ADVERTISEMENT

ಸುಸಜ್ಜಿತ ಆಸ್ಪತ್ರೆ ದೂಳು ಹಿಡಿಯದಿರಲಿ: ಪೂರ್ಣ ಪ್ರಮಾಣದ ಸೇವೆಗೆ ಲಭ್ಯವಾಗಲಿ

ಸಂಪಾದಕೀಯ
Published 10 ಜನವರಿ 2025, 23:30 IST
Last Updated 10 ಜನವರಿ 2025, 23:30 IST
.
.   

ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಸರ್ಕಾರದ ಮೂಲ ಕರ್ತವ್ಯಗಳಲ್ಲಿ ಒಂದು. ನುರಿತ ವೈದ್ಯರು ಮತ್ತು ಸಿಬ್ಬಂದಿ, ಗುಣಮಟ್ಟದ ಔಷಧಿಗಳು ಹಾಗೂ ಪ್ರಯೋಗಾಲಯಗಳನ್ನು
ಒಳಗೊಂಡ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳು ಲಭ್ಯವಿದ್ದರೆ, ಆರೋಗ್ಯ ರಕ್ಷಣೆಗಾಗಿ ನಾಗರಿಕರು ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಅನಿವಾರ್ಯ ತಪ್ಪುತ್ತದೆ. ನಗರ ಪ್ರದೇಶಗಳಲ್ಲಂತೂ
ದುಡಿಮೆಯ ಬಹುಪಾಲನ್ನು ದೈನಂದಿನ ಜೀವನ ನಿರ್ವಹಣೆಗೇ ವ್ಯಯಿಸಬೇಕಾಗಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದು ಕಷ್ಟ ಎಂಬ ಸ್ಥಿತಿ ಇದೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಇದ್ದರೂ ಹಲವೆಡೆ ಮೂಲ ಸೌಕರ್ಯಗಳ ಕೊರತೆಯಿಂದ ಸಮರ್ಪಕವಾದ ಸೇವೆ ಲಭ್ಯವಾಗುತ್ತಿಲ್ಲ. ಇನ್ನೊಂದೆಡೆ, ನೂರಾರು ಕೋಟಿ ರೂಪಾಯಿ ವ್ಯಯಿಸಿ ನಿರ್ಮಿಸಲಾದ, ಅತ್ಯಾಧುನಿಕ ಯಂತ್ರೋಪಕರಣಗಳುಳ್ಳ ಆಸ್ಪತ್ರೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ವೈದ್ಯರು, ಸಿಬ್ಬಂದಿಯನ್ನು ಒದಗಿಸದ ಕಾರಣದಿಂದ ಜನ ಅವುಗಳ ಸೇವೆಯನ್ನು ಪಡೆಯಲು ಸಾಧ್ಯವಾಗದಂತಹ ಸ್ಥಿತಿ ಇದೆ. ₹ 228.36 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ ನಿರ್ಮಿಸಲಾದ ಆರು ಆಸ್ಪತ್ರೆಗಳನ್ನು ಬಳಕೆ ಮಾಡದೇ ಇದ್ದುದಕ್ಕೆ ಮಹಾಲೇಖಪಾಲರು (ಸಿಎಜಿ) 2024ರಲ್ಲಿ ರಾಜ್ಯ ವಿಧಾನಮಂಡಲಕ್ಕೆ ಸಲ್ಲಿಸಿದ್ದ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅಂತಹ ನಿದರ್ಶನಗಳು ಮತ್ತೆ ಮತ್ತೆ ಕಾಣಸಿಗುತ್ತಿವೆ.

