ADVERTISEMENT

ಸಂಪಾದಕೀಯ| ರಾಜ್ಯದ ಕೊಳಕು ನದಿಗಳ ಅವಲೋಕನ: ಆಡಳಿತಯಂತ್ರದ ದುಃಸ್ಥಿತಿಯ ಪ್ರತಿಫಲನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 19:30 IST
Last Updated 26 ಜನವರಿ 2023, 19:30 IST
Sampadakiya 27-01-2023.jpg
Sampadakiya 27-01-2023.jpg   

ಕರ್ನಾಟಕದ ಪ್ರಮುಖ 17 ನದಿಗಳ ನೀರು ಕುಡಿಯಲು ಯೋಗ್ಯವಿಲ್ಲದಷ್ಟು ಕಲುಷಿತಗೊಂಡಿದೆಯೆಂದೂ ಅವುಗಳಲ್ಲಿ ಕೆಲವಂತೂ ಸ್ನಾನಕ್ಕೂ ಅನರ್ಹವೆಂತಲೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಈಚಿನ ವರದಿಯಲ್ಲಿ ಹೇಳಿದೆ. ರಾಜ್ಯದ ಜಲಮೂಲಗಳ ಒಟ್ಟು 103 ತಪಾಸಣಾ ಕೇಂದ್ರಗಳಲ್ಲಿ ಮಂಡಳಿಯು ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡುತ್ತಿದ್ದು ಪರಿಶುದ್ಧ ನೀರಿರುವ (‘ಎ’ ವರ್ಗದ) ತಾಣ ಒಂದೂ ಇಲ್ಲವೆಂದು ಅದು 2022ರ ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಸಮೀಕ್ಷೆಯಲ್ಲಿ ಗುರುತಿಸಿದೆ. ಈ ವರ್ಷದ ಭಾರಿ ಮಳೆಗಾಲ, ಮಹಾಪ್ರವಾಹದ ನಂತರವೂ ಕೆಲವು ನದಿಗಳಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಆಗುವ ಬದಲು ಹೆಚ್ಚೇ ಆಗಿದೆ ಎಂಬ ಅಂಶ ವರದಿಯಲ್ಲಿದೆ. ಇಷ್ಟಕ್ಕೂ, ಈಗಿನ ಈ ವರದಿ ಪರಿಪೂರ್ಣವೇನಲ್ಲ. ನೀರಲ್ಲಿ ಆಮ್ಲಜನಕದ ಕೊರತೆ ಎಷ್ಟಿದೆ ಎಂಬುದನ್ನಷ್ಟೇ ಇದು ತಿಳಿಸಿದೆಯೇ ವಿನಾ ಘಾತುಕ ನೈಟ್ರೇಟ್‌ ಲವಣಗಳು, ಕೀಟನಾಶಕದ ಅಂಶಗಳು, ಆ್ಯಂಟಿಬಯಾಟಿಕ್‌ ದ್ರವ್ಯಗಳ ಪ್ರಮಾಣದ ಮಾಹಿತಿ ಇಲ್ಲ. ಮುಖ್ಯವಾಗಿ ಪ್ಲಾಸ್ಟಿಕ್‌ ಮಾಲಿನ್ಯದ ಪ್ರಸ್ತಾಪವೇ ಇಲ್ಲ. ಪ್ಲಾಸ್ಟಿಕ್‌ ಕಣಮಾಲಿನ್ಯದ ಮಡುಗಳಲ್ಲಿ ಬದುಕಬೇಕಾದ ಜಲಚರ, ಜಲಪಕ್ಷಿಗಳ ಸ್ಥಿತಿಗತಿಯ ಮಾಹಿತಿಗಳೂ ಇಲ್ಲ.

