ADVERTISEMENT

ಸುಲಲಿತ ಉದ್ದಿಮೆ ವಹಿವಾಟು ರಾಜ್ಯದ ಅಭಿವೃದ್ಧಿಗೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 19:30 IST
Last Updated 9 ಸೆಪ್ಟೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯು ಸಿದ್ಧಪಡಿಸಿರುವ, ಸುಲಲಿತ ಉದ್ದಿಮೆ ವಹಿವಾಟಿಗೆ ಸಂಬಂಧಿಸಿದ 2019ರ ಶ್ರೇಯಾಂಕ ಪಟ್ಟಿ ಈಚೆಗೆ ಬಿಡುಗಡೆ ಆಗಿದೆ. ಕರ್ನಾಟಕವು ಈ ಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ. ಇದರ ಹಿಂದಿನ ವರ್ಷ ರಾಜ್ಯವು ಎಂಟನೆಯ ಸ್ಥಾನದಲ್ಲಿ ಇತ್ತು. ಕೋವಿಡ್‌–19 ಹಾಗೂ ಲಾಕ್‌ಡೌನ್‌ನ ಪರಿಣಾಮವಾಗಿ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ಏಟು ಬಿದ್ದಿರುವ ಈ ಹೊತ್ತಿನಲ್ಲಿ, ಹೊಸದಾಗಿ ಹೂಡಿಕೆ ಆಗಿ ಔದ್ಯಮಿಕ ಚಟುವಟಿಕೆಗಳು ಹೊಸ ಹುರುಪಿನೊಂದಿಗೆ ಶುರುವಾದರೆ ಚೆನ್ನ. ಈಗ ಬಿಡುಗಡೆ ಆಗಿರುವ ಈ ಶ್ರೇಯಾಂಕ ಪಟ್ಟಿಯು ಕರ್ನಾಟಕದ ಪಾಲಿಗೆ ಶುಭಕರವಾಗಿ ಇಲ್ಲ. ಸುಲಲಿತ ವಹಿವಾಟಿಗೆ ಸಂಬಂಧಿಸಿದಂತೆ ಒಂದೇ ವರ್ಷದಲ್ಲಿ ಒಂಬತ್ತು ಸ್ಥಾನ ಕುಸಿದಿರುವ ರಾಜ್ಯವೊಂದರಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ತುಸು ಹಿಂದೇಟು ಹಾಕಿದರೆ, ಅದರ ನೇರ ಪರಿಣಾಮವು ರಾಜ್ಯದ ಜನರ ಬದುಕಿನ ಮೇಲೆ ಆಗುತ್ತದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಇತರ ಕೆಲವು ಗಮನಾರ್ಹ ಅಂಶಗಳೂ ಇವೆ. ಅಭಿವೃದ್ಧಿಯಲ್ಲಿ ಬಹಳ ಮುಂದೆ ಇದೆ ಎಂಬ ಹೆಗ್ಗಳಿಕೆಯನ್ನುಒಂದು ವಲಯದಿಂದ ಪಡೆದುಕೊಂಡಿದ್ದ, ‘ಗುಜರಾತ್ ಮಾದರಿ’ ಎನ್ನುವ ಸಂಕಥನದ ಸೃಷ್ಟಿಗೆ ಕಾರಣವಾಗಿದ್ದ ಗುಜರಾತ್ ರಾಜ್ಯವು 10ನೇ ಸ್ಥಾನಕ್ಕೆ ಕುಸಿದಿದೆ. ಹಿಂದಿನ ವರ್ಷದಲ್ಲಿ ಈ ರಾಜ್ಯವು ಐದನೆಯ ಸ್ಥಾನದಲ್ಲಿ ಇತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಅಷ್ಟೇನೂ ಒಳ್ಳೆಯ ಸಾಧನೆ ತೋರುತ್ತಿಲ್ಲದ ಉತ್ತರ ಪ್ರದೇಶವು ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿ ಇದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ವಹಿವಾಟು ಸುಲಲಿತ ಆಗುವುದರ ನಡುವೆ ಸಂಬಂಧ ಇದೆ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಹಾಗಾಗಿ, ಈ ಪಟ್ಟಿಯ ಕುರಿತು ಪ್ರಶ್ನೆಗಳು ಕೂಡ ಮೂಡಬಹುದು.

