ADVERTISEMENT

ಕೋವಿಡ್‌ ಲಸಿಕೆ: ಅರ್ಧ ಹಾದಿ ಇನ್ನೂ ಕ್ರಮಿಸಿಲ್ಲ ಎಂಬ ಎಚ್ಚರ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 4:18 IST
Last Updated 23 ಅಕ್ಟೋಬರ್ 2021, 4:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಒಂದೂವರೆ ವರ್ಷದಿಂದ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೋವಿಡ್‌–19 ಸಾಂಕ್ರಾಮಿಕ ವಿರುದ್ಧದ ಲಸಿಕೆ ಅಭಿಯಾನದಲ್ಲಿ ಭಾರತ ಗುರುವಾರ ಮಹತ್ವದ ಘಟ್ಟವೊಂದನ್ನು ದಾಟಿ ಸಂಭ್ರಮಿಸಿದೆ. ಕೋವಿಡ್‌ ವಿರುದ್ಧದ ಲಸಿಕೆಯ ನೂರು ಕೋಟಿ ಡೋಸ್‌ಗಳನ್ನು ಜನರಿಗೆ ಹಾಕಲಾಗಿದೆ. ರೋಗ ಬಂದ ನಂತರ ಚಿಕಿತ್ಸೆಗಾಗಿ ಓಡಾಡುವುದಕ್ಕಿಂತ ರೋಗ ಬಾರದಂತೆ ತಡೆಯವುದೇ ಉತ್ತಮ ಎಂಬುದು ಎಲ್ಲರೂ ಒಪ್ಪತಕ್ಕ ಮಾತು. ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಮಾತು ಹೆಚ್ಚಿನ ಜನರಿಗೆ ಮನದಟ್ಟಾಗಿದೆ. ಸೋಂಕು ತಡೆಯುವುದಕ್ಕೆ ಲಸಿಕೆ ಹಾಕಿಸಿಕೊಳ್ಳುವುದು ಅತ್ಯುತ್ತಮ ಅಸ್ತ್ರ. ಕೋವಿಡ್‌ ವಿಚಾರದಲ್ಲಿಯೂ ಅದು ನಿಜ. ಹಾಗಾಗಿಯೇ, ನೂರು ಕೋಟಿ ಡೋಸ್‌ ಲಸಿಕೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ‘ಐತಿಹಾಸಿಕ’. ಕೋವಿಡ್‌ನಿಂದಾಗಿ ಜಗತ್ತು ಅಯೋಮಯವಾಗಿದ್ದಾಗ ವಿಜ್ಞಾನ ಜಗತ್ತು ಲಸಿಕೆ ಅಭಿವೃದ್ಧಿಗಾಗಿ ಕಣ್ಣು ನೆಟ್ಟು ಕೂತಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಮತ್ತು ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಜತೆಯಾಗಿ ಅತ್ಯಂತ ತ್ವರಿತವಾಗಿ ಕೋವ್ಯಾಕ್ಸಿನ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಸಣ್ಣ ಸಾಧನೆ ಏನಲ್ಲ. ಈ ಲಸಿಕೆ ಅಭಿವೃದ್ಧಿ ಆಗದೇ ಇದ್ದಿದ್ದರೆ ಜಗತ್ತು ಕಂಡ ಅತ್ಯಂತ ದೊಡ್ಡ ಸಾಂಕ್ರಾಮಿಕಕ್ಕೆ ತನ್ನದೇ ಲಸಿಕೆ ಇಲ್ಲದೆ ಭಾರತವು ಒದ್ದಾಡುವ ಸ್ಥಿತಿ ಉಂಟಾಗುತ್ತಿತ್ತು. ಲಸಿಕೆ ಅಭಿಯಾನದಲ್ಲಿ ಭಾರತದ ಈಗಿನ ಮೈಲಿಗಲ್ಲಿಗೆ ವಿಜ್ಞಾನ ಮತ್ತು ಉದ್ಯಮದ ನಡುವಣ ಸಮನ್ವಯ ನೀಡಿದ ಕೊಡುಗೆ ಸಣ್ಣದೇನಲ್ಲ. ಕೋವಿಶೀಲ್ಡ್‌ ಲಸಿಕೆ ಅಭಿವೃದ್ಧಿಪಡಿಸಿದ ಬ್ರಿಟನ್‌ನ ಆಸ್ಟ್ರಾಜೆನೆಕಾ ಕಂಪನಿಯ ಜತೆಗೆ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ, ಲಸಿಕೆ ಅಭಿವೃದ್ಧಿಗೂ ಮೊದಲೇ ಮಾಡಿಕೊಂಡಿದ್ದ ಒಪ್ಪಂದವೇ ಲಸಿಕೆ ಅಭಿಯಾನದಲ್ಲಿ ಭಾರತದ ಯಶಸ್ಸಿಗೆ ಬಹುಮುಖ್ಯ ಕಾರಣ. ಏಕೆಂದರೆ, ಭಾರತದಲ್ಲಿ ನೀಡಲಾದ ಲಸಿಕೆಯಲ್ಲಿ ಶೇ 80ರಷ್ಟಕ್ಕೂ ಹೆಚ್ಚನ್ನು ಸೀರಂ ಸಂಸ್ಥೆಯು ಪೂರೈಸಿದೆ. ಲಸಿಕೆ ಅಭಿಯಾನದಲ್ಲಿ ಭಾಗಿಯಾದ ಆರೋಗ್ಯ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ದೇಶದ ಜನರ ಪಾತ್ರವು ಕಡಿಮೆ ಏನಲ್ಲ.

ಯಾವುದೇ ಯಶಸ್ಸು ಮೈಮರೆವಿಗೆ ಕಾರಣವಾಗು ವುದು ಸಹಜ. ಆದರೆ, ಭಾರತವು ಇಂದು ಮೈಮರೆಯುವಂತಹ ಸ್ಥಿತಿ ಇಲ್ಲ. ಬಹುದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವಂತೆಯೂ ಇಲ್ಲ. ನೆರೆಯ ಚೀನಾ ದೇಶವು ಲಸಿಕೆಯ 223.87 ಕೋಟಿ ಡೋಸ್‌ಗಳನ್ನು ಜನರಿಗೆ ಹಾಕಿಸಿದೆ. ಆ ದೇಶದಲ್ಲಿ ಪ್ರತೀ ನೂರು ಜನರಿಗೆ ಹಾಕಲಾದ ಲಸಿಕೆ ಪ್ರಮಾಣವು 152 ಡೋಸ್‌ಗೂ ಹೆಚ್ಚು. ಭಾರತದಲ್ಲಿ ಈ ಪ್ರಮಾಣವು 71.5 ಮಾತ್ರ.ದೇಶದ 18 ವರ್ಷಕ್ಕಿಂತ ಮೇಲಿನ ಶೇ 31ರಷ್ಟು ಜನರಿಗೆ ಮಾತ್ರ ಲಸಿಕೆಯ ಎರಡೂ ಡೋಸ್‌ ನೀಡಲಾಗಿದೆ. ಉಳಿದವರಿಗೆ ಎರಡನೇ ಡೋಸ್‌ ನೀಡಲು ಇನ್ನೂ ಸಾಧ್ಯವಾಗಿಲ್ಲ. ಎರಡೂ ಡೋಸ್‌ ಲಸಿಕೆ ಹಾಕಿದರೆ ಮಾತ್ರ ಕೋವಿಡ್‌ನಿಂದ ಪೂರ್ಣ ರಕ್ಷಣೆ ದೊರೆಯುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನಗಳು ಹೇಳಿವೆ. ಮಕ್ಕಳನ್ನೂ ಸೇರಿಸಿದರೆ ಭಾರತದ ಜನಸಂಖ್ಯೆ 136 ಕೋಟಿಗೂ ಹೆಚ್ಚು. ನಮಗೆ ಲಸಿಕೆಯ 272 ಕೋಟಿ ಡೋಸ್‌ಗಳು ಬೇಕಾಗಿವೆ. ಈಗಿನ ವೇಗದಲ್ಲಿ ಲಸಿಕೆ ಅಭಿಯಾನವು ನಡೆದರೆ ಎಲ್ಲರಿಗೂ ಎರಡು ಡೋಸ್‌ ಲಸಿಕೆ ಹಾಕಿಸಲು 479 ದಿನಗಳು ಬೇಕು. ಕೋವಿಡ್‌ ಹರಡುವಿಕೆಯ ವೇಗ ಮತ್ತು ಅದು ಉಂಟುಮಾಡಬಲ್ಲ ಅನಾಹುತವನ್ನು ಗಣನೆಗೆ ತೆಗೆದುಕೊಂಡರೆ ಲಸಿಕೆ ಅಭಿಯಾನದಲ್ಲಿ ಭಾರತವು ಹಿಂದುಳಿದಿದೆ ಎಂದೇ ವಿಷಾದದಿಂದ ಹೇಳಬೇಕಾಗುತ್ತದೆ.

