ADVERTISEMENT

ಸಂಪಾದಕೀಯ: ನೈಜ ಭಾರತೀಯತೆಯ ಮಾನದಂಡ; ‘ಸುಪ್ರೀಂ’ ಅಭಿಪ್ರಾಯ ದುರದೃಷ್ಟಕರ

ಸಂಪಾದಕೀಯ
Published 8 ಆಗಸ್ಟ್ 2025, 21:57 IST
Last Updated 8 ಆಗಸ್ಟ್ 2025, 21:57 IST
ಸಂಪಾದಕೀಯ
ಸಂಪಾದಕೀಯ   

ಭಾರತಕ್ಕೆ ಸೇರಿದ 2,000 ಚ.ಕಿ.ಮೀ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ‘ಭಾರತ್ ಜೋಡೊ’ ಯಾತ್ರೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರ ಮೇಲೆ ಸುಪ್ರೀಂ ಕೋರ್ಟ್‌ ಮಾಡಿರುವ ಟೀಕೆ–ಟಿಪ್ಪಣಿ ದುರದೃಷ್ಟಕರ. ಓರ್ವ ನೈಜ ಭಾರತೀಯ ಇಂಥ ಹೇಳಿಕೆಗಳನ್ನು ನೀಡುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ  ವಿಭಾಗೀಯ ಪೀಠ ಹೇಳಿದೆ. ರಾಹುಲ್‌ ಗಾಂಧಿ ವಿರುದ್ಧ ನಡೆಯುತ್ತಿರುವ ಮಾನಹಾನಿ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿರುವ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಕಟು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಭಾರತ ಹಾಗೂ ಚೀನಾ ಸೈನಿಕರ ನಡುವೆ 2020ರಲ್ಲಿ ನಡೆದ ಗಾಲ್ವಾನ್‌ ವ್ಯಾಲಿ ಸಂಘರ್ಷದ ಸಂದರ್ಭದಲ್ಲಿ ಚೀನಾದಿಂದ ಅತಿಕ್ರಮಣ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಹೀಗೆ ಹೇಳುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ಸೇನೆಗೆ ಅವಮಾನ ಎಸಗಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.

ಮಾನಹಾನಿ ಪ್ರಕರಣ ಹಾಗೂ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡಬೇಕೆಂದು ಸಲ್ಲಿಸಿದ್ದ ಮನವಿ, ನ್ಯಾಯಪೀಠದ ಮುಂದಿದ್ದ ವಿಷಯಗಳು. ಪ್ರಕರಣದ ವಿಷಯಗಳಿಗೂ ರಾಹುಲ್‌ ಗಾಂಧಿ ಅವರ ಭಾರತೀಯತೆಗೂ ಯಾವುದೇ ಸಂಬಂಧ ಇರಲಿಲ್ಲ. ಸಂಸತ್‌ನಲ್ಲಿ ಮಾತನಾಡುವ ಬದಲು ಸಾಮಾಜಿಕ ಮಾಧ್ಯಮದಲ್ಲಿ ಅವರು ಏಕೆ ಮಾತನಾಡಿದರು ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ವಿವಾದಕ್ಕೆ ಕಾರಣವಾದ ಸಂಗತಿಯ ಬಗ್ಗೆ ಹೇಗೆ ಮಾತನಾಡ ಬಹುದಿತ್ತು ಎನ್ನುವ ವಿಷಯವೂ ನ್ಯಾಯಪೀಠದ ಮುಂದಿರಲಿಲ್ಲ. ಸುಪ್ರೀಂ ಕೋರ್ಟ್‌ನ ಕಾನೂನಿನ ಬಲವಿಲ್ಲದ ಟೀಕೆ–ಟಿಪ್ಪಣಿಯು ಅನಗತ್ಯ ಅಭಿಪ್ರಾಯಗಳನ್ನು ಸೃಷ್ಟಿಸಲು ಆಸ್ಪದ ಕಲ್ಪಿಸುವಂತಿವೆ. ನೈಜ ಭಾರತೀಯನೊಬ್ಬ ಹೀಗೆ ಮಾತನಾಡಲು ಸಾಧ್ಯವಿಲ್ಲ ಎನ್ನುವ ನ್ಯಾಯಪೀಠದ ಅಭಿಪ್ರಾಯ, ಹೀಗೆ ಹೇಳಿರುವ ವ್ಯಕ್ತಿ ಭಾರತೀಯನಲ್ಲ ಎಂದು ಸೂಚಿಸುವಂತಿದೆ. ಮಾನಹಾನಿ ಪ್ರಕರಣವೊಂದರ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಭಾರತೀಯತೆ ಅಥವಾ ದೇಶಪ್ರೇಮದ ಬಗ್ಗೆ ನಿರ್ಣಯಿಸುವಂಥ ಮಾತುಗಳನ್ನಾಡುವುದು ನ್ಯಾಯಬದ್ಧ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ, ಆಡಳಿತ ಪಕ್ಷ ಮತ್ತು ಅದರ ಬೆಂಬಲಿಗರು ರಾಹುಲ್‌ ಗಾಂಧಿ ಅವರ ದೇಶಪ್ರೇಮವನ್ನು ಪ್ರಶ್ನಿಸು ತ್ತಿರುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿರುವುದು ಅತ್ಯಂತ ದುರದೃಷ್ಟಕರ.