ವಿಪರ್ಯಾಸದ ಸಂಗತಿ ಏನೆಂದರೆ, ಈ ಅಂಕಿ ಅಂಶಗಳನ್ನು ಬಹಿರಂಗಗೊಳಿಸುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ವೈಫಲ್ಯವನ್ನು ತಾನೇ ಸಾರಿದಂತಾಗಿದೆ. ಕೊಳೆ-ಕಸ ಚೆಲ್ಲುವವರ ಮೇಲೆ ನಿಗಾ ಇಟ್ಟು ತಪ್ಪಿತಸ್ಥರನ್ನು ದಂಡ– ಶಿಕ್ಷೆಗೆ ಗುರಿಪಡಿಸಲೆಂದೇ ಈ ಮಂಡಳಿ ಅಸ್ತಿತ್ವದಲ್ಲಿದೆ. ನದಿಗಳಂಚಿನ ನಗರ–ಪಟ್ಟಣಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶುದ್ಧೀಕರಣ ಸ್ಥಾವರಗಳು ಇಲ್ಲ. ಇರುವ ಸ್ಥಾವರಗಳೆಲ್ಲ ಸರಿಯಾಗಿ ಕೆಲಸ ಮಾಡಿದರೂ ಪ್ರತಿದಿನ 146 ಕೋಟಿ ಲೀಟರ್‌ ಕೊಳೆನೀರು ರಾಜ್ಯದ ನದಿಗಳಿಗೆ ಸೇರುತ್ತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2021ರ ಡಿಸೆಂಬರ್‌ನಲ್ಲಿ ಹೇಳಿತ್ತು. ಈಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆಯೆಂದು ಹೇಳಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಪ್ಪಿತಸ್ಥ ಉದ್ಯಮ ಸಂಸ್ಥೆಗಳ ಮೇಲೆ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಿದ್ದರೆ ಹೀಗಾಗುತ್ತಿರಲಿಲ್ಲ. ವರ್ಷಕ್ಕೊಮ್ಮೆ ಗಣೇಶ ಹಬ್ಬದ ಹೊತ್ತಿನಲ್ಲಿ ಮಣ್ಣಿನ ಗಣಪ, ಅರಿಸಿನ ಗಣಪ ಮೂರ್ತಿಗಳ ಕುರಿತು ಪ್ರಚಾರ ಬಿಟ್ಟರೆ ಇತರ ದಿನಗಳಲ್ಲಿ ಈ ಮಂಡಳಿಯು ಜಲಸಾಕ್ಷರತೆಯ ಅಥವಾ ಎಳೆಯರನ್ನು ಒಳಗೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ನಿದರ್ಶನಗಳು ಕಡಿಮೆ. ನದಿಗಳನ್ನು ಚೊಕ್ಕಟವಾಗಿಡಲೆಂದು ಅಟಲ್‌ ಮಿಷನ್‌, ಸ್ಮಾರ್ಟ್‌ ಸಿಟೀಸ್‌ ಮಿಷನ್‌ ಹೆಸರಿನಲ್ಲಿ ಕೇಂದ್ರ ಜಲಶಕ್ತಿ ಇಲಾಖೆ ಸುರಿಯುವ ಹಣವೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆಯೇ? ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸಿಪಿಸಿಬಿ ಕಾಲಕಾಲಕ್ಕೆ ನೀಡುವ ಎಚ್ಚರಿಕೆಗಳೆಲ್ಲ ಬೋರ್ಗಲ್ಲ ಮೇಲೆ ಮಳೆ ಸುರಿದಂತಾಗುತ್ತಿದೆಯೇ?

