ADVERTISEMENT

ಕನ್ನಡವು ವಿದ್ಯೆ, ಜ್ಞಾನ, ಅನ್ನದಭಾಷೆಯಾಗಿ ಬೆಳೆಯಲಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 20:08 IST
Last Updated 1 ನವೆಂಬರ್ 2019, 20:08 IST
Sampadakiya 02-11-19
Sampadakiya 02-11-19   

ಭಾಷೆ ಎಂಬುದು ಆಡುನುಡಿಗೆ ಸೀಮಿತವಾದ ವಿಚಾರ ಅಲ್ಲ. ಅದೊಂದು ಜೀವನ ರೀತಿ, ಅಸ್ಮಿತೆ. ಇಂತಹ ಅಸ್ಮಿತೆಗಳ ಮೂಲಕವೇ ದೇಶ ಕಟ್ಟುವ ಕೆಲಸವಾಗಬೇಕು ಎಂಬ ಕಾರಣಕ್ಕೆ 1956ರಲ್ಲಿಯೇ ಭಾಷಾವಾರು ಪ್ರಾಂತ್ಯಗಳ ರಚನೆ ಆಯಿತು. ಆಯಾ ಭಾಷೆ ಮತ್ತು ಆ ಭಾಷಿಕರ ಏಳಿಗೆ ಆಗದೇ ಇದ್ದರೆ ಭಾಷಾವಾರು ಪ್ರಾಂತ್ಯಗಳು ಆಡಳಿತಾತ್ಮಕ ವಿಭಾಗಗಳಾಗಷ್ಟೇ ಉಳಿಯುತ್ತವೆ. ಅಸ್ಮಿತೆಯ ನೆಲೆಗಟ್ಟಿನಲ್ಲಿ ಸಾಮಾಜಿಕ– ಆರ್ಥಿಕ ಪ್ರಗತಿ ಆಗದೇ ಇದ್ದರೆ, ಭಾಷಾವಾರು ಪ್ರಾಂತ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಕನ್ನಡ ಮತ್ತು ಕನ್ನಡಿಗರ ಏಳಿಗೆಯ ಬಗ್ಗೆ ಅಧಿಕಾರಸ್ಥ ರಾಜಕಾರಣಿಗಳು ಕೊಟ್ಟಿರುವ ಭರವಸೆಗಳು, ಆಡಿರುವ ಮಾತುಗಳು ಲೆಕ್ಕಕ್ಕೆ ನಿಲುಕದಷ್ಟಿವೆ. ಹಾಗಿದ್ದರೂ, ಕನ್ನಡವನ್ನೇ ಕೇಂದ್ರವಾಗಿಟ್ಟುಕೊಂಡು ಜನರ ಪ್ರಗತಿ ಮಾತ್ರ ಆಗಿಲ್ಲ. ರಾಜ್ಯೋತ್ಸವದ ಮುನ್ನಾ ದಿನ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿ ‘ಸಿ’ ಮತ್ತು ‘ಡಿ’ ದರ್ಜೆಯ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲು ನಿರ್ಧರಿಸಿದೆ. ಇದು, ಕರ್ನಾಟಕದ ಜನರಿಗೆ ಸರ್ಕಾರದ ರಾಜ್ಯೋತ್ಸವ ಉಡುಗೊರೆ. ‘ಸಿ’ ಮತ್ತು ‘ಡಿ’ ದರ್ಜೆಯ ನೌಕರಿಯು ಉದ್ಯೋಗ ಶ್ರೇಣಿಯಲ್ಲಿ ತಳಮಟ್ಟದ ಕೆಲಸಗಳು. ಅಷ್ಟಕ್ಕೇ ಸಮಾಧಾನಪಡುವುದು ಅಲ್ಪತೃಪ್ತಿ ಆಗಲಾರದೇ? ಇದಕ್ಕಿಂತ ಮೇಲಿನ ಹುದ್ದೆಗಳನ್ನು ಪಡೆಯಲು ಕನ್ನಡದ ಪ್ರತಿಭೆಗಳನ್ನು ಸಜ್ಜುಗೊಳಿಸುವ ದಿಸೆಯಲ್ಲಿ ಸರ್ಕಾರ ಮಾಡುತ್ತಿರುವ ಪ್ರಯತ್ನ ಏನು ಎಂಬುದರ ಬಗ್ಗೆ ಆತ್ಮಾವಲೋಕನ ಆಗಬೇಕು.

ತಳಮಟ್ಟದ ಹುದ್ದೆಗಳನ್ನು ಕನ್ನಡಿಗರಿಗೇ ಕೊಡಿ ಎಂದೇನೂ ಸರ್ಕಾರ ಹೇಳುತ್ತಿಲ್ಲ. ಬದಲಿಗೆ, ಆದ್ಯತೆಯ ಮೇರೆಗೆ ಕೊಡಿ ಎಂದು ಖಾಸಗಿ ವಲಯವನ್ನು ಕೇಳಲು ಮುಂದಾಗಿದೆ. ಮೇಲಾಗಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂಬುದು ಹಿಂದಿನಿಂದಲೂ ಹೇಳಿಕೊಂಡು ಬಂದಿರುವಂತಹ ವಿಚಾರವೇ ಆಗಿದೆ.

