ADVERTISEMENT

ಸಂಪಾದಕೀಯ | ಹೆಚ್ಚಬಹುದು ಎನ್‌ಪಿಎ ಸಮಸ್ಯೆ; ಬೇಕಿದೆ ಭಗೀರಥ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 20:45 IST
Last Updated 26 ಜುಲೈ 2020, 20:45 IST
ಸಂಪಾದಕೀಯ
ಸಂಪಾದಕೀಯ   

ಭಾರತದ ಅರ್ಥವ್ಯವಸ್ಥೆಯ ಚೈತನ್ಯವು ಕೋವಿಡ್–19 ಸಾಂಕ್ರಾಮಿಕ ಹರಡುವ ಮುನ್ನವೇ ತುಸು ಮಟ್ಟಿಗೆ ಕುಂದಿದಂತೆ ಇತ್ತು. ಆಗ, ‘ಇದು ಉತ್ಪಾದನೆಯಲ್ಲಿನ ಸಮಸ್ಯೆ ಅಲ್ಲ; ಬೇಡಿಕೆಯಲ್ಲಿನ ಸಮಸ್ಯೆ’ ಎಂದು ಹಲವು ಅರ್ಥಶಾಸ್ತ್ರಜ್ಞರು ಹೇಳಿದ್ದರು. ಬೇಡಿಕೆ ಹೆಚ್ಚುವಂತೆ ಮಾಡಿದರೆ ಅರ್ಥವ್ಯವಸ್ಥೆ ಚೇತರಿಕೆ ಕಾಣುತ್ತದೆ ಎಂದೂ ಅವರು ಹೇಳಿದ್ದರು. ಸ್ಥಿತಿ ಈ ರೀತಿ ಇದ್ದಾಗ ಧುತ್ತನೆ ಎದುರಾಗಿದ್ದು ಕೊರೊನಾ ವೈರಾಣು ಸೃಷ್ಟಿಸಿದ ಆರೋಗ್ಯ ಬಿಕ್ಕಟ್ಟು. ಈ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಿಸಿತು. ಲಾಕ್‌ಡೌನ್‌ನ ಅಡ್ಡಪರಿಣಾಮ ಎಂಬಂತೆ, ಆರೋಗ್ಯ ಬಿಕ್ಕಟ್ಟು ಆರ್ಥಿಕ ಬಿಕ್ಕಟ್ಟಾಗಿಯೂ ಪರಿಣಮಿಸಿದೆ. ಜನ ಉದ್ಯೋಗ ಕಳೆದುಕೊಳ್ಳುತ್ತಿರುವ, ಜನರ ಆದಾಯದಲ್ಲಿ ಕಡಿತ ಆಗುತ್ತಿರುವ ಸುದ್ದಿಗಳು ಅರ್ಥವ್ಯವಸ್ಥೆಯ ಬೇರೆ ಬೇರೆ ಕಡೆಗಳಿಂದ ಬರುತ್ತಿವೆ. ಈ ಹೊತ್ತಿನಲ್ಲಿ ಅಹಿತಕರವಾದ ಇನ್ನೊಂದು ಸುದ್ದಿ ಬಂದಿದೆ. ದೇಶದ ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು 2021ರ ಮಾರ್ಚ್‌ ವೇಳೆಗೆ ಶೇಕಡ 12.5ರಷ್ಟಕ್ಕೆ ಹೆಚ್ಚಳವಾಗಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ಸ್ಥಿರತೆ ವರದಿಯಲ್ಲಿ ಹೇಳಲಾಗಿದೆ. ಪರಿಸ್ಥಿತಿ ತೀರಾ ಬಿಗಡಾಯಿಸಿದರೆ, ಎನ್‌ಪಿಎ ಪ್ರಮಾಣ ಶೇ 14.7ರಷ್ಟಕ್ಕೆ ಹೆಚ್ಚಳ ಆಗಬಹುದು ಎಂದೂ ವರದಿ ಎಚ್ಚರಿಸಿದೆ. ಹಣದ ಚಲಾವಣೆಗೆ ಎದುರಾಗಿರುವ ತೀವ್ರತರಹದ ಅಡ್ಡಿಗಳನ್ನು ನಿಭಾಯಿಸಲು ಜನರಿಗೆ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಸಾಲ ಮರುಪಾವತಿಯ ಮೇಲೆ ಆಗಸ್ಟ್‌ 31ರವರೆಗೆ ವಿನಾಯಿತಿ ನೀಡಿದೆ. ಹಾಗಾಗಿ, ಈಗ ಮರುಪಾವತಿ ಆಗುತ್ತಿಲ್ಲದ ಕೆಲವು ಸಾಲಗಳುಆಗಸ್ಟ್‌ 31ರ ನಂತರ ಎನ್‌ಪಿಎ ಎಂದು ವರ್ಗೀಕರಣ ಆಗುವ ಸಾಧ್ಯತೆಯೂ ಇದೆ.ಈ ವಿನಾಯಿತಿಯ ಪರಿಣಾಮ ಏನಿರಲಿದೆ ಎಂಬುದು ಈಗಲೇ ಖಚಿತವಾಗಿ ಗೊತ್ತಾಗುತ್ತಿಲ್ಲ ಎಂದು ಆರ್‌ಬಿಐ ವರದಿ ಹೇಳಿದೆ.

ಎನ್‌ಪಿಎ ಪ್ರಮಾಣ ಹೆಚ್ಚಾಗುವುದು ಅಂದರೆ ಸಾಲ ನೀಡಿಕೆ ವಿಚಾರದಲ್ಲಿ ಬ್ಯಾಂಕುಗಳ ಸಾಮರ್ಥ್ಯ ಕುಗ್ಗುವುದು ಎಂದೇ ಅರ್ಥ. ಬೇರೆ ಯಾವುದೇ ಸಂದರ್ಭದಲ್ಲಿ ಎನ್‌ಪಿಎ ಹೆಚ್ಚಳ ಆಗುವುದಕ್ಕೂ ಈಗ ಎದುರಾಗಿರುವ ವಿಷಮ ಪರಿಸ್ಥಿತಿಯಲ್ಲಿ ಎನ್‌ಪಿಎ ತೀವ್ರವಾಗಿ ಹೆಚ್ಚಳವಾಗುವುದಕ್ಕೂ ವ್ಯತ್ಯಾಸವಿದೆ. ಒಂದು ವೈರಾಣು ಅರ್ಥವ್ಯವಸ್ಥೆಯ ಚೈತನ್ಯವನ್ನು ಉಡುಗಿಸಿದೆ. ಉತ್ಪಾದನೆಯೂ ಕಡಿಮೆಯಾಗಿದೆ, ಖರೀದಿಯೂ ಕುಸಿದಿದೆ ಎನ್ನುವ ಸಂದರ್ಭವಿದು. ಇಂತಹ ಸಂದರ್ಭದಲ್ಲಿ, ಉತ್ಪಾದನೆ ಹೆಚ್ಚಿಸಲು, ಅಂದರೆ ಉದ್ಯಮಗಳ ಚಕ್ರ ಮೊದಲಿನ ವೇಗದಲ್ಲಿ ಮತ್ತೆ ತಿರುಗುವಂತೆ ಆಗಲು, ಅವುಗಳಿಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವು ಹೆಚ್ಚು ಬೇಕಾಗಬಹುದು. ಆದರೆ, ಎನ್‌ಪಿಎ ಪ್ರಮಾಣದಲ್ಲಿನ ಹೆಚ್ಚಳವು ಆ ಅಗತ್ಯ ನೆರವಿನ ಹರಿವಿಗೆ ತೀವ್ರ ಅಡಚಣೆ ತಂದೊಡ್ಡುತ್ತದೆ. ಇದು ಉದ್ಯಮಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ. ಉದ್ಯಮಗಳ ಸಂಕಷ್ಟ ಹೆಚ್ಚಿದರೆ ಉದ್ಯೋಗ ಸೃಷ್ಟಿ ಹಾಗೂ ಸ್ಥಿತಿಯಲ್ಲಿನ ಹದ ತಪ್ಪುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು. ಉದ್ಯಮಗಳಿಗೆ ಮತ್ತು ಜನಸಾಮಾನ್ಯರಿಗೆ ಸಾಲ ಸುಲಭವಾಗಿ ಸಿಗುವಂತೆ ಆಗಬೇಕು ಎಂದಾದರೆ ಈ ಪರಿಸ್ಥಿತಿಯಲ್ಲಿ, ಸರ್ಕಾರವು ಬ್ಯಾಂಕ್‌ಗಳಿಗೆ ಇನ್ನೊಂದು ಸುತ್ತಿನ ಹಣಕಾಸಿನ ನೆರವು ಒದಗಿಸಬೇಕಾಗಬಹುದುಎಂಬ ವಾದ ಇದೆ. ಹಾಗೆ ನೆರವು ಒದಗಿಸಲು ಮುಂದಾದರೆ, ಸರ್ಕಾರಕ್ಕೆ ಅಗತ್ಯ ಅಭಿವೃದ್ಧಿ ಯೋಜನೆಗಳ ಮೇಲಿನ ವಿನಿಯೋಗಕ್ಕೆ ಹಣಕಾಸಿನ ಸಂಪನ್ಮೂಲ ಕಡಿಮೆಯಾಗಬಹುದು. ಈ ಸ್ಥಿತಿ ಕೂಡ ಒಳ್ಳೆಯದಲ್ಲ. ಎನ್‌ಪಿಎ ಹೆಚ್ಚಬಹುದು ಎಂದು ಆರ್‌ಬಿಐ ವರದಿ ನೀಡಿದ ಕೆಲವೇ ದಿನಗಳ ಹಿಂದೆ, ಸರ್ಕಾರವು ತನ್ನ ಮಾಲೀಕತ್ವದ ಕೆಲವು ಬ್ಯಾಂಕುಗಳನ್ನು ಖಾಸಗಿಯವರಿಗೆ ಒಪ್ಪಿಸುವ ಇರಾದೆ ಹೊಂದಿದೆ ಎಂದು ವರದಿಯಾಗಿತ್ತು. ಹಣಕಾಸು ಸ್ಥಿರತೆ ವರದಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಎನ್‌ಪಿಎ ಪ್ರಮಾಣವು ಕನಿಷ್ಠ ಶೇ 15.2ರಷ್ಟರಿಂದ ಗರಿಷ್ಠ ಶೇ 16.3ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಎನ್‌ಪಿಎ ಈ ಪ್ರಮಾಣದಲ್ಲಿದ್ದರೆ, ಬ್ಯಾಂಕುಗಳನ್ನು ಖಾಸಗಿಯವರಿಗೆ ಒಪ್ಪಿಸುವ ಸರ್ಕಾರದ ಉದ್ದೇಶಕ್ಕೆ ಅಡ್ಡಿ ಆಗಬಹುದು. ಸುಲಭವಾಗಿ ಸಾಲ ಸಿಗುವ ವ್ಯವಸ್ಥೆ ಕಲ್ಪಿಸುವುದು, ಎನ್‌ಪಿಎ ಪ್ರಮಾಣ ತಗ್ಗಿಸುವುದು ಸರ್ಕಾರ ಹಾಗೂ ಆರ್‌ಬಿಐ ಕಡೆಯಿಂದ ಭಗೀರಥ ಪ್ರಯತ್ನ ಬಯಸುವ ಕಾರ್ಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT