ್ತಾಯಿಸಿವೆ.

ಆದರೆ ಪರಿಸ್ಥಿತಿ ಸುಧಾರಿಸಲಿದೆ ಮತ್ತು ಕ್ರೀಡಾಕೂಟ ನಡೆಯಲಿದೆ ಎಂಬ ಆಶಾಭಾವ ಆಯೋಜಕರದು. ಈ ನಡುವೆ, ಎರಡು ದಿನಗಳ ಹಿಂದೆಜಪಾನಿನಲ್ಲಿಯೇ ನಡೆದ ಒಲಿಂಪಿಕ್ಸ್ ಅರ್ಹತಾ ಸುಮೊ (ಜಪಾನ್‌ ಶೈಲಿಯ ಕುಸ್ತಿ) ಸ್ಪರ್ಧೆಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಜರ್ಮನಿಯಲ್ಲಿಯೂ ಕೆಲವು ಕ್ರೀಡಾ ಸ್ಪರ್ಧೆಗಳಿಗೆ ಜನರ ಪ್ರವೇಶವನ್ನು ತಡೆಯಲಾಗಿತ್ತು. ಅದಕ್ಕಾಗಿ ಆಯೋಜಕರು ಕ್ಷಮೆಯನ್ನೂ ಕೇಳಿದ್ದಾರೆ. ಕೆಲವು ದೇಶಗಳಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಕ್ರೀಡಾಕೂಟಗಳು ರದ್ದಾಗಿವೆ. ಭಾರತಕ್ಕೂ ಈ ವೈರಸ್‌ ಬಿಸಿ ತಟ್ಟಿದೆ.

ಹೋದ ತಿಂಗಳು ನವದೆಹಲಿಯಲ್ಲಿ ನಡೆದಿದ್ದ ಏಷ್ಯಾ ಕುಸ್ತಿ ಚಾಂಪಿಯನ್‌ಷಿಪ್‌ಗೆ ಬರಬೇಕಿದ್ದ ಚೀನಾ ಕುಸ್ತಿಪಟುಗಳಿಗೆ ವೀಸಾ ನೀಡಲು ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ದುಬೈನಲ್ಲಿ ಏಷ್ಯಾ ಕ್ರಿಕೆಟ್‌ ಕೌನ್ಸಿಲ್ (ಎಸಿಸಿ) ಆಯೋಜಿಸಿದ್ದ ಸಭೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೆರಳಲಿಲ್ಲ. ಮುಂಬರುವ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಆದರೆ ಆ ದೇಶದೊಂದಿಗೆ ಸಂಬಂಧ ಸೌಹಾರ್ದವಾಗಿಲ್ಲದ ಕಾರಣ ಭಾರತವು ಪಾಕಿಸ್ತಾನಕ್ಕೆ ಹೋಗಿ ಆಡಲು ನಿರಾಕರಿಸಿದೆ. ಆದ್ದರಿಂದ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸುವ ಕುರಿತು ಈ ಸಭೆಯಲ್ಲಿ ನಿರ್ಧರಿಸಬೇಕಿತ್ತು. ಈ ಸಭೆಯನ್ನು ಮಂದೂಡಲಾಗಿದೆ. ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿಯನ್ನು ಬದಲಿಸಿಕೊಳ್ಳುವ ಅವಕಾಶ ಇದೆ. ಆದರೆ ಒಲಿಂಪಿಕ್‌ ಕ್ರೀಡೆಗಳ ವಿಚಾರದಲ್ಲಿ ಅಂತಹ ಬದಲಾವಣೆಯಾದ ನಿದರ್ಶನ ಇಲ್ಲ. 1916ರ ಕೂಟವು ಪ್ರಥಮ ವಿಶ್ವಯುದ್ಧದ ಕಾರಣ ರದ್ದಾಗಿತ್ತು.

1940ರಲ್ಲಿ ಟೋಕಿಯೊದಲ್ಲಿ ಆಯೋಜನೆಯಾಗಬೇಕಿದ್ದ ಒಲಿಂಪಿಕ್‌ ಕೂಟವು ದ್ವಿತೀಯ ಮಹಾಯುದ್ಧದಿಂದಾಗಿ ನಡೆಯಲಿಲ್ಲ. ಇದೀಗ, ವೈರಸ್‌ ಕಾರಣ ರದ್ದಾಗುವ ಭೀತಿ ಎದುರಿಸುತ್ತಿರುವ ಮೊದಲ ಒಲಿಂಪಿಕ್‌ ಕೂಟ ಇದಾಗಿದೆ. ಪರಿಸ್ಥಿತಿ ಸುಧಾರಣೆಯಾದರೆ ಇದೇ 26ರಿಂದ ಫುಕುಶಿಮಾದಿಂದ ಒಲಿಂಪಿಕ್‌ ಜ್ಯೋತಿಯಾತ್ರೆ ಆರಂಭವಾಗಲಿದೆ. ಭೀತಿಯ ಕತ್ತಲು ಸರಿದು, ಕ್ರೀಡಾಪ್ರೀತಿಯ ಬೆಳಕು ಹರಡಲಿ ಎಂದು ಕ್ರೀಡಾಲೋಕ ಹಾರೈಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.