ADVERTISEMENT

ಸಂಪಾದಕೀಯ | ಆತಂಕಕಾರಿ ಗುಂಪುಹಿಂಸೆ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 20:00 IST
Last Updated 20 ಏಪ್ರಿಲ್ 2020, 20:00 IST
ಸಂಪಾದಕೀಯ
ಸಂಪಾದಕೀಯ   

ಕೊರೊನಾ ವೈರಾಣು ಸೃಷ್ಟಿಸಿರುವ ಆತಂಕದ ಸಂದರ್ಭವು ಮನುಷ್ಯನನ್ನು ಹೆಚ್ಚು ವಿನೀತನನ್ನಾಗಿಸುತ್ತದೆ ಹಾಗೂ ಸಮಾಜವನ್ನು ಮಾನವೀಯಗೊಳಿಸುತ್ತದೆ ಎನ್ನುವ ನಿರೀಕ್ಷೆಗೆ ಪೆಟ್ಟು ಬಿದ್ದಿದೆ. ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಸಾಧುಗಳು ಹಾಗೂ ಅವರ ಕಾರಿನ ಚಾಲಕನನ್ನು ನೂರಾರು ಜನ ದೊಣ್ಣೆಗಳಿಂದ ಹೊಡೆದು ಕೊಂದಿರುವ ಅಮಾನವೀಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಗ್ರಾಮಸ್ಥರು ಸಾಧುಗಳನ್ನು ಎಳೆದಾಡಿ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆಯುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿವೆ.

ದಾಳಿಗೊಳಗಾದವರನ್ನು ರಕ್ಷಿಸಲು ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆದಿದ್ದು, ಘಟನೆಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಸಾವು- ಬದುಕಿನ ನಡುವೆ ಒದ್ದಾಡುತ್ತಿದ್ದ ಮೂವರನ್ನು ಪೊಲೀಸರು ತಮ್ಮ ವಾಹನಕ್ಕೆ ಹತ್ತಿಸಿಕೊಂಡ ನಂತರವೂ ಹಲ್ಲೆ ಮುಂದುವರಿದ ಬಗೆಯು ಕ್ರೌರ್ಯದ ತೀವ್ರತೆಯನ್ನು ಸೂಚಿಸುವಂತಿದೆ. ಆಸ್ಪತ್ರೆಗೆ ಸೇರುವ ದಾರಿಯಲ್ಲೇ ಈ ನತದೃಷ್ಟರು ಕೊನೆಯುಸಿರೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ‘ಈ ಘೋರ, ನಾಚಿಕೆಗೇಡಿನ ಅಪರಾಧ ಕೃತ್ಯದಲ್ಲಿ ಭಾಗಿಯಾದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಈ ಹಿಂದೆ ಕೂಡ ಮಕ್ಕಳ ಕಳ್ಳರೆಂದು ಭಾವಿಸಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಗುಂಪು ದಾಳಿಗಳಿಗೆ ಅಮಾಯಕರು ಬಲಿಯಾಗಿದ್ದಾರೆ. ಆದರೆ, ಪ್ರಸಕ್ತ ದಾಳಿ ನಡೆದಿರುವ ಸಂದರ್ಭ ಭಿನ್ನವಾದುದು. ಕುಟುಂಬದ ಸದಸ್ಯರೆಲ್ಲ ನಿರ್ಬಂಧಕ್ಕೊಳಗಾಗಿ ತಂತಮ್ಮ ಮನೆಗಳಲ್ಲಿರುವಾಗ ಮಕ್ಕಳ ಕಳ್ಳತನಕ್ಕೆ ಅವಕಾಶವಾದರೂ ಎಲ್ಲಿ? ವೈಯಕ್ತಿಕ ಸುರಕ್ಷೆಗೆ ಆತಂಕ ಎದುರಾಗಿರುವ ಸಂದರ್ಭದಲ್ಲೂ ಜನ ಗುಂಪುಗೂಡಿ ಹಿಂಸಾಚಾರದಲ್ಲಿ ತೊಡಗಿರುವುದು ಸಮಾಜ ಚಲಿಸುತ್ತಿರುವ ದಿಕ್ಕನ್ನು ಸೂಚಿಸುವಂತಿದೆ.

