ADVERTISEMENT

ಸಂಪಾದಕೀಯ| ನೇಪಥ್ಯಕ್ಕೆ ಸರಿದ ಕಹಿ ವರ್ಷ: ತೆರಿಗೆ ತಗ್ಗಿಸಲು ಒಂದು ಅವಕಾಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 19:30 IST
Last Updated 31 ಡಿಸೆಂಬರ್ 2021, 19:30 IST
   

ಕೋವಿಡ್‌ನ ಎರಡನೆಯ ಅಲೆಯು ತಂದಿತ್ತ ಆರೋಗ್ಯ ಬಿಕ್ಕಟ್ಟನ್ನು ಉಲ್ಲೇಖಿಸಿ ಹೇಳುವುದಾದಲ್ಲಿ 2021ನೇ ಇಸವಿಯು ಇಂದಿನ ತಲೆಮಾರಿನ ಪಾಲಿಗೆ ಅತ್ಯಂತ ಕೆಟ್ಟ ವರ್ಷವೂ ಹೌದು. ಕೋವಿಡ್‌ನಿಂದಾಗಿ ಜನರ ಜೀವ ನಷ್ಟವಾಗಿದ್ದಷ್ಟೇ ಅಲ್ಲದೆ, ಹಲವರು ಉದ್ಯೋಗ ನಷ್ಟಕ್ಕೂ ಗುರಿಯಾದರು. ಇನ್ನೊಂದಿಷ್ಟು ಜನರ ಆದಾಯ ನಷ್ಟವಾಯಿತು. 2021ರಲ್ಲಿ ಜನಸಾಮಾನ್ಯರ ಪಾಲಿಗೆ ಬವಣೆಗಳು ಒಂದಾದ ನಂತರ ಒಂದರಂತೆ ಎರಗಿದವು. ಕೆಟ್ಟ ಕಾರಣಗಳಿಗಾಗಿ ಸದಾ ನೆನಪಿನಲ್ಲಿ ಉಳಿಯುವ ವರ್ಷವೊಂದು ಹಿಂದಕ್ಕೆ ಸರಿದು ಈಗ ಹೊಸ ವರ್ಷ ಬಂದಿದೆ. ಹತ್ತು ಹಲವು ಕೇಡುಗಳ ನಡುವೆಯೇ 2021ರ ಕೊನೆಯಲ್ಲಿ ಒಳ್ಳೆಯ ಸುದ್ದಿಯೊಂದು ಬಂದಿದೆ. ಕೇಂದ್ರ ಸರ್ಕಾರದ ತೆರಿಗೆ ವರಮಾನವು ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ 2021–22ನೇ ಹಣಕಾಸು ವರ್ಷದಲ್ಲಿ ಗುರಿಯನ್ನು ಮೀರಿ ಸಂಗ್ರಹ ಆಗಬಹುದು, ದೇಶದ ವಿತ್ತೀಯ ಕೊರತೆಯು ಅಂದಾಜಿಗಿಂತ ತುಸು ಕಡಿಮೆ ಆಗಬಹುದು ಎಂಬ ಸುದ್ದಿ ಇದು. ಕೋವಿಡ್‌ನ ಪ್ರಭಾವ ಇನ್ನೂ ಇರುವ ಈ ಸಂದರ್ಭದಲ್ಲಿ, ಆಡಳಿತದ ಚುಕ್ಕಾಣಿ ಹಿಡಿದಿರುವವರಿಗೆ ಖಂಡಿತವಾಗಿಯೂ ಸಮಾಧಾನ ತರುವ ಸುದ್ದಿ ಇದು. ಆದರೆ, ಇದನ್ನು ಇನ್ನೊಂದು ವಿಷಯದ ಜೊತೆಗೆ ಇರಿಸಿ ನೋಡಿದಾಗ, ಜನರ ಬವಣೆ ತಪ್ಪಿಸಲು ಕೆಲವು ಅತ್ಯಗತ್ಯ ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಇನ್ನೂ ತಗ್ಗಿಸಬೇಕಾದ ಅಗತ್ಯ ಇದೆ ಎನ್ನಬೇಕಾಗುತ್ತದೆ. ನವೆಂಬರ್‌ ತಿಂಗಳಿನಲ್ಲಿ ದೇಶದ ಸಗಟು ಹಣದುಬ್ಬರ ದರವು ಶೇಕಡ 14.23ರ ಮಟ್ಟಕ್ಕೆ ತಲುಪಿದೆ. ದಶಕದ ಅವಧಿಯ ದಾಖಲೆಯ ಮಟ್ಟ ಇದು.ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿನ ಸಗಟು ಹಣದುಬ್ಬರ ಪ್ರಮಾಣವು ನವೆಂಬರ್‌ನಲ್ಲಿ ಶೇ 39.81ಕ್ಕೆ ತಲುಪಿದೆ. ಇದು ಅಕ್ಟೋಬರ್‌ನಲ್ಲಿ ಶೇ 37.18ರಷ್ಟು ಇತ್ತು. ಆಹಾರ ವಸ್ತುಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 3.06ರಷ್ಟು ಇದ್ದಿದ್ದು ನವೆಂಬರ್‌ನಲ್ಲಿ ಶೇ 6.7ಕ್ಕೆ ಏರಿಕೆ ಆಗಿದೆ.