ADVERTISEMENT

ಸಂಪಾದಕೀಯ: ಚಿಲ್ಲರೆ ಹಣದುಬ್ಬರ ನಿಯಂತ್ರಣ; ವೈಫಲ್ಯದ ಹಾದಿಯಲ್ಲಿ ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 19:30 IST
Last Updated 13 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದಲ್ಲಿ ಹಬ್ಬಗಳ ಋತು ಶುರುವಾಗುತ್ತಿದೆ. ಈ ಸಂದರ್ಭದಲ್ಲಿ ಆಗಸ್ಟ್‌ ತಿಂಗಳ ಚಿಲ್ಲರೆ ಹಣದುಬ್ಬರ ದರಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಬಿಡುಗಡೆ ಆಗಿವೆ. ಆಗಸ್ಟ್‌ನಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಮತ್ತೆ ಏರಿಕೆಯ ಹಾದಿಗೆ ತಿರುಗಿದೆ. ಹಿಂದಿನ ಮೂರು ತಿಂಗಳುಗಳಿಂದ ಚಿಲ್ಲರೆ ಹಣದುಬ್ಬರ ದರವು ಇಳಿಕೆಯ ಹಾದಿಯನ್ನು ಹಿಡಿದಿತ್ತು. ಆದರೆ, ಆಗಸ್ಟ್‌ನಲ್ಲಿ ಅದು ಶೇಕಡ 7ಕ್ಕೆ ಏರಿದೆ. ಆಹಾರ ವಸ್ತುಗಳ ಬೆಲೆ ಹೆಚ್ಚಳವು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ. ಈ ನಡುವೆ, ದೇಶದ ಕೈಗಾರಿಕಾ ಉತ್ಪನ್ನಗಳ ಬೆಳವಣಿಗೆ ದರವು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹಣದುಬ್ಬರದ ಏರಿಕೆ ಹಾಗೂ ಕೈಗಾರಿಕಾ ಉತ್ಪನ್ನಗಳ ಬೆಳವಣಿಗೆ ದರದಲ್ಲಿ ಕುಸಿತವು ಒಳ್ಳೆಯ ಸುದ್ದಿ ಖಂಡಿತ ಅಲ್ಲ. ಹಣದುಬ್ಬರದ ಸಮಸ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಮಾರುಕಟ್ಟೆಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ 7.15ರಷ್ಟು, ನಗರ ಪ್ರದೇಶಗಳಲ್ಲಿ ಶೇ 6.72ರಷ್ಟು ಇದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ. ಗ್ರಾಮೀಣ ಪ್ರದೇಶಗಳ ಜನರಲ್ಲಿನ ಕೊಳ್ಳುವ ಶಕ್ತಿಯು ನಗರ ಪ್ರದೇಶಗಳ ಜನರಲ್ಲಿನ ಕೊಳ್ಳುವ ಶಕ್ತಿಗಿಂತ ತುಸು ಕಡಿಮೆ ಎಂಬುದು ಸಾಮಾನ್ಯ ನಂಬಿಕೆ. ಅಂದರೆ, ಬೆಲೆ ಏರಿಕೆಯ ಬಿಸಿಯನ್ನು ಈಗ ಹಳ್ಳಿಗರೇ ಹೆಚ್ಚು ಅನುಭವಿಸುತ್ತಿದ್ದಾರೆ. ಅವರ ಕೊಳ್ಳುವ ಶಕ್ತಿಯು ಮತ್ತಷ್ಟು ಕಡಿಮೆ ಆಗಿದೆ.

ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೇ 6ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಿಸಬೇಕಿತ್ತು. ಇದು ಆರ್‌ಬಿಐ ಮೇಲಿರುವ ಬಹುದೊಡ್ಡ ಹೊಣೆಗಳಲ್ಲಿ ಒಂದು. ಆದರೆ ಸತತ ಎಂಟು ತಿಂಗಳುಗಳಿಂದ ಅದು ಈ ಮಟ್ಟವನ್ನು ಮೀರಿದೆ. ಇನ್ನೂ ಒಂದು ತಿಂಗಳು (ಸೆಪ್ಟೆಂಬರ್‌) ಚಿಲ್ಲರೆ ಹಣದುಬ್ಬರವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದರೆ ಆರ್‌ಬಿಐ ತನ್ನ ಹೊಣೆ ನಿಭಾಯಿಸುವಲ್ಲಿ ಸೋತಿದೆ ಎಂದು ಅರ್ಥ. ಆಗ ಆರ್‌ಬಿಐ ತಾನು ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದ್ದು ಏಕೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿವರಣೆ ಸಲ್ಲಿಸಬೇಕಾಗುತ್ತದೆ. ಈಗಿನ ಪರಿಸ್ಥಿತಿ ಗಮನಿಸಿದರೆ, ಅರ್ಥಶಾಸ್ತ್ರಜ್ಞರು ಹಾಗೂ ಮಾರುಕಟ್ಟೆ ಪರಿಣತರು ಹೇಳುವ ಮಾತುಗಳನ್ನು ಗಮನಿಸಿದರೆ ಆರ್‌ಬಿಐ ತನ್ನ ಹೊಣೆ ನಿಭಾಯಿಸುವಲ್ಲಿ ವಿಫಲ ಆಗಲಿರುವುದು ಬಹುತೇಕ ಖಚಿತ. ಹಣದುಬ್ಬರ ನಿಯಂತ್ರಿಸುವಲ್ಲಿನ ಈ ವೈಫಲ್ಯವು ನೇರವಾಗಿ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ, ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತದೆ. ಹಣದುಬ್ಬರ ನಿಯಂತ್ರಿಸಲು ರೆಪೊ ದರ ಹೆಚ್ಚಿಸುವುದು ಹಾಗೂ ವ್ಯವಸ್ಥೆಯಲ್ಲಿನ ನಗದು ಹರಿವನ್ನು ಕಡಿಮೆ ಮಾಡುವುದನ್ನು ಹೊರತುಪಡಿಸಿದರೆ ಆರ್‌ಬಿಐ ಬಳಿ ಹೆಚ್ಚಿನ ಅಸ್ತ್ರಗಳು ಇಲ್ಲ. ರೆಪೊ ದರ ಹೆಚ್ಚಿಸುವ ಕೆಲಸವನ್ನು ಆರ್‌ಬಿಐ ಮೇ ತಿಂಗಳಿನಿಂದ ಮಾಡುತ್ತ ಬಂದಿದೆ. ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಮೀಸಲು ಇರಿಸಬೇಕಾದ ಹಣದ ಪ್ರಮಾಣ ಹೆಚ್ಚಿಸುವ ಮೂಲಕ, ನಗದು ಚಲಾವಣೆ ತಗ್ಗಿಸಲು ಯತ್ನಿಸಿದೆ. ಆದರೂ, ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ.

ಅಂದರೆ, ಹಣದುಬ್ಬರದ ಸಮಸ್ಯೆಗೆ ಕಾರಣ ಕಡಿಮೆ ಬಡ್ಡಿ ದರ ಹಾಗೂ ಹೆಚ್ಚಿನ ನಗದು ಚಲಾವಣೆ ಮಾತ್ರವೇ ಅಲ್ಲ. ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿನ ಮಟ್ಟದಲ್ಲಿ ಇರುವುದು ಕೂಡ ಹಣದುಬ್ಬರ ಏರಿಕೆಗೆ ಕಾರಣ. ಈ ಸಮಸ್ಯೆ
ಗಳನ್ನು ನಿಭಾಯಿಸಲು ಆರ್‌ಬಿಐನಿಂದ ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗಿರುವುದರಿಂದ ಹಾಗೂ ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಸಿಗುತ್ತಿರುವ ಕಾರಣ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು. ಆಗ, ಹಣದುಬ್ಬರ ಪ್ರಮಾಣವು ಕಡಿಮೆ ಆಗಬಹುದು. ಈ ತಿಂಗಳಲ್ಲಿ ರೆಪೊ ದರ ಹೆಚ್ಚಿಸುವುದು ಆರ್‌ಬಿಐ ಪಾಲಿಗೆ ಈಗ ಅನಿವಾರ್ಯ ಆಗಿದ್ದರೂ, ಅದರಿಂದಾಗಿ ಹಬ್ಬಗಳ ಸಂದರ್ಭದಲ್ಲಿ ಕೈಗಾರಿಕೆಗಳಿಗೆ ಬಂಡವಾಳ ಸಂಗ್ರಹ (ಸಾಲ ಪಡೆಯುವುದು) ಹೆಚ್ಚು ವೆಚ್ಚದಾಯಕ ಆಗಬಹುದು. ಸಾಲದ ಬಡ್ಡಿ ಹೆಚ್ಚಾದರೆ ಜನಸಾಮಾನ್ಯರು ಮನೆ, ವಾಹನ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿಗೆ ಹಿಂದೇಟು ಹಾಕಬಹುದು. ರೆಪೊ ದರ ಹೆಚ್ಚಿಸದೇ ಇದ್ದರೆ, ಠೇವಣಿದಾರರಿಗೆ ಲಾಭದಾಯಕ ಮೊತ್ತ ಸಿಗುವುದಿಲ್ಲ. ಎರಡು ಅಲಗಿನ ಕತ್ತಿಯ ನಡುವೆ ಇರುವಂತಿದೆ ಆರ್‌ಬಿಐನ ಈಗಿನ ಸ್ಥಿತಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.