ADVERTISEMENT

ಸಂಪಾದಕೀಯ: ಆಪರೇಷನ್ ಸಿಂಧೂರ ಕಾರ್ಯಾಚರಣೆ– ಪಾಕಿಸ್ತಾನ ಪಾಠ ಕಲಿಯಬೇಕು

ಸಂಪಾದಕೀಯ
Published 8 ಮೇ 2025, 0:10 IST
Last Updated 8 ಮೇ 2025, 0:10 IST
<div class="paragraphs"><p>ಸಂಪಾದಕೀಯ: ಆಪರೇಷನ್ ಸಿಂಧೂರ ಕಾರ್ಯಾಚರಣೆ– ಪಾಕಿಸ್ತಾನ ಪಾಠ ಕಲಿಯಬೇಕು</p></div>

ಸಂಪಾದಕೀಯ: ಆಪರೇಷನ್ ಸಿಂಧೂರ ಕಾರ್ಯಾಚರಣೆ– ಪಾಕಿಸ್ತಾನ ಪಾಠ ಕಲಿಯಬೇಕು

   

ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತೀಕಾರದ ರೂಪದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತವು ದಾಳಿ ನಡೆಸಿದೆ. ಬಹಾವಲ್‌ಪುರ, ಮುಜಫ್ಫರಾಬಾದ್ ಮತ್ತು ಇತರ ಕೆಲವು ಸ್ಥಳಗಳಲ್ಲಿನ ಒಟ್ಟು ಒಂಬತ್ತು ಶಿಬಿರಗಳ ಮೇಲೆ ಭಾರತವು ಮಿಲಿಟರಿ ದಾಳಿ ನಡೆಸಿದೆ. ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ನಂತರದಲ್ಲಿ, ಈ ದಾಳಿ ನಡೆಸಿದವರು ಹಾಗೂ ದಾಳಿಗೆ ಬೆಂಬಲ ನೀಡಿದವರ ವಿರುದ್ಧ ಕ್ರಮ ಜರುಗಿಸುವುದು ಖಚಿತ ಎಂಬ ಮಾತನ್ನು ಭಾರತ ಸ್ಪಷ್ಟವಾಗಿ ಹೇಳಿತ್ತು. ಭಯೋತ್ಪಾದಕರು ಎಲ್ಲಿಯೇ ಇದ್ದರೂ ಅವರನ್ನು ಹುಡುಕಿ ಶಿಕ್ಷಿಸಲಾಗುತ್ತದೆ ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಕೇಂದ್ರ ಸರ್ಕಾರದ ಇತರ ಕೆಲವು ಪ್ರಮುಖ ಮುಖಂಡರು ಕೂಡ, ದೇಶದ ದೃಢಸಂಕಲ್ಪವನ್ನು ಸ್ಪಷ್ಟವಾಗಿ ಹೇಳಿದ್ದರು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗುರಿಗಳ ಮೇಲೆ ಭಾರತ ನಡೆಸಿರುವ ದಾಳಿಯು ಯಶಸ್ವಿಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಈ ದಾಳಿಗೆ ಹಲವು ಭಯೋತ್ಪಾದಕರು ಬಲಿಯಾಗಿದ್ದಾರೆ. ‘ಆಪರೇಷನ್ ಸಿಂಧೂರ’ ಹೆಸರಿನ ಈ ಕಾರ್ಯಾಚರಣೆಯು ‘ಭಯೋತ್ಪಾದಕರನ್ನು ತಯಾರು ಮಾಡುವ ಮೂಲಸೌಕರ್ಯ’ವನ್ನು ಗುರಿಯಾಗಿಸಿಕೊಂಡಿತ್ತು.

