ಚುನಾವಣಾ ಆಯೋಗದ ಪ್ರಾಮಾಣಿಕತೆ ಹಾಗೂ ಅದರ ಅಧಿಕಾರವು ಹಿಂದೆಂದೂ ಕಂಡಿರದಂತಹ ಬಗೆಯಲ್ಲಿ ಪ್ರಶ್ನೆಗೆ ಒಳಗಾಗಿರುವ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮ ನೇಮಕದ ಬಗ್ಗೆಯೇ ವಿವಾದ ಸೃಷ್ಟಿಯಾಗಿರುವ ಹೊತ್ತಿನಲ್ಲಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ‘ಮಧ್ಯರಾತ್ರಿಯಲ್ಲಿ’ ನೇಮಕ ಮಾಡಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿರೋಧಿಸಿದ್ದಾರೆ. ರಾಹುಲ್ ಅವರು ಸಿಇಸಿ ಆಯ್ಕೆ ಸಮಿತಿಯ ಸದಸ್ಯರೂ ಹೌದು. ಆಯ್ಕೆ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವಾಗಲೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಸರ್ಕಾರದ ನಡೆಯು ಗೌರವ ತರುವಂಥದ್ದಲ್ಲ ಎಂದು ರಾಹುಲ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ಜ್ಞಾನೇಶ್ ಕುಮಾರ್ ಅವರನ್ನು ಸಿಇಸಿ ಆಗಿ ನೇಮಕ ಮಾಡಿದ ಮಾರನೆಯ ದಿನವೇ ಸುಪ್ರೀಂ ಕೋರ್ಟ್, ಸಿಇಸಿ ನೇಮಕಕ್ಕಾಗಿ ರೂಪಿಸಿದ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸುವುದಿತ್ತು. ವಿಚಾರಣೆಯನ್ನು ಈಗ ಮಾರ್ಚ್ ತಿಂಗಳಿಗೆ ಮುಂದೂಡಲಾಗಿದೆ. ಸಿಇಸಿ ನೇಮಕ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ (ಸಿಜೆಐ) ಪಾತ್ರವೂ ಇರಬೇಕು ಎಂಬ ಸೂತ್ರವನ್ನು ಕೋರ್ಟ್ ರೂಪಿಸಿತ್ತು. ಆದರೆ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿರಿಸುವ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಿತು. ಈ ಕಾಯ್ದೆಯು ಆಯ್ಕೆ ಸಮಿತಿಯಲ್ಲಿ ಕೇಂದ್ರ ಸರ್ಕಾರಕ್ಕೆ (ಕಾರ್ಯಾಂಗಕ್ಕೆ) ಪ್ರಾಧಾನ್ಯ ಕಲ್ಪಿಸಿದೆ.
ಈಗ ಚಾಲ್ತಿಯಲ್ಲಿ ಇರುವ ಕಾನೂನಿಗೆ ಅನುಗುಣವಾಗಿ ಕೇಂದ್ರ ಸರ್ಕಾರವು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ ಈ ವಿಚಾರವಾಗಿ ಕೋರ್ಟ್ ಹೇಳುವ ಮಾತನ್ನು ಆಲಿಸಿ, ನಂತರ ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಬಹುದಿತ್ತು. ಸಾಂವಿಧಾನಿಕ ಹುದ್ದೆಯೊಂದನ್ನು ಭರ್ತಿ ಮಾಡುವುದು ಹೇಗೆ ಎಂಬ ವಿಚಾರದಲ್ಲಿ ಕೇಂದ್ರ ಸರ್ಕಾರವು ವಿರೋಧ ಪಕ್ಷದ ದೃಷ್ಟಿಕೋನವನ್ನು ಪರಿಗಣಿಸಬಹುದಿತ್ತು. ಸಿಇಸಿ ಹುದ್ದೆಯು ಎಲ್ಲ ರಾಜಕೀಯ ಪಕ್ಷಗಳಿಗೂ ಬಹಳ ಮುಖ್ಯ. ಕೇಂದ್ರವು ಆ ರೀತಿ ನಡೆದುಕೊಂಡಿದ್ದಿದ್ದರೆ ಅದು ಪ್ರಜಾತಾಂತ್ರಿಕವಾಗಿ ಬಹಳ ಘನತೆಯ ನಡೆಯಾಗುತ್ತಿತ್ತು. ರಾಹುಲ್ ಅವರು ಜ್ಞಾನೇಶ್ ಅವರ ನೇಮಕವನ್ನು ವಿರೋಧಿಸುತ್ತಿಲ್ಲ, ಅವರು ವಿರೋಧಿಸುತ್ತಿರುವುದು ನೇಮಕಕ್ಕೆ ಅನುಸರಿಸಿದ ಪ್ರಕ್ರಿಯೆಯನ್ನು ಎಂಬುದನ್ನು ಇಲ್ಲಿ ಗಮನಿಸಬೇಕು. ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳು ಇರುವಾಗ, ನೇಮಕ ಪ್ರಕ್ರಿಯೆಯು ಎಷ್ಟು ವಿಶ್ವಾಸಾರ್ಹವಾಗಿತ್ತು ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ. ಚುನಾವಣಾ ಆಯೋಗದ ತಿರ್ಮಾನಗಳ ಬಗ್ಗೆ ಹಾಗೂ ಅದು ತೆಗೆದುಕೊಂಡ ಕ್ರಮಗಳ ಬಗ್ಗೆ ಕಳೆದ ಕೆಲವು ವರ್ಷಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ, ಅದರಲ್ಲೂ ಮುಖ್ಯವಾಗಿ ರಾಜೀವ್ ಕುಮಾರ್ ಅವರು ಸಿಇಸಿ ಆಗಿದ್ದಾಗ ತೆಗೆದುಕೊಂಡ ತೀರ್ಮಾನಗಳ ವಿಚಾರವಾಗಿ ಪ್ರಶ್ನೆಗಳು ಬಹಳ ಗಂಭೀರವಾಗಿವೆ. ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಹಾಗೂ ಮತದಾರರ ಪಟ್ಟಿಯಲ್ಲಿನ ಲೋಪಗಳಿಗೆ ಸಂಬಂಧಿಸಿದ ದೂರುಗಳನ್ನು ‘ಸೋತವರ ದೂರುಗಳು’ ಎಂದು ಪಕ್ಕಕ್ಕೆ ಸರಿಸಿದರೂ, ಮತದಾನದ ದಿನಾಂಕ, ಮತದಾನಕ್ಕೆ ನಿಗದಿ ಮಾಡಿದ ಹಂತಗಳು ಮತ್ತು ಆಡಳಿತಾರೂಢ ಪಕ್ಷದ ಹಿರಿಯ ನಾಯಕರಿಂದ ನೀತಿ ಸಂಹಿತೆಯ ಉಲ್ಲಂಘನೆ ಆದಾಗ ಕ್ರಮ ಕೈಗೊಳ್ಳುವಲ್ಲಿ ಆಯೋಗ ಕಂಡ ವೈಫಲ್ಯಗಳು, ಆಯೋಗವು ಪಕ್ಷಪಾತಿ ಎಂಬ ಆರೋಪಗಳಿಗೆ ಕಾರಣವಾಗಿವೆ. ಕೆಲವು ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರ ಸಿಕ್ಕಿಲ್ಲದ ಕಾರಣಕ್ಕಾಗಿ, ಸಿಇಸಿ ನೇಮಕದ ಪ್ರಕ್ರಿಯೆಯ ವಿಶ್ವಾಸಾರ್ಹತೆಯು ಮುಖ್ಯವಾಗುತ್ತದೆ.
ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿ ಚುನಾವಣೆಯು ಅತ್ಯಂತ ಮುಖ್ಯವಾದ ಪ್ರಕ್ರಿಯೆ. ಚುನಾವಣೆಗಳು ಮುಕ್ತವಾಗಿ, ನ್ಯಾಯಸಮ್ಮತವಾಗಿ ಆಗುವಂತೆ ನೋಡಿಕೊಳ್ಳಬೇಕಿರುವುದು, ಅವು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆದಿವೆ ಎಂಬ ವಿಶ್ವಾಸವು ಜನರಲ್ಲಿ ಮೂಡುವಂತೆ ಮಾಡುವುದು ಆಯೋಗದ ಕರ್ತವ್ಯ. ಆಯೋಗವು ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು, ಅದು ಸ್ವತಂತ್ರವಾಗಿ ಹಾಗೂ ತಟಸ್ಥವಾಗಿ ಇರಬೇಕು. ಆದರೆ ಈಗ ಆಯೋಗದ ಹಿರಿಮೆ ಕುಗ್ಗಿದೆ. ಆಯೋಗವು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಹೀಗಾಗಿ, ಜ್ಞಾನೇಶ್ ಕುಮಾರ್ ಅವರ ಎದುರು ಸವಾಲುಗಳೂ ಇವೆ ಅವಕಾಶಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.