ADVERTISEMENT

ಸಂಪಾದಕೀಯ | ನ್ಯಾಯಾಂಗವು ಲಿಂಗತಾರತಮ್ಯದ ಪೂರ್ವಗ್ರಹ ಮೀರಿ ನಿಲ್ಲಬೇಕು

ಪ್ರಜಾವಾಣಿ ವಿಶೇಷ
Published 13 ಏಪ್ರಿಲ್ 2025, 23:39 IST
Last Updated 13 ಏಪ್ರಿಲ್ 2025, 23:39 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಸಮಾಜದ ಬಹುದೊಡ್ಡ ವರ್ಗದ ಭಾವನೆಗಳು, ಚಿಂತನೆ ಮತ್ತು ನಡವಳಿಕೆಯ ಮೇಲೆ ಪುರುಷ ಪ್ರಧಾನ ಮನಃಸ್ಥಿತಿಯ ಪ್ರಭಾವ ದಟ್ಟವಾಗಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇವು ವಿವಿಧ ರೀತಿಯಲ್ಲಿ ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ಈ ಮನಃಸ್ಥಿತಿಯು ಹೊರಗೆ ಬರುವುದನ್ನು ತಡೆಯುವುದಕ್ಕಾಗಿ ಸಮಾಜದಲ್ಲಿ ಕೆಲವು ಸಂಸ್ಥೆಗಳು ಇವೆ. ಲಿಂಗಸಮಾನತೆ ಮತ್ತು ಲಿಂಗತ್ವ ನ್ಯಾಯದ ಯೋಚನೆಗಳನ್ನು ಖಾತರಿಪಡಿಸುವ ಕೆಲಸವನ್ನು ಈ ಸಂಸ್ಥೆಗಳು ಮಾಡುತ್ತವೆ. ಅಂತಹ ಸಂಸ್ಥೆಗಳಲ್ಲಿ ನ್ಯಾಯಾಂಗವು ಬಹಳ ಮುಖ್ಯವಾದುದು. ಆದರೆ, ನ್ಯಾಯಾಂಗದ ಪ್ರತಿನಿಧಿಗಳೇ ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹಗುರವಾಗಿ ಮಾತನಾಡಿದ ಉದಾಹರಣೆಗಳು ಇವೆ. ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಸಿಂಗ್‌ ಅವರ ಆದೇಶ ಮತ್ತು ಅಭಿಪ್ರಾಯ
ಗಳನ್ನು ಈ ದೃಷ್ಟಿಯಲ್ಲಿ ನೋಡಬೇಕಿದೆ. ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿಂಗ್‌ ಅವರು ‘ಸಂತ್ರಸ್ತೆಯೇ ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದಾಳೆ’ ಎಂದು ಹೇಳಿದ್ದಾರೆ. ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಆಘಾತಕಾರಿ ಮತ್ತು ‍ಪ್ರತಿಗಾಮಿಯಾಗಿವೆ. ಅವು ನ್ಯಾಯಶಾಸ್ತ್ರದ ನಿಯಮಗಳಿಗೆ ವಿರುದ್ಧವಾಗಿವೆ. ಸಂತ್ರಸ್ತೆಯು ಮದ್ಯ ಕುಡಿದು ಆರೋಪಿಯ ಮನೆಗೆ ಹೋಗುವ ಮೂಲಕ ‘ಅಪಾಯಕ್ಕೆ ಒಡ್ಡಿಕೊಂಡಿದ್ದಾಳೆ’ ಎಂದು ನ್ಯಾಯಮೂರ್ತಿ ಹೇಳಿರುವುದು ಅಪರಾಧಕ್ಕಾಗಿ ಸಂತ್ರಸ್ತೆಯನ್ನೇ ದೂರಿದಂತೆ ಆಗಿದೆ. 

