ADVERTISEMENT

ಕುಲಪತಿ ಆಯ್ಕೆಗೆ ಹೊಸ ರೂಪ ಅವಸರ ಸಲ್ಲ, ಚರ್ಚೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:00 IST
Last Updated 16 ಸೆಪ್ಟೆಂಬರ್ 2019, 20:00 IST
   

ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆ ಪ್ರಕ್ರಿಯೆಯನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ಚಿಂತನೆ ಗೊಂದಲಗಳಿಂದ ಕೂಡಿದೆ. ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಈಗಿರುವ ‘ಶೋಧನಾ ಸಮಿತಿ’ಯ ಬದಲು ಹೊಸದಾಗಿ ಪ್ರಾಜ್ಞರ ಸಮಿತಿಯೊಂದನ್ನು ರಚಿಸುವುದು ಸರ್ಕಾರದ ಉದ್ದೇಶ.

ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ‘ಶೋಧನಾ ಸಮಿತಿ’ಗಳ ಬಗ್ಗೆ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ಚಿಂತನೆಗೆ ಮುಂದಾಗಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಪ್ರಾಜ್ಞರ ಸಮಿತಿಯ ರಚನೆಗೆ ಸಂಬಂಧಿಸಿದಂತೆ ‘ವಿಶ್ವವಿದ್ಯಾಲಯ ಅನುದಾನ ಆಯೋಗ’ವನ್ನು (ಯುಜಿಸಿ) ಸರ್ಕಾರ ಸಂಪರ್ಕಿಸಿದೆಯೇ ಎನ್ನುವುದರ ಬಗ್ಗೆ ಸಚಿವರು ಏನನ್ನೂ ಹೇಳಿಲ್ಲ. ಪ್ರಸ್ತುತ ಕುಲಪತಿಗಳನ್ನು ಆಯ್ಕೆ ಮಾಡುವ ‘ಶೋಧನಾ ಸಮಿತಿ’ಯು ಯುಜಿಸಿಯ ಪರಿಕಲ್ಪನೆಯಾಗಿದ್ದು, ಆ ಪ್ರಕ್ರಿಯೆ ಇಡೀ ದೇಶಕ್ಕೆ ಅನ್ವಯಿಸುತ್ತದೆ. ಶೋಧನಾ ಸಮಿತಿಯಲ್ಲಿ ರಾಜ್ಯಪಾಲರು, ರಾಜ್ಯ ಸರ್ಕಾರ ಹಾಗೂ ವಿಶ್ವ ವಿದ್ಯಾಲಯದ ಸಿಂಡಿಕೇಟ್‌ನ ಮೂವರು ಪ್ರತಿನಿಧಿ ಗಳೊಂದಿಗೆ ಯುಜಿಸಿ ಪ್ರತಿನಿಧಿ ಕೂಡ ಕಾರ್ಯ ನಿರ್ವಹಿಸುತ್ತಾರೆ. ಇದರ ಬದಲಾಗಿ ಸರ್ಕಾರ ರಚಿಸಲು ಹೊರಟಿರುವ ಪ್ರಾಜ್ಞರ ಸಮಿತಿಯು ಯುಜಿಸಿಯ ‘ರಾಷ್ಟ್ರೀಯ ನೀತಿ’ಗೆ ವಿರುದ್ಧವಾದುದು.

ADVERTISEMENT

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶೋಧನಾ ಸಮಿತಿಯ ಸದಸ್ಯರ ಅರ್ಹತೆಯ ಬಗ್ಗೆ ಅಪಸ್ವರಗಳಿರುವುದು ನಿಜ. ಜಾತಿ, ಹಣ ಹಾಗೂ ರಾಜಕೀಯ ನಂಟಿನ ಮೂಲಕ ಸಮಿತಿಯಲ್ಲಿ ಪ್ರವೇಶ ಪಡೆಯುವವರು ಇದ್ದಾರೆ. ಹೀಗೆ ಒಳದಾರಿಗಳ ಮೂಲಕ ಪ್ರವೇಶ ಪಡೆದವರು ಮಾಡುವ ಆಯ್ಕೆ ನಿಷ್ಪಕ್ಷಪಾತವಾಗಿ ಇರಬೇಕೆಂದು ಬಯಸುವುದು ಕಷ್ಟ. ಆಯ್ಕೆ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಾಣಿಸುವುದೂ ಸಹಜ. ಆದರೆ, ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿ ‘ಶೋಧನಾ ಸಮಿತಿ’ಗಿಂತಲೂ ಹೆಚ್ಚು ಚರ್ಚೆಗೆ ಕಾರಣವಾಗಿರುವುದು ರಾಜಭವನ.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಎರಡು ಬಾರಿ ಶಿಫಾರಸು ಮಾಡಿದ ಹೆಸರನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದು ಮಾತ್ರವಲ್ಲದೆ, ಸರ್ಕಾರ ಶಿಫಾರಸು ಮಾಡದ ಮತ್ತೊಬ್ಬರನ್ನು ಕುಲಪತಿಯಾಗಿ ನೇಮಿಸಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕುಲಪತಿಗಳ ನೇಮಕದ ವಿಷಯದಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನುವ ಆರೋಪವು ಪ್ರತಿಬಾರಿ ಕುಲಪತಿ ನೇಮಕ ನಡೆದಾಗಲೂ ಕೇಳಿಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು.

