ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ನಡೆದಲ್ಲಿ, ದಕ್ಷಿಣದ ರಾಜ್ಯಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಭರವಸೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾ ಅವರ ಮಾತುಗಳು ‘ವಿಶ್ವಾಸಾರ್ಹ ಆಗಿಲ್ಲ’ ಎಂದು ಹೇಳಿದ್ದಾರೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಬಗ್ಗೆ ಎಚ್ಚರಿಕೆಯ ಧಾಟಿಯ ಅಭಿಪ್ರಾಯವನ್ನು ತೆಲಂಗಾಣದ ಕಾಂಗ್ರೆಸ್ ಹಾಗೂ ಭಾರತ ರಾಷ್ಟ್ರ ಸಮಿತಿಯ ನಾಯಕರು ವ್ಯಕ್ತಪಡಿಸಿ ದ್ದಾರೆ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ಬಿಜೆಪಿ ಹೊಂದಿರುವ ಯೋಜನೆಗೆ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಮುಖರು ವಿರೋಧ ವ್ಯಕ್ತಪಡಿಸುತ್ತಿರುವುದು ರಾಜಕೀಯ ಉದ್ದೇಶದ್ದು ಎಂದು ಹೇಳುವುದು ಸರಿಯಲ್ಲ. ಏಕೆಂದರೆ, ಮರುವಿಂಗಡಣೆಯನ್ನು ವಿರೋಧಿಸಿ ತಮಿಳುನಾಡು 2024ರಲ್ಲಿ ನಿರ್ಣಯ ಕೈಗೊಂಡಾಗ, ಅದಕ್ಕೆ ಅಲ್ಲಿನ ಬಿಜೆಪಿ ನಾಯಕರ ಬೆಂಬಲವೂ ಇತ್ತು ಎಂಬುದನ್ನು ಮರೆಯುವಂತಿಲ್ಲ.
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಕಾರಣದಿಂದಾಗಿ ದಕ್ಷಿಣದ ರಾಜ್ಯಗಳ ಒಂದೇ ಒಂದು ಲೋಕಸಭಾ ಸೀಟು ಕೂಡ ಕಡಿಮೆ ಆಗುವುದಿಲ್ಲ ಎಂಬ ಭರವಸೆಯನ್ನು ಶಾ ಅವರು ನೀಡಿದ್ದಾರೆ. ಆದರೆ ಮರುವಿಂಗಡಣೆಯ ಉದ್ದೇಶವನ್ನು ಇನ್ನಷ್ಟು ಸೂಕ್ಷ್ಮವಾಗಿ ಅವಲೋಕಿಸಬೇಕು. ಮರುವಿಂಗಡಣೆಗೆ ಆಧಾರ ಆಗುವುದು ಯಾವ ವರ್ಷದಲ್ಲಿ ನಡೆಯುವ ಜನಗಣತಿ? ಶಾ ಅವರು ಹೇಳಿದಂತೆ ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸು ವುದಾದಲ್ಲಿ, 1970ರ ದಶಕದಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಜನಸಂಖ್ಯಾ ನಿಯಂತ್ರಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ದಕ್ಷಿಣದ ರಾಜ್ಯಗಳು ಕಳೆದುಕೊಳ್ಳುವುದೇ ಹೆಚ್ಚು. ಉತ್ತರ ಭಾರತದ ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿಲ್ಲ ಎಂಬುದನ್ನು ಗಮನಿಸಬೇಕು. 1971ರ ನಂತರದಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಹೆಚ್ಚಳ ಪ್ರಮಾಣವು ಉತ್ತರ ಭಾರತದ ರಾಜ್ಯಗಳಲ್ಲಿನ ಜನಸಂಖ್ಯೆಯ ಹೆಚ್ಚಳದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಅದರಲ್ಲೂ ಮುಖ್ಯವಾಗಿ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶದ ಜನಸಂಖ್ಯಾ ಹೆಚ್ಚಳದ ಪ್ರಮಾಣಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆ ಇದೆ. ಅಂದರೆ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ನಂತರ ದಕ್ಷಿಣದ ರಾಜ್ಯಗಳ ಲೋಕಸಭಾ ಸೀಟುಗಳ ಸಂಖ್ಯೆಯು ಹೆಚ್ಚಾಗಬಹುದಾದರೂ, ಆ ಹೆಚ್ಚಳವು ಉತ್ತರದ ಹಿಂದಿ ರಾಜ್ಯಗಳ ಸೀಟುಗಳಲ್ಲಿ ಆಗುವ ಹೆಚ್ಚಳಕ್ಕಿಂತ ಕಡಿಮೆ ಇರುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಮರುವಿಂಗಡಣೆಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಕೇಂದ್ರದ ಮಾರ್ಗಸೂಚಿಗಳನ್ನು ಪಾಲನೆ ಮಾಡದ ರಾಜ್ಯಗಳಿಗೆ ಮರುವಿಂಗಡಣೆ ಮೂಲಕ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳನ್ನು ಕೊಟ್ಟು ‘ಪಾರಿತೋಷಕ’ ನೀಡಲಾಗುತ್ತದೆ, ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಅಂದರೆ ಶಾಸನ ರೂಪಿಸುವ ಸಂದರ್ಭದಲ್ಲಿ ಹೆಚ್ಚು ಮಹತ್ವ ಸಿಕ್ಕಂತಾಗು ತ್ತದೆ ಎಂಬ ಕಳವಳವನ್ನು ಅರ್ಥಮಾಡಿಕೊಳ್ಳಬೇಕು. ಮರುವಿಂಗಡಣೆ ಆದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರವು ಉತ್ತರದ ರಾಜ್ಯಗಳತ್ತ ಇನ್ನಷ್ಟು ವಾಲುತ್ತದೆ ಎಂದು ದಕ್ಷಿಣದ ರಾಜ್ಯಗಳು ಹೊಂದಿರುವ ಕಳವಳಕ್ಕೆ ಸ್ಪಂದಿಸುವ ಕಾರ್ಯವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದುವರೆಗೆ ಪರಿಣಾಮಕಾರಿಯಾಗಿ ಮಾಡಿಲ್ಲ. ವಿಂಧ್ಯ ಪರ್ವತದ ದಕ್ಷಿಣಕ್ಕೆ ಇರುವ ಪ್ರದೇಶಗಳ ಜನರು ಮರುವಿಂಗಡಣೆ ಕಾರ್ಯವನ್ನು ಭಾರತದ ಭಾಷಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬಹುತ್ವವನ್ನು ಅಳಿಸಿ, ಅದನ್ನು ಏಕರೂಪಿಯಾಗಿಸುವ ಬಿಜೆಪಿ–ಸಂಘ ಪರಿವಾರದ ಕಾರ್ಯಸೂಚಿಯ ಭಾಗವಾಗಿ ಕಾಣುತ್ತಿದ್ದಾರೆ.
ವಿಶ್ವಾಸದ ಕೊರತೆಯು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧದಲ್ಲಿ ಸೌಹಾರ್ದ ಇಲ್ಲದಿರುವುದನ್ನೂ ಹೇಳುತ್ತಿದೆ. ಎರಡೂ ವ್ಯವಸ್ಥೆಗಳ ನಡುವೆ ಸುಮಧುರ ಸಂಬಂಧ ಇದ್ದಾಗ ದೊಡ್ಡ ಮಟ್ಟದ ಸುಧಾರಣೆಗಳು ಸುಲಲಿತವಾಗಿ ಜಾರಿಗೆ ಬರುತ್ತವೆ. ರಾಜ್ಯಗಳ ಜೊತೆ ಒಳ್ಳೆಯ ಸಂಬಂಧ ರೂಪಿಸುವ ಕೆಲಸದಲ್ಲಿ ಒಂದು ಹೆಜ್ಜೆ ಮುಂದೆ ಹೋಗಬೇಕಾದ ಹೊಣೆ ಕೇಂದ್ರದ ಮೇಲೆ ಇದೆ. ದಕ್ಷಿಣದ ರಾಜ್ಯಗಳ ಕಳವಳಗಳನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನೇತೃತ್ವ ಹೊತ್ತಿರುವ ರಾಜಕೀಯ ಪಕ್ಷವು ಕಡೆಗಣಿಸಿದರೆ, ಉತ್ತರದ ರಾಜ್ಯಗಳ ಎದುರು ದಕ್ಷಿಣದ ರಾಜ್ಯಗಳ ಧ್ವನಿ ಕ್ಷೀಣವಾಗಲಿದೆ ಎಂಬ ಆತಂಕ ಇನ್ನಷ್ಟು ಹೆಚ್ಚಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.