ADVERTISEMENT

ಜನತಂತ್ರದ ಹಬ್ಬಕ್ಕೆ ರಂಗ ಸಜ್ಜು ; ಆಯ್ಕೆಯನ್ನು ವಿವೇಕ ನಿರ್ದೇಶಿಸಲಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 20:09 IST
Last Updated 11 ಮಾರ್ಚ್ 2019, 20:09 IST
.
.   

ಹದಿನೇಳನೇ ಲೋಕಸಭೆ ಚುನಾವಣೆಗೆ ರಂಗ ಸಜ್ಜಾಗಿದೆ. 543ಲೋಕಸಭಾ ಸ್ಥಾನಗಳ ಪೈಕಿ ಸರ್ಕಾರ ರಚಿಸಲು ಅಗತ್ಯವಿರುವ ಸರಳ ಬಹುಮತದ ಸಂಖ್ಯೆ272.ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಮಾತ್ರವಲ್ಲದೆ ಎರಡೂ ಕಡೆ ಗುರುತಿಸಿಕೊಳ್ಳದ ಹಲವು ಪ್ರಮುಖ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಲು ಸೆಣಸಲಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಎದ್ದಿದ್ದ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ದಡ ಮುಟ್ಟಿತ್ತು.ಮೂವತ್ತು ವರ್ಷಗಳ ನಂತರ ಸರಳ ಬಹುಮತ ಗಳಿಸಿದ ಪಕ್ಷವೆಂಬ ಹೆಗ್ಗಳಿಕೆ ಬಿಜೆಪಿಯದಾಗಿತ್ತು. ‘ಒಳ್ಳೆಯ ದಿನ’ಗಳ ಕನಸನ್ನು ಹರವಿದ್ದ ಮೋದಿ, ಜನಸಮುದಾಯಗಳನ್ನು ಒಲಿಸಿಕೊಂಡಿದ್ದರು.ವಿರೋಧ ಪಕ್ಷಗಳು ಹರಿದು ಹಂಚಿಹೋಗಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದೂ ಅವರ ಗೆಲುವಿಗೆ ಗಣನೀಯ ಕೊಡುಗೆ ನೀಡಿತ್ತು. ಇದೀಗ ಐದನೆಯ ವರ್ಷದ ಅಂಚಿನಲ್ಲಿ ನಿಂತು ಹಿಂದೆ ತಿರುಗಿ ನೋಡಿದರೆ ‘ಒಳ್ಳೆಯ ದಿನ’ಗಳ ಭರವಸೆ ಕನಸಿನ ಗಂಟಾಗಿಯೇ ಉಳಿದಿರುವುದು ನಿಚ್ಚಳ.ವರ್ಷಕ್ಕೆರಡು ಕೋಟಿ ಉದ್ಯೋಗಾವಕಾಶ ಸೃಷ್ಟಿಸುವ ಭರವಸೆಯದೂ ಇದೇ ಕತೆ.

ನೋಟು ರದ್ದತಿ ಕ್ರಮ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಿಂದೆ ಜಗ್ಗಿತೇ ವಿನಾ ಮುಂದಕ್ಕೆ ಒಯ್ಯಲಿಲ್ಲ.ಹಳ್ಳಿಗಾಡಿನ ಬದುಕು ಹಸನಾಗಿಲ್ಲ.ರೈತರ ಬಿಕ್ಕಟ್ಟು ಬಿಗಡಾಯಿಸಿದೆ.ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಆವರಿಸಿರುವ ಹಲವು ಸಂಶಯಗಳ ಮುಸುಕು ಈಗಲೂ ಹರಿದಿಲ್ಲ.ಮೋದಿಯವರ ವೈಯಕ್ತಿಕ ವರ್ಚಸ್ಸು ತೀರಾ ಕುಸಿಯದಿದ್ದರೂ,ಅವರ ನೇತೃತ್ವದ ಸರ್ಕಾರದ ಕುರಿತು ಇದೇ ಮಾತು ಹೇಳುವ ಸ್ಥಿತಿ ಉಳಿದಿರಲಿಲ್ಲ.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಷಯ ಕೂಡ ಚುನಾವಣೆಯಲ್ಲಿ ಫಲ ನೀಡುವಂತಿರಲಿಲ್ಲ.ಆಳುವ ಪಕ್ಷದ ಉತ್ಸಾಹ ಉಡುಗಿತ್ತು.ಆದರೆ ತಿಂಗಳೊಪ್ಪತ್ತಿನ ಹಿಂದೆ ಪುಲ್ವಾಮಾ ಭಯೋತ್ಪಾದಕರ ದಾಳಿ ಮತ್ತು ಆನಂತರ ಭಾರತೀಯ ವಾಯುಸೇನೆಯು ಪಾಕಿಸ್ತಾನದ ಒಳನುಗ್ಗಿ ನಡೆಸಿದ ಬಾಲಾಕೋಟ್ ಬಾಂಬ್ ದಾಳಿ ಹೊಸ ವಾತಾವರಣ ಹುಟ್ಟುಹಾಕಿದೆ.ಈ ವಾತಾವರಣವನ್ನು ಚುನಾವಣೆಯಲ್ಲಿ ತನಗೆ ಅನುಕೂಲಕರವಾಗಿ ತಿರುಗಿಸಿಕೊಳ್ಳಲು ಬಿಜೆಪಿ ದೃಢ ನಿಶ್ಚಯ ಮಾಡಿದಂತಿದೆ.