ಅದೇನೇ ಇದ್ದರೂ, ಕರ್ನಾಟಕವು ಈ ಪಟ್ಟಿಯಲ್ಲಿ ತೀರಾ ಕೆಳಗಿನ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿರುವುದು ಒಳ್ಳೆಯ ಸಂಗತಿಯಂತೂ ಅಲ್ಲ. ಈ ಶ್ರೇಯಾಂಕ ಪ್ರಕಟವಾದ ನಂತರ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಹೀಗಾಗುವುದಕ್ಕೆ ಈ ಹಿಂದಿನ ಸರ್ಕಾರಗಳು ಕಾರಣ’ ಎಂದಿರುವುದಾಗಿ ವರದಿಯಾಗಿದೆ. ರಾಜ್ಯದ ಶ್ರೇಯಾಂಕ ಕಡಿಮೆ ಆಗಿರುವುದಕ್ಕೆ ಕಾರಣ ಸರ್ಕಾರದ ದೌರ್ಬಲ್ಯಗಳು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ದೂರಿದ್ದಾರೆ. ‘ಕೈಗಾರಿಕೆ ಆರಂಭಿಸಲು ಬಯಸುವವರಿಗೆ ಸೂಕ್ತ ಸಮಯದಲ್ಲಿ ಜಮೀನು ಹಾಗೂ ಕೆಲವು ಅನುಮತಿಗಳು ಸಿಗುತ್ತಿಲ್ಲ. ಈ ಕಾರಣದಿಂದ ಇಂತಹ ದುಃಸ್ಥಿತಿ ಬಂದಿದೆ’ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಹಿಂದೆ ಆಡಳಿತ ನಡೆಸಿದವರನ್ನು ದೂರುತ್ತ ಕೂರುವುದರಿಂದ ತಮ್ಮ ಮೇಲಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು, ಅಷ್ಟೇ. ಅದರಿಂದ ಕಣ್ಣೆದುರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೆ ಯಾರೆಲ್ಲ ಅಧಿಕಾರ ನಡೆಸಿದ್ದರು, ಅವರು ಯಾವೆಲ್ಲ ತಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಕೆದಕುವುದಕ್ಕಿಂತ, ಈಗ ಕರ್ನಾಟಕದಲ್ಲಿ ಉದ್ದಿಮೆ ವಹಿವಾಟು ನಡೆಸುವುದನ್ನು ಸುಲಲಿತ ಆಗಿಸುವುದು ಹೇಗೆ, ಅದಕ್ಕೆ ಬೇಕಿರುವ ಕ್ರಿಯಾಯೋಜನೆಗಳು ಏನು ಎಂಬುದನ್ನು ಗುರುತಿಸುವುದು ಒಳಿತು. ಕಾಸಿಯಾ ಅಧ್ಯಕ್ಷರು ಹೇಳಿರುವ ಮಾತುಗಳಲ್ಲಿ ಸರ್ಕಾರಕ್ಕೆ ತಾನು ಮುಂದೆ ಇರಿಸಬೇಕಿರುವ ಹೆಜ್ಜೆ ಏನು ಎಂಬುದರ ಬಗ್ಗೆ ಒಂದಿಷ್ಟು ಹೊಳಹುಗಳು ಸಿಗಬಹುದು. ಉದ್ಯಮ ವಹಿವಾಟು ಸುಲಲಿತವಾಗಿ ಆಗುವಂತೆ ಮಾಡುವುದು ಈ ಹೊತ್ತಿನ ಅನಿವಾರ್ಯಗಳಲ್ಲಿ ಒಂದು. ಉದ್ಯಮ ವಲಯವು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಕ್ಕೆ ಹಿಂದೇಟು ಹಾಕಿದರೆ, ಅದರ ಪರಿಣಾಮವಾಗಿ ರಾಜ್ಯದ ಆರ್ಥಿಕ ಚೈತನ್ಯ ಇನ್ನಷ್ಟು ಕುಗ್ಗಬಹುದು. ವೇತನ ಕಡಿತ, ಉದ್ಯೋಗ ನಷ್ಟದಂತಹ ತೊಂದರೆಗಳನ್ನು ಜನ ಈಗಾಗಲೇ ಅನುಭವಿಸುತ್ತಿದ್ದಾರೆ. ಉದ್ಯಮಕ್ಕೆ ಪೂರಕವಾದ ವಾತಾವರಣ ಇಲ್ಲಿ ನೆಲೆಯಾಗದಿದ್ದರೆ, ಹೊಸ ಉದ್ಯೋಗ ಸೃಷ್ಟಿ ಹಿಂದೆ ಬೀಳಬಹುದು. ಅದರ ದುಷ್ಪರಿಣಾಮ ಯುವ ಸಮೂಹದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎನ್ನುವುದನ್ನು ಮರೆಯಬಾರದು. ದುಡಿಯಲು ಬಯಸುವ ಕೈಗಳಿಗೆ ದುಡಿಮೆ ಸಿಗದಂತಹ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕಿರುವ ಹೊಣೆ ಆಳುವವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT