ಜನಸಾಮಾನ್ಯರು ದೈನಂದಿನ ತಮ್ಮ ಓಡಾಟಕ್ಕೆ ನೆಚ್ಚಿಕೊಂಡಿರುವ ಬಸ್ ಪ್ರಯಾಣದ ದರವನ್ನು ಹೊಸ ವರ್ಷಾರಂಭದಲ್ಲೇ ಭಾರಿ ಪ್ರಮಾಣದಲ್ಲಿ ಏರಿಸುವ ಮೂಲಕ ರಾಜ್ಯ ಸರ್ಕಾರ ಬರೆ ಎಳೆದಿದೆ. ಆಹಾರಧಾನ್ಯ, ನಿತ್ಯಬಳಕೆ ವಸ್ತುಗಳು, ತರಕಾರಿ, ಮನೆ ಬಾಡಿಗೆ, ಹಾಲು ಹೀಗೆ ಎಲ್ಲದರ ಬೆಲೆಯೂ ಗಗನಮುಖಿಯಾಗಿದೆ. ಹೆಚ್ಚುತ್ತಿರುವ ವೆಚ್ಚಕ್ಕೆ ಅನುಗುಣವಾಗಿ ಬಹುಪಾಲು ಜನರ ಆದಾಯದಲ್ಲಿ ಹೆಚ್ಚಳ ಆಗುತ್ತಿಲ್ಲ. ಕೃಷಿಕರು, ಶ್ರಮಿಕ ವರ್ಗದವರು ಆದಾಯ–ವೆಚ್ಚ ಹೊಂದಿಸಿಕೊಳ್ಳಲಾಗದೆ ಸಂಕಟದಲ್ಲಿದ್ದಾರೆ.
ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನಸಮುದಾಯವನ್ನು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸ್ವಲ್ಪಮಟ್ಟಿಗೆ ಸಂತೈಸಿದ್ದವು. ಬೆಲೆ ಏರಿಕೆಯ ಸಾಲಿಗೆ ಈಗ ಬಸ್ ಪ್ರಯಾಣ ದರವೂ ಸೇರಿಕೊಂಡಿದೆ. ಬೆಲೆ ಏರಿಕೆಯನ್ನು ತಡೆಯಬಹುದಾದ ಸಾಧ್ಯತೆಗಳ ಬಗ್ಗೆ ಗಮನವನ್ನೇ ಹರಿಸದ
ರಸ್ತೆ ಸಾರಿಗೆ ನಿಗಮಗಳು ಪ್ರಯಾಣ ದರ ಏರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರಿರುವುದು ಜನವಿರೋಧಿ ಕ್ರಮ.
ದೇಶದಲ್ಲೇ ಅತ್ಯಂತ ಜನಸ್ನೇಹಿ ಹಾಗೂ ಉತ್ತಮ ಬಸ್ ಸೌಕರ್ಯ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಇದೆ. ಅದನ್ನು ಕಾಯ್ದುಕೊಳ್ಳಬೇಕು ಮತ್ತು ಇನ್ನಷ್ಟು ಉತ್ತಮಪಡಿಸುವ ಗುರಿ ಹೊಂದಿರಬೇಕು. ಆದರೆ ಅದಕ್ಕೆ ಪ್ರಯಾಣ ದರ ಏರಿಕೆಯೊಂದೇ ಮಾರ್ಗವಲ್ಲ. ಸಚಿವ ಸಂಪುಟದ ತೀರ್ಮಾನದಂತೆ ಎಲ್ಲ ಮಾದರಿಯ ಬಸ್‌ಗಳಲ್ಲಿನ ಪ್ರಯಾಣ ದರವನ್ನು ಶೇಕಡ 15ರಷ್ಟು ಏರಿಕೆ ಮಾಡಲಾಗಿದೆ, ಅದು ಜಾರಿಯೂ ಆಗಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಟಿಕೆಟ್ ಮಾರಾಟದಿಂದಾಗಿ ಪ್ರತಿ ತಿಂಗಳು ₹1,052 ಕೋಟಿ ವರಮಾನ ಬರುತ್ತಿತ್ತು.