ಕನ್ನಡ ಅನ್ನದ ಭಾಷೆಯಾಗಲಿ ಎಂದು ಪ್ರಾಜ್ಞರು ಹೇಳಲು ಆರಂಭಿಸಿ ದಶಕಗಳೇ ಕಳೆದಿವೆ. ಕನ್ನಡವು ಅನ್ನದ ಭಾಷೆಯಾಗಬೇಕಿದ್ದರೆ ಮೊದಲಿಗೆ ಅದು ವಿದ್ಯೆಯ ಭಾಷೆಯಾಗಬೇಕು. ಆದರೆ, ನಮ್ಮನ್ನು ಈವರೆಗೆ ಆಳಿದವರಿಗೆ ಈ ವಿಚಾರದಲ್ಲಿ ಸರಿಯಾದ ನೀತಿಯೊಂದನ್ನು ರೂಪಿಸಲು ಸಾಧ್ಯವಾಗಿಲ್ಲ ಎಂಬುದು ವಿಷಾದದ ವಿಚಾರ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಅಥವಾ ಪ್ರದೇಶದ ಭಾಷೆಯಲ್ಲಿ ನೀಡಬೇಕು ಎಂದು ವಿದ್ವಾಂಸರು ಹೇಳುತ್ತಲೇ ಇದ್ದಾರೆ. ಅದರ ಬಗ್ಗೆ ಯಾರಿಗೂ ತಕರಾರು ಇಲ್ಲ. ಆದರೆ, ಅದಕ್ಕೆ ಪೂರಕವಾದ ಭಾಷಾ ಮಾಧ್ಯಮ ನೀತಿಯನ್ನು ರೂಪಿಸಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರ ನಡೆಸುವ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿಯೂ ಪಾಠ ಮಾಡುವ ನಿರ್ಧಾರವನ್ನು ಹಿಂದೆ ಇದ್ದ, ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೈಗೊಂಡಿತು. ಅದರ ಪರ–ವಿರೋಧದ ಚರ್ಚೆಗಳು ಈಗಲೂ ಮುಂದುವರಿದಿವೆ. ಕನ್ನಡವು ವಿದ್ಯೆಯ ಭಾಷೆಯಾಗಬೇಕು ಎನ್ನುವಾಗ, ಸರ್ಕಾರ ನಡೆಸುವ ಶಾಲೆಗಳ ಸ್ಥಿತಿ, ಕಲಿಕೆಯ ಗುಣಮಟ್ಟ ಹೇಗಿದೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ‘ಪ್ರಥಮ್‌’ ಎಂಬ ಸ್ವಯಂ ಸೇವಾ ಸಂಸ್ಥೆಯು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಅಳೆದು ಸಮಗ್ರವಾದ ವರದಿಯೊಂದನ್ನು ರೂಪಿಸುವ ಕೆಲಸವನ್ನು 2005ರಿಂದಲೂ ಮಾಡುತ್ತಿದೆ. ಈ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಎಂಟನೇ ತರಗತಿಯ ಶೇ 70ರಷ್ಟು ವಿದ್ಯಾರ್ಥಿಗಳಿಗೆ ಎರಡನೇ ತರಗತಿಯ ಮಟ್ಟದ ಪಠ್ಯವನ್ನೂ ಸುಲಲಿತವಾಗಿ ಓದಲು ಬರುತ್ತಿಲ್ಲ. ಗಣಿತ ಮತ್ತಿತರ ವಿಷಯಗಳ ವಿಚಾರ ಇನ್ನೂ ಕಷ್ಟ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ಹೆಚ್ಚಿನ ಸುಧಾರಣೆಯೇನೂ ಆಗಿಲ್ಲ ಎಂದು ವರದಿ ಹೇಳುತ್ತಿದೆ. ಅತ್ಯುತ್ತಮ ತರಬೇತಿ ಮತ್ತು ಕೌಶಲದ ಶಿಕ್ಷಕರು ಇರುವ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸ್ಥಿತಿ ಹೀಗಿದೆ ಎಂದರೆ ಅದಕ್ಕೆ ಹೊಣೆಗಾರರು ಯಾರು? ಕನ್ನಡವನ್ನು ವಿದ್ಯೆಯ ಭಾಷೆಯಾಗಿ, ಜ್ಞಾನದ ಭಾಷೆಯಾಗಿ, ಅನ್ನದ ಭಾಷೆಯಾಗಿ ಬೆಳೆಸಲು ನಮಗೆ ಸಾಧ್ಯವಾಗದಿದ್ದರೆ, ಖಾಸಗಿ ವಲಯದ ಮುಂದೆ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರಿಯನ್ನಾದರೂ ಕನ್ನಡಿಗರಿಗೆ ನೀಡಿ ಎಂದು ಬೇಡುವ ಸ್ಥಿತಿ ಬರುತ್ತದೆ. ಅತೀವಸ್ಪರ್ಧಾತ್ಮಕತೆಯ ಈ ದಿನಗಳಲ್ಲಿ, ಸರ್ಕಾರ ಮತ್ತು ಕನ್ನಡಿಗರು ಎಚ್ಚೆತ್ತುಕೊಳ್ಳದೇ ಇದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ವಿದ್ಯೆ ಮತ್ತು ಅನ್ನದ ಭಾಷೆಯಾಗದ ಯಾವ ಭಾಷೆಯೂ ಜೀವಂತವಾಗಿ ಬಹಳ ದಿನ ಉಳಿಯುವುದು ಕಷ್ಟ ಎಂಬ ಎಚ್ಚರವನ್ನು ರಾಜ್ಯೋತ್ಸವ ನಮ್ಮಲ್ಲಿ ಮೂಡಿಸಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.