ಭಯೋತ್ಪಾದನೆಯನ್ನು ಚುನಾವಣೆ ಚರ್ಚೆಯ ವಸ್ತು ಆಗಿಸಿದರೆ ಯಾರದೂ ಅಭ್ಯಂತರ ಇರಲಾರದು.ಆದರೆ ಅದನ್ನು ರಾಜಕೀಯಗೊಳಿಸಿ ತಾನು ಮಾತ್ರವೇ ರಾಷ್ಟ್ರಪ್ರೇಮಿ ಮತ್ತು ವಿರೋಧ ಪಕ್ಷಗಳು ರಾಷ್ಟ್ರವಿರೋಧಿ ಎಂಬ ಕಥನವನ್ನು ನಿರ್ಮಿಸುವುದು ಸರ್ವಥಾ ಸರಿಯಲ್ಲ. ‘ಎಲ್ಲ ರಾಜಕೀಯ ಪಕ್ಷಗಳು ಮತ್ತು ಉಮೇದುವಾರರಿಗೆ2019ರ ಲೋಕಸಭಾ ಚುನಾವಣೆಯಲ್ಲಿ ಒಳಿತಾಗಲೆಂದು ಹರಸುತ್ತೇನೆ.ನಾವು ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿರಬಹುದು.ಆದರೆ ನಮ್ಮೆಲ್ಲರ ಗುರಿ ಭಾರತದ ಅಭಿವೃದ್ಧಿ ಮತ್ತು ಪ್ರತಿ ಭಾರತೀಯನ ಸಬಲೀಕರಣ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದರು.ಅವರ ಈ ಸಾಮರಸ್ಯದ ಭಾವನೆ ಟ್ವಿಟರ್‌ಗೆ ಮಾತ್ರವೇ ಸೀಮಿತ ಆಗದಿರಲಿ. ಬಲಿಷ್ಠ,ಸಮೃದ್ಧ ಹಾಗೂ ಸುರಕ್ಷಿತ ಭಾರತವನ್ನು ಕಟ್ಟುವ ಸಮಯ ಬಂದಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಪ್ರಧಾನಿ ತಮ್ಮ ದಿನನಿತ್ಯದ ಭಾಷಣಗಳಲ್ಲಿ ಭಯೋತ್ಪಾದನೆ ಮತ್ತು ಉಗ್ರ ರಾಷ್ಟ್ರವಾದವನ್ನು ಚರ್ಚೆಯ ಮುನ್ನೆಲೆಗೆ ತರಲು ಹೆಣಗುತ್ತಿರುವುದು ದುರದೃಷ್ಟಕರ.ಬಹುತೇಕ ಸಮೂಹ ಮಾಧ್ಯಮಗಳೂ ಈ ಸಮೂಹ ಸನ್ನಿಯನ್ನು ಬಡಿದೆಬ್ಬಿಸಲು ತಾಳ ಹಾಕಿ ಕುಣಿಯತೊಡಗಿರುವುದು ಕೆಟ್ಟ ಬೆಳವಣಿಗೆ. ಪರಮ ವೈರಿಯೊಬ್ಬನನ್ನು ಕಡೆದು ನಿಲ್ಲಿಸಿ ಅವನನ್ನು ಹೊಡೆದು ಉರುಳಿಸಲು ಯುದ್ಧೋನ್ಮಾದ ಭಾವನೆಗಳನ್ನು ಜನಸಮುದಾಯಗಳಲ್ಲಿ ಬಡಿದೆಬ್ಬಿಸಲಾಗುತ್ತಿದೆ.ರಾಷ್ಟ್ರವಾದ ಮತ್ತು ಯುದ್ಧೋನ್ಮಾದವನ್ನು ಚುನಾವಣಾ ತಂತ್ರವಾಗಿ ಹೆಣೆಯುವುದು ಆಳುವ ಪಕ್ಷಕ್ಕೆ ಅನುಕೂಲಕರ. ಜನರ ನಿತ್ಯ ಬದುಕನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಮತ್ತು ಅವುಗಳನ್ನು ಪರಿಹರಿಸುವಲ್ಲಿ ತನ್ನ ವೈಫಲ್ಯವನ್ನು ಉಗ್ರ ಹಿಂದೂ ರಾಷ್ಟ್ರವಾದದ ಮರೆಯಲ್ಲಿ ಮುಚ್ಚಿ ಹಾಕುವ ಪ್ರಯತ್ನ ಒಪ್ಪುವಂತಹುದಲ್ಲ. ಜನತಾಂತ್ರಿಕ ವ್ಯವಸ್ಥೆಯ ಚುನಾವಣಾ ಕಣದಲ್ಲಿ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳಿಗೆ ಸ್ಪರ್ಧೆಯ ಸಮಾನ ಅವಕಾಶ ಇರಬೇಕು.ಭಾವೋನ್ಮಾದಕ್ಕೆ ತಾನು ಮರುಳಾಗುವುದಿಲ್ಲ ಎಂಬ ಸತ್ಯವನ್ನು ಭಾರತೀಯ ಮತದಾರ ಸಮೂಹ ಮತ್ತೊಮ್ಮೆ ರುಜುವಾತು ಮಾಡಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.