ADVERTISEMENT

ದೇಶದ ವಿವಿಧ ಭಾಗಗಳಲ್ಲಿ ಶಾಲೆ–ಕಾಲೇಜುಗಳು ಆರಂಭವಾಗಿವೆ. ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೂ ಲಸಿಕೆ ಹಾಕಿಸಿ ಕೋವಿಡ್‌ನಿಂದ ರಕ್ಷಣೆ ಒದಗಿಸಬೇಕಾದ ಗುರುತರ ಹೊಣೆಗಾರಿಕೆ ಇದೆ. ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಬಳಸುವುದಕ್ಕಾಗಿ ಝೈಕೋವ್‌–ಡಿ ಮತ್ತು ಕೋವ್ಯಾಕ್ಸಿನ್‌ಗೆ ಅನುಮೋದನೆ ದೊರೆತಿದೆ. ಲಸಿಕೆ ಹಾಕಿಸಬೇಕಾದ ಮಕ್ಕಳ ಸಂಖ್ಯೆ ಸುಮಾರು 44 ಕೋಟಿ ಎಂದು ಗುರುತಿಸಲಾಗಿದೆ. ಈ ಮಕ್ಕಳಿಗೆ ಲಸಿಕೆ ಹಾಕಿಸುವಿಕೆಗೆ ನಿರ್ದಿಷ್ಟವಾದ ಯೋಜನೆಯನ್ನು ರೂಪಿಸಲಾಗಿಲ್ಲ. ದೇಶೀಯವಾಗಿ ಅಭಿವೃದ್ಧಿಪ‍ಡಿಸಲಾದ ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಮಾನ್ಯತೆ ಇನ್ನೂ ದೊರೆತಿಲ್ಲ. ಈ ಲಸಿಕೆ ಹಾಕಿಸಿಕೊಂಡವರು ವಿದೇಶಕ್ಕೆ ಮುಕ್ತವಾಗಿ ಹೋಗುವುದಕ್ಕೆ ಅವಕಾಶ ಇಲ್ಲ. ಕೋವ್ಯಾಕ್ಸಿನ್‌ಗೆ ಬೇಗ ಮಾನ್ಯತೆ ದೊರಕಿಸುವುದಕ್ಕಾಗಿ ಕೇಂದ್ರ ಸರ್ಕಾರದ ಕಡೆಯಿಂದ ಹೆಚ್ಚಿನ ಮುತುವರ್ಜಿ ಕಂಡುಬಂದಿಲ್ಲ. ದೇಶದ ಮುಂದೆ ಸವಾಲುಗಳು ಇನ್ನೂ ಹಲವಿವೆ. ವಿವಿಧ ರೂಪಾಂತರಗಳಿಗೆ ಲಸಿಕೆ ಪರಿಣಾಮಕಾರಿಯೇ ಎಂಬ ಅಧ್ಯಯನಗಳೂ ವ್ಯಾಪಕವಾಗಿ ನಡೆಯಬೇಕಿದೆ.ಈಗ ಹಾಕಲಾಗುತ್ತಿರುವ ಲಸಿಕೆಗಳು ಎಷ್ಟು ಕಾಲ ಪರಿಣಾಮಕಾರಿ ಎಂಬುದೂ ಸ್ಪಷ್ಟವಿಲ್ಲ. ಒಂದು ವೇಳೆ ನಿರ್ದಿಷ್ಟ ಅವಧಿಯ ನಂತರ ರೋಗನಿರೋಧಕ ಶಕ್ತಿ ಕುಗ್ಗುತ್ತದೆ ಎಂದಾದರೆ, ಮೂರನೇ ಡೋಸ್ ಬೇಕಾಗುತ್ತದೆ. ಈ ಬಗ್ಗೆಯೂ ಸ್ಪಷ್ಟತೆ ಇಲ್ಲ. ಹಾಗಾಗಿ, ಲಸಿಕೆಯ ನೂರು ಕೋಟಿ ಡೋಸ್‌ನ ಸಂಭ್ರಮದ ನಡುವೆಯೂ ಅತ್ಯಂತ ಎಚ್ಚರದಲ್ಲಿ ಸರ್ಕಾರ ಮತ್ತು ಜನರು ಇರಬೇಕು. ಈ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸುವುದನ್ನೇ ಮುಖ್ಯ ಧ್ಯೇಯವಾಗಿ ಇರಿಸಿಕೊಂಡು ಸರ್ಕಾರವು ಕೆಲಸ ಮಾಡಬೇಕು. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಅರ್ಧ ಹಾದಿಯನ್ನೂ ಕ್ರಮಿಸಿಲ್ಲ ಎಂಬುದು ಗಮನದಲ್ಲಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.