ADVERTISEMENT

ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ದೂರು: ಲೋಕಪಾಲ್‌ ನಿಲುವು ಸ್ವೀಕಾರಾರ್ಹವಲ್ಲ

ಸಂಪಾದಕೀಯ
Published 28 ಫೆಬ್ರುವರಿ 2025, 19:11 IST
Last Updated 28 ಫೆಬ್ರುವರಿ 2025, 19:11 IST
.
.   

ಹೈಕೋರ್ಟ್‌ಗಳ ಹಾಲಿ ನ್ಯಾಯಮೂರ್ತಿಗಳ ವಿರುದ್ಧದ ದೂರುಗಳನ್ನೂ ಪರಿಶೀಲಿಸುವ ಅಧಿಕಾರ ತನಗಿದೆ ಎಂದು ದೇಶದಲ್ಲಿ ಭ್ರಷ್ಟಾಚಾರ ನಿಗ್ರಹದ ಹೊಣೆಗಾರಿಕೆ ಹೊಂದಿರುವ ಅತ್ಯುನ್ನತ ಸಂಸ್ಥೆಯಾಗಿರುವ ಲೋಕಪಾಲ್‌ ತಳೆದಿರುವ ನಿಲುವು ಲೋಕಪಾಲ್‌ ಅಧಿಕಾರ ವ್ಯಾಪ್ತಿ ಮತ್ತು ನ್ಯಾಯಮೂರ್ತಿಗಳಿಗೆ ಇರುವ ರಕ್ಷಣೆ ಕುರಿತು ಚರ್ಚೆಗೆ ನಾಂದಿ ಹಾಡಿದೆ. ಹೈಕೋರ್ಟ್‌ವೊಂದರ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ತನಗೆ ಬಂದಿರುವ ಎರಡು ದೂರುಗಳು ಮತ್ತು ಅವುಗಳ ಜೊತೆ ಸಲ್ಲಿಸಿರುವ ದಾಖಲೆಗಳನ್ನು ಮುಂದಿನ ಕ್ರಮಕ್ಕಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ರವಾನಿಸುವಂತೆ ಲೋಕಪಾಲ್‌ ಆದೇಶಿಸಿತ್ತು. ಲೋಕಪಾಲ್‌ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ, ಸೂರ್ಯಕಾಂತ್‌ ಮತ್ತು ಎ.ಎಸ್‌. ಓಕಾ ಅವರಿದ್ದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಲೋಕಪಾಲ್‌ ಆದೇಶಕ್ಕೆ ತಡೆ ನೀಡಿದ್ದು, ‘ಲೋಕಪಾಲ್‌ ನಿರ್ಧಾರವು ಅತ್ಯಂತ ಕಳವಳಕಾರಿಯಾದುದು’ ಎಂದು ಹೇಳಿದೆ. ಪ್ರಕರಣದ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೆ ಆದೇಶಿಸಿರುವ ನ್ಯಾಯಾಲಯವು ಆರೋಪ ಎದುರಿಸುತ್ತಿರುವ ನ್ಯಾಯಮೂರ್ತಿ, ಅವರು ಕಾರ್ಯನಿರ್ವಹಿಸುತ್ತಿರುವ ಹೈಕೋರ್ಟ್‌ ಮತ್ತು ದೂರುದಾರರ ಗುರುತುಗಳನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸಿದೆ. ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ನಂತೆ ಸಂವಿಧಾನದ 124ನೇ ವಿಧಿಯ ಅಡಿಯಲ್ಲಿ ಸ್ಥಾಪನೆಯಾಗಿಲ್ಲ ಎಂಬ ಕಾರಣವನ್ನು ಲೋಕಪಾಲ್‌ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಉಲ್ಲೇಖಿಸಿತ್ತು. ‘ಅತ್ಯುನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಯನ್ನು ‘ಸಾರ್ವಜನಿಕ ನೌಕರ’ನ ವ್ಯಾಪ್ತಿಯಿಂದ ಹೊರಗಿಡಲಾಗದು’ ಎಂದು ಕೆ. ವೀರಸ್ವಾಮಿ ಪ್ರಕರಣದಲ್ಲಿ 1991ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನೂ ಲೋಕಪಾಲ್‌ ತನ್ನ ಆದೇಶದಲ್ಲಿ ಸಮರ್ಥನೆಯ ರೂಪದಲ್ಲಿ ಪ್ರಸ್ತಾಪಿಸಿತ್ತು.