ADVERTISEMENT

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿರುವ ಹಿಂಸಾಚಾರದ ಘಟನೆಯೂ ಸಮೂಹಸನ್ನಿಯ ಮತ್ತೊಂದು ರೂಪವೇ ಆಗಿದೆ. ‘ಸೀಲ್‌ಡೌನ್‌’ ಆಗಿದ್ದ ಪ್ರದೇಶದಲ್ಲಿ ಕೊರೊನಾ ಸೋಂಕು ಶಂಕಿತರನ್ನು ಕ್ವಾರಂಟೈನ್‌ ಮಾಡುವ ವೇಳೆ ಕಿಡಿಗೇಡಿಗಳ ಗುಂಪು ಪುಂಡಾಟ ನಡೆಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದ್ದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಹಾಗೂ ಪೆಂಡಾಲ್‌ಗಳನ್ನು ನಾಶ ಮಾಡಲಾಗಿದೆ. ಸಾರ್ವಜನಿಕರ ಹಿತ ರಕ್ಷಿಸಲು ದುಡಿಯುತ್ತಿರುವವರ ಮೇಲೆಯೇ ದೌರ್ಜನ್ಯ ನಡೆಯುತ್ತಿರುವುದು ಅಕ್ಷಮ್ಯ ಅಪರಾಧ. ಆದರೆ, ಇಂಥ ಪುಂಡಾಟಿಕೆಗಳು ನಡೆದಾಗ ಅವುಗಳನ್ನು ಕಾನೂನಿನ ದೃಷ್ಟಿಯಿಂದ ನೋಡಬೇಕೇ ಹೊರತು ನಿರ್ದಿಷ್ಟ ಸಮುದಾಯ ಅಥವಾ ಧರ್ಮದ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಸರಿಯಲ್ಲ.

ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೆಂದು, ಅಪರಾಧಿಗಳಿಗೆ ದಂಡನೆ ವಿಧಿಸುವ ಕೆಲಸವನ್ನು ಯಾರಾದರೂ ವ್ಯಕ್ತಿಗತವಾಗಿ ಕೈಗೆತ್ತಿಕೊಳ್ಳಲು ಪ್ರಯತ್ನಿಸುವುದು ಅಪಾಯಕಾರಿ ಹಾಗೂ ಅಂಥ ನಡವಳಿಕೆಯೂ ಕಾನೂನಿನ ಉಲ್ಲಂಘನೆಯೇ. ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುವ ಕೂಗುಮಾರಿಗಳ ಬಾಯಿ ಮುಚ್ಚಿಸುವ ಕೆಲಸವನ್ನೂ ಸರ್ಕಾರ ಮಾಡಬೇಕಾಗಿದೆ. ಕೋವಿಡ್‌– 19ರ ವಿರುದ್ಧದ ನಿರ್ಣಾಯಕ ಹೋರಾಟ ಸರ್ಕಾರಕ್ಕಷ್ಟೇ ಸೇರಿದ್ದಲ್ಲ. ಸಮಾಜದ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗೂ ಸೇರಿದ್ದು. ಸಾಮೂಹಿಕ ಹೋರಾಟದ ಸಂದರ್ಭದಲ್ಲಿ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕಾದುದು ನಾಗರಿಕರ ಕರ್ತವ್ಯ. ಹೊಂದಾಣಿಕೆಯ ಮನೋಭಾವ ಈ ಹೊತ್ತಿನ ಅಗತ್ಯ. ವೈಯಕ್ತಿಕ ಸುರಕ್ಷೆಗೆ ಆತಂಕವಿರುವ ಸಂದರ್ಭದಲ್ಲೂ ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುತ್ತಿರುವ ಪೊಲೀಸ್‌ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಮಾಜ ಕೃತಜ್ಞವಾಗಿರಬೇಕು. ಅಂತಹವರ ಕರ್ತವ್ಯ ನಿರ್ವಹಣೆಗೆ ಉದ್ದೇಶಪೂರ್ವಕವಾಗಿ ಅಡಚಣೆಯುಂಟು ಮಾಡುವವರು ಯಾರೇ ಆದರೂ ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕಾನೂನು ಪಾಲನೆ ವಿಷಯದಲ್ಲಿ ಯಾರಿಗೂ
ರಿಯಾಯಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.