ADVERTISEMENT

ಸಂಪಾದಕೀಯ | ದತ್ತಾಂಶ ಸುರಕ್ಷತಾ ಕಾಯ್ದೆ; ಮಾಹಿತಿಯ ಹಕ್ಕಿಗೆ ವಿಘ್ನ ಆಗದಿರಲಿ

ಕಾಯ್ದೆಯ ಯಾವುದೇ ಅಂಶವು ಖಾಸಗಿತನದ ಹಕ್ಕಿಗೆ ಧಕ್ಕೆ ತರದಂತೆ ಖಾತರಿಪಡಿಸಬೇಕು

ಸಂಪಾದಕೀಯ
Published 30 ಏಪ್ರಿಲ್ 2025, 0:27 IST
Last Updated 30 ಏಪ್ರಿಲ್ 2025, 0:27 IST
   

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಅಂಶವೊಂದರ ಮೇಲೆ ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ– 2023’ ಬೀರಬಹುದಾದ ನಕಾರಾತ್ಮಕ ಪರಿಣಾಮಗಳ ಬಗ್ಗೆ ಗಂಭೀರ ಸ್ವರೂಪದ ಕಳವಳಗಳು ವ್ಯಕ್ತವಾಗಿವೆ. ದತ್ತಾಂಶ ಸುರಕ್ಷತಾ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ 44(3), ಮಾಹಿತಿ ಹಕ್ಕು ಕಾನೂನಿನ ಸೆಕ್ಷನ್ 8(1)(ಜೆ)ಯಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದೆ. ಅಂದರೆ, ಯಾವುದೇ ‘ವೈಯಕ್ತಿಕ ಮಾಹಿತಿ’ಯನ್ನು ಬಹಿರಂಗಪಡಿಸಬೇಕಿಲ್ಲ ಎಂಬ ಬದಲಾವಣೆ ತರುವ ಉದ್ದೇಶ ಅದರಲ್ಲಿದೆ. ಇದರ ಅರ್ಥ ಏನೆಂದರೆ, ‘ವೈಯಕ್ತಿಕ ಮಾಹಿತಿ’ಯನ್ನೂ ಒಳಗೊಂಡ ಯಾವುದೇ ಸಾರ್ವಜನಿಕ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ. ಮಾಹಿತಿ ಹಕ್ಕು ಕಾನೂನಿನ ಸೆಕ್ಷನ್ 8(1)(ಜೆ) ಪ್ರಕಾರ, ‘ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ವಿವರಗಳು’ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ ಎಂದಾದರೆ, ಖಾಸಗಿತನದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡುತ್ತವೆ ಎಂದಾದರೆ, ಸರ್ಕಾರಿ ಸಂಸ್ಥೆಗಳು ಅಂತಹ ಮಾಹಿತಿಯನ್ನು ಬಹಿರಂಗಪಡಿಸದೆ ಇರಬಹುದು. ಆದರೆ, ಅಂತಹ ಮಾಹಿತಿಯನ್ನು ಬಹಿರಂಗಪಡಿಸುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ಮೇಲ್ಮನವಿ ಪ್ರಾಧಿಕಾರವು ಹೇಳಿದರೆ, ಆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಸೆಕ್ಷನ್‌ 8(1)(ಜೆ)ಗೆ ಈಗ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಯಾವುದೇ ವಿನಾಯಿತಿಗಳು ಇಲ್ಲದೆ ಮಾಹಿತಿಯನ್ನು ‘ವೈಯಕ್ತಿಕ’ ಎಂದು ವರ್ಗೀಕರಿಸಿ, ಆ ಮಾಹಿತಿ ಬಹಿರಂಗಪಡಿಸುವುದನ್ನು ತಡೆಹಿಡಿಯಬಹುದು.

