ADVERTISEMENT

ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತ: ಆತ್ಮಾವಲೋಕನಕ್ಕಿದು ಸಕಾಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 3:51 IST
Last Updated 27 ಜನವರಿ 2020, 3:51 IST
   

ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬುದು ನಮ್ಮ ಹೆಮ್ಮೆ. ಆದರೆ, ದಿ ಎಕಾನಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ ಪ್ರಕಟಿಸಿದ 2019ರ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಹಿಂದಿನ ವರ್ಷಕ್ಕೆ ಹೋಲಿಸಿದರೆ 10 ಸ್ಥಾನ ಕುಸಿದು 51ಕ್ಕೆ ಇಳಿದಿದೆ. 10 ಅಂಕಗಳಲ್ಲಿ ಭಾರತವು 6.90 ಅಂಕ ಪಡೆದಿದೆ. ಹಿಂದಿನ ವರ್ಷ 7.23 ಅಂಕ ದೊರೆತಿತ್ತು. ‘ದೇಶದಲ್ಲಿ ನಾಗರಿಕ ಸ್ವಾತಂತ್ರ್ಯದ ಸವಕಳಿಯೇ ಪ್ರಜಾಪ್ರಭುತ್ವವು ಹಿನ್ನಡೆ ಕಾಣಲು ಮುಖ್ಯ ಕಾರಣ’ ಎಂದು ವರದಿಯಲ್ಲಿ ಹೇಳಲಾಗಿದೆ. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ, ನಾಗರಿಕ ಸ್ವಾತಂತ್ರ್ಯ, ಸರ್ಕಾರದ ಕಾರ್ಯವೈಖರಿ, ರಾಜಕೀಯ ಭಾಗೀದಾರಿಕೆ ಮತ್ತು ರಾಜಕೀಯ ಸಂಸ್ಕೃತಿಯ ಸಮೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರವನ್ನು ಭಾರತ ಸರ್ಕಾರವು ಹಿಂದಕ್ಕೆ ಪಡೆದಿದೆ.

ಅದಕ್ಕೂ ಮುಂಚೆ, ಭದ್ರತಾ ಪಡೆಯ ಯೋಧರನ್ನು ಭಾರಿ ಸಂಖ್ಯೆಯಲ್ಲಿ ಜಮ್ಮು–ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಭಾರತದ ಪರವಾಗಿ ಇರುವವರೂ ಸೇರಿ, ಇಲ್ಲಿನ ಹಲವು ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂಟರ್‌ನೆಟ್‌ ಲಭ್ಯತೆಯನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಅಸ್ಸಾಂನಲ್ಲಿ ಜಾರಿ ಮಾಡಲಾಗಿದ್ದು, 19 ಲಕ್ಷ ಜನರು ಪೌರತ್ವ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ. ಹೊಸದಾಗಿ ಬಂದಿರುವ ಪೌರತ್ವ ಕಾಯ್ದೆಯು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋಮು ಪ್ರಕ್ಷುಬ್ಧ ಸ್ಥಿತಿ ಸೃಷ್ಟಿಸಿದೆ. ದೊಡ್ಡ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಭಾರತದ ಪ್ರಸ್ತುತ ಸ್ಥಿತಿಯೂ ಹೌದು.

ಜಗತ್ತಿನ 165 ದೇಶಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿ ಪ್ರಕಟಿಸಲಾಗಿದೆ. ಪಡೆದ ಅಂಕಗಳ ಆಧಾರದಲ್ಲಿ ದೇಶಗಳನ್ನು ನಾಲ್ಕು ವರ್ಗಗಳಾಗಿ ಗುರುತಿಸಲಾಗಿದೆ. ಪೂರ್ಣ ಪ್ರಜಾಪ್ರಭುತ್ವ, ಲೋಪಗಳಿಂದ ಕೂಡಿದ ಪ್ರಜಾಪ್ರಭುತ್ವ, ಹೈಬ್ರಿಡ್‌ ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ ಎಂಬುದು ಈ ವರ್ಗಗಳು.ಭಾರತವು ‘ಲೋಪಗಳಿಂದ ಕೂಡಿದ ಪ್ರಜಾಪ್ರಭುತ್ವ’ ವರ್ಗದಲ್ಲಿ ಇದೆ. ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯುವ, ನಾಗರಿಕ ಹಕ್ಕುಗಳಿಗೆ ಗೌರವ ಇದ್ದರೂ ದುರ್ಬಲ ಆಡಳಿತ, ರಾಜಕೀಯ ಸಂಸ್ಕೃತಿಯು ಪ್ರಬುದ್ಧಗೊಂಡಿಲ್ಲದ ಮತ್ತು ರಾಜಕೀಯ ಭಾಗೀದಾರಿಕೆ ಕಡಿಮೆ ಪ್ರಮಾಣದಲ್ಲಿರುವ ದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ.

