ADVERTISEMENT

ಸಂಪಾದಕೀಯ | ಸಂದೇಹಾಸ್ಪದ ನಡವಳಿಕೆ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪಾತಾಳಕ್ಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:31 IST
Last Updated 9 ಏಪ್ರಿಲ್ 2021, 19:31 IST
   

ಈ ಹಿಂದಿನ ಕೆಲವು ಚುನಾವಣೆಗಳಲ್ಲಿ ಆದಂತೆಯೇ ತಮಿಳುನಾಡು, ಪುದುಚೇರಿ, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಚುನಾವಣಾ ಆಯೋಗದ ನಡವಳಿಕೆ ಪ್ರಶ್ನಾರ್ಹವಾಗಿದೆ. ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಯ ವಿಶ್ವಾಸಾರ್ಹತೆಗೆ ಪೆಟ್ಟು ಬಿದ್ದಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಕೋಮುಧ್ರುವೀಕರಣವನ್ನೇ ಮುಖ್ಯ ಕಾರ್ಯಸೂಚಿ ಆಗಿಸಿಕೊಂಡದ್ದು ಹೌದು.

‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಪಠಿಸಿದ್ದಾರೆ. ಅವರ ನೇತೃತ್ವದ ಬಿಜೆಪಿಯು ಕೇರಳದಲ್ಲಿ ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದ ವಿಚಾರವನ್ನೇ ಇರಿಸಿಕೊಂಡು ಪ್ರಚಾರ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ‘ಜೈ ಶ್ರೀರಾಮ್‌’ ಘೋಷಣೆ ಚುನಾವಣಾ ಪ್ರಚಾರದ ಉದ್ದಕ್ಕೂ ಮೊಳಗಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ಈ ಯಾರಿಗೂ ಆಯೋಗವು ನೋಟಿಸ್‌ ಕೊಟ್ಟಿಲ್ಲ. ಆದರೆ, ‘ಮುಸ್ಲಿಮರ ಮತ ವಿವಿಧ ಪಕ್ಷಗಳಿಗೆ ಹಂಚಿ ಹೋಗಬಾರದು’ ಎಂದು ಹೇಳಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ನೋಟಿಸ್‌ ನೀಡಲಾಗಿದೆ. ವಿರೋಧ ಪಕ್ಷದ ಮುಖಂಡರೊಬ್ಬರಿಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಹಿಮಂತ್‌ ಬಿಸ್ವ ಶರ್ಮಾ ಅವರಿಗೆ ನೀಡಿದ್ದ ಶಿಕ್ಷೆಯಲ್ಲಿ ವಿನಾಯಿತಿ ಕೊಡಲಾಗಿದೆ. ಆದರೆ, ಅದೇ ರೀತಿ ಶಿಕ್ಷೆಗೆ ಒಳಗಾಗಿದ್ದ ಡಿಎಂಕೆಯ ಎ.ರಾಜಾ ಅವರಿಗೆ ವಿನಾಯಿತಿ ಸಿಕ್ಕಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರತೀ ಬಾರಿ ಯಾವುದಾದರೂ ಚುನಾವಣೆ ನಡೆದಾಗ ಮತಯಂತ್ರಗಳು ಚರಂಡಿಯಲ್ಲಿಯೋ ಅಥವಾ ಇನ್ನೆಲ್ಲೋ ಸಿಗುವುದು ಸಾಮಾನ್ಯವಾಗಿದೆ.

ADVERTISEMENT

ಈ ಬಾರಿ ಬಿಜೆಪಿ ಅಭ್ಯರ್ಥಿಯೊಬ್ಬರ ಹೆಂಡತಿಯ ಕಾರಿನಲ್ಲಿ ಸಾಗಿಸಲಾಯಿತು. ಇಂತಹ ಘಟನೆಗಳು ಮತಯಂತ್ರದ ಮೇಲೆ ಜನರು ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ. ಚುನಾವಣೆ ಅರ್ಥಹೀನ ಎನಿಸುತ್ತದೆ. ಆಯೋಗವು ನಗೆಪಾಟಲಿಗೆ ಈಡಾಗುತ್ತದೆ. ‘ಮರಾಠಾ ಅಭಿವೃದ್ಧಿ ನಿಗಮಕ್ಕೆ ಮಂಗಳವಾರವಷ್ಟೇ (ಏ. 6) ₹ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಮರಾಠಾ ಸಮುದಾಯದ ಜನರು ಗಣನೀಯ ಪ್ರಮಾಣದಲ್ಲಿರುವ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣಾ ಪ್ರಕ್ರಿಯೆಯ ನಡುವೆಯೇ ಯಡಿಯೂರಪ್ಪ ಹೀಗೆ ಹೇಳಿದ್ದಾರೆ. ಆದರೆ, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗಕ್ಕೆ ಇನ್ನೂ ಅನಿಸಿಲ್ಲ.