ಖಾಸಗಿತನದ ಹಕ್ಕು ಮತ್ತು ಮಾಹಿತಿ ಹಕ್ಕು ದೇಶದಲ್ಲಿ ಮೂಲಭೂತ ಹಕ್ಕುಗಳ ಸಾಲಿಗೆ ಸೇರಿವೆ. ಖಾಸಗಿತನವು ಮೂಲಭೂತ ಹಕ್ಕುಗಳ ಸಾಲಿಗೆ ಸೇರಿದೆ ಎಂಬುದನ್ನು ಸುಪ್ರೀಂ ಕೋರ್ಟ್‌, 2017ರಲ್ಲಿ ಕೆ.ಎಸ್. ಪುಟ್ಟಸ್ವಾಮಿ ಪ್ರಕರಣದಲ್ಲಿ ಹೇಳಿತು. ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಮಾಹಿತಿ ಹಕ್ಕನ್ನು ಗುರುತಿಸಲಾಗುತ್ತಿದೆ. ಈ ಎರಡೂ ಹಕ್ಕುಗಳು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಅಗತ್ಯವಾಗಿ ಇರಬೇಕಾದವು. ಈ ಎರಡೂ ಹಕ್ಕುಗಳು ಪರಸ್ಪರ ವಿರುದ್ಧವಾದವು ಅಲ್ಲ, ಅವುಗಳನ್ನು ಒಂದು ಇನ್ನೊಂದಕ್ಕೆ ವಿರುದ್ಧ ಎಂದು ಚಿತ್ರಿಸಬೇಕಾಗಿಯೂ ಇಲ್ಲ. ಆದರೆ ದತ್ತಾಂಶ ಸುರಕ್ಷತಾ ಕಾಯ್ದೆಯ ಸೆಕ್ಷನ್‌ 44(3) ಇದೇ ಕೆಲಸ ಮಾಡಲು ಯತ್ನಿಸುತ್ತಿದೆ. ‘ವೈಯಕ್ತಿಕ’ ಎಂಬ ಪದವನ್ನು ತಪ್ಪಾಗಿ ವ್ಯಾಖ್ಯಾನಿಸುವ, ಸಾರ್ವಜನಿಕ ಹಿತಾಸಕ್ತಿ ಇರುವ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ ಬಹಿರಂಗಪಡಿಸುವುದಕ್ಕೆ ಅಡ್ಡಿ ಉಂಟುಮಾಡಲು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಖಾಸಗಿತನದ ಹಕ್ಕು ಮತ್ತು ಪಾರದರ್ಶಕತೆಯ ನಡುವೆ ಸೌಹಾರ್ದದ ಸಂಬಂಧ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.

ದತ್ತಾಂಶ ಸುರಕ್ಷತಾ ಕಾಯ್ದೆ ಕೂಡ ನಾಗರಿಕರ ಖಾಸಗಿತನವನ್ನು ಉಲ್ಲಂಘಿಸುತ್ತದೆ. ಈ ಕಾಯ್ದೆಯ ಸೆಕ್ಷನ್ 17(2)(ಎ) ಪ್ರಕಾರ, ಸರ್ಕಾರದ ಏಜೆನ್ಸಿಗಳಿಗೆ ಕಾಯ್ದೆಯಿಂದ ವಿನಾಯಿತಿ ಇರುತ್ತದೆ. ಆ ಏಜೆನ್ಸಿಗಳು ನಾಗರಿಕರ ವೈಯಕ್ತಿಕ ದತ್ತಾಂಶವನ್ನು ಪಡೆಯಲು ಅವಕಾಶ ಇರುತ್ತದೆ. ಇದು ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ, ನಾಗರಿಕರ ವೈಯಕ್ತಿಕ ದತ್ತಾಂಶದ ರಕ್ಷಣೆಯ ಹೊಣೆಯಿಂದ ತಪ್ಪಿಸಿಕೊಳ್ಳಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಸರ್ಕಾರದ ಯಾವುದೇ ಪ್ರಾಧಿಕಾರವು ದತ್ತಾಂಶವನ್ನು ಬಳಕೆ ಮಾಡಿಕೊಂಡ ನಂತರದಲ್ಲಿ ಅದನ್ನು ಅಳಿಸಿಹಾಕುವ ಹೊಣೆ ಹೊರಬೇಕಿಲ್ಲ ಎಂದೂ ಕಾಯ್ದೆಯು ಹೇಳುತ್ತದೆ. ಇದರಿಂದಾಗಿ ಸರ್ಕಾರದ ಏಜೆನ್ಸಿಗಳಿಗೆ ವೈಯಕ್ತಿಕ ದತ್ತಾಂಶಗಳನ್ನು ಅನಿರ್ದಿಷ್ಟ ಅವಧಿಗೆ ಇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ವ್ಯಕ್ತಿಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆರ್‌ಟಿಐ ಕಾಯ್ದೆಯನ್ನು ಸರ್ಕಾರವು ಹಲವು ಕ್ರಮಗಳ ಮೂಲಕ ನಿಧಾನವಾಗಿ ದುರ್ಬಲಗೊಳಿಸಿದೆ. ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರಲು ಹೇಳುವ ದತ್ತಾಂಶ ಸುರಕ್ಷತಾ ಕಾಯ್ದೆಯಲ್ಲಿನ ಅಂಶವನ್ನು ಸರ್ಕಾರವು ಹಿಂಪಡೆಯಬೇಕು. ಅಲ್ಲದೆ, ದತ್ತಾಂಶ ಸುರಕ್ಷತಾ ಕಾಯ್ದೆಯ ಯಾವುದೇ ಅಂಶವು ಖಾಸಗಿತನದ ಹಕ್ಕಿಗೆ ಧಕ್ಕೆ ತರದಂತೆ ಖಾತರಿಪಡಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.