ADVERTISEMENT

2014ರ ಬಳಿಕ ಭಾರತದ ಶ್ರೇಯಾಂಕ ಕುಸಿಯುತ್ತಲೇ ಸಾಗಿದೆ ಎಂಬುದು ಕಳವಳದ ವಿಚಾರ. ದಿ ಎಕಾನಮಿಸ್ಟ್‌ ಪತ್ರಿಕೆ ತನ್ನ ಇತ್ತೀಚಿನ ಸಂಚಿಕೆಯಲ್ಲಿ, ‘ನರೇಂದ್ರ ಮೋದಿ ಮತ್ತು ಅವರ ಪಕ್ಷವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳುತ್ತಿದೆ’ ಎಂದಿದೆ. ಪ್ರತಿಕೂಲವಾಗಿ ಬರುವ ಸಮೀಕ್ಷೆ ಮತ್ತು ವರದಿಗಳನ್ನು ತಳ್ಳಿಹಾಕುವ, ಅದರ ಹಿಂದೆ ಯಾವುದೋ ಹುನ್ನಾರ ಇದೆ ಎಂದು ಹೇಳುವ ಪ್ರವೃತ್ತಿ ನಮ್ಮ ದೇಶದಲ್ಲಿ ಈಗ ಕಾಣಿಸುತ್ತಿದೆ. ಅನುಕೂಲಕರ ವರದಿಗಳನ್ನು ಮಾತ್ರ ಒಪ್ಪಿಕೊಂಡು, ಪ್ರತಿಕೂಲವಾಗಿರುವುದನ್ನು ತಿರಸ್ಕರಿಸುವುದು ಸರಿಯಾದ ಕ್ರಮ ಅಲ್ಲ. ಅನುಕೂಲಕರ ವರದಿಗಳಿಗಿಂತ ಪ್ರತಿಕೂಲ ವರದಿಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು. ಅದು ನಮ್ಮ ಲೋಪಗಳನ್ನು ತೋರಿಸಿದ್ದರೆ, ಆ ಬಗ್ಗೆ ಪ್ರಾಮಾಣಿಕವಾದ ಆತ್ಮಾವಲೋಕನ ಅಗತ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿವೆ. ಆದರೆ, ವರ್ಷಗಳು ಕಳೆದಂತೆ ಪ್ರಜಾಪ್ರಭುತ್ವವು ಬಲಗೊಳ್ಳಬೇಕೇ ವಿನಾ ಸೊರಗುತ್ತಾ ಹೋಗಬಾರದು. ಪ್ರಜಾಪ್ರಭುತ್ವವು ಪ್ರಬುದ್ಧವಾಗುತ್ತಾ ಸಾಗಬೇಕು. ಇಲ್ಲದಿದ್ದರೆ ಆ ವ್ಯವಸ್ಥೆಯ ಅಸ್ತಿತ್ವಕ್ಕೇ ಕುತ್ತಾಗಬಹುದು.

ಮೋದಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಪ್ರಜಾಪ್ರಭುತ್ವದ ಮಹತ್ವ ಕಡಿಮೆಯಾಗುತ್ತಿದೆ ಎಂಬ ಟೀಕೆಗಳು ಹಲವು ಸಾರಿ ಕೇಳಿಬಂದಿವೆ. 2018ರ ಜನವರಿಯಲ್ಲಿ, ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಮಾಧ್ಯಮಗೋಷ್ಠಿ ನಡೆಸಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದರು. ಇದು ಆಗ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದರೂ ಪ್ರಜಾತಂತ್ರವನ್ನು ಬಲಪಡಿಸಬೇಕಾದ ಅಗತ್ಯದ ಬಗ್ಗೆ ಹೆಚ್ಚಿನ ಚರ್ಚೆ ಆಗಲಿಲ್ಲ. ಸುಪ್ರೀಂ ಕೋರ್ಟ್‌ ಇತ್ತೀಚಿನ ದಿನಗಳಲ್ಲಿ ಹೇಳಿದ ಮಾತುಗಳನ್ನು ಕೇಂದ್ರ ಸರ್ಕಾರವು ಗಮನಿಸಬೇಕು. ಅಂತರ್ಜಾಲದ ಬಳಕೆಯ ಹಕ್ಕು ಮೂಲಭೂತ ಹಕ್ಕಿನ ಭಾಗವೇ ಆಗಿದೆ, ಭಾರತೀಯ ದಂಡ ಸಂಹಿತೆಯ 144ನೇ ಸೆಕ್ಷನ್‌ ಅಡಿಯಲ್ಲಿ, ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿಯೇ ಪ್ರತಿಬಂಧಕಾಜ್ಞೆ ಹೊರಡಿಸುವುದು ಸರಿಯಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ, ದೇಶದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಸರ್ಕಾರವು ಕಣ್ಣು, ಕಿವಿ ತೆರೆದು ಇರಬೇಕಾದ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.