ಆಯೋಗವು ಆಡಳಿತ ಪಕ್ಷದತ್ತ ವಾಲಿದೆ ಎಂಬ ಆರೋಪಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲದಂತಹ ಘಟನೆಗಳು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿವೆ. ಚುನಾವಣೆ ಗೆದ್ದು ಅಧಿಕಾರಕ್ಕೆ ಏರುವುದು ಬಿಟ್ಟು ಬೇರೆ ಯಾವ ನೈತಿಕತೆಯೂ ಇಲ್ಲ ಎಂಬ ನೆಲೆಗೆ ರಾಜಕೀಯ ಪಕ್ಷಗಳು ಬಂದಿರುವ ಈ ಸಂದರ್ಭದಲ್ಲಿ ಆಯೋಗದ ಹೊಣೆಗಾರಿಕೆ ಇನ್ನೂ ಹೆಚ್ಚು. ಆದರೆ, ಆ ಹೊಣೆಗಾರಿಕೆಯ ಅರಿವು ಆಯೋಗಕ್ಕೆ ಇದೆಯೇ ಎಂಬ ಅನುಮಾನ ಜನರಲ್ಲಿ ಇದೆ. ಕೇರಳ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆ ವಿಚಾರದಲ್ಲಿ ಆಯೋಗವು ನಡೆದುಕೊಂಡ ರೀತಿ ಕೂಡ ಇದಕ್ಕೆ ಪುಷ್ಟಿ ನೀಡುತ್ತದೆ.

ದಿನಾಂಕ ಘೋಷಿಸಿದ ಬಳಿಕ ಕೇಂದ್ರದಿಂದ ಪತ್ರ ಬಂತು ಎಂಬ ಕಾರಣಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಆಯೋಗವು ಅಮಾನತಿನಲ್ಲಿ ಇರಿಸಿದ ಕ್ರಮವು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದೆ.ಜಗತ್ತಿನಲ್ಲಿ ಈಗ ಅಸ್ತಿತ್ವದಲ್ಲಿರುವ ಆಡಳಿತ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯುತ್ತಮ. ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕೆಂದರೆ ಚುನಾವಣೆಗಳು ನಿಷ್ಪಕ್ಷಪಾತ ವಾಗಿ ನಡೆಯಬೇಕು. ಚುನಾವಣೆಯು ನ್ಯಾಯಸಮ್ಮತವಾಗಿ ನಡೆಯದಿದ್ದರೆ, ಪ್ರಜಾಪ್ರಭುತ್ವವು ಆ ಮುಖವಾಡ ಹಾಕಿರುವ ನಿರಂಕುಶಾಧಿಕಾರವಾಗುತ್ತದೆ. ಹಾಗೆ ಆಗಬಾರದು ಎಂಬ ಕಾರಣಕ್ಕಾಗಿಯೇ ಚುನಾವಣಾ ಆಯೋಗ ಎಂಬ ಪ್ರತ್ಯೇಕ ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆಯನ್ನು ರೂಪಿಸಲಾಗಿದೆ.

ಈ ಸಂಸ್ಥೆಗೆ ಇರುವ ಅಧಿಕಾರ ಏನು ಮತ್ತು ಅದನ್ನು ಬಳಸಿಕೊಂಡು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ಹೇಗೆ ನಡೆಸಬಹುದು ಎಂಬುದನ್ನು ಈ ಹಿಂದೆ ಇದ್ದ ಕೆಲವು ಮುಖ್ಯ ಚುನಾವಣಾ ಆಯುಕ್ತರು ತೋರಿಸಿಕೊಟ್ಟಿದ್ದಾರೆ. ಈಗಿನ ಚುನಾವಣಾ ಆಯೋಗವು ಇವನ್ನೆಲ್ಲ ಮರೆಯಬಾರದು. ಆಯೋಗವು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು; ಮಾತ್ರವಲ್ಲ, ಅದು ಪ್ರತೀ ಹಂತದಲ್ಲಿ ಜನರಿಗೆ ಮನವರಿಕೆಯೂ ಆಗಬೇಕು. ಆದರೆ, ಹತ್ತು ಹಲವು ಅನುಮಾನಗಳಿಗೆ ಗುರಿಯಾಗಿರುವ ಈಗಿನ ಆಯೋಗದಿಂದ ಇದನ್ನು ನಿರೀಕ್ಷಿಸುವುದು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.