ಹಣದುಬ್ಬರ ಹೆಚ್ಚಳ ಆಗಲು ಮುಖ್ಯ ಕಾರಣ ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಆದ ಬೆಲೆ ಏರಿಕೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರ ಸರ್ಕಾರ, ಮೌಲ್ಯವರ್ಧಿತ ತೆರಿಗೆಯನ್ನು ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ನವೆಂಬರ್‌ ಮೊದಲ ವಾರದಲ್ಲಿ ಕಡಿಮೆ ಮಾಡಿವೆ ಎನ್ನುವುದು ನಿಜ. ಹೀಗಿದ್ದರೂ, 2020ರ ನವೆಂಬರ್‌ ಮಟ್ಟಕ್ಕೆ ಹೋಲಿಸಿದರೆ ಪೆಟ್ರೋಲ್ ಹಾಗೂ ಡೀಸೆಲ್‌ನ ದೇಶಿ ಮಾರುಕಟ್ಟೆ ದರವು 2021ರಲ್ಲಿ ಜಾಸ್ತಿಯಾಗಿಯೇ ಇತ್ತು. ಅವುಗಳ ದರವು 2021ರ ಜನವರಿಯ ಮಟ್ಟಕ್ಕೆ ಹೋಲಿಸಿದರೆ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಇದನ್ನೇ, ಸಗಟು ಹಣದುಬ್ಬರ ಸೂಚ್ಯಂಕವು ಪ್ರತಿಫಲಿಸಿದೆ. ಓಮೈಕ್ರಾನ್‌ ಕಾರಣದಿಂದಾಗಿ ದೇಶದ ಪ್ರಮುಖ ರಾಜ್ಯಗಳು ಸ್ಥಳೀಯ ಮಟ್ಟದಲ್ಲಿ ಬಗೆಬಗೆಯ ನಿರ್ಬಂಧಗಳನ್ನು ಜಾರಿಗೆ ತರುತ್ತಿವೆ. ಆರೋಗ್ಯ ರಕ್ಷಣೆಗೆ ಇಂತಹ ಕ್ರಮಗಳು ಅಗತ್ಯ ಎಂದು ನೀತಿ ನಿರೂಪಕರು ಸಮರ್ಥನೆ ಮಾಡಿಕೊಳ್ಳಬಹುದಾ ದರೂ, ಇಂತಹ ನಿರ್ಬಂಧಗಳು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿ ಪರಿಣಮಿಸುತ್ತಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆಗ ಒಂದಿಷ್ಟು ಜನರ ಜೀವನೋಪಾಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇಲ್ಲದಿಲ್ಲ. ನಿರ್ಬಂಧಗಳು ಜಾರಿಗೆ ಬಂದಾಗ ಸರಕು ಮತ್ತು ಸೇವೆಗಳ ಪೂರೈಕೆ ವ್ಯವಸ್ಥೆಯ ಮೇಲೆ ಏಟು ಬಿದ್ದು, ಒಂದಿಷ್ಟು ಉತ್ಪನ್ನಗಳ ಬೆಲೆ ಹೆಚ್ಚಳ ಆದ ನಿದರ್ಶನಗಳು ಇವೆ. ಹೀಗಾಗಿ, ದೈನಂದಿನ ಬದುಕಿನ ಅತ್ಯಂತ ಅವಶ್ಯಕವಾಗಿರುವ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಲ್ಲಿ ಇನ್ನೊಂದಿಷ್ಟು ತಗ್ಗಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರಗಳು ಸಹೃದಯ ಮನಃಸ್ಥಿತಿಯಿಂದ, ಗಂಭೀರವಾಗಿ ಪರಿಶೀಲಿಸ ಬೇಕಾದ ಸಂದರ್ಭ ಇದು. ₹ 1,000ವರೆಗಿನ ಬೆಲೆಯ ಉಡುಪುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪ್ರಮಾಣವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಿಸುವ ತೀರ್ಮಾನದ ಅನುಷ್ಠಾನವನ್ನುವಸ್ತ್ರೋದ್ಯಮದ ಆಗ್ರಹಕ್ಕೆ ಮಣಿದು, ಜಿಎಸ್‌ಟಿ ಮಂಡಳಿಯು ಸದ್ಯಕ್ಕೆ ತಡೆಹಿಡಿದಿದೆ. ಇದು ಸ್ವಾಗತಾರ್ಹ. ಈ ಹೆಚ್ಚಳದ ಸಾಧಕ–ಬಾಧಕ ಕುರಿತು ಇನ್ನಷ್ಟು ವಿಸ್ತೃತವಾಗಿ ಚರ್ಚೆ ನಡೆಸಿ, ನಂತರ ಸಮನ್ವಯದ ತೀರ್ಮಾನವೊಂದನ್ನು ಮಂಡಳಿ ಕೈಗೊಳ್ಳಬಹುದು. ಆದರೆ, ಪಾದರಕ್ಷೆ ಮೇಲಿನೆ ತೆರಿಗೆ ಹೆಚ್ಚಳದ ತೀರ್ಮಾನವನ್ನು ಹಿಂದಕ್ಕೆ ಪಡೆಯಲು ಜಿಎಸ್‌ಟಿ ಮಂಡಳಿ ನಿರಾಕರಿಸಿದೆ.

