ADVERTISEMENT

ಆರ್ಥಿಕತೆಗೆ ಉತ್ತೇಜನ ಸ್ವಾಗತಾರ್ಹ ಇನ್ನಷ್ಟು ಸುಧಾರಣೆ ಬೇಕಾಗಿದೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:00 IST
Last Updated 25 ಆಗಸ್ಟ್ 2019, 20:00 IST
   

ಮಂದಗತಿಯಲ್ಲಿ ಪ್ರಗತಿ ಕಾಣುತ್ತಿರುವ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರವು ದೂರಗಾಮಿ ಪರಿಣಾಮ ಬೀರುವ ಸಮಗ್ರ ಸ್ವರೂಪದ ಕೊಡುಗೆಗಳನ್ನು ಪ್ರಕಟಿಸಿದೆ. ತೆರಿಗೆ, ಬ್ಯಾಂಕಿಂಗ್‌, ಷೇರುಪೇಟೆ, ವಾಹನ ತಯಾರಿಕಾ ಉದ್ದಿಮೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 32 ಕ್ರಮಗಳನ್ನು ಘೋಷಿಸಲಾಗಿದೆ. ಉದ್ದಿಮೆ ಮತ್ತು ಕೈಗಾರಿಕಾ ವಲಯದ ಮನವಿಗೆ ತಡವಾಗಿಯಾದರೂ ಸರ್ಕಾರ ಓಗೊಟ್ಟಿದೆ.

ಆರ್ಥಿಕತೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಕಷ್ಟಗಳ ತೀವ್ರತೆ ತಗ್ಗಿಸಲು ಈ ಎಲ್ಲ ಕೊಡುಗೆಗಳು ನೆರವಾಗಲಿವೆ. ಬೆಳವಣಿಗೆಯ ವೇಗ ಹೆಚ್ಚಿಸಲು ಮತ್ತು ಉದ್ದಿಮೆದಾರರಲ್ಲಿ ವಿಶ್ವಾಸ ತುಂಬಲು ಕೆಲ ವಿವಾದಾತ್ಮಕ ನಿರ್ಧಾರಗಳನ್ನು ಕೈಬಿಟ್ಟಿರುವುದೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಸರ್ಚಾರ್ಜ್‌ ಕಾರಣಕ್ಕೆ ಮಾರಾಟ ಒತ್ತಡ ಹೆಚ್ಚಾಗಿ ಷೇರುಪೇಟೆ ವಹಿವಾಟುದಾರರ ಸಂಪತ್ತು ಕರಗಿದೆ. ಈಗಿನ ಕ್ರಮದಿಂದ, ವಹಿವಾಟು ಕುಸಿತದ ಈ ಆತಂಕವೂ ದೂರವಾಗಲಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟಿನಿಂದಾಗಿ ಸಾಲ ನೀಡಿಕೆ ಪ್ರಮಾಣ ಕುಸಿದಿದೆ. ಗ್ರಾಹಕರ ಖರೀದಿ ಉತ್ಸಾಹ ಉಡುಗಿದೆ. ಸಮಂಜಸವಲ್ಲದ ಜಿಎಸ್‌ಟಿ ದರ ಮತ್ತು ‘ಉದ್ದಿಮೆ ಸ್ನೇಹಿ’ಯಲ್ಲದ ತೆರಿಗೆ ವ್ಯವಸ್ಥೆಯಿಂದಾಗಿ ಉದ್ದಿಮೆ ವಹಿವಾಟು ಕುಂಠಿತ ಪ್ರಗತಿ ದಾಖಲಿಸುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ, ನಗದು ಕೊರತೆ, ಗೃಹ, ವಾಹನ ಖರೀದಿಗೆ ಸಾಲದ ಅಲಭ್ಯತೆ, ವಾಹನ ತಯಾರಿಕಾ ಕ್ಷೇತ್ರ ಎದುರಿಸುತ್ತಿರುವ ಮಾರಾಟ ಕುಸಿತ, ಬಂಡವಾಳ ಪೇಟೆಯಲ್ಲಿನ ಹೂಡಿಕೆ ಹೊರ ಹರಿವು ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಿರುವುದು ಸಮಂಜಸವಾಗಿದೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಪ್ರಸ್ತಾವ ಕೈಬಿಟ್ಟು, ದಂಡ ವಿಧಿಸುವುದಕ್ಕೆ ಸೀಮಿತಗೊಳಿಸಲಾಗಿದೆ.

ADVERTISEMENT

ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕೆಂದು ಪ್ರತಿಪಾದಿಸುವ ಸರ್ಕಾರವೇ ಇಂಥ ಕ್ರಮಕ್ಕೆ ಮುಂದಾಗಿದ್ದುದು ಅಸಮಂಜಸ ಧೋರಣೆಯಾಗಿತ್ತು. ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಅಡ್ಡಿಯಾಗಿದ್ದ ‘ಏಂಜೆಲ್‌ ಟ್ಯಾಕ್ಸ್‌’ಗೆ ವಿನಾಯಿತಿ ನೀಡುವುದು ಮಹತ್ವದ ನಿರ್ಧಾರವಾಗಿದೆ. ನಿರಂತರ ಮಾರಾಟ ಕುಸಿತ ಕಾಣುತ್ತಿರುವ ವಾಹನ ತಯಾರಿಕಾ ಉದ್ದಿಮೆಯ ಬಿಕ್ಕಟ್ಟು ಪರಿಹರಿಸಲು ಗಮನ ನೀಡಲಾಗಿದೆ.