‘ಲೋಕಪಾಲ್‌ ಅಭಿಪ್ರಾಯಪಟ್ಟಿರುವಂತೆ ಹೈಕೋರ್ಟ್‌ ನ್ಯಾಯಮೂರ್ತಿಗಳು ಬರೀ ಶಾಸನಬದ್ಧ ಅಧಿಕಾರಿಗಳಲ್ಲ, ಅವರು ಕೂಡ ಸಾಂವಿಧಾನಿಕ ಅಧಿಕಾರ ಹೊಂದಿರುವವರು’ ಎಂದು ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾಯಮೂರ್ತಿ ಓಕಾ ಹೇಳಿದ್ದಾರೆ. ಸಾಲಿಸಿಟರ್‌ ಜನರಲ್‌ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೂ ನ್ಯಾಯಾಲಯದ ಕಳವಳಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ಅವರು ಈಗ ಲೋಕಪಾಲ್‌ ಮುಖ್ಯಸ್ಥರಾಗಿದ್ದಾರೆ. ಹೈಕೋರ್ಟ್‌ ನ್ಯಾಯಮೂರ್ತಿ ವಿರುದ್ಧದ ದೂರುಗಳು ಲೋಕಪಾಲ್‌ ಕಾಯ್ದೆಯ ಸೆಕ್ಷನ್‌ 14ರ ವ್ಯಾಪ್ತಿಯಲ್ಲಿ ಬರುತ್ತವೆ; ಆದರೆ, ದೂರಿನಲ್ಲಿರುವ ಆರೋಪಗಳ ಸತ್ಯಾಸತ್ಯತೆಯನ್ನು ತಾನು ಪರಿಶೀಲಿಸಿಲ್ಲ ಎಂದು ಲೋಕಪಾಲ್‌ ಸ್ಪಷ್ಟಪಡಿಸಿದೆ. ಆದರೆ, ‘ಲೋಕಪಾಲ್‌ ತಪ್ಪು ನಿಲುವು ತಳೆದಿದೆ’ ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿದೆ. ಹೈಕೋರ್ಟ್‌ಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಸಂವಿಧಾನದ 214(1)ನೇ ವಿಧಿಯನ್ನು ನಿರ್ಲಕ್ಷಿಸಿ ಲೋಕಪಾಲ್‌ ತೀರ್ಮಾನಕ್ಕೆ ಬಂದಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದೇಶದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಚುನಾವಣಾ ಆಯುಕ್ತರಿಗೆ ಇರುವಂತಹ ರಕ್ಷಣೆಗಳನ್ನೇ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೂ ನಮ್ಮ ಸಂವಿಧಾನ ಒದಗಿಸಿದೆ. ಲೋಕಪಾಲ್‌ ತಳೆದಿರುವ ನಿಲುವು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸವಾಲಾಗಿ ಪರಿಣಮಿಸುತ್ತದೆ ಎಂಬುದು ಸ್ಪಷ್ಟ. ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ಹೈಕೋರ್ಟ್‌ ನ್ಯಾಯಮೂರ್ತಿಗಳು ಹಸ್ತಕ್ಷೇಪ, ಒತ್ತಡ ಮತ್ತು ಉದ್ದೇಶಪೂರ್ವಕ ದಾಳಿಗಳಿಂದ ರಕ್ಷಣೆಯನ್ನು ಕಳೆದುಕೊಂಡು ದುರ್ಬಲವಾಗಲು ಇದು ಎಡೆಮಾಡಿಕೊಡುವ ಅಪಾಯವಿದೆ. ಆದರೆ, ಈ ಪ್ರಕರಣವು ನ್ಯಾಯಮೂರ್ತಿಗಳ ಹೊಣೆಗಾರಿಕೆಯ ಬಗ್ಗೆಯೂ ಗಮನಹರಿಸುವಂತೆ ಮಾಡಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದ ತನಿಖಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ದೀರ್ಘಕಾಲದಿಂದಲೂ ಇದೆ. ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಜರುಗಿಸಿದ ಉದಾಹರಣೆಗಳು ವಿರಳ. ಕೆಲವೊಮ್ಮೆ ಗೋಪ್ಯವಾಗಿಯೇ ಕ್ರಮ ಕೈಗೊಂಡಿರುವುದೂ ಇದೆ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವ ಎರಡೂ ಜೊತೆ ಜೊತೆಯಾಗಿಯೇ ಸಾಗಬೇಕು. ಈ ವಿಚಾರದಲ್ಲಿ ಲೋಕಪಾಲ್‌ ನಿಲುವು ಸ್ವೀಕಾರಾರ್ಹವಾದುದಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.