ಲೋಕಸಭೆಯ ವಿರೋಧ ಪಕ್ಷದ ನಾಯಕನ ಹೇಳಿಕೆ ಸೇನೆಯ ವಿರುದ್ಧವಾಗಿ ಇರಲಿಲ್ಲ. ಪಾಕಿಸ್ತಾನದ ಬಾಲಾಕೋಟ್‌ ಮೇಲೆ 2019ರಲ್ಲಿ ನಡೆದ ‘ಸರ್ಜಿಕಲ್‌ ಸ್ಟ್ರೈಕ್‌’ ಬಗ್ಗೆ ಪ್ರಶ್ನೆಗಳು ಎದುರಾಗಿದ್ದವು. ‘ಆಪರೇಷನ್‌ ಸಿಂಧೂರ’ ಹಾಗೂ ಬಹುಮುಖ್ಯವಾಗಿ, ಪಾಕಿಸ್ತಾನ ದೊಂದಿಗಿನ ಯುದ್ಧದಲ್ಲಿ ಭಾರತಕ್ಕಾದ ನಷ್ಟದ ಬಗ್ಗೆಯೂ ಪ್ರಶ್ನಿಸಲಾಗಿತ್ತು. ಗಾಲ್ವಾನ್‌ ಕಣಿವೆಗೆ ಸಂಬಂಧಿಸಿದ ಸಂಘರ್ಷದ ಸಮಯದಲ್ಲಿ ಸರ್ಕಾರದ ನಿಲುವು ಏನಾಗಿತ್ತು ಎನ್ನುವುದರ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ. ಇವೆಲ್ಲವೂ ಸರ್ಕಾರವನ್ನು ಕೇಳಿರುವ ಪ್ರಶ್ನೆಗಳೇ ಹೊರತು, ದೇಶದ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪ್ರಶ್ನಿಸುವ ಹಕ್ಕು ವಿರೋಧ ಪಕ್ಷಗಳಿಗಿದೆ. ‘ನೈಜ ಭಾರತೀಯ’ತೆ ಎಂದು ಹೇಳುವ ಮೂಲಕ ಪ್ರಶ್ನೆ ಕೇಳುವುದನ್ನು ಹತ್ತಿಕ್ಕುವ ಪ್ರವೃತ್ತಿ ಸಮರ್ಥನೀಯವಲ್ಲ ಹಾಗೂ ಇವೆಲ್ಲ ನೈಜ ಭಾರತೀಯ ಕೇಳುವಂತಹ ಪ್ರಶ್ನೆಗಳೇ ಆಗಿವೆ. ರಾಹುಲ್‌ ಗಾಂಧಿ ತಮ್ಮ ಹೇಳಿಕೆಯನ್ನು ಸಂಸತ್‌ನಲ್ಲಿ ಏಕೆ ನೀಡಲಿಲ್ಲ ಎಂದು ಕೇಳುವುದು ಕೂಡ ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ರಾಷ್ಟ್ರೀಯ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅದರಿಂದ ಅವರು ಯಾವುದೇ ತೊಂದರೆ ಎದುರಿಸಿಲ್ಲ. ರಾಹುಲ್‌ ಗಾಂಧಿ ಅವರ ರಕ್ಷಣೆಗೆ ಕೊನೆಗೂ ಒದಗಬೇಕಾದುದು ಅವರ ಸಂಸತ್‌ ಸದಸ್ಯತ್ವ ಅಥವಾ ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವಲ್ಲ; ಈ ದೇಶದ ಪ್ರಜೆಯಾಗಿ ಅವರು ಹೊಂದಿರುವ ಹಕ್ಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.