ಸರ್ಕಾರಿ ಇಲಾಖೆಗಳಲ್ಲಿನ ಹೊಸ ವಾಹನ ಖರೀದಿ ನಿರ್ಬಂಧ ರದ್ದು, ನೋಂದಣಿ ಶುಲ್ಕ ಹೆಚ್ಚಳ ಪ್ರಸ್ತಾವ ಕೈಬಿಡುವುದು ಮತ್ತು ಮಾಲಿನ್ಯ ನಿಯಂತ್ರಣ ಮಾನದಂಡದ ನಿಯಮಗಳನ್ನು ಸ್ಪಷ್ಟಪಡಿಸಿರುವುದು ಮಹತ್ವದ ನಿರ್ಧಾರಗಳಾಗಿವೆ. 30 ದಿನಗಳಲ್ಲಿ ಜಿಎಸ್‌ಟಿ ಮರುಪಾವತಿ ಪೂರ್ಣಗೊಳಿಸಲಿರುವುದು ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳ ಮೇಲಿನ ಹೊರೆ ತಗ್ಗಿಸಲಿದೆ. ಜತೆಗೆ ರಫ್ತು ವಹಿವಾಟನ್ನೂ ಹೆಚ್ಚಿಸಲಿದೆ. ಸಾಲ ಖಾತರಿಯ ಭರವಸೆಯ ಜತೆಗೆ ಬಾಂಡ್‌ ಮಾರುಕಟ್ಟೆ ಬಲಪಡಿಸುವ ಕ್ರಮಗಳು ಬಂಡವಾಳ ಪೇಟೆಯಲ್ಲಿ ಉತ್ಸಾಹ ಮೂಡಿಸಲಿವೆ.

ಆರ್ಥಿಕತೆ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡಗಳು ಕೆಲ ಮಟ್ಟಿಗಾದರೂ ಚದುರಲಿವೆ. ಬ್ಯಾಂಕ್‌ಗಳಿಗೆ ತಕ್ಷಣ ₹ 70 ಸಾವಿರ ಕೋಟಿಗಳ ಪುನರ್ಧನ ಘೋಷಿಸಿರುವುದರಿಂದ ಗೃಹ, ವಾಹನ ಖರೀದಿಗೆ ಸಾಲ ನೀಡುವ ಪ್ರಮಾಣ ಹೆಚ್ಚಲಿದೆ. ಬಡ್ಡಿ ದರಗಳೂ ಅಗ್ಗವಾಗಲಿವೆ. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಳಗೊಂಡು ಅಭಿವೃದ್ಧಿಯ ಚಕ್ರ ವೇಗವಾಗಿ ತಿರುಗಲಿದೆ.

ಅರ್ಥ ವ್ಯವಸ್ಥೆಯ ಪಾಲಿಗೆ ಶಕ್ತಿವರ್ಧಕವಾಗಿರುವ ಈ ಕ್ರಮಗಳಿಂದಷ್ಟೇ ಸಕಲ ಸಮಸ್ಯೆಗಳೂ ನಿವಾರಣೆಯಾಗುವುದಿಲ್ಲ.ಅರ್ಥ ವ್ಯವಸ್ಥೆಯನ್ನು ಮರಳಿ ಪುನಶ್ಚೇತನದ ಹಾದಿಗೆ ತರಲು ಇನ್ನೂ ಹಲವಾರು ಸುಧಾರಣಾ ಕ್ರಮಗಳ ಅಗತ್ಯ ಇದೆ. ಮುಂಬರುವ ದಿನಗಳಲ್ಲಿ ಆರ್ಥಿಕ ವೃದ್ಧಿ ದರ ಶೇ 5.7ರಿಂದ ಶೇ 6.2ರ ಮಧ್ಯೆಯೇ ಇರಲಿದೆ ಎನ್ನುವ ಅಂದಾಜನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದುವರೆಗೆ ಆಗಿರುವ ಹಾನಿ ಸರಿಪಡಿಸಲು ಇನ್ನಷ್ಟು ಕ್ರಮಗಳ ಅಗತ್ಯ ಇದೆ. ಈ ಕೊಡುಗೆಗಳು ಜನಪ್ರಿಯ ಘೋಷಣೆಗಳಾಗಷ್ಟೇ ಉಳಿಯದೆ, ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಎಚ್ಚರ ವಹಿಸಬೇಕಾಗಿದೆ.

ಸಂಕಷ್ಟದಲ್ಲಿರುವ ರೈತರ ಕಣ್ಣೀರು ಒರೆಸುವ, ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಕೆಲಸವೂ ಆಗಬೇಕಾಗಿದೆ. ಕೈಗಾರಿಕೋದ್ಯಮಿಗಳೂ ಸರ್ಕಾರದ ಆಶಯಕ್ಕೆ ಸೂಕ್ತ ರೀತಿಯಲ್ಲಿ ಕೈಜೋಡಿಸಬೇಕಾಗಿದೆ. ಆರ್ಥಿಕತೆಯನ್ನು ಪ್ರಗತಿಯ ಹಳಿಗೆ ತರುವುದಕ್ಕೆ ಕೈಗೊಂಡಿರುವ ಉತ್ತೇಜನ ಕ್ರಮಗಳ ಆಶಯ ಸಾಕಾರಗೊಳ್ಳಲು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.