ಸರ್ಕಾರಗಳಿಗೆ ತೆರಿಗೆಯೇ ವರಮಾನದ ಪ್ರಮುಖ ಮೂಲ. ಅದರಲ್ಲಿ ಎರಡನೆಯ ಮಾತೇ ಇಲ್ಲ. ಆದರೆ, ಆದಾಯ ತಗ್ಗಿರುವ ಹಾಗೂ ಜೀವನೋಪಾಯಕ್ಕೆ ಅಪಾಯ ಎದುರಾಗಿರುವ ಸಂದರ್ಭದಲ್ಲಿ ಸರ್ಕಾರ ವಿಧಿಸಿರುವ ತೆರಿಗೆಗಳು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಬಾರದು. ತೆರಿಗೆಯು ಶಿಕ್ಷೆಯಂತೆ ಕಾಣಿಸದೆ, ಸರ್ಕಾರವು ಸಾರ್ವಜನಿಕರಿಗೆ ಒದಗಿಸುವ ಸೇವೆಗಳಿಗೆ ನ್ಯಾಯೋಚಿತ ಶುಲ್ಕದ ಮಾದರಿಯಲ್ಲಷ್ಟೇ ಇರಬೇಕು. ಓಮೈಕ್ರಾನ್ ಪ್ರಕರಣಗಳು ವರದಿಯಾಗುತ್ತಿರುವ ಪ್ರಮಾಣವು ಮುಂದಿನ ದಿನಗಳಲ್ಲಿ ಯಾವ ಮಟ್ಟ ತಲುಪಲಿದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲಾಗದು. ಓಮೈಕ್ರಾನ್ ಹರಡುವುದನ್ನು ತಡೆಯಲು ಸ್ಥಳೀಯ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ಬಗೆಯ ನಿರ್ಬಂಧಗಳು ಜಾರಿಯಾಗಬಹುದು ಎನ್ನುವುದನ್ನೂ ಊಹಿಸುವುದು ಕಷ್ಟ. ಆದರೆ, ಸಾಂಕ್ರಾಮಿಕ ವನ್ನು ನಿಗ್ರಹಿಸಲು ಅತ್ಯಂತ ಕಠಿಣ ಕ್ರಮಗಳು ಜಾರಿಗೆ ಬಂದರೆ, ಅದರಿಂದ ಸಾರ್ವಜನಿಕರ ಬದುಕಿಗೆ ಆಗುವ ತೊಂದರೆಯನ್ನು ಕನಿಷ್ಠ ಮಟ್ಟದಲ್ಲಿ ಇರಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಆಡಳಿತಾರೂಢರಿಗೆ ಅರಿವಿರಬೇಕು. ಯಾವೆಲ್ಲ ಅಗತ್ಯ ವಸ್ತುಗಳ ತೆರಿಗೆ ಮಟ್ಟವನ್ನು ಇನ್ನಷ್ಟು ತಗ್ಗಿಸಲು ಸಾಧ್ಯ ಎಂಬುದನ್ನು ಪರಿಶೀಲಿಸಿ, ಆ ದಿಕ್ಕಿನಲ್ಲಿ ಮುಂದಡಿ ಇರಿಸಬೇಕು. ತೆರಿಗೆ ವರಮಾನವು ಈ ಬಾರಿ ಭಾರಿ ಹೆಚ್ಚಳವನ್ನು ಕಾಣುವ ಸಾಧ್ಯತೆ ನಿಚ್ಚಳವಾಗಿರುವ ಕಾರಣ, ಕೆಲವು ವಸ್ತುಗಳ ಮೇಲಿನ ತೆರಿಗೆ ತಗ್ಗಿಸುವ ಅವಕಾಶ ಸರ್ಕಾರಕ್ಕೆ ಖಂಡಿತ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.