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿ ಯಲ್ಲಿ ₹106 ಕೋಟಿ ವೆಚ್ಚದಲ್ಲಿ ನಿರ್ಮಿಸಿ 2023ರ ಮಾರ್ಚ್‌ನಲ್ಲಿ ಉದ್ಘಾಟಿಸಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯ ಸಂಖ್ಯೆಯ ವೈದ್ಯರು, ಸಿಬ್ಬಂದಿಯನ್ನು ಒದಗಿಸದೇ ಇರುವುದರಿಂದ ಪೂರ್ಣಪ್ರಮಾಣದಲ್ಲಿ ಅದು ಬಳಕೆಗೆ ಲಭ್ಯವಾಗಿಲ್ಲ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಈ ಆಸ್ಪತ್ರೆಯ ನಾಲ್ಕು ಅಂತಸ್ತಿನ ಬೃಹತ್‌ ಕಟ್ಟಡದಲ್ಲಿ ಎಲ್ಲ ಸೌಕರ್ಯಗಳು, ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳಿವೆ.

ADVERTISEMENT


ಆದರೂ ಕನಿಷ್ಠ ತುರ್ತು ಚಿಕಿತ್ಸಾ ಘಟಕವೂ ಅಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಏಳು ವೈದ್ಯರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಅಲ್ಲಿನ ದುರವಸ್ಥೆಗೆ ಕನ್ನಡಿ ಹಿಡಿಯುವಂತಿದೆ. ನಗರದ ಮಧ್ಯಭಾಗದಲ್ಲೇ ಇರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ಹೆಚ್ಚಿನ ಬೇಡಿಕೆ ಇದ್ದರೂ ಅದನ್ನು ಜನಬಳಕೆಗೆ ಲಭ್ಯವಾಗದಂತಹ ದುಃಸ್ಥಿತಿಗೆ ತಳ್ಳಿರುವ ಬಿಬಿಎಂಪಿಯ ನಡೆ ಸಂಶಯಕ್ಕೆ ಎಡೆಮಾಡುವಂತಿದೆ. ಭಾರಿ ಮೌಲ್ಯದ ಯಂತ್ರೋಪಕರಣಗಳು, ಪ್ರಯೋಗಾಲಯಗಳಲ್ಲಿನ ಪರೀಕ್ಷಾ ಯಂತ್ರಗಳು ದೂಳು ತಿನ್ನುತ್ತಿವೆ.

ನಮ್ಮ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿನ ಸಮಸ್ಯೆಗಳು, ಕೊರತೆಗಳು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಬಹಿರಂಗವಾಗಿದ್ದವು. ಹಾಸಿಗೆಗಳ ಕೊರತೆ, ಆಮ್ಲಜನಕ ಪೂರೈಕೆ ವ್ಯವಸ್ಥೆಯ ಅಲಭ್ಯತೆ, ಯಂತ್ರೋಪಕರಣ ಮತ್ತು ಔಷಧಿಗಳ ಕೊರತೆ, ವೈದ್ಯರು, ಸಿಬ್ಬಂದಿ ಇಲ್ಲದಿರುವುದು ಹಲವೆಡೆ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯಕ್ಕೆ ಕಾರಣವಾಗಿದ್ದವು. ಭವಿಷ್ಯದಲ್ಲಿ ಅಂತಹ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಸುಧಾರಣೆ ತರಬೇಕೆಂಬ ಬೇಡಿಕೆ ಆಗ ವ್ಯಕ್ತವಾಗಿತ್ತು. ಅದಕ್ಕೆ ಪೂರಕವಾಗಿ ಆಸ್ಪತ್ರೆಗಳಲ್ಲಿ ಇರುವ ಕೊರತೆಗಳನ್ನು ನಿವಾರಿಸಿ ಗುಣಮಟ್ಟದ ಸೇವೆ ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು.

ಅಷ್ಟಾದರೂ ಸುಧಾರಣಾ ಕ್ರಮಗಳ ಅನುಷ್ಠಾನ ಪೂರ್ಣಗೊಳ್ಳದೇ ಇರುವುದರಿಂದ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಅತ್ಯುತ್ಸಾಹ ತೋರಿ, ಅಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಧೋರಣೆಯು ಜನಹಿತಕ್ಕೆ ವಿರುದ್ಧವಾದುದು. ಅಗ್ರಹಾರ ದಾಸರಹಳ್ಳಿ ಆಸ್ಪತ್ರೆಯ ಪ್ರಕರಣದಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ, ಅಗತ್ಯ ಸಂಖ್ಯೆಯ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಬೇಕು. ಈ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.