ನ್ಯಾಯಮೂರ್ತಿಯ ಹೇಳಿಕೆಯನ್ನು ಯಾವುದೇ ರೀತಿಯಲ್ಲಿ ನೋಡಿದರೂ ಅದು ಕಾನೂನಿನ ಆಶಯಗಳಿಗೆ ವಿರುದ್ಧ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮತ್ತು ಇತರ ನ್ಯಾಯಾಲಯಗಳು ಹಾಕಿಕೊಟ್ಟ ಪೂರ್ವನಿದರ್ಶನಗಳಿಗೆ ವಿರುದ್ಧವಾಗಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯು ತನ್ನ ಸಮ್ಮತಿ ಇರಲಿಲ್ಲ ಎಂದು ಹೇಳಿದರೆ ಕಾನೂನು ಅದನ್ನು ಒಪ್ಪಿಕೊಳ್ಳುತ್ತದೆ. ಕಾನೂನು ಪ್ರಕಾರ, ಆರೋಪಿಯ ನಡವಳಿಕೆ ಮತ್ತು ಕ್ರಿಯೆಯನ್ನು ಪರಿಶೀಲನೆಗೆ ಒಳಪಡಿಸಬೇಕೇ ವಿನಾ ಸಂತ್ರಸ್ತೆಯನ್ನು ಅಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆಯ 114ಎ ಸೆಕ್ಷನ್‌ ಅನ್ನು ವ್ಯಾಖ್ಯಾನಿಸಿ ಈ ವಿಷಯವನ್ನು ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ನ್ಯಾಯಮೂರ್ತಿಯು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯದ್ದೇ ತಪ್ಪು ಎಂಬಂತೆ ಹೇಳಿದ್ದಾರೆ. ಯಾವುದೇ ಸ್ಥಿತಿಯಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಸಮಯದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಕಾನೂನು ಅವಕಾಶ ಕೊಡುವುದಿಲ್ಲ. ಸಂತ್ರಸ್ತೆಯ ಶೈಕ್ಷಣಿಕ ಅರ್ಹತೆಯಾಗಲೀ ಆಕೆ ಮದ್ಯ ಕುಡಿದಿದ್ದಳು ಎಂಬುದಾಗಲೀ ತನ್ನ ಇಚ್ಛೆಯ ಪ್ರಕಾರವೇ ಅವಳು ಆರೋಪಿ ಇದ್ದಲ್ಲಿಗೆ ಹೋಗಿದ್ದಳು ಎಂಬುದಾಗಲೀ ಇಲ್ಲಿ ಪ್ರಸ್ತುತ ಅಲ್ಲವೇ ಅಲ್ಲ. ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿರುವ ‍ಪುರುಷ ಪ್ರಧಾನ ಮನಃಸ್ಥಿತಿಗೆ ನ್ಯಾಯಮೂರ್ತಿ ಸಿಂಗ್ ಅವರು ಮಾತಿನ ರೂಪ ಕೊಟ್ಟಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆ ಮುಂದುವರಿಯಬೇಕು ಎಂಬ ಹಂಬಲ ಸಮಾಜದ ಕೆಲವರಲ್ಲಿ ಇದೆ. ಆದರೆ, ಇಂತಹ ಭಾವನೆಗಳಿಂದ ಮಹಿಳೆಯರನ್ನು ರಕ್ಷಿಸಬೇಕಾದ ವ್ಯವಸ್ಥೆಯ ಕಾವಲುಗಾರರಾದ ನ್ಯಾಯಮೂರ್ತಿಗಳು ತಮ್ಮ ಮಾತು ಮತ್ತು ಆದೇಶಗಳ ಮೂಲಕ ಮಹಿಳೆಯ ಮೌಲ್ಯಮಾಪನದ ಕೆಲಸ ಮಾಡಬಾರದು. 

ADVERTISEMENT

ಹೈಕೋರ್ಟ್‌ನಂತಹ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರು ಇಂತಹ ಸಂವೇದನಾರಹಿತ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಹೆಣ್ಣಿನ ಸ್ತನಗಳನ್ನು ಮುಟ್ಟುವುದು, ಪೈಜಾಮಾದ ಲಾಡಿಯನ್ನು ಎಳೆಯುವುದು, ಎಳೆದೊಯ್ಯುವುದು ಅತ್ಯಾಚಾರ ಪ್ರಯತ್ನ ಆಗದು ಎಂದು ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಕೆಲವು ದಿನಗಳ ಹಿಂದೆ ಹೇಳಿದ್ದರು. ಬೇರೊಂದು ಪ್ರಕರಣದಲ್ಲಿ, ಅತ್ಯಾಚಾರ ಸಂತ್ರಸ್ತೆಯನ್ನು ಮೂರು ತಿಂಗಳಲ್ಲಿ ಮದುವೆ ಆಗಬೇಕು ಎಂಬ ಷರತ್ತು ಒಡ್ಡಿ ಆರೋಪಿಗೆ ಇದೇ ನ್ಯಾಯಾಲಯ ಫೆಬ್ರುವರಿಯಲ್ಲಿ ಜಾಮೀನು ನೀಡಿತ್ತು. ದಶಕಗಳ ಹೋರಾಟದ ಫಲವಾಗಿ ದಕ್ಕಿಸಿಕೊಂಡ ಲಿಂಗತ್ವ ನ್ಯಾಯ ಮತ್ತು ಸಮಾನತೆಯನ್ನು ಇಂತಹ ಆದೇಶಗಳು ಮತ್ತು ಹೇಳಿಕೆಗಳು ಕ್ಷಣದಲ್ಲಿ ಧ್ವಂಸ ಮಾಡಿಬಿಡುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.