ಅಮೆರಿಕದ ಡಾಲರ್ ಎದುರು ರೂಪಾಯಿಯ ಮೌಲ್ಯವು ₹ 85ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಇದು ನಿರೀಕ್ಷಿತವಾಗಿತ್ತಾದರೂ ರೂಪಾಯಿ ಮೌಲ್ಯದ ಈ ಪರಿಯ ಕುಸಿತವು ಒಂದಿಷ್ಟು ಕಳವಳಗಳಿಗೆ ಕಾರಣವಾಗಿದೆ. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಈಗ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಬಂದಿದೆ. ಈ ಮಟ್ಟದಿಂದ ರೂಪಾಯಿ ಮೌಲ್ಯವು ತಕ್ಷಣಕ್ಕೆ ಚೇತರಿಕೆ ಕಂಡುಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಮುಂಬರುವ ವಾರಗಳಲ್ಲಿ, ತಿಂಗಳುಗಳಲ್ಲಿ ರೂಪಾಯಿ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಡಳಿತ ವಹಿಸಿಕೊಂಡ ನಂತರ ರೂಪಾಯಿ ಮೌಲ್ಯವು ಶೇಕಡ 8ರಿಂದ ಶೇ 10ರಷ್ಟು ಕುಸಿಯಬಹುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅಂದಾಜಿಸಿದೆ. ಕರೆನ್ಸಿಯು ದುರ್ಬಲವಾದ ಸಂದರ್ಭದಲ್ಲಿ ಆರ್ಥಿಕತೆಗೆ ಒಳಿತಾಗುವುದೂ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಕರೆನ್ಸಿಯನ್ನು ದುರ್ಬಲಗೊಳಿಸಲು ಪ್ರಜ್ಞಾಪೂರ್ವಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಭಾರತದ ರೂಪಾಯಿ ಮೌಲ್ಯ ಈಗ ಕುಸಿಯುತ್ತಿರುವುದು ಆ ಕಾರಣಕ್ಕಾಗಿ ಅಲ್ಲ. ಭಾರತದ ರೂಪಾಯಿ ಈಗ ದುರ್ಬಲವಾಗುತ್ತಿರುವುದಕ್ಕೆ ಜಾಗತಿಕ ಹಾಗೂ ಆಂತರಿಕ ಸಂಗತಿಗಳು ಕಾರಣವಾಗಿವೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ವ್ಯಾಪಾರ ಕೊರತೆ ಅಂತರವು ಹಿಗ್ಗಿದೆ. ಅಮೆರಿಕದ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಅಂಕಿ–ಅಂಶಗಳು ಬಹಳ ಆಶಾದಾಯಕವಾಗಿ ಇರುವ ಪರಿಣಾಮವಾಗಿ, ಅಮೆರಿಕದ ಫೆಡರಲ್ ರಿಸರ್ವ್ ಕೆಲವು ಪೂರಕವಾದ ಕ್ರಮಗಳನ್ನು ಕೈಗೊಳ್ಳು ತ್ತಿರುವುದರ ಪರಿಣಾಮವಾಗಿ ಅಮೆರಿಕದ ಡಾಲರ್ ಬಲವರ್ಧನೆ ಆಗುತ್ತಿದೆ. ಜಾಗತಿಕವಾಗಿ ಹಲವು ದೇಶಗಳ ಕರೆನ್ಸಿಗಳ ಮೌಲ್ಯವು ಅಮೆರಿಕದ ಡಾಲರ್ ಎದುರು ಕುಸಿತ ಕಂಡಿವೆ. ಯೂರೊದಂತಹ ಇತರ ಜಾಗತಿಕ ಕರೆನ್ಸಿಗಳ ಎದುರು ಭಾರತದ ರೂಪಾಯಿಯು ಬಲಗೊಂಡಿದೆ ಎಂಬುದು ಇಲ್ಲಿ ಗಮನಾರ್ಹ.
ಡಾಲರ್ ಮುಂದಿನ ದಿನಗಳಲ್ಲಿಯೂ ಬಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ಇವೆ. ಇದರ ಪರಿಣಾಮವು ಭಾರತದ ರೂಪಾಯಿಯ ಮೇಲೆ ಇನ್ನಷ್ಟು ಉಂಟಾಗಬಹುದು. ಅಮೆರಿಕದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಹೆಚ್ಚು ಉತ್ತಮವಾಗಿ ಇದೆ. ಜಾಗತಿಕವಾಗಿ ಪರಿಸ್ಥಿತಿಯು ಅನಿಶ್ಚಿತತೆಗಳಿಂದ ಕೂಡಿರುವ ಕಾರಣದಿಂದಾಗಿ ಹೂಡಿಕೆದಾರರಿಗೆ ಡಾಲರ್ ಸುರಕ್ಷಿತ ಹೂಡಿಕೆಯಾಗಿ ಕಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಮುಂಗಾಣ್ಕೆಯಿಂದ ಒಂದಿಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದು ಬಡ್ಡಿ ದರವನ್ನು ಶೇಕಡ 0.25ರಷ್ಟು ಕಡಿಮೆ ಮಾಡಿದೆಯಾದರೂ ಹಣದುಬ್ಬರ ನಿಯಂತ್ರಣದ ಮೇಲೆ ಗಮನ ಇಟ್ಟುಕೊಂಡು, ಬಿಗಿ ಹಣಕಾಸಿನ ನಿಲುವನ್ನು ಮುಂದುವರಿಸುವ ಸೂಚನೆಯನ್ನು ನೀಡಿದೆ. ಡಾಲರ್ ಎದುರು ರೂಪಾಯಿ ದುರ್ಬಲಗೊಂಡಾಗಲೆಲ್ಲ ದೇಶದಿಂದ ಹೊರಹರಿಯುವ ಬಂಡವಾಳದ ಪ್ರಮಾಣವು ಹೆಚ್ಚಾಗುತ್ತದೆ. ಅದರ ಪರಿಣಾಮವಾಗಿ ರೂಪಾಯಿ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಯಾಗುತ್ತದೆ.
ರೂಪಾಯಿ ಮೌಲ್ಯ ದುರ್ಬಲಗೊಂಡಿರುವುದು ಒಂದಿಷ್ಟು ಅವಕಾಶಗಳನ್ನು ಕೂಡ ತೆರೆದಿಟ್ಟಿದೆ. ರಫ್ತನ್ನು ನೆಚ್ಚಿಕೊಂಡಿರುವ ಜವಳಿಯಂತಹ ಉದ್ಯಮಗಳಿಗೆ ಇದರಿಂದ ಅನುಕೂಲ ಆಗಬಹುದು. ಇಂತಹ ಉದ್ಯಮಗಳಿಗೆ ಇನ್ನಷ್ಟು ಉತ್ತೇಜನ ನೀಡುವ, ಸೂಕ್ತವಾದ ವ್ಯಾಪಾರ ಕಾರ್ಯತಂತ್ರವನ್ನು ರೂಪಿಸುವ ಕೆಲಸವನ್ನು ಸಂಬಂಧಪಟ್ಟವರು ಈ ಸಂದರ್ಭದಲ್ಲಿ ಮಾಡಬಹುದು. ದೇಶಿ ಉತ್ಪಾದನೆ ಹಾಗೂ ತಯಾರಿಕೆಯನ್ನು ಹೆಚ್ಚು ಮಾಡುವ ಕೆಲಸಕ್ಕೆ ಈಗ ಆದ್ಯತೆ ನೀಡಬೇಕು. ಆಮದು ವಸ್ತುಗಳು ದುಬಾರಿ ಆಗುವ ಕಾರಣ, ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕು. ಆಮದು ಮಾಡಿಕೊಳ್ಳುವ ಉತ್ಪನ್ನಗಳು ಹಾಗೂ ಸೇವೆಗಳು ದುಬಾರಿ ಆಗುವ ಕಾರಣ, ರೂಪಾಯಿ ಮೌಲ್ಯ ಕುಸಿತವು ದೇಶದಲ್ಲಿ ಹಣದುಬ್ಬರ ಹೆಚ್ಚಳಕ್ಕೂ ಕಾರಣವಾಗಬಹುದು. ರೂಪಾಯಿ ಮೌಲ್ಯವು ಶೇ 5ರಷ್ಟು ಕಡಿಮೆ ಆದಾಗ, ಹಣದುಬ್ಬರದ ಪ್ರಮಾಣವು ಶೇ 0.25–ಶೇ 0.30ರ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಎಸ್‌ಬಿಐ ಅಂದಾಜು ಮಾಡಿದೆ. ಹಣದುಬ್ಬರವನ್ನು ಮಿತಿಯಲ್ಲಿ ಇರಿಸಲು ಹಾಗೂ ವಿದೇಶಿ ವಿನಿಮಯ ಸಂಗ್ರಹವನ್ನು ಕಾಪಿಟ್ಟುಕೊಳ್ಳಲು ಆರ್‌ಬಿಐ ಹೆಚ್ಚಿನ ಪ್ರಯತ್ನ ನಡೆಸಬೇಕಾಗಬಹುದು. ಆಮದನ್ನು ನೆಚ್ಚಿಕೊಂಡಿರುವ ಹಾಗೂ ವಿದೇಶಿ ಸಾಲವನ್ನು ಅವಲಂಬಿಸಿರುವ ಉದ್ಯಮಿಗಳಿಗೆ ಸವಾಲುಗಳು ಎದುರಾಗಬಹುದು. ಆರ್‌ಬಿಐ ಮಧ್ಯಪ್ರವೇಶವು ಸಮಸ್ಯೆಯನ್ನು ತಾತ್ಕಾಲಿಕ ಅವಧಿಗೆ ಶಮನಗೊಳಿಸಬಹುದು. ದೇಶದಲ್ಲಿ ಉತ್ಪಾದಕತೆಯನ್ನು ಹೆಚ್ಚು ಮಾಡುವುದು ಹಾಗೂ ದೇಶದಿಂದ ರಫ್ತನ್ನು ಹೆಚ್ಚಿಸುವುದು, ಆ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ದೀರ್ಘಾವಧಿ ಪರಿಹಾರ ಕ್ರಮವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.