ದರ ಹೆಚ್ಚಳದ ಬಳಿಕ ₹74.52 ಕೋಟಿ ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಕಳೆದ ಸಾಲಿನ ರಾಜ್ಯದ ಬಜೆಟ್ ಗಾತ್ರವು ₹3.71 ಲಕ್ಷ ಕೋಟಿಯಷ್ಟಿದ್ದು, ಈ ಬೃಹತ್ ಮೊತ್ತಕ್ಕೆ ಹೋಲಿಸಿದರೆ ಪ್ರಯಾಣ ದರ ಹೆಚ್ಚಳದಿಂದ ಲಭ್ಯವಾಗುವ ಸಂಪನ್ಮೂಲ ಅತ್ಯಲ್ಪ. ‘ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಿಗಮಗಳು ಮಾಡಿದ ಸಾಲ ಮತ್ತು ನೌಕರರಿಗೆ ನೀಡಬೇಕಾದ ವೇತನ ಮತ್ತು ಭತ್ಯೆಗಳ ಬಾಕಿಯೇ ₹5,900 ಕೋಟಿ ಇತ್ತು. ಬಿಜೆಪಿ ಆಡಳಿತ ಅವಧಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 47ರಷ್ಟು ಹೆಚ್ಚಳ ಮಾಡಲಾಗಿತ್ತು. ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡದೇ 11ವರ್ಷಗಳಾಗಿತ್ತು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದೆ ದರ ಹೆಚ್ಚಳ ಮಾಡಿದಾಗ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಡೀಸೆಲ್‌ನ ಪ್ರತಿದಿನದ ಒಟ್ಟು ವೆಚ್ಚವು ₹9.16 ಕೋಟಿ ಇತ್ತು. ಈಗ ₹13.21 ಕೋಟಿಗೆ ಏರಿದೆ. ಈ ನಿಗಮಗಳು ಸಿಬ್ಬಂದಿಗಾಗಿ ಪ್ರತಿದಿನ ಮಾಡುವ ವೆಚ್ಚವು ಆಗ ₹12.85 ಕೋಟಿ ಇದ್ದದ್ದು, ಈಗ ₹18.36 ಕೋಟಿಗೆ ಹೆಚ್ಚಳವಾಗಿದೆ. ಅದನ್ನು ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯವಾಗಿತ್ತು ಎಂಬ ಸಮರ್ಥನೆಯನ್ನೂ ಸರ್ಕಾರ ನೀಡಿದೆ.
ಆಡಳಿತ ಪಕ್ಷದಲ್ಲಿ ಇದ್ದಾಗ ದರ ಏರಿಕೆಯನ್ನು ಸಮರ್ಥಿಸುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸುವ ಚಾಳಿಯನ್ನು ರಾಜಕೀಯ ಪಕ್ಷಗಳು ಮೈಗೂಡಿಸಿಕೊಂಡಿವೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೂ ಹೊರತಲ್ಲ. ಇಂತಹ ಕಪಟ ನಾಟಕ ಆಡುವುದನ್ನು ರಾಜಕಾರಣಿಗಳು ಬಿಡಬೇಕು. ದರ ಪರಿಷ್ಕರಣೆ ಅನಿವಾರ್ಯವಾಗಿದ್ದಲ್ಲಿ ಆಯಾ ಕಾಲಕ್ಕೆ ಅದನ್ನು ಮಾಡಬೇಕು. ರಾಜಕೀಯ ಹಿತಾಸಕ್ತಿಗಾಗಿ ದರ ಪರಿಷ್ಕರಣೆಯನ್ನು ಮುಂದೂಡುತ್ತಾ ಬಂದು ಏಕಾಏಕಿ ದೊಡ್ಡ ಮಟ್ಟದಲ್ಲಿ ಹೇರಿಕೆ ಮಾಡುವುದು ಸರಿಯಾದ ನಡೆಯಲ್ಲ.
ಆರೋಗ್ಯ, ಶಿಕ್ಷಣ, ಸಮೂಹ ಸಾರಿಗೆಯಂತಹ ವಲಯಗಳನ್ನು ಸರ್ಕಾರವು ಲಾಭ–ನಷ್ಟದ ದೃಷ್ಟಿಯಿಂದ ನೋಡಬಾರದು. ನಷ್ಟವಾಗುತ್ತಿದೆ ಎಂಬ ಕಾರಣ ಮುಂದಿಟ್ಟುಕೊಂಡು ದರ ಏರಿಸುವ ಬದಲು, ವೆಚ್ಚ ಕಡಿಮೆ ಮಾಡುವ ಮಾರ್ಗೋಪಾಯಗಳನ್ನು ಶೋಧಿಸುವುದು ಆದ್ಯತೆ ಆಗಬೇಕು. ಬಸ್ ಮತ್ತು ಯಂತ್ರೋಪಕರಣಗಳ ಖರೀದಿಯಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು, ಸೋರಿಕೆಯನ್ನು ತಡೆಗಟ್ಟಬೇಕು. ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳಬೇಕು. ಜನರ ಕೈಗೆಟಕುವ ದರದಲ್ಲಿ ಉತ್ತಮ ಸಾರಿಗೆ ಸೇವೆಯನ್ನು ಒದಗಿಸುವುದು ಸಾರಿಗೆ ನಿಗಮಗಳ ಹೊಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.