ಭಾರತೀಯ ಪರಂಪರೆಯಲ್ಲಿ ನದಿಗಳಿಗೆ ಪರಮ ಪವಿತ್ರ ಸ್ಥಾನವನ್ನು ಕೊಟ್ಟು, ಅವನ್ನು ಜೀವದಾಯಿನಿ, ಪ್ರಾಣಪೋಷಿಣಿ ಎಂದೆಲ್ಲ ಶ್ಲಾಘಿಸಲಾಗುತ್ತಿದ್ದರೂ ಈ 75 ವರ್ಷಗಳ ಅಭಿವೃದ್ಧಿಯ ದಾಂಗುಡಿಯಲ್ಲಿ ದೆಹಲಿಯ ಯಮುನಾ, ಕಾನ್ಪುರದ ಗಂಗಾ, ಕೋಲ್ಕತ್ತದ ಹೂಗ್ಲಿ, ಚೆನ್ನೈನ ಅಡ್ಯಾರ್‌, ಬೆಂಗಳೂರಿನ ವೃಷಭಾವತಿ ಮುಂತಾದ ನದಿಗಳ ಬಳಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿ ಏಳು ವರ್ಷಗಳೇ ಆದರೂ ದೇಶದ ಗಾಳಿ, ಮಣ್ಣು, ನೀರಿನ ಸ್ಥಿತಿಗತಿಯಲ್ಲಿ ಹೇಳಿಕೊಳ್ಳುವ ಸುಧಾರಣೆ ಆಗಿಲ್ಲವೆಂಬ ಸಂಗತಿ ನಮ್ಮ ಅನುಭವಕ್ಕೆ ಬರುತ್ತಲೇ ಇದೆ. ಜಗತ್ತಿನ 180 ದೇಶಗಳ ಪರಿಸರ ಕಾರ್ಯಕ್ಷಮತೆಯನ್ನು ವರ್ಷ ವರ್ಷವೂ ಅಳೆದು ನೋಡುವ ಅಮೆರಿಕದ ಪ್ರತಿಷ್ಠಿತ ಯೇಲ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಳೆದ ವರ್ಷ ಭಾರತಕ್ಕೆ ಕೊನೆಯ, 180ನೇ ಶ್ರೇಯಾಂಕವನ್ನು ಕೊಟ್ಟಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ವರದಿ ದೋಷಮುಕ್ತವಲ್ಲವೆಂದು ಕೇಂದ್ರ ಸರ್ಕಾರದ ವಕ್ತಾರರು ವಾದಿಸಿದ್ದರಾದರೂ ಶುದ್ಧ ಗಾಳಿ, ಶುದ್ಧ ನದಿ ಹೇಗಿರುತ್ತದೆ ಎಂಬುದು ಸುದೀರ್ಘ ಲಾಕ್‌ಡೌನ್‌ ಅವಧಿಯಲ್ಲಿ ನಮಗೆ ಸ್ಪಷ್ಟವಾಗಿ ಗೊತ್ತಾಗಿತ್ತು. ಗೃಹಬಂಧನದಲ್ಲಿದ್ದಷ್ಟು ದಿನ ಮಾತ್ರ ನಾವು ಭಾರತೀಯರು ಜೀವಪೋಷಕ ಬದುಕನ್ನು ನಡೆಸಬಲ್ಲೆವೆಂಬಂಥ ಅಸಂಗತ ಸ್ಥಿತಿಯಲ್ಲಿ ಇದ್ದೇವೆ ಎಂದರೆ, ಇಷ್ಟೊಂದು ಪರಿಸರ ರಕ್ಷಣಾ ವ್ಯವಸ್ಥೆಯನ್ನು ಕಟ್ಟಿಟ್ಟುಕೊಂಡಿದ್ದಾದರೂ ಏಕೆ ಎಂಬ ಪ್ರಶ್ನೆ ಬರುತ್ತದೆ. ಚುನಾವಣೆ ಹತ್ತಿರ ಬಂದಂತೆಲ್ಲ ರಾಜಕೀಯ ಪಕ್ಷಗಳು ಪೈಪೋಟಿಯ ಮೇಲೆ ಮತದಾರರಿಗೆ ನಗದು ಆಮಿಷಗಳನ್ನು ಘೋಷಿಸುತ್ತಿವೆ. ಜನರ ಬದುಕಿನ ಮೂಲ ಅಗತ್ಯಗಳಾದ ಶುದ್ಧ ನೀರು, ಶುದ್ಧ ಗಾಳಿಯ ಆಶ್ವಾಸನೆ ನೀಡುವ ಜನನಾಯಕರು ಎಲ್ಲಿದ್ದಾರೊ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.