‍ಪ್ರಾಜ್ಞರ ಸಮಿತಿಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ನಡೆಸುವುದು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಸಾಧ್ಯ ಎನ್ನುವುದು ಸಚಿವರ ವಿಶ್ವಾಸ. ಆದರೆ, ಈ ಸಮಿತಿಯು ಶೋಧನಾ ಸಮಿತಿಗಿಂತ ಹೇಗೆ ಭಿನ್ನ ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಸರ್ಕಾರಗಳು ಬದಲಾದಂತೆ ಸಮಿತಿಯೂ ಬದಲಾಗುವ ಸಾಧ್ಯತೆ ಇದ್ದೇ ಇದೆ. ಹಾಗಾಗಿ, ಸಮಿತಿಯ ಹೆಸರಷ್ಟೇ ಬದಲಾಗಿ ಅದರ ಸ್ವರೂಪ ಮೂಲ ರೂಪದಲ್ಲೇ ಉಳಿಯುವ ಸಾಧ್ಯತೆಯೇ ಹೆಚ್ಚು. ಕುಲಪತಿಗಳ ಸ್ಥಾನದ ಘನತೆಯನ್ನು ಎತ್ತಿಹಿಡಿಯಬೇಕೆನ್ನುವ ಸರ್ಕಾರದ ಚಿಂತನೆ ಸ್ವಾಗತಾರ್ಹ.

ಕುಲಪತಿಗಳನ್ನು ಈಗ ಆಯ್ಕೆ ಮಾಡುತ್ತಿರುವುದನ್ನು ನೋಡಿದರೆ, ಆ ಹುದ್ದೆಗೆ ಶೈಕ್ಷಣಿಕ ಮಾನದಂಡಕ್ಕಿಂತಲೂ ‘ಇತರ’ ಅರ್ಹತೆಗಳೇ ಹೆಚ್ಚಾಗಿ ಪರಿಗಣನೆಗೆ ಒಳಗಾಗುತ್ತಿರುವಂತಿದೆ. ಬೋಧನೆ–ಸಂಶೋಧನೆಗಳು ಮುಖ್ಯವಾಗಿ, ಜ್ಞಾನದ ಉತ್ಪತ್ತಿ ನಡೆಯಬೇಕಾದ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ‘ಸಂಪನ್ಮೂಲ’ ಗಳ ಉತ್ಪಾದನೆ ನಡೆಯುತ್ತಿರುವಂತಿದೆ. ಇದನ್ನು ತಪ್ಪಿಸಬೇಕಾದುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಕುಲಪತಿಗಳ ನೇಮಕಕ್ಕಿಂತಲೂ ಹೆಚ್ಚು ಗಮನಹರಿಸಬೇಕಾದ ಸಮಸ್ಯೆಗಳು ಉನ್ನತ ಶಿಕ್ಷಣ ವಲಯದಲ್ಲಿ ಬಹಳಷ್ಟಿವೆ.

ಭಾರತದ ವಿಶ್ವವಿದ್ಯಾಲಯಗಳು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಮಾಡಿಕೊಂಡ ಬಹುತೇಕ ಒಪ್ಪಂದಗಳು ವಾಣಿಜ್ಯ ಕ್ಷೇತ್ರದವಾಗಿದ್ದು, ಶೇಕಡ 5ರಷ್ಟು ಒಪ್ಪಂದ ಗಳಷ್ಟೇ ಮಾನವಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿವೆ. ಈ ಅಸಮತೋಲನವನ್ನು ಸರಿಪಡಿಸುವ ಬಗ್ಗೆ ಸರ್ಕಾರಗಳು ಗಮನಹರಿಸಬೇಕು. ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಸುಮಾರು 11 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಕಾಯಂ ನೇಮಕಾತಿಗಳು ಹೆಚ್ಚೂ ಕಡಿಮೆ ಸ್ಥಗಿತಗೊಂಡಿವೆ. ಅನೇಕ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಈ ಸಮಸ್ಯೆಗಳ ಬಗ್ಗೆ ಉನ್ನತ ಶಿಕ್ಷಣ ಸಚಿವಾಲಯ ಮೊದಲು ಗಮನಹರಿಸಬೇಕು. ಕುಲಪತಿಗಳ ನೇಮಕದ ವಿಚಾರದಲ್ಲಿ ಅವಸರದ ತೀರ್ಮಾನಕ್ಕಿಂತ, ವಿಸ್ತೃತ ಚರ್ಚೆಯ ನಂತರ ತೀರ್ಮಾನ ಕೈಗೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.