ಪಾಕಿಸ್ತಾನದ ಯಾವುದೇ ಮಿಲಿಟರಿ ಸ್ಥಳಗಳ ಮೇಲೆ ದಾಳಿ ನಡೆಸಿಲ್ಲ ಎಂಬುದನ್ನು ಭಾರತ ಸ್ಪಷ್ಟಪಡಿಸಿದೆ. ತನ್ನ ಗುರಿಯು ಬಹಳ ನಿಖರವಾಗಿತ್ತು, ಪ್ರತಿದಾಳಿಯನ್ನು ಆಲೋಚಿಸಿ ನಡೆಸಲಾಗಿದೆ, ಅದು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವ ಸ್ವರೂಪದ್ದಲ್ಲ ಎಂಬುದನ್ನು ಕೂಡ ಭಾರತ ಹೇಳಿದೆ. ಗುರಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮತ್ತು ದಾಳಿಯ ಆಲೋಚನೆಯನ್ನು ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಸಂಯಮ ಪಾಲಿಸಲಾಗಿದೆ ಎಂದೂ ಹೇಳಿದೆ. ಭಾರತ ನಡೆಸಿರುವ ದಾಳಿಯನ್ನು ‘ಅಪ್ರಚೋದಿತ’ ಎಂದು ಪಾಕಿಸ್ತಾನ ಕರೆದಿದೆ. ‘ದಾಳಿಗೆ ಪ್ರತಿಯಾಗಿ ಶಿಕ್ಷೆ ಇಲ್ಲದಿಲ್ಲ’ ಎಂದು ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಅಂದರೆ ಪಾಕಿಸ್ತಾನ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ ಎಂಬುದನ್ನು ಅವರ ಮಾತು ಹೇಳುತ್ತಿದೆ. ಬಿಕ್ಕಟ್ಟು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯನ್ನು ಭಾರತವು ಮೊದಲೇ ಅಂದಾಜು ಮಾಡಿದೆ. ನಾಗರಿಕರ ಸ್ವಯಂ ರಕ್ಷಣೆಯ ಸಿದ್ಧತೆಗಳನ್ನು ಇನ್ನಷ್ಟು ಹೆಚ್ಚುಮಾಡುವ ಉದ್ದೇಶದಿಂದ ಸ್ವಯಂ ರಕ್ಷಣಾ ತಾಲೀಮುಗಳನ್ನು ದೇಶದೆಲ್ಲೆಡೆ ಆಯೋಜಿಸಿರುವುದು ಇದೇ ಕಾರಣಕ್ಕಾಗಿ. ಇಂತಹ ತಾಲೀಮು ದೇಶದಲ್ಲಿ ಐದು ದಶಕಗಳ ನಂತರ ಇದೇ ಮೊದಲ ಬಾರಿಗೆ ನಡೆದಿದೆ. ಅಂದರೆ, ಪಾಕಿಸ್ತಾನದ ಜೊತೆಗಿನ ಸಂಘರ್ಷವು ಒಂದೆರಡು ದಿನಗಳ ಏಟು–ಎದಿರೇಟಿನ ಆಚೆಗೂ ವಿಸ್ತರಿಸುವ ಸಾಧ್ಯತೆ ಇಲ್ಲದಿಲ್ಲ. ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇರಿಸುವುದು, ರಾಜತಾಂತ್ರಿಕ ಸಂಬಂಧವನ್ನು ಕಡಿಮೆ ಮಾಡಿದ್ದು ಸೇರಿದಂತೆ ಇತರ ಹಲವು ಕ್ರಮಗಳನ್ನು ಕೈಗೊಂಡ ನಂತರದಲ್ಲಿ ಭಾರತವು ದಾಳಿ ನಡೆಸಿದೆ. ಪಹಲ್ಗಾಮ್‌ ದಾಳಿಯ ವಿಚಾರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ ಎಂಬ ವರದಿಗಳು ಬಂದ ನಂತರದಲ್ಲಿ ಭಾರತ ದಾಳಿ ನಡೆಸಿದೆ. ಭಾರತದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಪಾಕಿಸ್ತಾನವು ಬೆಂಬಲ ನೀಡುವುದನ್ನು ಭಾರತದ ಮೇಲಿನ ಆಕ್ರಮಣ ಎಂದು ಮಾತ್ರವೇ ಅರ್ಥ ಮಾಡಿಕೊಳ್ಳಬಹುದು. ಪಾಕಿಸ್ತಾನದ ಕೃತ್ಯಗಳ ಕಾರಣದಿಂದಾಗಿ ಭಾರತ ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರವು ಜಗತ್ತಿನ ಪ್ರಮುಖ ದೇಶಗಳಿಗೆ ಮಾಹಿತಿ ನೀಡಿದೆ.

ADVERTISEMENT

ದೇಶದ ಹಿತಾಸಕ್ತಿಯನ್ನು, ಸಾರ್ವಭೌಮತ್ವವನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಕೈಗೊಂಡಿರುವ ಕ್ರಮಕ್ಕೆ ಇಡೀ ದೇಶ ಬೆಂಬಲ ವ್ಯಕ್ತಪಡಿಸಿದೆ. ಎಲ್ಲ ರಾಜಕೀಯ ಪಕ್ಷಗಳು ಕೂಡ ಸಶಸ್ತ್ರ ಪಡೆಗಳಿಗೆ ಬೆಂಬಲ ಸೂಚಿಸಿವೆ. ಪಾಕಿಸ್ತಾನವು ಪಾಠ ಕಲಿತುಕೊಂಡು, ಹೆಜ್ಜೆಯನ್ನು ಹಿಂದಕ್ಕೆ ಇರಿಸಿದರೆ ಒಳಿತು. ಅದು ನೆರೆಯ ರಾಷ್ಟ್ರದ ಜೊತೆ ಒಳ್ಳೆಯ ಸಂಬಂಧ ಹೊಂದುವುದನ್ನು ತನ್ನ ನೀತಿಯನ್ನಾಗಿಸಿಕೊಳ್ಳಬೇಕು. ದೀರ್ಘ ಅವಧಿಯ ಸಮರವು ಎರಡೂ ದೇಶಗಳಿಗೆ ಒಳಿತು ಮಾಡುವುದಿಲ್ಲ. ಅದರಲ್ಲೂ ಮುಖ್ಯವಾಗಿ, ಆರ್ಥಿಕವಾಗಿ ದುರ್ಬಲಗೊಂಡಿರುವ ಹಾಗೂ ರಾಜಕೀಯವಾಗಿ ಕುಸಿಯುವ ಹಂತ ತಲುಪಿರುವ ಪಾಕಿಸ್ತಾನಕ್ಕೆ ಯುದ್ಧ ಒಳಿತಲ್ಲ. ಪಾಕಿಸ್ತಾನಕ್ಕಿಂತ ಹೆಚ್ಚು ಬಲಿಷ್ಠವಾಗಿರುವ ಹಾಗೂ ಎಲ್ಲ ವಿಚಾರಗಳಲ್ಲಿಯೂ ಉತ್ತಮ ಸ್ಥಾನದಲ್ಲಿರುವ ಭಾರತವು ಇದುವರೆಗೆ ಬಹಳ ಪ್ರಬುದ್ಧವಾಗಿ ಮತ್ತು ಜವಾಬ್ದಾರಿ ಯಿಂದ ನಡೆದುಕೊಂಡಿದೆ. ಆ ಕೆಲಸವನ್ನು ಭಾರತ ಮುಂದುವರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.